ಉಡುಪಿ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡಿದ್ದ ಮಹಿಳೆಯ ಅಂಗಾಂಗಳನ್ನು (Organ donation) ಕುಟುಂಬಸ್ಥರು ದಾನ ಮಾಡುವ ಮೂಲಕ 6 ಜನರಿಗೆ ಬೆಳಕಾಗಿದ್ದಾರೆ. ಬೈಂದೂರು (Baindur) ತಾಲೂಕಿನ ಉಪ್ಪುಂದದ ಶಿಲ್ಪಾ ಮಾಧವ ಕೊಡೇರಿ ಎಂಬುವರು ಫೆ.25 ರಂದು ಮಾಧ್ಯಾಹ್ನ 1:30 ಕ್ಕೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀರ್ವ ಗಾಯಗೊಂಡಿದ್ದರು. ಇವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಶಿಲ್ಪಾರನ್ನು ರಕ್ಷಿಸಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಿದರೂ, ಚೇತರಿಸಿಕೊಳ್ಳುವ ಲಕ್ಷಣಗಳು ಕಂಡುಬರಲಿಲ್ಲ.
ಈ ಬಗ್ಗೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಮಾತನಾಡಿ ಶಿಲ್ಪಾರನ್ನು ರಕ್ಷಿಸಲು ಸಾಕಷ್ಟು ಪ್ರಯತ್ನಪಟ್ಟೆವು ಆದರೆ ಅವರು ಚೇತರಿಸಿಕೊಳ್ಳಲಿಲ್ಲ. ಹೀಗಾಗಿ ಮಾನವ ಅಂಗಾಗ ಕಸಿ ಕಾಯ್ದೆ ಅನುಸಾರ ಶಿಲ್ಪಾ ಅವರನ್ನು ಎರಡು ಬಾರಿ ಪರಿಶೀಲಿಸಿ, ರೋಗಿಯ ಮೆದಳು ನಿಷ್ಕ್ರೀಯಗೊಂಡಿದೆ ಘೋಷಿಸಿದ್ದೇವೆ ಎಂದು ಹೇಳಿದರು.
ಆಗ ಅವರ ಪತಿ ಪ್ರಸನ್ನ ಕುಮಾರ್ ಮತ್ತು ಕುಟುಂಬದ ಸದಸ್ಯರು ಅಂಗಾಂಗಳನ್ನು ದಾನ ಮಾಡಲು ಇಚ್ಚೆ ವ್ಯಕ್ತಪಡಿಸಿದರು. ಅದರಂತೆ ಎರಡು ಮೂತ್ರಪಿಂಡಗಳು, ಯಕೃತ್, ಚರ್ಮ ಮತ್ತು ಎರಡು ಕಾರ್ನಿಯಾಗಳನ್ನು ದಾನ ಮಾಡಿದ್ದಾರೆ. ಇದರಿಂದ 6 ಜನರ ಜೀವ ಉಳಿಸಲು ಸಹಾಯವಾಗಿದೆ.
ಯಕೃತ್ನ್ನು ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆ, ಒಂದು ಮೂತ್ರಪಿಂಡವನ್ನು ಮಂಗಳೂರು ಎಜೆ ಆಸ್ಪತ್ರೆ, ಎರಡು ಕಾರ್ನಿಯ, ಒಂದು ಮೂತ್ರಪಿಂಡ ಮತ್ತು ಚರ್ಮವನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಬಳಸಲಾಗಿದೆ. ಇನ್ನು ದಾನ ಮಾಡಿದ ಅಂಗಾಂಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆ ಸಹಕಾರದಲ್ಲಿ ಮಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ವರ್ಗಾಯಿಸಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ