ಬೆಳಗಾವಿ: ಮಹಾಮಾರಿ ಕೊರೊನಾದ ಭೀಕರತೆಗೆ ಜನ ತತ್ತರಿಸಿದ್ದಾರೆ. ಈ ನಡುವೆ ಸರ್ಕಾರ ಕೊರೊನಾ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. 14 ದಿನಗಳ ಕೊರೊನಾ ಕರ್ಫ್ಯೂ ವಿದಿಸಿದೆ. ಇದರಿಂದ ಜನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಓಟಿಗಾಗಿ ಜನರ ಕಾಲು ಹಿಡಿಯುವ ಪ್ರತಿನಿಧಿಗಳು ಇಂತಹ ಸಮಯದಲ್ಲಿ ಜನರ ಜೊತೆ ನಿಂತು ಅವರಿಗೆ ಅವರ ಕಷ್ಟಕ್ಕೆ ಸಾಥ್ ನೀಡಬೇಕು. ಆದ್ರೆ ಆಹಾರ ಸಚಿವ ಉಮೇಶ್ ಕತ್ತಿ ಬೇರೆಯದ್ದೇ ಮಾತುಗಳನ್ನು ಆಡಿದ್ದಾರೆ. ‘ಸತ್ತು ಹೋದ್ರೆ ಒಳ್ಳೆಯದು’ ಎಂಬ ಅವರ ಅಹಂಕಾರದ ಮಾತುಗಳ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.
ಈಶ್ವರ ಆರ್ಯರ ಎಂಬ ರೈತ ಕೇಳಿದ ಪ್ರಶ್ನೆಗೆ ಸಚಿವರು ಉಡಾಫೆ ಉತ್ತರ ನೀಡಿದ್ದಾರೆ. ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಸಂಘದ ಕಾರ್ಯಕರ್ತ ಈಶ್ವರ್ ಪಡಿತರ ಅಕ್ಕಿ ಕಡಿತಗೊಳಿಸಿರೋದನ್ನು ಪ್ರಶ್ನಿಸಿದರು. ಈ ವೇಳೆ ಉತ್ತರ ಕರ್ನಾಟಕದಲ್ಲಿ ಅಕ್ಕಿ ಜತೆಗೆ ಜೋಳ ಕೊಡ್ತಿವಿ. ಲಾಕ್ಡೌನ್ ಸಂದರ್ಭದಲ್ಲಿ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತೆ. ಮುಂದಿನ ತಿಂಗಳಿನಿಂದ ಅಕ್ಕಿ ಕೊಡಲಾಗುವುದು ಎಂದು ಉಮೇಶ್ ಕತ್ತಿ ಹೇಳಿದ್ರು.
ಲಾಕ್ಡೌನ್ ಇದೆ ಅಲ್ಲಿಯವರೆಗೆ ಉಪವಾಸ ಸಾಯೋದಾ ಎಂದು ಈಶ್ವರ್ ಪ್ರಶ್ನಿಸಿದಕ್ಕೆ ಸಾಯೋದು ಒಳ್ಳೆಯದು, ಅದಕ್ಕಿಂತ ಮೊದಲು ಅಕ್ಕಿ ಮಾರಾಟ ಮಾಡೋ ದಂಧೆ ನಿಲ್ಲಿಸಿ ಎಂದು ಅಹಂಕಾರದ ಮಾತುಗಳನ್ನಾಡಿದ್ದಾರೆ. ಫೋನ್ ಮಾಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ. ಸದ್ಯ ಆಹಾರ ಸಚಿವರ ಈ ಆಡಿಯೋ ವೈರಲ್ ಆಗಿದೆ.
ನಾನು ಎಲ್ಲರಿಗೂ ಉತ್ತರ ಕೊಡುವುದಕ್ಕೆ ಆಗುತ್ತಾ?
ಇನ್ನು ಈ ಬಗ್ಗೆ ಸ್ಪಷ್ಟನೆ ನೀಡಿದ ಉಮೇಶ್ ಕತ್ತಿ ಯೋಜನೆ ಏನು ಇದೆಯೋ ಅದನ್ನೇ ಹೇಳಿದ್ದೇನೆ. ಕರೆ ಮಾಡಿ ವ್ಯಕ್ತಿ ಸತ್ತೋಗೋದಾ ಎಂದು ಕೇಳಿದ ಅದಕ್ಕೆ ನಾನು ಸತ್ತೋಗಿ ಎಂದು ಹೇಳಿದ್ದೇನೆ. ಅದಕ್ಕಿಂತ ಬೇರೆ ಇನ್ನೇನು ಹೇಳಲಿ. ಬೇಡ ಎಂದು ಹೇಳುವಷ್ಟು ದೊಡ್ಡ ಮನಸ್ಸು ನನಗಿಲ್ಲ. ರಾಜ್ಯದಲ್ಲಿ ಊಟ ಸಿಗದೆ ಯಾರೂ ಸಾಯಬಾರದು. ಮುಖ್ಯಮಂತ್ರಿಗಳು ನನಗೆ ಒಳ್ಳೆಯ ಖಾತೆ ಕೊಟ್ಟಿದ್ದಾರೆ ಎಂದು ಬೆಳಗಾವಿಯಲ್ಲಿ ಆಹಾರ ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
(Food Minister Umesh Katti in Controversy over a statement)
ಇದನ್ನೂ ಓದಿ: ಸದ್ಯ ಪಡಿತರಕ್ಕೆ ಯಾವುದೇ ಶುಲ್ಕ ಪಡೆಯುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ: ಸಚಿವ ಉಮೇಶ್ ಕತ್ತಿ
ಇದನ್ನೂ ಓದಿ: Prahlad Joshi : 80 ಕೋಟಿ ಕುಟುಂಬಗಳಿಗೆ ಎರಡು ತಿಂಗಳು ಉಚಿತ ಪಡಿತರ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ
Published On - 2:27 pm, Wed, 28 April 21