ಉಡುಪಿ: ಜಿಲ್ಲೆಯ ಕಾಪು ತಾಲೂಕು ಪಾಂಗಾಳ ಶ್ರೀ ಜನಾರ್ದನ ದೇವಸ್ಥಾನದ ಬಳಿ ಭಾನುವಾರ ಸಂಜೆ ವ್ಯಕ್ತಿಯೋರ್ವನ ಕೊಲೆಯೊಂದು ನಡೆದು ಹೋಗಿದೆ. ಕೊಲೆಯಾದ ವ್ಯಕ್ತಿ ಪಾಂಗಾಳದ ಮುಂಡೇಡಿ ನಿವಾಸಿ ಶರತ್ ಶೆಟ್ಟಿ (41) ಎಂದು ಗುರುತಿಸಲಾಗಿದ್ದು, ಇತ ಎರಡು ದಿನಗಳಿಂದ ಪಾಂಗಾಳದ ಬಬ್ಬು ಸ್ವಾಮಿ ದೈವಸ್ಥಾನದ ನೇಮೋತ್ಸವದಲ್ಲಿ ಭಾಗಿಯಾಗಿದ್ದ. ಇತನಿಗೆ ಮಧ್ಯಾಹ್ನ ಮೊಬೈಲ್ ಕರೆಯೊಂದು ಬಂದಿದೆ. ಕರೆ ಬಂದ ತಕ್ಷಣ ರಾಷ್ಟ್ರೀಯ ಹೆದ್ದಾರಿ ಬಳಿ ಶರತ್ ಶೆಟ್ಟಿ ತೆರಳಿದ್ದರು. ಭೂ ವ್ಯವಹಾರ ಮಾಡಿಕೊಂಡಿದ್ದ ಶರತ್ ಶೆಟ್ಟಿಗೆ ಮೊಬೈಲ್ ಕಾಲ್ ಬರುವುದು ಗಡಿಬಿಡಿಯಲ್ಲಿ ತೆರಳುವುದು ಹೊಸತೇನಲ್ಲ, ಹೀಗಾಗಿ ಅವರ ಜೊತೆಗಿದ್ದರೂ ಕರೆಯನ್ನು ಅಷ್ಟು ಸಿರಿಯಸ್ಸಾಗಿ ತೆಗದುಕೊಂಡಿಲ್ಲ. ಆದರೆ ಅದೇ ಮೊಬೈಲ್ ಕರೆ ಮೇರೆಗೆ ತೆರಳಿದ್ದ ಶರತ್ ಶೆಟ್ಟಿ ರಸ್ತೆ ಪಕ್ಕದಲ್ಲಿ ಕೊಲೆಯಾಗಿ ಬಿದ್ದಿದ್ದು ನೋಡಿ ಸ್ಥಳೀಯರು ಭಯಭೀತರಾಗಿದ್ದರು.
ಗ್ರಾಮದ ನೇಮೋತ್ಸವ ನಡೆಯುವ ವೇಳೆಯಲ್ಲಿ ಈ ಕೊಲೆ ನಡೆದಿರುವುದು ಗ್ರಾಮಸ್ಥರನ್ನು ತಲ್ಲಣ ಗೊಳಿಸಿದೆ. ಸ್ಥಳೀಯ ನಿವಾಸಿ ಶರತ್ ಶೆಟ್ಟಿ ಭೂ ವ್ಯವಹಾರ ಸಹಿತ ಹಲವು ವಹಿವಾಟು ನಡೆಸುತ್ತಿದ್ದರು. ವ್ಯವಹಾರದಲ್ಲಿ ಕಂಡು ಬಂದ ದುಶ್ಮನಿಯೇ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ನೇಮೋತ್ಸವ ನಡೆಯುವ ವೇಳೆ ಮೊಬೈಲ್ ಕರೆ ಮಾಡಿ ಈತನನ್ನು ಕರೆಸಿಕೊಂಡು, ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರಿದು ಹಲ್ಲೆ ಗೈಯಲಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್ ಶೆಟ್ಟಿಯನ್ನು ಗುರುತಿಸಿದ ಸ್ಥಳೀಯರು ಅಪಘಾತವಾಗಿರಬೇಕೆಂದು ತಿಳಿದು ಉಡುಪಿ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಘಟನಾ ಸ್ಥಳದಲ್ಲಿ ಹಲ್ಲೆಗೆ ಬಳಸಿದ ಚೂರಿ ಪತ್ತೆಯಾಗಿದ್ದು, ಬಳಿಕ ಇದೊಂದು ಕೊಲೆ ಪ್ರಕರಣ ಅನ್ನೋದು ಬಯಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶರತ್ ಶೆಟ್ಟಿ ಅಸುನಿಗಿದ್ದಾರೆ. ಇತ್ತೀಚಿಗಷ್ಟೇ ಪರಿಚಿತರೊಂದಿಗೆ ಭೂವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಕಂಡು ಬಂದಿರುವುದು ಕೊಲೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಮಚ್ಚಿಂದ್ರ ಹಾಕೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಮಂಗಳೂರಿನ ಹೃದಯಭಾಗದಲ್ಲಿ ಚೂರಿ ಇರಿದು ಹಾಡಹಗಲೇ ವ್ಯಕ್ತಿಯ ಕೊಲೆ, ಜುವೆಲ್ಲರಿ ಅಂಗಡಿಗೆ ಬೈಕ್ನಲ್ಲಿ ಬಂದು ಕುಕೃತ್ಯ
ಒಟ್ಟಾರೆಯಾಗಿ ಪ್ರಾಥಮಿಕ ತನಿಖೆಯ ವೇಳೆ ಇಬ್ಬರು ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು ಎನ್ನಲಾಗುತ್ತಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಯ ಪೂರ್ಣ ವಿವರಗಳು ಇನ್ನಷ್ಟೆ ಬೆಳಕಿಗೆ ಬರಬೇಕಾಗಿದೆ.
ವರದಿ: ದಿನೇಶ್ ಯಲ್ಲಾಪುರ್ ಟಿವಿ9 ಉಡುಪಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ