ಗ್ರಾಹಕರಿಗೆ ಕೈಕೊಟ್ಟ ಕಮಲಾಕ್ಷಿ ಸೊಸೈಟಿ: ಉಡುಪಿಯ ಬೃಹತ್​ ಬ್ಯಾಂಕ್ ಹಗರಣವಾಗುವ ಲಕ್ಷಣಗಳು ದಟ್ಟ!

ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಇಟ್ಟ ಠೇವಣಿಗಳ ಮೇಲಿನ ಬಡ್ಡಿ, ವಾಯಿದೆ ಮುಗಿದ ಹಾಗೂ ವಾಯಿದ ಪೂರ್ವ ಠೇವಣಿಯ ಮೊತ್ತವನ್ನೂ ಹಿಂದಿರುಗಿಸದೆ ಮೋಸ ಮಾಡುತ್ತಿರುವ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಗ್ರಾಹಕರಿಗೆ ಕೈಕೊಟ್ಟ ಕಮಲಾಕ್ಷಿ ಸೊಸೈಟಿ: ಉಡುಪಿಯ ಬೃಹತ್​ ಬ್ಯಾಂಕ್ ಹಗರಣವಾಗುವ ಲಕ್ಷಣಗಳು ದಟ್ಟ!
ಗ್ರಾಹಕರಿಗೆ ಕೈಕೊಟ್ಟ ಕಮಲಾಕ್ಷಿ ಸೊಸೈಟಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 20, 2022 | 1:31 PM

ಗ್ರಾಹಕರಿಗೆ (depositors) ನೂರಾರು ಕೋಟಿ ರೂಪಾಯಿ ಪಂಗನಾಮ ಹಾಕಿದೆ ಎನ್ನಲಾದ ಸಹಕಾರಿ ಬ್ಯಾಂಕ್ ಗೆ ನಿನ್ನೆ ಸೋಮವಾರ ಗ್ರಾಹಕರು ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಉಡುಪಿ ನಗರದಲ್ಲಿರುವ ಕಮಲಾಕ್ಷಿ ವಿವಿಧೋದ್ದೇಶ ಬ್ಯಾಂಕ್ (Kamalakshi multipurpose cooperative society) ಗ್ರಾಹಕರ ಕೆಂಗಣ್ಣಿಗೆ ಗುರಿಯಾದ ಬ್ಯಾಂಕ್. ಸುಮಾರು ನೂರು ಕೋಟಿಗೂ ಅಧಿಕ ಠೇವಣಿ ಹಣ ಪಡೆದ ಬ್ಯಾಂಕ್ ಮುಖ್ಯಸ್ಥ (B V Laxminarayana) ಪರಾರಿಯಾಗಿದ್ದು (missing), ಉಡುಪಿ ಪೊಲೀಸರು (udupi police) ಬಲೆ ಬೀಸಿದ್ದಾರೆ. ಹೌದು ಉಡುಪಿಯಲ್ಲಿರುವ ಜಗದ್ವಿಖ್ಯಾತ ಶ್ರೀ ಕೃಷ್ಣ ಮಠಕ್ಕೆ ಹೋಗುವ ದಾರಿಯಲ್ಲಿರುವ ಸಂಸ್ಕೃತ ಕಾಲೇಜಿನ ಪಕ್ಕದ ಬ್ಯಾಂಕ್ ಈಗ ಗ್ರಾಹಕರನ್ನು ದಿವಾಳಿ ಮಾಡಲು (Financial scam) ಹೊರಟಿದೆ. ಉಡುಪಿಯ ಕೃಷ್ಣಾಪುರ ಮಠದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಗ್ರಾಹಕರು ಜೀವನ ಪರ್ಯಾಂತ ದುಡಿದು ಜೀವನಾಂಶಕ್ಕೆಂದು ಹಣವನ್ನು ತಿಂಗಳಿಗೆ 12 % ರ ಬಡ್ಡಿ ದರದಂತೆ ನಿರಖು ಠೇವಣಿಯನ್ನಾಗಿ ಇಟ್ಟಿದ್ದರು.

ಅಂದಿನಿಂದ ಕಳೆದ ಜೂನ್ ತಿಂಗಳವರೆಗೆ ಸಂಸ್ಥೆಯವರು ಸರಿಯಾಗಿ ಬಡ್ಡಿ ಪಾವತಿಸಿದ್ದು ಜೂನ್ ನಂತರ ಬಡ್ಡಿಯನ್ನೂ ಪಾವತಿಸದೆ, ವಾಯಿದೆ ಮುಗಿದ ನಿರಖು ಠೇವಣಿಯನ್ನೂ ಮರಳಿ ಕೊಡದೆ ಸತಾಯಿಸಿದ್ದಾರೆ. ಇದರಿಂದ ಅಕ್ರೋಶಭರಿತರಾದ ಗ್ರಾಹಕರು ಬ್ಯಾಂಕ್ ಕಚೇರಿ ಮುಂದೆ ಜಮಾಯಿಸಿದ್ದರು. ಗ್ರಾಹಕರು ಕಚೇರಿ ಮುಂದೆ ಇದ್ದರೂ ನಿಗದಿತ ಸಮಯಕ್ಕೆ ಕಚೇರಿಯನ್ನು ತೆರೆಯದೇ ತಡವಾಗಿ ತೆರೆಯಲಾಗಿದೆ. ಈ ವೇಳೆ ಗ್ರಾಹಕರು ಕಚೇರಿ ಒಳ ನುಗ್ಗಿ ನ್ಯಾಯಕ್ಕಾಗಿ ಆಗ್ರಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕಚೇರಿಯ ಮಹಿಳಾ ಸಿಬ್ಬಂದಿಯೋರ್ವರು ಗ್ರಾಹಕರ ಎದುರೇ 4-5 ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ.

ಸಂಘದ ಅಧ್ಯಕ್ಷ ಬಿ.ವಿ ಲಕ್ಷ್ಮೀನಾರಾಯಣ ಭಟ್ ರವರು ಕಳೆದ ನ.10 ರಂದು ಬೋರ್ಡ್ ಮೀಟಿಂಗ್ ಕರೆದು ಎಲ್ಲಾ ಗ್ರಾಹಕರ ಹಣ ವಾಪಾಸ್ ಕೊಡುವ ಬಗ್ಗೆ ವಾಗ್ದಾನ ನೀಡಿದ್ದರು, ಆದರೆ ಅಂದು ಮೀಟಿಂಗ್ ಮಾಡಲು ಡಿ.ಆರ್. ಆಫೀಸಿನಿಂದ ಬರಬೇಕಾದ ಆಫೀಸರ್ ಬಾರದೇ ಇದ್ದುದರಿಂದ ಮೀಟಿಂಗ್ ಕ್ಯಾನ್ಸಲ್ ಆಗಿತ್ತು ಎಂಬುದಾಗಿ ಸಬೂಬು ಹೇಳಿ ಗ್ರಾಹಕರನ್ನು ನಂಬಿಸಿದರು. ಆದರೆ ಈ ಬಗ್ಗೆ ಡಿಆರ್ ಆಫೀಸಿನಲ್ಲಿ ವಿಚಾರಿಸಿದಾಗ ಆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂಬುದಾಗಿ ಅಲ್ಲಿ ತಿಳಿಸಿದ್ದಾರೆ.

Also Read:

ಬೆಳಗಾವಿ ಕುಕ್ಕರ್ ಒಡೆದರೆ ಕೇವಲ ಅದೊಂದು ಕುಟುಂಬ ಒಡೆಯುತ್ತೆ, ಮಂಗಳೂರು ಕುಕ್ಕರ್ ಒಡೆದರೆ ದೇಶವೇ ಸಿಡಿಯುತ್ತೆ -ನಳಿನ್ ಕುಮಾರ್ ಕಟೀಲು ವ್ಯಾಖ್ಯಾನ

ಆ ಬಳಿಕ ಈ ಬಗ್ಗೆ ಪ್ರತಿ ದಿನ ಸೊಸೈಟಿ ಕಚೇರಿಗೆ ಹೋದಾಗಲೂ ವಾರ ಬಿಟ್ಟು ವಾರದ ಮೇಲೆ ತಾರೀಕು ಕೊಟ್ಟು ಸತಾಯಿಸುತ್ತಿದ್ದಾರೆ. ಅಲ್ಲದೆ ನೂರಾರು ಗ್ರಾಹಕರ ದಂಡು ದಿನ ನಿತ್ಯ ಆಫೀಸಿಗೆ ಬರುತ್ತಿದ್ದು ಯಾರಿಗೂ ಹಣ ವಾಪಾಸು ಕೊಟ್ಟಿಲ್ಲ. ಕುಟುಂಬದ ಸದಸ್ಯರನ್ನೇ ಒಳಗೊಂಡ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಊರಿನ ಹಾಗೂ ಪರವೂರಿನ ನೂರಾರು ಜನರು ಇಟ್ಟಿರುವ ಠೇವಣಿಯ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದ್ದಾರೆ. ಸದ್ಯ ಗ್ರಾಹಕರು ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕರ ವಿರುದ್ಧ ನೆರೆದಿದ್ದ ವಂಚನೆಗೆ ಒಳಗಾದ ಗ್ರಾಹಕರು ನಗರ ಠಾಣೆಗೆ ದೂರು ನೀಡಿದ್ದಾರೆ.

ಒಟ್ಟಾರೆಯಾಗಿ, ಸಂಘದಲ್ಲಿ ಇಟ್ಟ ಠೇವಣಿಯ ಬಡ್ಡಿ, ವಾಯಿದೆ ಮುಗಿದ ಹಾಗೂ ವಾಯಿದ ಪೂರ್ವ ಠೇವಣಿಯ ಮೊತ್ತವನ್ನು ಹಿಂತಿರುಗಿಸದೆ ಮೋಸ ಮಾಡುತ್ತಿರುವ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರ ಬಳಿ ಗ್ರಾಹಕರು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಈ ಪ್ರಕರಣ ಉಡುಪಿಯ ದೊಡ್ಡ ಬ್ಯಾಂಕ್ ಹಗರಣವಾಗಿರುವಂತೆ ಮೇಲ್ನೋಟಕ್ಕೆ ಗೋಚರವಾಗುತ್ತಿದೆ, ತನಿಖೆ ಬಳಿಕಷ್ಟೆ ಇನ್ನಷ್ಟು ಸತ್ಯ ಹೊರಬರುವ ನಿರೀಕ್ಷೆ ಇದೆ.

ವರದಿ: ದಿನೇಶ್ ಯಲ್ಲಾಪುರ್, ಟಿವಿ 9, ಉಡುಪಿ

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ