ಶಾಲಾ ವಾಹನಗಳನ್ನ ಟಾರ್ಗೆಟ್ ಮಾಡಿದ ಖದೀಮರು: ಅಪಘಾತವಾದ್ರೆ ದೇವರೇ ಗತಿ!
ಶಾಲೆಗಳ ವಾಹನಗಳಿಗೆ ವಿಮೆ ಮಾಡಿಸಿಕೊಡುತ್ತೇವೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ಇಬ್ಬರು ಖತರ್ನಾಕ್ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಾಲೆಯೊಂದರ ವಾಹನದ ವಿಮೆಯ ಹಣ ಕ್ಲೇಮ್ ಮಾಡಲು ಮುಂದಾದಾಗ, ಈ ನಕಲಿ ಜಾಲ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ಉಡುಪಿ, ಡಿಸೆಂಬರ್ 03: ಶಾಲಾ ವಾಹನಗಳ (school van) ವಿಮೆಯ (Insurance) ಹೆಸರಲ್ಲಿ ವಂಚಿಸುವ ಜಾಲವೊಂದು ಸಕ್ರಿಯವಾಗಿದೆ. ಇತ್ತೀಚಿಗೆ ಉಡುಪಿಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಇವರ ಖತರ್ನಾಕ್ ಐಡಿಯಾಗಳನ್ನು ಕಂಡು ಪೊಲೀಸರೇ ಬೆಚ್ಚಿಬಿದಿದ್ದಾರೆ. ಈ ಆರೋಪಿಗಳ ಕರಾಮತ್ತು ಗಮನಿಸಿದರೆ, ಎಲ್ಲಾ ಶಾಲೆಗಳು ಒಂದು ಬಾರಿ ತಮ್ಮ ವಾಹನ ವಿಮೆ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳುವುದು ಅಗತ್ಯವಾಗಿದೆ.
ವಿಮೆ ಮಾಡಿಸಿಕೊಡುವ ನೆಪದಲ್ಲಿ ಮೋಸ
ಇತ್ತೀಚಿಗೆ ಉಡುಪಿಯಲ್ಲಿ ರಾಕೇಶ್ ಹಾಗೂ ಚರಣ್ ಬಾಬು ಎಂಬ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಶಾಲೆಗಳ ವಾಹನಗಳಿಗೆ ವಿಮೆ ಮಾಡಿಸಿಕೊಡುತ್ತೇವೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಇವರು ವಂಚಿಸುತ್ತಿದ್ದರು. ಇಷ್ಟಕ್ಕೂ ಇವರ ಬಂಡವಾಳವಾದರೂ ಏನು ಗೊತ್ತಾ? ಶಾಲಾ ವಾಹನಗಳು ಅಪಘಾತವಾಗುವುದು ಅಪರೂಪ. ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕು ಎಂಬ ಜವಾಬ್ದಾರಿಯಲ್ಲಿ ವೇಗದ ಮಿತಿ ಮೀರದೆ ಚಾಲಕರು ಶಾಲಾ ವಾಹನ ಓಡಿಸುತ್ತಾರೆ. ಹಾಗಾಗಿ ತಾವು ಮಾಡುತ್ತಿರುವ ವಂಚನೆ ಶಾಲೆಗಳ ಗಮನಕ್ಕೆ ಬರುವುದಿಲ್ಲ ಎಂಬುವುದು ಈ ಖತರ್ನಾಕ್ ಆಸಾಮಿಗಳಿಗೆ ಮೊದಲೇ ಗೊತ್ತಿತ್ತು. ಈ ವಿಶ್ವಾಸದಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಶಾಲಾ ವಾಹನಗಳಿಗೆ ನಕಲಿ ವಿಮೆ ಮಾಡಿಸಿದ್ದರು.
ಇದನ್ನೂ ಓದಿ: ಮದ್ಯಪಾನ ಮಾಡಿ ಶಾಲಾ ಬಸ್ ಚಾಲನೆ: 36 ಮಂದಿ ಚಾಲಕರ ವಿರುದ್ಧ ಕೇಸ್; ಡಿಎಲ್ ರದ್ದಿಗೂ ಶಿಫಾರಸು
ಕೋಟದ ಹುಣಸೆಮಕ್ಕಿಯ ಶಾಲೆಯೊಂದರ ಶಾಲಾ ವಾಹನ ಇತ್ತೀಚೆಗೆ ಆಟೋಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ವಿಮೆಯ ಹಣ ಕ್ಲೇಮ್ ಮಾಡಲು ಮುಂದಾದಾಗ, ಈ ನಕಲಿ ಜಾಲ ಬೆಳಕಿಗೆ ಬಂದಿದೆ. ಆರೋಪಿಗಳಿಬ್ಬರು ಈ ಹಿಂದೆ ವಿಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಅನುಭವದ ಆಧಾರದಲ್ಲಿ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲಾ ವಾಹನಕ್ಕೆ ವಿಮೆ ಮಾಡಿಸುವುದಾಗಿ ವಂಚಿಸಿದ್ದಾರೆ.
ಉಡುಪಿಯಲ್ಲಿ ಹತ್ತಾರು ಖಾಸಗಿ ಶಾಲೆಗಳಿದ್ದು, ಕೆಲ ಶಾಲೆಗಳಲ್ಲಿ ಐವತ್ತಕ್ಕೂ ಅಧಿಕ ವಾಹನಗಳಿವೆ. ಈ ವಂಚನೆಯ ಕುರಿತು ಪೊಲೀಸರ ಗಮನಕ್ಕೆ ಬಂದಾಗ ಎಲ್ಲಾ ಶಾಲೆಗಳಿಗೂ ಸೂಚನೆ ನೀಡಿದ್ದರು. ಈ ವೇಳೆ ಸುಮಾರು 46 ಶಾಲಾ ವಾಹನಗಳಿಗೆ ಸಂಬಂಧಿಸಿದಂತೆ ಐದು ಶಾಲೆಗಳಿಗೆ ವಂಚನೆಯಾದ ಪ್ರಕರಣ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಯಾವುದೇ ಶಾಲಾ ವಾಹನ ಅಪಘಾತವಾಗಿ ವಿಮೆಯ ಹಣವನ್ನು ಕ್ಲೇಮ್ ಮಾಡುವ ಹಂತಕ್ಕೆ ಬರುವುದಿಲ್ಲ ಎನ್ನುವುದು ಈ ವಂಚಕರ ವಿಶ್ವಾಸವೇ ಬಂಡವಾಳವಾಗಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ಬಸ್ ಕಂಪನಿಗಳಿಗೆ ಬಿಎಂಟಿಸಿಯಿಂದ ಬರೋಬ್ಬರಿ 25 ಕೋಟಿ ರೂ. ದಂಡ!
ಮಕ್ಕಳ ಸುರಕ್ಷತೆ ಮೊದಲ ಆದ್ಯತೆ. ಆದರೆ ವಂಚಕರಿಗೆ ಇದು ಕೂಡ ಒಂದು ಬಂಡವಾಳವಾಗುತ್ತೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಕೇವಲ ಕರಾವಳಿ ಮಾತ್ರವಲ್ಲ ರಾಜ್ಯದ ವಿವಿಧಡೆ ಈ ರೀತಿಯ ಜಾಲ ಇರಬಹುದು. ಯಾವುದಕ್ಕೂ ಒಂದು ಬಾರಿ ಶಾಲೆಗಳು ತಮ್ಮ ವಾಹನದ ವಿಮೆಯ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



