ಅಕಾಲಿಕ ಮಳೆ: ಸಿಂಧನೂರಿನಲ್ಲಿ ಭತ್ತಕ್ಕೆ ಹಾನಿ, ಗುರುಮಠಕಲ್​ನಲ್ಲಿ ಎತ್ತುಗಳ ಸಾವು, ಎನ್​ಆರ್​ ಪುರದಲ್ಲಿ ಮನೆಗೆ ಧಕ್ಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 23, 2022 | 12:08 PM

ಅಕಾಲಿಕ ಮಳೆಯಿಂದಾಗಿ ರಾಜ್ಯದ ವಿವಿಧೆಡೆ ಬೆಳೆಗಳಿಗೆ ಹಾನಿಯಾಗಿದೆ. ಎತ್ತುಗಳು ಮೃತಪಟ್ಟಿವೆ. ಮನೆಯ ಮೇಲಿನ ಚಾವಣಿ ಹಾರಿಹೋಗಿದೆ.

ಅಕಾಲಿಕ ಮಳೆ: ಸಿಂಧನೂರಿನಲ್ಲಿ ಭತ್ತಕ್ಕೆ ಹಾನಿ, ಗುರುಮಠಕಲ್​ನಲ್ಲಿ ಎತ್ತುಗಳ ಸಾವು, ಎನ್​ಆರ್​ ಪುರದಲ್ಲಿ ಮನೆಗೆ ಧಕ್ಕೆ
ಎನ್ಆರ್​ಪುರದಲ್ಲಿ ಬಿರುಗಾಳಿ ಸಹಿತ ಮಳೆಗೆ ಹಾರಿ ಹೋದ ಚಾವಣಿ
Follow us on

ರಾಯಚೂರು: ಅಕಾಲಿಕ ಮಳೆಯಿಂದಾಗಿ ಸಿಂಧನೂರು ತಾಲೂಕಿನ ಕೆಲವೆಡೆ ಕಟಾವು ಮಾಡಿದ್ದ ಭತ್ತದ ಬೆಳೆಗೆ ಹಾನಿಯಾಗಿದೆ. ಒಳಗಲು ಹಾಕಿದ್ದ ಭತ್ತದ ರಾಶಿಯ ಜೊತೆಗೆ ಕೊಯ್ಲಿನ ಹಂತದಲ್ಲಿದ್ದ ಭತ್ತದ ಬೆಳೆಯೂ ಹಾಳಾಗಿದೆ. ತಾಲ್ಲೂಕಿನ ಹಲವೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದ ಕಾರಣ ಬೆಳೆಹಾನಿ ಸಂಭವಿಸಿದೆ.

ಎತ್ತುಗಳು ಸಾವು
ಯಾದಗಿರಿ: ಜಿಲ್ಲೆಯಲ್ಲಿ ಗಾಳಿ, ಮಳೆಯ ಆರ್ಭಟ ಮುಂದುವರಿದಿದ್ದು ಗುರುಮಠಕಲ್​​ನ ರೈತ ಭೀಮಪ್ಪ ಅವರಿಗೆ ಸೇರಿದ್ದ 2 ಎತ್ತುಗಳ ಸಾವನ್ನಪ್ಪಿವೆ. ಸುರಪುರ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದ ರೈತ ವೆಂಕಪ್ಪ ಅವರ ಹಸು ಸಹ ಮೃತಪಟ್ಟಿದೆ. ವಡಗೇರ ತಾಲೂಕಿನ ಟೋಕಾಪುರ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಎತ್ತು ಸತ್ತಿದೆ. ಚೌಡೇಶ್ವರಿಹಾಳ್ ಗ್ರಾಮದಲ್ಲಿ ಗಾಳಿಯ ಹೊಡೆತಕ್ಕೆ ಮನೆಯ ಪತ್ರಾಸ್ ಹಾರಿ ಹೋಗಿದೆ.

ಎನ್​ಆರ್ ಪುರದಲ್ಲಿ ಬಿರುಗಾಳಿ
ಚಿಕ್ಕಮಗಳೂರು: ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ನರಸಿಂಹರಾಜಪುರ ತಾಲ್ಲೂಕಿನ ಅರಳಿಕೊಪ್ಪ ಗ್ರಾಮದ ಸಾಲೂರು ವಸಂತ ಎನ್ನುವವರ ಮನೆಯ ಛಾವಣಿ ಹಾರಿಹೋಗಿ, ರಸ್ತೆ ಪಕ್ಕದ ಬೀದಿಗೆ ಬಿದ್ದಿದೆ. ಬಿರುಗಾಳಿ ಆರ್ಭಟ ಕಂಡು ಅರಳಿಕೊಪ್ಪ ಗ್ರಾಮಸ್ಥರು ಕಂಗಾಲಾಗಿದ್ದಾರೆ.

ಬೆಂಗಳೂರು, ಮಲೆನಾಡಿನಲ್ಲೂ ಇನ್ನೆರಡು ದಿನ ಮಳೆ
ಬೆಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟಿಸುತ್ತಿದ್ದು (Rain in Karnataka) ಇನ್ನೂ 2 ದಿನ ವರುಣನ ಅಬ್ಬರವಿರಲಿದೆ. ಇನ್ನೆರಡು ದಿನ ಕರ್ನಾಟಕದ (Karnataka Rains) ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ನಿನ್ನೆ ದಾವಣಗೆರೆ, ಯಾದಗಿರಿ, ಕಲಬುರಗಿ, ಧಾರವಾಡ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಯಾದಗಿರಿಯಲ್ಲಿ ಅಕಾಲಿಕ ಮಳೆಯಿಂದ ಭತ್ತದ ರಾಶಿ ಮಳೆನೀರಿನಲ್ಲಿ ಕೊಚ್ಚಿ ಹೋಗಿದೆ. ಗುಡುಗು ಸಹಿತ ಮಳೆಯಿಂದ ಜನ ಕಂಗಾಲಾಗಿದ್ದು, ಸಿಡಿಲು ಬಡಿದು ಹಸು ಮತ್ತು ಕರು ಸಾವನ್ನಪ್ಪಿವೆ. ಕಲಬುರಗಿಯಲ್ಲೂ ಮಳೆಯ ಆರ್ಭಟಕ್ಕೆ ಜನ ತತ್ತರಿಸಿದ್ದಾರೆ.

ಇಂದು ಕೂಡ ರಾಜ್ಯಾದ್ಯಂತ ಮಳೆ ಅಬ್ಬರಿಸಲಿದೆ. ಹೀಗಾಗಿ, ಕರ್ನಾಟಕದಲ್ಲಿ ಹವಾಮಾನ ಇಲಾಖೆ ಬಹುತೇಕ ರಾಜ್ಯಗಳಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಿದೆ. ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡದಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: Karnataka Rain: ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ; ಬೆಂಗಳೂರು, ಮಲೆನಾಡಿನಲ್ಲೂ ಇನ್ನೆರಡು ದಿನ ಮಳೆ

ಇದನ್ನೂ ಓದಿ: ದಾವಣಗೆರೆಯಲ್ಲಿ ಸುರಿದ ಮಳೆಗೆ ನೆಲ ಕಚ್ಚಿದ ಅಡಿಕೆ ಮರಗಳು, ಹರನಗಳ್ಳಿ-ಕೆಂಗಾಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಸಂಚಾರ ಸ್ಥಗಿತ