ಈವರೆಗೆ ಯಾರೂ ಮಾಡದ ದಾಖಲೆ ಬರೆಯಲು ಸಿಎಂ ಸಿದ್ದರಾಮಯ್ಯ ಸಿದ್ಧ!
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜೂನ್ 30 ರಂದು ಕೆಆರ್‍ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದು, ಆ ಮೂಲಕ ಹೊಸದೊಂದು ದಾಖಲೆ ಬರೆಯಲಿದ್ದಾರೆ. ಹಾಗಾದರೆ ಏನದು ದಾಖಲೆ? ಸಿದ್ದರಾಮಯ್ಯಗೆ ಇಂಥದ್ದೊಂದು ಅವಕಾಶ ದೊರೆತಿದ್ದು ಹೇಗೆ? ಕೆಆರ್‍ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸುವ ಪದ್ಧತಿ ಶುರುವಾಗಿದ್ದು ಯಾವಾಗ? ಎಲ್ಲ ವಿವರಗಳು ಇಲ್ಲಿವೆ.

ಬೆಂಗಳೂರು, ಜೂನ್ 28: ಕರ್ನಾಟಕದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರಲ್ಲಿ ಒಬ್ಬರಾಗಿರುವ ಸಿಎಂ ಸಿದ್ದರಾಮಯ್ಯಗೆ (Siddaramaiah) ಇದೀಗ ಹೊಸದೊಂದು ದಾಖಲೆ ಬರೆಯುವ ಸುವರ್ಣ ಅವಕಾಶ ಒದಗಿ ಬಂದಿದೆ. ಅದನ್ನು ಬಳಸಿಕೊಳ್ಳಲಿರುವ ಅವರು ವಿಶಿಷ್ಟ ದಾಖಲೆಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲಿದ್ದಾರೆ. ಅಂದಹಾಗೆ ಆ ದಾಖಲೆ ಯಾವುದು? ಯಾಕೆ ಸಿದ್ದರಾಮಯ್ಯಗೆ ಈ ಅವಕಾಶ ಒದಗಿ ಬಂತು? ಹೌದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯಕ್ಕೆ (KRS Dam) ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯೊಬ್ಬರು ಜೂನ್ ತಿಂಗಳಲ್ಲಿಯೇ ಬಾಗಿನ ಅರ್ಪಿಸಲಿದ್ದಾರೆ. ಇದಕ್ಕೆ ಕಾರಣ ಅವಧಿಪೂರ್ವ ಮುಂಗಾರು ಮಳೆ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ಭಾರಿ ಮಳೆಯಾಗುತ್ತಿರುವುದು.
ಜೂನ್ 30ರಂದು, ಅಂದರೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಆರ್‍ಎಸ್ ಡ್ಯಾಂಗೆ ಬಾಗಿನ ಅರ್ಪಿಸಲಿದ್ದಾರೆ. ಈ ಬಗ್ಗೆ ಈಗಾಗಲೇ ಕೆಆರ್‍ಎಸ್ ಡ್ಯಾಂ ಆಡಳಿತ ಮತ್ತು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿವೆ.
ಜೂನ್ ತಿಂಗಳಲ್ಲೇ ಭರ್ತಿಯಾದ ಕೆಆರ್‍ಎಸ್ ಡ್ಯಾಂ
ಕೆಆರ್‍ಎಸ್ ಡ್ಯಾಂಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುತ್ತದೆ. ಆ ನಂತರ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತಾರೆ. ಆದರೆ, ಈ ವರ್ಷ ಜೂನ್ ಕೊನೆಯ ವಾರದಲ್ಲೇ ಡ್ಯಾಂ ಭರ್ತಿಯಾಗಿದ್ದು, ಸಿದ್ದರಾಮಯ್ಯನವರಿಗೆ ಹೊಸ ಅವಕಾಶ ದೊರೆತಿದೆ.
ಕೆಆರ್‍ಎಸ್ ಡ್ಯಾಂ ನೀರಿನ ಮಟ್ಟದ ವಿವರ
ಶನಿವಾರ ಬೆಳಗ್ಗಿನ ಮಾಹಿತಿಯ ಪ್ರಕಾರ, ಕೆಆರ್‍ಎಸ್ ಡ್ಯಾಂ 123.25 ಅಡಿ ಭರ್ತಿಯಾಗಿದೆ. ಅಂದರೆ, 124.80 ಅಡಿ ಗರಿಷ್ಠ ಸಾಮರ್ಥ್ಯವಿರುವ ಕೆಆರ್‍ಎಸ್ ಜಲಾಶಯ ಪೂರ್ಣ ಭರ್ತಿಯಾಗಲು ಇನ್ನು ಒಂದು ಅಡಿ ಅಷ್ಟೇ ಬಾಕಿ ಇದೆ. ಅದು ಇಂದೇ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲಿದೆ. ಇದರೊಂದಿಗೆ, 93 ವರ್ಷಗಳ ಬಳಿಕ ಇದೇ ಮೊದಲ ಬಾರಿ ಜೂನ್ ತಿಂಗಳಲ್ಲೇ ಕೆಆರ್‍ಎಸ್ ಡ್ಯಾಂ ಭರ್ತಿಯಾದಂತಾಗಲಿದೆ.
ಕೆಆರ್ಎಸ್ಗೆ ಮುಖ್ಯಮಂತ್ರಿಯಿಂದ ಬಾಗಿನ ಅರ್ಪಣೆ ಶುರುವಾಗಿದ್ದು ಯಾವಾಗ?
1979 ರಿಂದ ಕೆಆರ್‍ಎಸ್ ಡ್ಯಾಂನಲ್ಲಿ ಕಾವೇರಿಗೆ ಬಾಗಿನ ಅರ್ಪಿಸುವ ಪದ್ದತಿ ಆರಂಭವಾಗಿತ್ತು. ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರು ಬಾಗಿನ ಅರ್ಪಿಸುವ ಮೂಲಕ ಆ ಪದ್ದಗೆ ನಾಂದಿ ಹಾಡಿದ್ದರು. ಆದರೆ, ಅಂದಿನಿಂದ ಇಂದಿನವರೆಗೂ ಯಾವೊಬ್ಬ ಮುಖ್ಯಮಂತ್ರಿಗೂ ಜೂನ್ ತಿಂಗಳಲ್ಲೇ ಬಾಗಿನ ಅರ್ಪಿಸುವ ಅವಕಾಶ ಒದಗಿ ಬಂದಿಲ್ಲ.
ಇದನ್ನೂ ಓದಿ: ಕೆಆರ್‍ಎಸ್ ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ನಲ್ಲೇ ಭರ್ತಿ!
ಇದೀಗ ಸೋಮವಾರ ಸಿಎಂ ಸಿದ್ದರಾಮಯ್ಯ ಕೆಆರ್‍ಎಸ್ ಡ್ಯಾಂಗೆ ಬಾಗಿನ ಅರ್ಪಿಸಲಿದ್ದು, ಅದಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಡ್ಯಾಂ ಅವಧಿಗೂ ಮುನ್ನವೇ ತುಂಬುತ್ತಿರುವುದು ರೈತರ ಮುಖದಲ್ಲೂ ಮಂದಹಾಸ ಮೂಡಿಸಿದೆ.