ಉಡುಪಿ: ಪೊಲೀಸರ ಮೇಲೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಲು ಯತ್ನಿಸಿದ ಮಹಿಳೆ
ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಅಂಗಡಿ ತೆರೆದ ಮಹಿಳೆ ವಿರುದ್ಧ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪ್ರಶ್ನಿಸಲು ಬಂದ ಪೊಲೀಸ್ ಸಿಬ್ಬಂದಿ ಮೇಲೆ ಅಂಗಡಿ ಮಾಲಕಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

ಕುಂದಾಪುರ, ಆಗಸ್ಟ್ 21: ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಅಂಗಡಿ ವಸ್ತುಗಳನ್ನು ಇಟ್ಟುಕೊಂಡು ಜನರ ಓಡಾಟಕ್ಕೆ ತೊಂದರೆ ನೀಡುತ್ತಿದ್ದಾರೆ ಎಂಬ ದೂರಿನ ಅನ್ವಯ ಪ್ರಶ್ನಿಸಲು ಬಂದ ಪೊಲೀಸರ ಮೇಲೆ ಅಂಗಡಿ ಮಾಲಕಿ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಉಡುಪಿ (Udupi) ಜಿಲ್ಲೆಯ ಕುಂದಾಪುರದ ಬೈಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಕೋಟೇಶ್ವರ ಮುಖ್ಯರಸ್ತೆಯಲ್ಲಿ ಸರೋಜಾ ದಾಸ್ ಎಂಬ ಮಹಿಳೆ ಟೈಲರ್ ಮತ್ತು ಫ್ಯಾನ್ಸಿ ಸ್ಟೋರ್ ನಡೆಸುತ್ತಿದ್ದರು. ಆದರೆ ಅಂಗಡಿಯ ಸಾಮಾನುಗಳನ್ನು ರಸ್ತೆಗೆ ಹರಡಿ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸ್ಥಳೀಯರು ಆಕೆಯ ವಿರುದ್ಧ ದೂರಿದ್ದಾರೆ.
ಇದನ್ನೂ ಓದಿ: ಉಡುಪಿ: 7 ವರ್ಷಗಳಿಂದ ಶಾಲೆಗೆ ಗೈರಾಗಿ ಸಂಬಳ ಪಡೆಯುತ್ತಿದ್ದ ಆನಗಳ್ಳಿ ಸರ್ಕಾರಿ ಶಾಲೆಯ ಸಹಶಿಕ್ಷಕ ಅಮಾನತು
ತನಿಖೆಗೆ ಆಗಮಿಸಿದ ಪೊಲೀಸರನ್ನು ಮಹಿಳೆ ನಿಂದಿಸಿ ಬಾಟಲಿಯಲ್ಲಿದ್ದ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾಳೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ವಿರುದ್ಧ ಅಮಾಸೆಬೈಲು ಹಾಗೂ ಶಂಕರನಾರಾಯಣ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದ ಕಾರಣ ವಾರಂಟ್ ಜಾರಿ ಮಾಡಲಾಗಿದೆ.
ಇತ್ತೀಚೆಗೆ, ಆಟೋ ವ್ಹೀಲಿಂಗ್ ಮಾಡುತ್ತಿದ್ದ ಚಾಲಕನನ್ನು ಹಿಡಿಯಲು ಮುಂದಾದಾಗ ಪೊಲೀಸರ ಮೇಲೆಯೇ ಆಟೋ ಹತ್ತಿಸಲು ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿತ್ತು. ಆಟೋವನ್ನು ಚಾಲಕ ಐ.ಕೆ.ರಸ್ತೆ ಕಡೆಯಿಂದ ವ್ಹೀಲಿಂಗ್ ಮಾಡಿಕೊಂಡು ಬರುತ್ತಿದ್ದನು. ಇದನ್ನು ನೋಡಿದ ಗಸ್ತು ತಿರುಗುತ್ತಿದ್ದ ಪೊಲೀಸರು, ಆಟೋವನ್ನು ತಡೆಯಲು ಮುಂದಾಗಿದ್ದರು. ಈ ವೇಳೆ ಇನ್ಸ್ಪೆಕ್ಟರ್ ಮೇಲೆಯೇ ಆಟೋ ಹತ್ತಿಸಲು ಚಾಲಕ ಯತ್ನಿಸಿದ್ದನು. ಕೂಡಲೇ ಇನ್ಸ್ಪೆಕ್ಟರ್ ಪಕ್ಕಕ್ಕೆ ಹಾರಿ ತಪ್ಪಿಸಿಕೊಂಡಿದ್ದಾರೆ. ಆದರೆ ಚಾಲಕ ಆಟೋವನ್ನು ಪೊಲೀಸ್ ಜೀಪಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಪ್ರಯತ್ನಿಸಿದ್ದನು. ಸುಮಾರು 2 ಕಿ.ಮೀ. ದೂರದವರೆಗೆ ಚೇಸ್ ಮಾಡಿದ ಪೊಲೀಸರು ಸಾರ್ವಜನಿಕರ ಸಹಾಯದಿಂದ ಆರೋಪಿ ರೋಷನ್ನನ್ನು ಬಂಧಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 pm, Mon, 21 August 23




