ಉಡುಪಿ: ವಾರದ ಹಿಂದೆಯಷ್ಟೇ ನಿಶ್ಚಿತಾರ್ಥ ಆಗಿದ್ದ ಯುವತಿ ಯುವಕನ ದುಷ್ಕೃತ್ಯಕ್ಕೆ ಬಲಿಯಾಗಿದ್ದಾಳೆ. ಪ್ರಿಯಕರನಿಂದ ಚಾಕು ಇರಿತಕ್ಕೊಳಗಾಗಿ ಸೋಮವಾರ (ಆಗಸ್ಟ್ 30) ಯುವತಿ ಸಾವನ್ನಪ್ಪಿದ್ದಾಳೆ. ಇಂದು ಸಂಜೆಯಷ್ಟೇ ಕೆಲಸ ಮುಗಿಸಿ ಬರುತ್ತಿದ್ದ ವೇಳೆ ಯುವತಿಗೆ ಯುವಕನೊಬ್ಬ ಬಂದು ಚಾಕು ಇರಿದಿದ್ದ. ಯುವತಿಗೆ ನಿಶ್ಚಿತಾರ್ಥ ಆಗಿರುವ ಕಾರಣ ಸಿಟ್ಟಾಗಿ ಪ್ರಿಯಕರ ಹೀಗೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಯುವತಿಗೆ ಚಾಕು ಇರಿತ ಮಾಡಿದ್ದು ಮಾತ್ರವಲ್ಲದೆ ತಾನು ಕೂಡ ಕತ್ತು ಕುಯ್ದು ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಇಬ್ಬರನ್ನು ಕೂಡ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿ ಆಗದೆ ಯುವತಿ ಮೃತಪಟ್ಟಿದ್ದಾಳೆ. ಯುವಕನ ಸ್ಥಿತಿ ಗಂಭೀರವಾಗಿದೆ.
ಯುವತಿ ಸೌಮ್ಯಶ್ರೀ ಭಂಡಾರಿಗೆ ಸಂತೆಕಟ್ಟೆ ಎಂಬಲ್ಲಿ ಚಾಕು ಇರಿತ ಆಗಿತ್ತು. ಸಂಜೆಯ ವೇಳೆಗೆ ಘಟನೆ ನಡೆದಿದ್ದು ನಗರವನ್ನು ತಲ್ಲಣಗೊಳಿಸಿತ್ತು. ಯುವತಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಸ್ಕೂಟಿ ತಡೆದು ದುಷ್ಕೃತ್ಯ ಮಾಡಲಾಗಿತ್ತು. ವಾರದ ಹಿಂದೆ ಬೇರೆ ಯುವಕನ ಜತೆ ಸೌಮ್ಯಶ್ರೀಗೆ ನಿಶ್ಚಿತಾರ್ಥ ಆಗಿದ್ದರಿಂದ ಕೋಪಗೊಂಡು ಸೌಮ್ಯಶ್ರೀಗೆ ಚಾಕುನಿಂದ ಘಾಸಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಬಳಿಕ ಕತ್ತು ಕೊಯ್ದುಕೊಂಡು ಯುವಕ ಸಂದೇಶ್ ಎಂಬಾತನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದೀಗ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಸಂದೇಶ್ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀರಾಮುಲು ಆಪ್ತನೆಂದು ಹೇಳಿ ವಂಚಿಸುತ್ತಿದ್ದವನ ಬಂಧನ
ಸಚಿವ ಶ್ರೀರಾಮುಲು ಆಪ್ತನೆಂದು ಹೇಳಿ ವಂಚಿಸುತ್ತಿದ್ದ ವ್ಯಕ್ತಯನ್ನು ಬಂಧಿಸಲಾಗಿದೆ. ಸಚಿವ ಬಿ. ಶ್ರೀರಾಮುಲು ನಕಲಿ ಪಿಎ ಧರ್ಮತೇಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಧರ್ಮತೇಜ್, ಕೆಲಸ ಕೊಡಿಸುವುದಾಗಿ 5 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ. ಪ್ರದೀಪ್ ಎಂಬವರಿಗೆ ವಂಚಿಸಿದ್ದ. ಈ ಬಗ್ಗೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ಪ್ರದೀಪ್ ದೂರು ನೀಡಿದ್ದರು. ಪ್ರದೀಪ್ ದೂರಿನ ಮೇರೆಗೆ ಬಂಧಿಸಿ ಧರ್ಮತೇಜ್ ವಿಚಾರಣೆ ನಡೆಸಲಾಗಿದೆ. ಕೊಡಿಗೆಹಳ್ಳಿ ಠಾಣೆಯ ಪೊಲೀಸರಿಂದ ಧರ್ಮತೇಜ್ ವಿಚಾರಣೆ ಮಾಡಲಾಗಿದೆ.
ಕಂದಾಯ ಅಧಿಕಾರಿಗೆ 4 ವರ್ಷ ಜೈಲು
ಎಸಿಬಿ ಬಲೆಗೆ ಬಿದ್ದಿದ್ದ ಎಆರ್ಒಗೆ 4 ವರ್ಷ ಜೈಲು ಶಿಕ್ಷೆ ಪ್ರಕಟವಾಗಿದೆ. ಬೆಂಗಳೂರಿನ 23ನೇ ಸೆಷನ್ಸ್ ಕೋರ್ಟ್ನಿಂದ ಆದೇಶ ಪ್ರಕಟವಾಗಿದೆ. ಸಹಾಯಕ ಕಂದಾಯ ಅಧಿಕಾರಿ ಲಿಂಗಯ್ಯಗೆ 4 ವರ್ಷ ಜೈಲು ಖಚಿತವಾಗಿದೆ. ಜೈಲು ಶಿಕ್ಷೆಯ ಜತೆ 3 ಲಕ್ಷ ರೂಪಾಯಿ ದಂಡವನ್ನು ಕೋರ್ಟ್ ವಿಧಿಸಿದೆ. ಮಹಾಲಕ್ಷ್ಮೀಪುರಂ ವಾರ್ಡ್ ಎಆರ್ಒ ಆಗಿದ್ದ ಲಿಂಗಯ್ಯ, ಖಾತೆ ಬದಲಾವಣೆಗೆ 2.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಆ ಬಳಿಕ, 1 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದ. ಈ ಬಗ್ಗೆ, ನ್ಯಾಯಾಲಯ ಕಳೆದ 3 ವರ್ಷಗಳಿಂದ ವಿಚಾರಣೆ ನಡೆಸುತ್ತಿತ್ತು. ಇದೀಗ ಆತನಿಗೆ 4 ವರ್ಷ ಜೈಲು ಹಾಗೂ 3 ಲಕ್ಷ ರೂಪಾಯಿ ದಂಡ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಅಪರಾಧ ಸುದ್ದಿ: ಹುಡುಗಾಟಿಕೆಗೆ ವಿದ್ಯುತ್ ಕಂಬ ಹತ್ತಿದ ಯುವಕ ಕರೆಂಟ್ ಹೊಡೆದು ಅಲ್ಲೆ ನೇತಾಡಿದ
ಇದನ್ನೂ ಓದಿ: ಛೋಟಾಸಾಬರ ಪಾಳ್ಯ ಅತ್ಯಾಚಾರ ಕೊಲೆ ಕೇಸ್; 7 ದಿನವಾದ್ರೂ ಆರೋಪಿಗಳ ಬಂಧನವಾಗಿಲ್ಲ, ಅಗ್ನಿವಂಶ ಕ್ಷತ್ರಿಯ ಸಮಾಜ ಪ್ರತಿಭಟನೆ
Published On - 10:44 pm, Mon, 30 August 21