ಮುಚ್ಚುವ ಹಂತಕ್ಕೆ ತಲುಪಿದೆ ಉತ್ತರ ಕನ್ನಡದ ಡಯಾಲಿಸೀಸ್ ಕೇಂದ್ರ; ಕಿಡ್ನಿ ವೈಫಲ್ಯವಾದವರ ನೆರವಿಗೆ ನಿಲ್ಲುವಂತೆ ಜನರ ಮನವಿ

|

Updated on: May 21, 2021 | 4:54 PM

ಉತ್ತರ ಕನ್ನಡ ಜಿಲ್ಲೆಯ 11 ಆಸ್ಪತ್ರೆಗಳಲ್ಲಿನ ಡಯಾಲಿಸೀಸ್ ಕೇಂದ್ರದ ನಿರ್ವಹಣೆಯನ್ನ ಸಹ ಇದೇ ಕಂಪನಿ ಮಾಡುತ್ತಿತ್ತು. ಆದರೆ ಈ ಕಂಪನಿ ಹಾಗೂ ಸರ್ಕಾರದ ನಡುವಿನ ಕಿತ್ತಾಟದಲ್ಲಿ ಸದ್ಯ ಈ ಕಂಪನಿಯವರು ಡಯಾಲಿಸೀಸ್ ಕೇಂದ್ರದ ನಿರ್ವಹಣೆಯನ್ನ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಮುಚ್ಚುವ ಹಂತಕ್ಕೆ ತಲುಪಿದೆ ಉತ್ತರ ಕನ್ನಡದ ಡಯಾಲಿಸೀಸ್ ಕೇಂದ್ರ; ಕಿಡ್ನಿ ವೈಫಲ್ಯವಾದವರ ನೆರವಿಗೆ ನಿಲ್ಲುವಂತೆ ಜನರ ಮನವಿ
ಡಯಾಲಿಸೀಸ್ ಕೇಂದ್ರ
Follow us on

ಉತ್ತರ ಕನ್ನಡ: ಸಾಮಾನ್ಯವಾಗಿ ಕಿಡ್ನಿ ವೈಫಲ್ಯವಾದವರಿಗೆ ಡಯಾಲಿಸೀಸ್ ಮಾಡಿಸುವುದು ಕಡ್ಡಾಯ. ಕಿಡ್ನಿ ವೈಫಲ್ಯವಾದಾಗ ದೇಹದಲ್ಲಿ ರಕ್ತ ಶುದ್ಧೀಕರಣ ಆಗದ ಹಿನ್ನಲೆಯಲ್ಲಿ, ಡಯಾಲಿಸೀಸ್ ಯಂತ್ರದ ಮೂಲಕವೇ ಶುದ್ಧೀಕರಣ ಮಾಡಿಸಿ ಜೀವ ಉಳಿಸುವ ಕಾರ್ಯ ಮಾಡಲಾಗುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಕೇಂದ್ರಗಳು ತಮ್ಮ ಕಾರ್ಯ ಸ್ಥಗಿತ ಮಾಡುವ ಹಂತಕ್ಕೆ ತಲುಪಿದ್ದು, ರೋಗಿಗಳ ಆರೋಗ್ಯದ ಕುರಿತು ನಿರ್ಲಕ್ಷ್ಯ ತೊರುತ್ತಿದ್ದಾರೆ.

ಕಿಡ್ನಿ ವೈಫಲ್ಯವಾದವರಿಗೆ ಡಯಾಲಿಸೀಸ್​ಗೆ ಸಹಾಯವಾಗಲು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಡಯಾಲಿಸಿಸ್ ಸೆಂಟರ್​ಗಳನ್ನ ತೆರೆಯಲಾಗಿತ್ತು. ರಾಜ್ಯದ 27 ಜಿಲ್ಲೆಗಳ 122 ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಕೇಂದ್ರವಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 11 ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಕೇಂದ್ರಗಳಿದೆ. ಇನ್ನು ಪ್ರತಿನಿತ್ಯ ಸಾಕಷ್ಟು ಜನ ಕಿಡ್ನಿ ವೈಫಲ್ಯವಾದವರು ಡಯಾಲಿಸೀಸ್ ಮಾಡಿಸಿಕೊಳ್ಳುತ್ತಾರೆ. ರಾಜ್ಯದಲ್ಲಿ ಈ ಡಯಾಲಿಸೀಸ್ ಕೇಂದ್ರಗಳ ನಿರ್ವಹಣೆಯನ್ನ ಬಿ.ಆರ್.ಶೆಟ್ಟಿ ಹೆಲ್ತ್ ಎಂಡ್ ರಿಸರ್ಚ್ ಎನ್ನುವ ಕಂಪನಿಗೆ ಆರೋಗ್ಯ ಇಲಾಖೆ ಗುತ್ತಿಗೆ ನೀಡಿದೆ.

ಉತ್ತರ ಕನ್ನಡ ಜಿಲ್ಲೆಯ 11 ಆಸ್ಪತ್ರೆಗಳಲ್ಲಿನ ಡಯಾಲಿಸೀಸ್ ಕೇಂದ್ರದ ನಿರ್ವಹಣೆಯನ್ನ ಸಹ ಇದೇ ಕಂಪನಿ ಮಾಡುತ್ತಿತ್ತು. ಆದರೆ ಈ ಕಂಪನಿ ಹಾಗೂ ಸರ್ಕಾರದ ನಡುವಿನ ಕಿತ್ತಾಟದಲ್ಲಿ ಸದ್ಯ ಈ ಕಂಪನಿಯವರು ಡಯಾಲಿಸೀಸ್ ಕೇಂದ್ರದ ನಿರ್ವಹಣೆಯನ್ನ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಡಯಾಲಿಸೀಸ್ ಕೇಂದ್ರ ನಿರ್ವಹಣೆಗೆ ಬೇಕಾಗುವ ವೈದ್ಯಕೀಯ ಉಪಕರಣಗಳ ಪೂರೈಕೆಯನ್ನು ಸ್ಥಗಿತ ಗೊಳಿಸಿದ್ದು, ಆರೋಗ್ಯ ಇಲಾಖೆಯವರೇ ಹರಸಾಹಸ ಪಟ್ಟು ವೈದ್ಯಕೀಯ ಉಪಕರಣ ಪೂರೈಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಒಂದು ವಾರ ಇದೇ ಪರಿಸ್ಥಿತಿ ಮುಂದುವರೆದರೆ ಡಯಾಲಿಸೀಸ್ ನಿರ್ವಹಣೆಯನ್ನ ಸ್ಥಗಿತವಾಗುವ ಹಂತಕ್ಕೆ ತಲುಪುತ್ತದೆ ಎಂದು ಸ್ಥಳೀಯರಾದ ಗೌರಿಶ್ ತಿಳಿಸಿದ್ದಾರೆ.

ಸದ್ಯ ಡಯಾಲಿಸೀಸ್​ಗೆ ವೈದ್ಯಕೀಯ ಉಪಕರಣಗಳ ಕೊರತೆ ಇರುವ ಹಿನ್ನಲೆಯಲ್ಲಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಡಯಾಲಿಸೀಸ್ ಮಾಡುತ್ತಿಲ್ಲ. ಪ್ರತಿದಿನ ಡಯಾಲಿಸೀಸ್ ಮಾಡಿಸಿಕೊಳ್ಳುತ್ತಿದ್ದವರಿಗೆ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಮಾಡುತ್ತಿದ್ದು, ಎಲ್ಲರಿಗೂ ಡಯಾಲಿಸೀಸ್ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕಡಿತ ಗೊಳಿಸಿ ಮಾಡಲಾಗುತ್ತಿದೆ. ಸರ್ಕಾರ ಈಗಾಗಲೇ ಖಾಸಗಿ ಕಂಪನಿಗೆ 28 ಕೋಟಿ ಹಣ ಕೊಡಬೇಕು ಎನ್ನಲಾಗಿದ್ದು, ಸರ್ಕಾರ ಸಹ ಸರಿಯಾಗಿ ಹಣ ಕೊಡದ ಹಿನ್ನಲೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳವಾಗದೇ, ಡಯಾಲಿಸೀಸ್ ಕೇಂದ್ರ ಮುಚ್ಚುವ ಹಂತಕ್ಕೆ ಬಂದಿದೆ. ಈ ವಿಷಯವನ್ನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವರು ಬಗೆಹರಿಸುವ ವಿಶ್ವಾಸವಿದೆ ಎಂದು ಕಾರವಾರದ ಡಿಹೆಚ್ಓ ಶರದ್ ನಾಯಕ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಮಾಡಿಸಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ಹಣ ಇಲ್ಲದ ಬಡವರಿಗೆ ಸರ್ಕಾರಿ ಆಸ್ಪತ್ರೆಗಳೇ ಆಸರೆ. ಆದರೆ ಇದೇ ಸರ್ಕಾರಿ ಆಸ್ಪತ್ರೆಗಳು ಡಯಾಲಿಸೀಸ್ ಕೇಂದ್ರ ಮುಚ್ಚಿದರೆ ಎಲ್ಲಿ ಕರೆದುಕೊಂಡು ಹೋಗಬೇಕು ಎನ್ನುವುದು ಸ್ಥಳೀಯರ ಅಳಲು. ಒಟ್ಟಾರೆ ಕಿಡ್ನಿ ವೈಫಲ್ಯವಾದವರ ಜೀವ ಉಳಿಸುವ ಡಯಾಲಿಸೀಸ್ ಕೇಂದ್ರಗಳು ಇದೀಗ ಮುಚ್ಚುವ ಹಂತಕ್ಕೆ ಬಂದಿರುವುದು ನಿಜಕ್ಕೂ ದುರಂತವೇ. ಸರ್ಕಾರ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಡಯಾಲಿಸೀಸ್ ಕೇಂದ್ರ ಮುಚ್ಚದಂತೆ ಕ್ರಮ ಕೈಗೊಳ್ಳಬೇಕಾಗಿದೆ.

ಇದನ್ನೂ ಓದಿ:

ದಾವಣಗೆರೆಯಲ್ಲಿ ಕೊರೊನಾ ಸೋಂಕಿತೆಯರಿಬ್ಬರು ಕೊವಿಡ್ ಕೇಂದ್ರದಿಂದ ಪರಾರಿ; ಪ್ರೀತಿಸಿದವರ ಜೊತೆ ಓಡಿ ಹೋಗಿರುವ ಶಂಕೆ

ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮಧುಮೇಹದಿಂದ ದೂರ ಇರಲು ಈ ಆಹಾರ ಪದ್ಧತಿಯೇ ಸಾಕು