ಬೆಂಗಳೂರು ಪ್ರದಕ್ಷಿಣೆ ಹಾಕಿದ ಉಪಲೋಕಾಯುಕ್ತ ನ್ಯಾಯಮೂರ್ತಿಗಳು: ಪೊಲೀಸರು, ಬಿಬಿಎಂಪಿ ಅಧಿಕಾರಿಗಳಿಗೆ ಫುಲ್ ಕ್ಲಾಸ್

|

Updated on: Sep 02, 2024 | 5:22 PM

ಬೆಂಗಳೂರಿನ ರಸ್ತೆಗಳಲ್ಲಿ ಕಸ ವಿಲೇವಾರಿ ಬಗ್ಗೆ ವ್ಯಾಪಕ ದೂರು ಹಿನ್ನೆಲೆ ಇಂದು ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಮತ್ತು ಫಣೀಂದ್ರ ನಗರ ಪ್ರದಕ್ಷಿಣೆ ಹಾಕಿದ್ದಾರೆ. ಈ ವೇಳೆ ನಗರದ ಅವ್ಯವಸ್ಥೆ ಕಂಡು ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಫುಲ್ ಕ್ಲಾಸ್​ ತೆಗೆದುಕೊಂಡಿದ್ದಾರೆ. ಇದು ಹೀಗೆ ಮುಂದೆವರೆದರೆ ಸಿಲಿಕಾನ್​ ಸಿಟಿ ಗಾರ್ಬೇಜ್ ಸಿಟಿ ಗ್ಯಾರಂಟಿ ಎಂದು ಹೇಳಿದ್ದಾರೆ.

ಬೆಂಗಳೂರು ಪ್ರದಕ್ಷಿಣೆ ಹಾಕಿದ ಉಪಲೋಕಾಯುಕ್ತ ನ್ಯಾಯಮೂರ್ತಿಗಳು: ಪೊಲೀಸರು, ಬಿಬಿಎಂಪಿ ಅಧಿಕಾರಿಗಳಿಗೆ ಫುಲ್ ಕ್ಲಾಸ್
ಬೆಂಗಳೂರು ಪ್ರದಕ್ಷಿಣೆ ಹಾಕಿದ ಉಪಲೋಕಾಯುಕ್ತ ನ್ಯಾಯಮೂರ್ತಿಗಳು: ಪೊಲೀಸರು, ಬಿಬಿಎಂಪಿ ಅಧಿಕಾರಿಗಳಿಗೆ ಫುಲ್ ಕ್ಲಾಸ್
Follow us on

ಬೆಂಗಳೂರು, ಸೆಪ್ಟೆಂಬರ್​ 02: ನಗರದಲ್ಲಿ ರಸ್ತೆಗಳಲ್ಲಿ ಕಸ ವಿಲೇವಾರಿ ಬಗ್ಗೆ ವ್ಯಾಪಕ ದೂರು ಹಿನ್ನೆಲೆ ಇಂದು ಉಪ ಲೋಕಾಯುಕ್ತ (Upalokayukta) ನ್ಯಾ.ಬಿ.ವೀರಪ್ಪ ಮತ್ತು ನ್ಯಾ.ಫಣೀಂದ್ರ ನಗರ ಪ್ರದಕ್ಷಿಣೆ ಹಾಕಿದ್ದಾರೆ. ಬನಶಂಕರಿ 2ನೇ ಹಂತದ ಸಬ್​ರಿಜಿಸ್ಟರ್ ಕಚೇರಿ ರಸ್ತೆಯಲ್ಲಿ ಪರಿಶೀಲನೆ ಮಾಡಿದ್ದು, ದಕ್ಷಿಣ ವಲಯದ ಡಿಜಿಎಂ ಭೀಮೇಶ್​ರನ್ನು ತರಾಟೆ ತೆಗೆದುಕೊಂಡಿದ್ದಾರೆ.

ರಸ್ತೆ ಬದಿ ಇಷ್ಟು ಕಸವಿದ್ದರೂ ಏಕೆ ತೆರವುಗೊಳಿಸಿಲ್ಲ. ಯಾರು ಸರಿಯಾಗಿ ಕಸ ಸಾಗಿಸುವುದಿಲ್ಲವೋ ಅವರ ವಿರುದ್ಧ ಕ್ರಮಕೈಗೊಳ್ಳಿ. ರಸ್ತೆ ಬದಿ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಮೊದಲ ಬಾರಿಗೆ ದಂಡ ಹಾಕಿ. ಮತ್ತೆ ಕಸ ಹಾಕಿದರೆ ಕ್ರಿಮಿನಲ್ ಕೇಸ್ ಫೈಲ್ ಮಾಡುವಂತೆ ಬಿಎಸ್​ಡಬ್ಲ್ಯುಎಂ ಡಿಜಿಎಂ ಭೀಮೇಶ್​ಗೆ ಉಪ ಲೋಕಾಯುಕ್ತರು ಸೂಚನೆ ನೀಡಿದ್ದಾರೆ.

ಸಂಚಾರಿ ಪೊಲೀಸರಿಗೂ ತರಾಟೆ

ಇನ್ನು ನಗರ ಪ್ರದಕ್ಷಿಣೆ ವೇಳೆ ನೋ ಪಾರ್ಕಿಂಗ್​ನಲ್ಲಿ ವಾಹನ ನಿಲ್ಲಿಸಿರುವುದನ್ನು ಕಂಡು ಸಂಚಾರಿ ಪೊಲೀಸರಿಗೂ ಉಪ ಲೋಕಾಯುಕ್ತ ನ್ಯಾ.ಫಣೀಂದ್ರ ತರಾಟೆ ತೆಗೆದುಕೊಂಡಿದ್ದಾರೆ. ನೋ ಪಾರ್ಕಿಂಗ್ ಬೋರ್ಡ್ ಇದ್ರೂ ಯಾಕೆ ವಾಹನ ನಿಲ್ಲಿಸಿದ್ದಾರೆ. ಹಾಗಾದರೆ ನೀವು ಇಲ್ಲಿ ಏನ್ ಕೆಲಸ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಗುತ್ತಿಗೆದಾರರಿಗೆ ಕೋಟಿ ಕೋಟಿ ಬಿಲ್ ಬಾಕಿ; ಇಂದಿನಿಂದ ಪಾಲಿಕೆ ವ್ಯಾಪ್ತಿಯ ಕಾಮಗಾರಿ ಬಂದ್ ಮಾಡಿ ಪ್ರತಿಭಟನೆ

ನೋ ಪಾರ್ಕಿಂಗ್ ಬೋರ್ಡ್ ತೆಗೆದು ಪಾರ್ಕಿಂಗ್ ಬೋರ್ಡ್ ಹಾಕಿ. ಕೊಳಚೆ ಪ್ರದೇಶದಲ್ಲಿ ಜೀವನ ಮಾಡುವ ರೀತಿ ಆಗಿದೆ ಇಲ್ಲಿನ ಜಾಗ. ನಿಮಗೆ ಮಾನ ಮಾರ್ಯಾದೆ ಇಲ್ಲವೆ ಎಂದು ಸಂಚಾರಿ ಪೊಲೀಸರಿಗೆ ತರಾಟೆ ತೆಗೆದುಕೊಂಡಿದ್ದಾರೆ.

ರಸ್ತೆ ಬದಿ ಪ್ರಾಣಿಗಳ ತ್ಯಾಜ್ಯ ಬಿಸಾಡಿರುವುದನ್ನು ಕಂಡು ಕೆಂಡಾಮಂಡಲ

ಇನ್ನು ರಸ್ತೆ ಬದಿ ಪ್ರಾಣಿಗಳ ತ್ಯಾಜ್ಯ ಬಿಸಾಡಿರುವುದನ್ನು ಕಂಡು ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ, ನ್ಯಾ.ಫಣೀಂದ್ರ ಕೆಂಡಾಮಂಡಲರಾದರು. ಬೆಂಗಳೂರಿನ ಬನಶಂಕರಿ ವಾರ್ಡ್ 180ರ ಮುಖ್ಯರಸ್ತೆಯಲ್ಲಿ ಮಾಂಸದ ಅಂಗಡಿಯವರು ಪ್ರಾಣಿಗಳ ತ್ಯಾಜ್ಯ ಸುರಿದಿದ್ದರು. ಹೀಗಾಗಿ ಬಿಎಸ್​ಡಬ್ಲ್ಯುಎಂಎಲ್ ಎಜಿಎ ಶಿಲ್ಪಾಗೆ ಉಪ ಲೋಕಾಯುಕ್ತರು ಕ್ಲಾಸ್​ ತೆಗೆದುಕೊಂಡಿದ್ದಾರೆ.

ಇಷ್ಟು ವಾಸನೆ ಬರುತ್ತಿದೆ ಏನು ಮಾಡುತ್ತಿದ್ದೀರಾ. ಮೊದಲು ಪ್ರಾಣಿಗಳ ತ್ಯಾಜ್ಯ ತೆರವುಗೊಳಿಸಿ. ಪ್ರಾಣಿಗಳ ತ್ಯಾಜ್ಯ ಬಿಸಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಒಂದು ದಿನ ಕಾಲಾವಕಾಶ: ಇಲ್ಲಾ ಕಠಿಣ ಕ್ರಮವೆಂದ ನ್ಯಾ.ಫಣೀಂದ್ರ

ಸಿಟಿ ರೌಂಡ್ಸ್​ ಬಳಿಕ ಉಪ ಲೋಕಾಯುಕ್ತ ನ್ಯಾ.ಫಣೀಂದ್ರ ಪ್ರತಿಕ್ರಿಯಿಸಿದ್ದು, ಕದ್ರೆನಹಳ್ಳಿ ವ್ಯಾಪ್ತಿಯಲ್ಲಿ ಕಸ ಹಾಗೇ ಇರುವ ಬಗ್ಗೆ ಮಾಹಿತಿ ಬಂದಿತ್ತು. ಯಾರು ಇಲ್ಲಿಗೆ ಬಂದಿಲ್ಲ, ನೋಡಿಲ್ಲ. ಒಂದು ದಿನ ಕಾಲಾವಕಾಶ ನೀಡಿದ್ದೇವೆ ಎಲ್ಲಾ ಕ್ಲಿಯರ್ ಆಗಬೇಕು. ಆಗಿಲ್ಲ ಅಂದ್ರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಬಿಬಿಎಂಪಿ ಎಲ್ಲಾ ಅಧಿಕಾರಿಗಳು ಇದನ್ನು ತಿಳಿದುಕೊಳ್ಳಬೇಕು. ಇನ್ಮುಂದೆ ಮಾಹಿತಿ‌ ಕೊಟ್ಟು ರೇಡ್ ಮಾಡಲ್ಲ ಎಂದಿದ್ದಾರೆ.

ಮುಂದೊಂದು ದಿನ ಸಿಲಿಕಾನ್​​ ಸಿಟಿ ಗಾರ್ಬೇಜ್ ಸಿಟಿ ಗ್ಯಾರಂಟಿ: ನ್ಯಾ.ಬಿ.ವೀರಪ್ಪ

ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಪ್ರತಿಕ್ರಿಯಿಸಿದ್ದು, ನಮಗೆ ನೋವಾಗುತ್ತೆ. ಒಂದು ಕಡೆ ಕಸ ಇದೆ ಮತ್ತೊಂದು ಕಡೆ ಪ್ರಾಣಿಗಳ ತ್ಯಾಜ್ಯ ಬಿದ್ದಿವೆ. ಅಧಿಕಾರಿಗಳು ಆರಾಮಾಗಿ ಬರುತ್ತಾರೆ ಸಂಬಂಳ ತೆಗೆದುಕೊಳ್ಳುತ್ತಾರೆ. ಕಂಪನಿಗೆ‌ ಕೊಟ್ಟಿದ್ದೇವೆ ಅಂತ ಎಸ್ಕೇಪ್ ಆಗುತ್ತಿದ್ದರು. ವೇಸ್ಟ್ ಕ್ಲೀಯರ್ ಮಾಡುವುದಕ್ಕೆ ಹಣ ಕೊಡುತ್ತಿದ್ದಾರೆ ಆದರೆ ವೇಸ್ಟ್ ಕ್ಲೀನ್ ಆಗಲ್ಲ. ರಸ್ತೆ ಬದಿ ಅಂಗಡಿಗಳಿವೆ ಇದಕ್ಕೆ ಹೊಂದಾಣಿಕೆ ಕಾರಣ ಎಂದಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು 15 ದಿನ ಗಡುವು: ಅಧಿಕಾರಿಗಳಿಗೆ ಡಿಕೆ ಶಿವಕುಮಾರ್​ ತಾಕೀತು

ಬಿಬಿಎಂಪಿಯವರು ಬದಲಾವಣೆ ಆಗಬೇಕು. ವಸೂಲಿ ಆಫೀಸರ್​ಗಳು‌ ಬಿಬಿಎಂಪಿಗೆ ಬರಬೇಡಿ. ಡೆಂಗ್ಯೂ ಸೇರಿದಂತೆ ಅನೇಕ‌ ರೋಗಗಳು ಬರುತ್ತಿವೆ. ಜನ ಕೂಡ ಸರಿಯಾಗಬೇಕು. ಬಿಬಿಎಂಪಿ ವಾಹನಗಳಿಗೆ ಕಸ ಹಾಕಿ. ಟ್ರಾಫಿಕ್ ಇನ್ಸ್ ಪೆಕ್ಟರ್​ಗಳು ಎಚ್ಚೆತ್ತುಕೊಳ್ಳಬೇಕು. ಬೆಂಗಳೂರಿಗೆ ಗಾರ್ಡನ್ ಸಿಟಿ ಅಂತ ಹೆಸರಿತ್ತು. ಈಗ ಗಾರ್ಬೇಜ್ ಸಿಟಿ ಆಗುತ್ತಿದೆಯಾ ಎಂದು ಅವಮಾನವಾಗುತ್ತಿದೆ. ಮುಂದೊಂದು ದಿನ ಗಾರ್ಬೇಜ್ ಸಿಟಿ ಗ್ಯಾರಂಟಿ. ನಮ್ಮ ಮಕ್ಕಳು ಇದರಿಂದ ತೊಂದರೆ ಅನುಭವಿಸುತ್ತಾರೆ. ಪೌರಕಾರ್ಮಿಕರಿಗೆ ಗ್ಲಾಸ್, ಸೇಫ್ಟಿ ಐಟಂಸ್ ಕೊಟ್ಟಿಲ್ಲ. ಇಲ್ಲಿರುವ ಕಂಟ್ರಾಕ್ಟರ್ ಒರಿಜಿನಲ್ ಕಂಟ್ರಾಕ್ಟರ್ ಅಲ್ಲ. ಅವನ ಹಿಂದೆ ಯಾರೋ ಇದ್ದಾರೆ. ಜನಪ್ರತಿನಿಧಿಗಳು ರಿಸ್ಕ್ ತೆಗೆದುಕೊಳ್ಳಲ್ಲ. ಲೋಕಾಯುಕ್ತರು ಬರಬೇಕು, ನೀವ್ಯಾಕೆ ಇದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ಪ್ರದೀಪ್​ ಕ್ರೈಂ 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.