CBSE Exam: ಕರ್ನಾಟಕದ ಪರೀಕ್ಷಾ ಮಾದರಿ ಅನುಸರಿಸಲು ನಿರ್ಧರಿಸಿದ ಸಿಬಿಎಸ್ಇ!
ಸಿಬಿಎಸ್ಇ ಪರೀಕ್ಷೆ: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕಳೆದ ವರ್ಷದಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿಗೆ ಮೂರು ಮೂರು ಪರೀಕ್ಷೆಗಳನ್ನು ನಡೆಸುತ್ತಿದೆ. ಇದೀಗ ಕರ್ನಾಟಕದ ಪರೀಕ್ಷಾ ಪದ್ಧತಿಯನ್ನೇ ಅನುಸರಿಸಲು ಸಿಬಿಎಸ್ಇ ಕೂಡ ಮುಂದಾಗಿದೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲು ನಿರ್ಧರಿಸಿದೆ.

ಬೆಂಗಳೂರು, ಜೂನ್ 27: ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳು ಅಂಕ ಉತ್ತಮಪಡಿಸಿಕೊಳ್ಳಲು ಕರ್ನಾಟಕದಲ್ಲಿ ಈಗಾಗಲೇ 3 ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈಗ ಇದೇ ಮಾದರಿಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವರ್ಷದಲ್ಲಿ 2 ಬಾರಿ ಅಂತಿಮ ಪರೀಕ್ಷೆ ನಡೆಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸಿಬಿಎಸ್‌ಇ (CBSE) ನಿರ್ಧರಿಸಿದೆ. ಫೆಬ್ರವರಿ ಮತ್ತು ಮೇ ಅವಧಿಗಳಲ್ಲಿ 10ನೇ ತರಗತಿಯ ಎರಡು ಪರೀಕ್ಷೆ ನಡೆಸಲು ಬೋರ್ಡ್ ಮುಂದಾಗಿದೆ. 2026 ರಿಂದ ವರ್ಷಕ್ಕೆ ಎರಡು ಬಾರಿ 10 ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆಸಲು ನಿರ್ಧಾರ ಮಾಡಿದ್ದು ಈ ಬಗ್ಗೆ ಶಾಲೆಗಳಿಗೆ ಮಾರ್ಗಸೂಚಿ ನೀಡಲು ಮುಂದಾಗಿದೆ.
10ನೇ ತರಗತಿಯಲ್ಲಿ ಮೊದಲ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದ್ದು, 2ನೇ ಪರೀಕ್ಷೆ ಐಚ್ಛಿಕವಾಗಿದೆ. ಮೊದಲ ಹಂತದ ಪರೀಕ್ಷೆಯನ್ನು ಫೆಬ್ರವರಿಯಲ್ಲಿ ನಡೆಸಲಾಗುತ್ತದೆ. ಏಪ್ರಿಲ್‌ನಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. 2ನೇ ಹಂತದ ಪರೀಕ್ಷೆ ಮೇ ತಿಂಗಳಲ್ಲಿ ಇರುತ್ತದೆ. ಫಲಿತಾಂಶ ಜೂನ್‌ನಲ್ಲಿ ಘೋಷಿಸಲಾಗುತ್ತದೆ. ವಿದ್ಯಾರ್ಥಿಗಳು 2ನೇ ಹಂತದಲ್ಲಿ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಮತ್ತು ಭಾಷೆ ವಿಷಯಗಳ ಪರೀಕ್ಷೆ ಬರೆದು ತಮ್ಮ ಅಂಕ ಉತ್ತಮಗೊಳಿಸಿಕೊಳ್ಳಬಹುದಾಗಿದೆ. ಆದರೆ, ಇಡೀ ಶೈಕ್ಷಣಿಕ ಅವಧಿಯಲ್ಲಿ ಒಮ್ಮೆ ಮಾತ್ರ ಆಂತರಿಕ ಮೌಲ್ಯಮಾಪನ ನಡೆಸಲಾಗುತ್ತದೆ. ಶೀತ ಪ್ರದೇಶಗಳಲ್ಲಿರುವ ಶಾಲೆಗಳ ಮಕ್ಕಳು ಹಾಗೂ ಕ್ರೀಡಾ ಕೆಟಗರಿಯಲ್ಲಿರುವ ಮಕ್ಕಳು ಯಾವ ಹಂತದ ಪರೀಕ್ಷೆಯನ್ನಾದರೂ ಬರೆಯಬಹುದಾಗಿದೆ. ಆದರೆ ಒಂದು ವೇಳೆ ಮೊದಲ ಹಂತದಲ್ಲಿ 3 ಅಥವಾ 3ಕ್ಕಿಂತ ಹೆಚ್ಚು ಪರೀಕ್ಷೆಗೆ ಗೈರಾದರೆ ಅವರಿಗೆ 2ನೇ ಹಂತದ ಪರೀಕ್ಷೆಗೆ ಅವಕಾಶವಿಲ್ಲ ಎಂದು ತಿಳಿಸಲಾಗಿದ್ದು ಶಾಲೆಗಳಿಗೆ ಈ ಬಗ್ಗೆ ಮಾರ್ಗಸೂಚಿ ಪ್ರಕಟಿಸಲು ಮುಂದಾಗಿದೆ.
ಫೆಬ್ರವರಿ ಮತ್ತು ಮೇ ಅವಧಿಗಳಲ್ಲಿ ಪರೀಕ್ಷೆ ನಡೆಸಿ ಮೊದಲ ಹಂತದ ಫಲಿತಾಂಶಗಳನ್ನು ಏಪ್ರಿಲ್‌ನಲ್ಲಿ ಎರಡನೇ ಹಂತದ ಫಲಿತಾಂಶಗಳನ್ನು ಜೂನ್‌ನಲ್ಲಿ ಪ್ರಕಟಿಸಲು ಸಿಬಿಎಸ್ಇ ಬೋರ್ಡ್ ಮುಂದಾಗಿದೆ.
ಸಿಬಿಎಸ್ಇ ನಿರ್ಧಾರಕ್ಕೆ ಪೋಷಕರಿಂದ ಮೆಚ್ಚುಗೆ
ಸಿಬಿಎಸ್ಇ ಬೋರ್ಡ್ ನಿರ್ಧಾರಕ್ಕೆ ಪೋಷಕರ ವಲಯದಲ್ಲಿ ಮೆಚ್ಚುಗೆ ಕೇಳಿ ಬಂದಿದೆ. ಮಕ್ಕಳು 10ನೇ ತರಗತಿಯಲ್ಲಿ ಫೇಲ್ ಆದೆ ಅಥವಾ ಕಡಿಮೆ ಅಂಕ ಬಂತು ಎಂದು ಖಿನ್ನತೆ, ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಈ ಅವಕಾಶದಿಂದ ಕಡಿಮೆ ಮಾಡಬಹುದು. ಮತ್ತೊಂದು ಅವಕಾಶ ನೀಡಿದರೆ ಮಕ್ಕಳಿಗೆ ತುಂಬಾ ಸಹಕಾರಿ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಫಲಿತಾಂಶ ಕಡಿಮೆ ಬಂದರೆ ಶಿಕ್ಷಕರ ವಾರ್ಷಿಕ ವೇತನ ಬಡ್ತಿಗೆ ತಡೆ, ಶಾಲೆ ಅನುದಾನ ಬಂದ್
ಒಟ್ಟಿನಲ್ಲಿ, ಮುಂದಿನ ವರ್ಷದಿಂದ ನಡೆಯಲಿರುವ 2 ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗಳ ಪೈಕಿ ಮೊದಲ ಪರೀಕ್ಷೆ ಕಡ್ಡಾಯವಾಗಿದೆ. 2ನೇಯದ್ದು ಐಚ್ಛಿಕವಾಗಿದೆ. ಅನುತ್ತೀರ್ಣರಾದವರು ತೇರ್ಗಡೆಯಾಗಲು, ಪಾಸಾದವರು ಅಂಕ ವೃದ್ಧಿಸಿಕೊಳ್ಳಲೆಂದು 2 ಪರೀಕ್ಷೆ ಮಾಡಲಾಗಿದೆ. ಮೊದಲ ಹಂತದ ಪರೀಕ್ಷೆ ಬರೆದವರಿಗೆ ಮಾತ್ರ ಎರಡನೇ ಹಂತದ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಸಿಬಿಎಸ್ಇ ವಿದ್ಯಾರ್ಥಿಗಳಿಗೆ ಇದು ಶೈಕ್ಷಣಿಕ ಬೆಳವಣಿಗೆಗೆ ಸಹಾಯವಾಗಲಿದೆ.
ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ