ಉಡುಪಿ: ಮಂಗಳೂರಿನ ನಾಗುರಿಯಲ್ಲಿ ಶಂಕಿತ ಉಗ್ರ ಶಾರಿಕ್ ಆಟೋರಿಕ್ಷಾದ ಒಳಗೆ ಕುಕ್ಕರ್ ಬಾಂಬ್ ಸ್ಪೋಟಕ್ಕೆ ಕಾರಣವಾಗಿದ್ದ. ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿತ್ತು. ಈ ಬೆಳವಣಿಗೆಯಿಂದ ಕರಾವಳಿಯಲ್ಲಿ ಹಿಂದೂ ಮುಸಲ್ಮಾನರ ನಡುವೆ ಬಿರುಕು ಜಾಸ್ತಿಯಾಗಿದೆ. ಉಡುಪಿ ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ವ್ಯಾಪಾರ ನಿರಾಕರಣೆ, ಚಳುವಳಿ ಮಾದರಿಯಲ್ಲಿ ನಡೆಯುತ್ತಿದೆ. ವಿಶ್ವ ಹಿಂದೂ ಪರಿಷತ್ ಭಜರಂಗದಳ ಹಿಂದೂ ಜಾಗರಣ ವೇದಿಕೆ ಶ್ರೀರಾಮ ಸೇನೆ ತಮ್ಮ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಪತ್ರ ಮುಖೇನ ಮನವಿ ಸಲ್ಲಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಮೂಲಕ ಸಂದೇಶಗಳನ್ನು ಹರಿ ಬಿಡಲಾಗುತ್ತಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಹೋರಾಟದ ನಂತರ ಧರ್ಮ ದಂಗಲ್ ಆರಂಭವಾಗಿತ್ತು. ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನಗಳಲ್ಲಿ ಮುಸಲ್ಮಾನರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಅಸಹಕಾರ ಧೋರಣೆ ಕಳೆದ ವರ್ಷ ನಡೆದಿತ್ತು. ಎರಡು ಮೂರು ತಿಂಗಳ ಜಟಾಪಟಿಯ ನಂತರ ಕೆಲವು ಉತ್ಸವ, ಜಾತ್ರೆಗಳಲ್ಲಿ ಮುಸಲ್ಮಾನ್ ವ್ಯಾಪಾರಿಗಳು ವ್ಯವಹಾರ ನಡೆಸಿದ್ದರು.
ಇದೀಗ ಮತ್ತೆ ವೈಮನಸ್ಸಿಗೆ ಕಾರಣವಾಗಿದ್ದು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ. ಅಲ್ಲದೇ ವ್ಯಾಪಾರ ಕೇಂದ್ರಗಳ ಮೂಲಕ ಲವ್ ಜಿಹಾದ್ ಮಾಡಲಾಗುತ್ತದೆ ಎನ್ನುವ ಕಾರಣಕ್ಕೆ ಮುಸ್ಲಿಂರನ್ನು ಜಾತ್ರೆಯಿಂದ ಹೊರಗಿಡಲಾಗುತ್ತಿದೆ. ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಒಂದು ವಾರಗಳ ಕಾಲ ನಡೆಯುವ ಜಾತ್ರೆ ಆರಂಭವಾಗಿದ್ದು, ಈ ಬಾರಿ ಉತ್ಸವದ ವ್ಯಾಪಾರಕ್ಕೆ ಹಿಂದುಯೇತರಿಗೆ ತಡೆಯೊಡ್ಡಲಾಗಿದೆ. ಇದರಿಂದ ಲಕ್ಷಾಂತರ ಜನ ಸೇರುವ ಜಾತ್ರೆಯ ಕೋಟ್ಯಾಂತರ ರೂಪಾಯಿ ವ್ಯವಹಾರ ಮುಸ್ಲಿಂ ವ್ಯಾಪಾರಿಗಳ ಕೈ ತಪ್ಪಲಿದೆ.
ಇದನ್ನೂ ಓದಿ:ಉಡುಪಿ: ದೈವ ನುಡಿಯಂತೆ ಆಗಸದ ಎತ್ತರಕ್ಕೆ ಚಿಮ್ಮಿದ ನೀರು; ಬಬ್ಬುಸ್ವಾಮಿ ಪವಾಡ ವಿಡಿಯೋ ವೈರಲ್
ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಆಡಳಿತ ಮಂಡಳಿಗೆ ಹಿಂದೂ ಸಂಘಟನೆಗಳು ಮನವಿ ಕೊಡುತ್ತಿದೆ. ಕಂಬಳ ದೈವಾರಾಧನೆ ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂಬ ಕೂಗೂ ಜೋರಾಗುತ್ತಿದೆ.
ವರದಿ: ದಿನೇಶ್ ಯಲ್ಲಾಪುರ್ ಟಿವಿ9 ಉಡುಪಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ