ಉಡುಪಿ: ತಮಾಷೆಗಾಗಿ ಮಾಡಿದ ವಿಡಿಯೋವೆಂದು ಹೇಳಿದ ವಿದ್ಯಾರ್ಥಿನಿಯರು; ನೇತ್ರ ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ
ಉಡುಪಿ ಜಿಲ್ಲೆಯ ನೇತ್ರ ಜ್ಯೋತಿ ಕಾಲೇಜಿನಲ್ಲಿ ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿಡಿಯೋ ಚಿತ್ರೀಕರಣ ಮಾಡಿದ್ದ ಮೂವರು ವಿದ್ಯಾರ್ಥಿನಿಯರು ಸಿಕ್ಕಿಬಿದ್ದಿದ್ದರು. ಇದು ರಾಜ್ಯಾದ್ಯಂತ ಸುದ್ದಿಯಾಗಿದ್ದು, ರಾಜಕೀಯ ಬಣ್ಣವೂ ಮೆತ್ತುಕೊಂಡಿದೆ. ಈ ನಡುವೆ ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಉಡುಪಿ, ಜುಲೈ 25: ಶೌಚಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದ ನೇತ್ರಜ್ಯೋತಿ ಕಾಲೇಜು (Netra Jyothi College) ಆಡಳಿತ ಮಂಡಳಿ, ತಮಾಷೆಗೆ ವಿಡಿಯೋ ಮಾಡಿರುವುದಾಗಿ ವಿದ್ಯಾರ್ಥಿನಿಯರು ಹೇಳಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ವಿಚಾರ ತಿಳಿಯುತ್ತಿದ್ದಂತೆ ವಿಚಾರಣೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದೆವು ಎಂದು ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಾಲೇಜು ಆಡಳಿತ ಮಂಡಳಿಯ ಬಾಲಕೃಷ್ಣ, ಲಕ್ಷ್ಮಿ ಕೃಷ್ಣಪ್ರಸಾದ್ ಮತ್ತು ರಾಜೀವ್, ಮಾಹಿತಿ ತಿಳಿದ ಕೂಡಲೇ ವಿದ್ಯಾರ್ಥಿನಿಯರನ್ನು ವಿಚಾರಣೆ ಮಾಡಿದ್ದೇವೆ. ಮಕ್ಕಳು ತಪ್ಪೊಪ್ಪಿಗೆ ಕೊಟ್ಟ ನಂತರವೂ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ತಮಾಷೆಗೆ ವಿಡಿಯೋ ಮಾಡಿರುವುದಾಗಿ ವಿದ್ಯಾರ್ಥಿನಿಯರು ಹೇಳಿದ್ದಾರೆ ಎಂದು ತಿಳಿಸಿದರು.
ಅಲ್ಲದೆ, ಶೌಚಾಲಯಕ್ಕೆ ಹೋದಾಗ ಮೊಬೈಲ್ ನೋಡಿ ತಕ್ಷಣ ಹೊರಗೆ ಬಂದೆ ಮತ್ತು ಸ್ಥಳದಲ್ಲೇ ವಿಡಿಯೋ ಡಿಲೀಟ್ ಮಾಡಿಸಿರುವುದಾಗಿ ಯುವತಿ ಹೇಳಿದ್ದಾಳೆ ಎಂದು ಹೇಳಿದ ಆಡಳಿತ ಮಂಡಳಿ ಸದಸ್ಯರು, ಕಾಲೇಜ್ಗೆ ಮೊಬೈಲ್ ತರುವಂತಿಲ್ಲ ಎಂಬ ನಿಯಮ ಇದೆ. ಕಾನೂನು ಮೀರಿದ ಕಾರಣ ಮೊಬೈಲನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Udupi News: ಉಡುಪಿ ನೇತ್ರ ಕಾಲೇಜು ಪ್ರಕರಣ: ಜುಲೈ 27 ರಂದು ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ
ಶೌಚಾಲಯದಲ್ಲಿ ಮೊಬೈಲ್ ಇಟ್ಟು ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಸಿಕ್ಕಿಬಿದ್ದಿದ್ದರು. ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಮೂವರನ್ನು ಅಮಾನತು ಮಾಡಿದೆ. ಸದ್ಯ ಈ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ರಾಜಕೀಯ ಬಣ್ಣವೂ ಮೆತ್ತುಕೊಂಡಿದೆ.
ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ಹಿಂದೂ ವಿದ್ಯಾರ್ಥಿನಿಯ ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿ ಅದನ್ನು ತಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಕಳುಹಿಸುತ್ತಿದ್ದರು. ಇವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ನೀಚ ಕೃತ್ಯ ಬೆಳಕಿಗೆ ಬಂದ ಬಳಿಕ ಮೂವರನ್ನು ಇತರೆ ವಿದ್ಯಾರ್ಥಿನಿಯರು ತರಾಟೆಗೆ ತೆಗೆದುಕೊಂಡಿದ್ದು, ಹಿಂದೂ ಸಂಘಟನೆಗಳ ಎಂಟ್ರಿಯೂ ಆಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ