ಕಾರವಾರ, ಮಾ.9: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ಹೇಳಿದ್ದಾರೆ. ಯಾಕೆಂದರೆ, ಕಾಂಗ್ರೆಸ್‌ನವರು ಅನಗತ್ಯವಾಗಿ ಹೇರಿದ ವಿಚಾರಗಳನ್ನು ಸಂವಿಧಾನದಿಂದ ತೆಗೆದು ಹಾಕಲು ಬಹುಮತದ ಅಗತ್ಯವಿದೆ. ಲೋಕಸಭೆಯಲ್ಲಿ ಬಹುಮತ ಇದೆ. ಆದರೆ, ರಾಜ್ಯಸಭೆಯಲ್ಲಿ 2/3 ರಷ್ಟು ಇಲ್ಲ. ಹೀಗಾಗಿ ಈ ಸಲ ಮೋದಿಯವರು 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde) ಹೇಳಿದರು. ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಮಾತನಾಡಿದ ಅವರು, ಸಂವಿಧಾನಕ್ಕೆ ತಿದ್ದುಪಡಿ ಮಾಡುವುದಾದರೆ ಬಹುಮತ ಅಗತ್ಯವಿದೆ ಎಂದರು.
ಕಾಂಗ್ರೆಸ್‌ನವರು ಸಂವಿಧಾನದ ಮೂಲರೂಪವನ್ನೇ ತಿರುಚಿದ್ದಾರೆ. ಸಂವಿಧಾನದಲ್ಲಿ ಬೇಡದೇ ಇರುವುದನ್ನೆಲ್ಲ ಸೇರಿಸಿದ್ದಾರೆ. ಇಡೀ ಹಿಂದೂ ಸಮಾಜವನ್ನು ದಮನಿಸುವ ರೀತಿ ಕಾನೂನು ತಂದಿದ್ದಾರೆ. ಇದೆಲ್ಲವೂ ಬದಲಾಗಬೇಕಿದ್ದರೆ ಬಹುಮತ ಇಲ್ಲದಿದ್ದರೆ ಆಗುವುದಿಲ್ಲ. ರಾಜ್ಯಸಭೆಯಲ್ಲೂ ನಮಗೆ ಬಹುಮತ ಬೇಕಾಗುತ್ತದೆ. ಎರಡೂ ಕಡೆ 2/3 ರಷ್ಟು ಬಹುಮತ ಬೇಕಾಗುತ್ತದೆ ಎಂದರು.
ಕಾಂಗ್ರೆಸ್‌ನವರು ಹೆಚ್ಚು ಇದ್ದರೆ ಏನೇ ತಿದ್ದುಪಡಿ ತಂದರೂ ಪಾಸ್ ಆಗಲ್ಲ. ಸಿಎಎ ಜಾರಿಗೆ ರಾಜ್ಯಗಳಿಂದ ಒಪ್ಪಿಗೆ ಬಂದಿಲ್ಲ. ಸಿಎಎ ತರದಿದ್ದರೆ ದೇಶದಲ್ಲಿ ಕಾನೂನು ಸುವ್ಯವಸ್ಥೆ ನಮ್ಮ ಕೈಯಲ್ಲಿ ಇರಲ್ಲ. ಇದು ದೇಶದ್ರೋಹಿಗಳ ಆಡಂಬರ ಆಗುತ್ತದೆ. ಎಲ್ಲೆಡೆ ಬಹುಮತ ಬರಲಿ, ಆಮೇಲೆ ನೋಡಿ ಮಾರಿಜಾತ್ರೆ ಹೇಗಿರುತ್ತೆ ಅಂತಾ. ಜಾತ್ರೆಗೆ ಒಂದು ಕಳೆ ಬರೋದು ಇದಾದ ನಂತರವೇ ಎಂದರು.
ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಕರಿಮಣಿ ಮಾಲೀಕ ನಾನಲ್ಲ ಅಂತಿದ್ದಾರೆ: ಅನಂತ್ ಕುಮಾರ್ ಹೆಗಡೆ ವ್ಯಂಗ್ಯ
ನಾನೇ ದೇವರು ಅನ್ನೋ ಭಾವನೆ ಬರುತ್ತದೆ, ಪತನ ಶುರುವಾಗೋದೇ ಅಲ್ಲಿಂದ. ದೇಶ ಸರಿ ಆಗಬೇಕೆಂದರೆ ನಮ್ಮವರಿಂದಲೇ ಹೊರತು ಬೇರೆ ಅವರಿಂದ ಆಗಲ್ಲ. ಕಾಂಗ್ರೆಸ್‌ನ ದೇಶದ್ರೋಹಿ ಸರ್ಕಾರ ಹೋಗಬೇಕು. ಜಾತ್ಯತೀತರು ಇದನ್ನ ನಿರ್ಧರಿಸಿಲ್ಲ, ತೀರ್ಮಾನ ಮಾಡಿದವರು ಹಿಂದೂಗಳೇ ಎಂದರು.
ಹಿಂದಿನ ಬಾರಿ ಶೇಕಡಾ 68 ರಷ್ಟು ವೋಟು ನಮಗೆ ಬಂದಿತ್ತು. ಒಟ್ಟೂ ಹಿಂದೂಗಳ ಶೇ.85 ರಷ್ಟು ವೋಟು ಈ ಕ್ಷೇತ್ರದಲ್ಲಿ ಬಂದಿತ್ತು. ಒಂದು 15, 10 ಪರ್ಸೆಂಟ್ ಸೋಡಾಬಾಟ್ಲಿ ಇರುತ್ತವೆ, ಅದಕ್ಕೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಯಾರೂ ಇಲ್ಲ ಅಂದರೆ ಕುಸ್ತಿ ಯಾರ್ ಹತ್ರ ಆಡೋದು? ನಮ್ಮ ದೇಶ ಸರಿ ಆಗಬೇಕು ಅಂದರೆ ನಮ್ಮವರಿಂದಲೇ ಹೊರತು ಬೇರೆ ಅವರಿಂದ ಸಾಧ್ಯವಿಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:47 pm, Sat, 9 March 24