ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ನೂತನ ತಂತ್ರಜ್ಞಾನ ಬಳಕೆ; ಡ್ರೋನ್ ಕ್ಯಾಮರಾ ನೀಡಲಿದೆ ಅಪಾಯದ ಮುನ್ಸೂಚನೆ

| Updated By: ಆಯೇಷಾ ಬಾನು

Updated on: Apr 10, 2021 | 8:51 AM

ಉತ್ತರಕನ್ನಡ ಜಿಲ್ಲಾಡಳಿತ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಫಂಡ್‌ನಿಂದ ಡ್ರೋನ್ ಖರೀದಿಗಾಗಿ ಪೊಲೀಸ್ ಇಲಾಖೆಗೆ ಫಂಡ್ ನೀಡಲಾಗಿದ್ದು, ಎರಡು ಡ್ರೋನ್​ಗಳಲ್ಲಿ ಭಟ್ಕಳ, ಕುಮಟಾ, ಶಿರಸಿ ಯಲ್ಲಾಪುರಗಳಲ್ಲಿದ್ದರೇ, ಇನ್ನೊಂದು ಕಾರವಾರ, ಅಂಕೋಲಾ, ಜೋಯಿಡಾ, ದಾಂಡೇಲಿ ಹಳಿಯಾಳ ತಾಲೂಕಿನಲ್ಲಿ ಇರಲಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ನೂತನ ತಂತ್ರಜ್ಞಾನ ಬಳಕೆ; ಡ್ರೋನ್ ಕ್ಯಾಮರಾ ನೀಡಲಿದೆ ಅಪಾಯದ ಮುನ್ಸೂಚನೆ
ಡ್ರೋನ್ ಕ್ಯಾಮೆರಾ
Follow us on

ಉತ್ತರ ಕನ್ನಡ: ಇತ್ತೀಚಿನ ವರ್ಷಗಳಲ್ಲಿ ನೆರೆ-ಪ್ರವಾಹ ಕರಾವಳಿ, ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳ ಜನರನ್ನು ಕಾಡುತ್ತಿರುವ ಸಮಸ್ಯೆ. ಪ್ರಕೃತಿ ವಿಕೋಪ ಸಂಭವಿಸಿದರೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಬಿಡುತ್ತದೆ. ಸಮುದ್ರದ ಅಲೆಗಳ ಆರ್ಭಟ, ಭೂಕುಸಿತವಾಗಿ ಜನರ ರಕ್ಷಣೆಯೇ ದೊಡ್ಡ ಸವಾಲಾಗುತ್ತದೆ. ಆದರೆ ಇನ್ನು ಮುಂದೆ ಸಂಕಷ್ಟ ಎದುರಾದಲ್ಲಿ ಕೂಡಲೇ ಜನರಿಗೆ ಸ್ಪಂದಿಸಲು ಸಹಾಯವಾಗುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ನೂತನ ತಂತ್ರಜ್ಞಾನ ಬಳಕೆ ಮಾಡಲು ಮುಂದಾಗಿದೆ.

ಸೈಕ್ಲೋನ್​ನಿಂದ ಮೀನುಗಾರರನ್ನು ರಕ್ಷಿಸುವುದು, ಗುಡ್ಡ ಕುಸಿತ, ಭೂ ಕುಸಿತ, ಕಾಡಿನಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಇವೆಲ್ಲವನ್ನು ಎದುರಿಸಲು ಒಂದು ಯೋಜನೆ ರೂಪಿಸಲಾಗಿದೆ. ಅದರಂತೆ ಅಪಾಯದಲ್ಲಿ ಜನರು ಸಿಲುಕಿದ್ದಾರೋ, ಪ್ರಾಣಿಗಳು ಸಿಲುಕಿವೆಯೋ ಅಥವಾ ಕಾಡುಗಳ ರಕ್ಷಣೆ ಹೇಗೆ ಸಾಧ್ಯ ಎನ್ನುವ ಸವಾಲುಗಳಿಗೆ ಈ ಯೋಜನೆ ಪರಿಹಾರವಾಗಲಿದೆ. ಡ್ರೋನ್ ಕ್ಯಾಮೆರಾವನ್ನ ಪೊಲೀಸ್ ಇಲಾಖೆ ಬಳಸಲು ಮುಂದಾಗಿದೆ.

ಉತ್ತರಕನ್ನಡ ಜಿಲ್ಲಾಡಳಿತ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಫಂಡ್‌ನಿಂದ ಡ್ರೋನ್ ಖರೀದಿಗಾಗಿ ಪೊಲೀಸ್ ಇಲಾಖೆಗೆ ಫಂಡ್ ನೀಡಲಾಗಿದ್ದು, ಎರಡು ಡ್ರೋನ್​ಗಳಲ್ಲಿ ಭಟ್ಕಳ, ಕುಮಟಾ, ಶಿರಸಿ ಯಲ್ಲಾಪುರಗಳಲ್ಲಿದ್ದರೇ, ಇನ್ನೊಂದು ಕಾರವಾರ, ಅಂಕೋಲಾ, ಜೋಯಿಡಾ, ದಾಂಡೇಲಿ ಹಳಿಯಾಳ ತಾಲೂಕಿನಲ್ಲಿ ಇರಲಿದೆ. ಪೊಲೀಸ್ ಇಲಾಖೆಯ ಸಿವಿಲ್, ಡಿಎಆರ್, ಮತ್ತು ವೈರಲೆಸ್ ವಿಭಾಗದ ಆರು ಸಿಬ್ಬಂದಿಗಳಿಗೆ ಈ ಡ್ರೋನ್ ಕ್ಯಾಮರಾದ ಆಪರೇಟಿಂಗ್ ತರಬೇತಿ ನೀಡಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ನೂತನ ತಂತ್ರಜ್ಞಾನ ಬಳಕೆ

ಅಂದಹಾಗೆ ಈ ಡ್ರೋನ್‌ನ ವಿಶೇಷ ಎಂದರೆ ಇದು 40-50ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದು, ಸುಮಾರು 3ರಿಂದ 4 ಕಿ.ಮೀ.ವರೆಗೆ ಸಾಗುತ್ತದೆ. ಅಲ್ಲದೇ,  ಸುಮಾರು 1 ಕಿ.ಮೀ. ದೂರದವರೆಗಿನ ವಸ್ತುವಿನ ಚಿತ್ರವನ್ನು ಕೂಡಾ ಈ ಡ್ರೋನ್ ಸ್ಪಷ್ಟವಾಗಿ ಕ್ಯಾಪ್ಚರ್ ಮಾಡಿಕೊಳ್ಳುತ್ತದೆ. ಇದರಲ್ಲಿ ಆಟೋ ಪೈಲೆಟ್ ವ್ಯವಸ್ಥೆಯಿದ್ದು, ಒಂದು ವೇಳೆ ಗಾಳಿ ವೇಗ ಜಾಸ್ತಿ ಇದ್ದರೆ ಅಥವಾ ಬ್ಯಾಟರಿ ಲೋ ಇದ್ದರೆ ಈ ಡ್ರೋನ್ ಆಪರೇಟರ್ ಬಳಿಯೇ ಬಂದು ಸೇರಿಕೊಳ್ಳುತ್ತದೆ.

ಎದುರಲ್ಲಿ ಹಕ್ಕಿಗಳು ಬಂದಲ್ಲಿ ಅದೇ ಅವುಗಳನ್ನು ಡಿಟೆಕ್ಟ್ ಮಾಡಿ ಪಕ್ಕಕ್ಕೆ ಸರಿಯುತ್ತದೆ. ಈ ಆಧುನಿಕ ಡ್ರೋನ್ ಅನ್ನು ಪೊಲೀಸ್ ಇಲಾಖೆ ಖರೀದಿಸಿದೆ. ಭೌಗೋಳಿಕವಾಗಿ ವಿಸ್ತಾರವಾಗಿರುವ ಉತ್ತರ ಕನ್ನಡ ಜಿಲ್ಲೆಗೆ ಇದು ಅಗತ್ಯ ಕೂಡ ಆಗಿದೆ. ನೆರೆ ಬಂದಾಗ, ಕಾಡು ಅಥವಾ ಇತರ ಅನಾಹುತವಾದ ಸಮಯದಲ್ಲಿ ಇದರ ಉಪಯೋಗ ಬಹಳವಾಗಿದ್ದು, ಸಮುದ್ರದಲ್ಲಿ ಯಾರಾದರು ಸಿಕ್ಕಿದಲ್ಲಿ ಅವರ ಪರಿಸ್ಥಿತಿ ಪರಿಶೀಲಿಸಲು ಸಾಧ್ಯವಾಗಲಿದೆ. ಹೀಗಾಗಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ರೆಸ್ಕ್ಯೂ ಮಾಡಲು ಈ ಡ್ರೋನ್ ಸಹಾಯವಾಗಲಿದೆ ಎಂದು ಉತ್ತರ ಕನ್ನಡದ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ಒಟ್ಟಿನಲ್ಲಿ ಜನರ ಹಾಗೂ ಪರಿಸರದ ರಕ್ಷಣೆಗಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಇದೀಗ ಡ್ರೋನ್ ಬಳಕೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಪೊಲೀಸರ ಸೇವೆ ಹಾಗೂ ರಕ್ಷಣಾ ಕಾರ್ಯಗಳ ಉದ್ದೇಶದಿಂದ ತಂದಿರುವ ಈ ಡ್ರೋನ್​ನಿಂದ ಜಿಲ್ಲೆಯ ಜನರಿಗೆ ಇನ್ನಷ್ಟು ಸಹಾಯವಾಗಬಹುದೆಂಬ ವಿಚಾರ ಖುಷಿಯ ಸಂಗತಿಯಾಗಿದೆ.

ಇದನ್ನೂ ಓದಿ: 

ಕೊರೊನಾ ನೈಟ್​ ಕರ್ಫ್ಯೂ ಜಾರಿ; ಪೊಲೀಸ್​ ಅಧಿಕಾರಿಗಳ ಜೊತೆ ಇಂದು ಕಮಲ್ ಪಂತ್ ಸಭೆ

ಗಣಿನಾಡಿನಲ್ಲಿ ಸಿಸಿ ಕ್ಯಾಮರಾ ಕಣ್ಗಾವಲು.. ಪೊಲೀಸ್ ಇಲಾಖೆಯಿಂದ ವಿನೂತನ ಹೆಜ್ಜೆ

(Uttara Kannada District Police Department Utilizing new technology to solve problems by using drone camera )