ಕಾರವಾರ: ಚಿಕ್ಕ ವಯಸ್ಸಲ್ಲೇ ಹುತಾತ್ಮನಾದ ಯೋಧನ ಸ್ಮಾರಕಕ್ಕೆ ನಗರಸಭಾ ಸದಸ್ಯ ತೊಡಕು, ಡಿಸಿಗೆ ಹೆತ್ತಮ್ಮ ದೂರು

| Updated By: ಸಾಧು ಶ್ರೀನಾಥ್​

Updated on: Dec 13, 2022 | 5:57 PM

ಶ್ಯಾಮ್ ನಾಯ್ಕ ಎಂಬುವವರು  ಉದ್ದೇಶಪೂರ್ವಕವಾಗಿ ಸ್ಮಾರಕಕ್ಕೆ ಹಾನಿಯಾಗುವಂತೆ ವಾಹನ ಚಲಾಯಿಸುತ್ತಿದ್ದು,  ವಿನಾಕಾರಣ ಜಗಳ ತೆಗೆದು ಸ್ಮಾರಕ ತೆರವುಗೊಳಿಸೋದಾಗಿ ಬೆದರಿಕೆ ಒಡ್ಡಿದ್ದಾರೆ- ಹುತಾತ್ಮ ಯೋಧನ ಸಹೋದರ ವಿಶಾಲ ನಾಯ್ಕ ಆರೋಪ 

ಕಾರವಾರ: ಚಿಕ್ಕ ವಯಸ್ಸಲ್ಲೇ ಹುತಾತ್ಮನಾದ ಯೋಧನ ಸ್ಮಾರಕಕ್ಕೆ ನಗರಸಭಾ ಸದಸ್ಯ ತೊಡಕು, ಡಿಸಿಗೆ ಹೆತ್ತಮ್ಮ ದೂರು
ಚಿಕ್ಕ ವಯಸ್ಸಲ್ಲೇ ಹುತಾತ್ಮನಾದ ಯೋಧನ ಸ್ಮಾರಕಕ್ಕೆ ನಗರಸಭಾ ಸದಸ್ಯ ತೊಡಕು
Follow us on

ಆತ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹೆಮ್ಮೆಯ ವೀರಯೋಧ. ಕಿರಿಯ ವಯಸ್ಸಿನಲ್ಲೇ ಹುತಾತ್ಮನಾದ ಯೋಧನ (martyred soldier) ನೆನಪಿಗಾಗಿ ಕುಟುಂಬಸ್ಥರು, ಅಭಿಮಾನಿಗಳು ಆತನ ಮನೆಯ ಸಮೀಪದ ರಸ್ತೆ ಪಕ್ಕದ ಖಾಸಗಿ ಜಮೀನಿನಲ್ಲಿ ಸ್ಮಾರಕವೊಂದನ್ನು ನಿರ್ಮಿಸಿದ್ದರು. ಆದರೆ ಇದೀಗ ಸ್ಮಾರಕವಿರುವ ಪ್ರದೇಶಕ್ಕೆ ಹೊಂದಿಕೊಂಡಿರುವ ಮನೆಯವರು ಸ್ಮಾರಕವಿರುವ ಭಾಗದಲ್ಲೇ ಗೇಟ್ ನಿರ್ಮಿಸಿದ್ದು ಸ್ಮಾರಕಕ್ಕೆ ಹಾನಿ ಮಾಡಲು ಯತ್ನಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರ (Karwar) ನಗರದ ಸಾಯಿಕಟ್ಟಾ ನಿವಾಸಿ ಸುರೇಶ್ ನಾಯ್ಕ ಎಂಬುವವರ ಕಿರಿಯ ಮಗ ವಿಜಯಾನಂದ ನಾಯ್ಕ ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ. 2018ರ ಜುಲೈ 9 ರಂದು ಛತ್ತೀಸ್‌ಗಢದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ನಕ್ಸಲರ ಬಾಂಬ್ ದಾಳಿಗೆ ತುತ್ತಾಗಿ ಪ್ರಾಣತ್ಯಾಗ ಮಾಡಿ ಹುತಾತ್ಮನಾಗಿದ್ದ. ಆತನ ಹುಟ್ಟೂರಾದ ಕಾರವಾರದಲ್ಲಿ ಬೃಹತ್ ಮೆರವಣಿಗೆ ಮಾಡುವ ಮೂಲಕ ಹುತಾತ್ಮ ಯೋಧನ ಅಂತ್ಯಸಂಸ್ಕಾರ ನೆರವೇರಿಸಿದ್ದು ಅದರಂತೆ ಆತನ ನೆನಪಿಗಾಗಿ ಮನೆಯ ಸಮೀಪದ ಖಾಸಗಿ ಜಮೀನಿನಲ್ಲಿ ರಸ್ತೆಗೆ ಹೊಂದಿಕೊಂಡು ಸ್ಮಾರಕವೊಂದನ್ನು ನಿರ್ಮಿಸಲಾಗಿತ್ತು.

ಇದಾಗಿ ಎರಡು ವರ್ಷಗಳ ಬಳಿಕ 2020ರಲ್ಲಿ ಸ್ಮಾರಕವಿದ್ದ ಪ್ರದೇಶಕ್ಕೆ ಹೊಂದಿಕೊಂಡಿದ್ದ ಜಾಗವನ್ನು ಶ್ಯಾಮ್ ನಾಯ್ಕ ಎಂಬುವವರು ಖರೀದಿಸಿದ್ದು ಸ್ಮಾರಕವಿರುವ ಪ್ರದೇಶದ ಬಳಿ ತಮ್ಮ ಕಾಂಪೌಂಡ್ ತೆರವುಗೊಳಿಸಿ ಗೇಟ್ ನಿರ್ಮಿಸಿಕೊಂಡಿದ್ದಾರೆ. ಅಲ್ಲದೇ ಉದ್ದೇಶಪೂರ್ವಕವಾಗಿ ಸ್ಮಾರಕಕ್ಕೆ ಹಾನಿಯಾಗುವಂತೆ ವಾಹನವನ್ನು ಚಲಾಯಿಸುತ್ತಿದ್ದು ಇದನ್ನು ಪ್ರಶ್ನಿಸಿದ್ದಕ್ಕೆ ವಿನಾಕಾರಣ ಜಗಳ ತೆಗೆದು ಸ್ಮಾರಕ ತೆರವುಗೊಳಿಸೋದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಹುತಾತ್ಮ ಯೋಧನ ಸಹೋದರ ವಿಶಾಲ ನಾಯ್ಕ ಆರೋಪಿಸಿದ್ದಾರೆ.

Also Read: ಚಿತ್ರದುರ್ಗ ಮುರುಘಾಮಠಕ್ಕೆ ಆಡಳಿತಾಧಿಕಾರಿಯಾಗಿ ನಿವೃತ್ತ IAS ಅಧಿಕಾರಿ ವಸ್ತ್ರದ್ ನೇಮಕ

ಇನ್ನು ಸ್ಮಾರಕಕ್ಕೆ ಹೊಂದಿಕೊಂಡಿರುವ ಜಾಗವನ್ನ ಖರೀದಿಸಿರುವ ಶ್ಯಾಮ ನಾಯ್ಕರ ಸಹೋದರ ಮೋಹನ್ ನಾಯ್ಕ ಅದೇ ವಾರ್ಡ್‌ನ ನಗರಸಭಾ ಸದಸ್ಯರಾಗಿದ್ದಾರೆ (karwar city municipal council). ಅವರ ಜಾಗದ ಮನೆಯ ಎದುರಿಗೆ ಗೇಟ್ ಇದ್ದರೂ ಸಹ ವಿನಾಕಾರಣ ಮನೆಯ ಹಿಂಬದಿಗೆ ಸ್ಮಾರಕಕ್ಕೆ ಹೊಂದಿಕೊಂಡು ಗೇಟ್ ನಿರ್ಮಿಸಿ ತೊಂದರೆ ನೀಡಲಾಗುತ್ತಿದೆ. ಅಲ್ಲದೇ ಗೇಟ್ ಬಂದ್ ಮಾಡುವಂತೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರೂ ಸಹ ಜಾಗದ ವಿಚಾರ ಎಂದು ಪೊಲೀಸರೂ ಸಹ ನೆರವಿಗೆ ಬರುತ್ತಿಲ್ಲ.

ನಗರಸಭೆ ಸದಸ್ಯನೆಂದು ಅಧಿಕಾರದ ದರ್ಪದಿಂದ ಕುಟುಂಬಸ್ಥರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು ಹುತಾತ್ಮ ಮಗನ ಸ್ಮಾರಕಕ್ಕೆ ರಕ್ಷಣೆ ನೀಡಿ ಅಂತಾ ಯೋಧನ ತಾಯಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕಣ್ಣೀರಿಟ್ಟಿದ್ದಾರೆ. ಇನ್ನು ಈ ಬಗ್ಗೆ ನಗರಸಭೆ ಆಯುಕ್ತರನ್ನ ಕೇಳಿದ್ರೆ ಓಡಾಡುವ ರಸ್ತೆ ಬಂದ್ ಮಾಡಿಸಿದ ಕಾರಣಕ್ಕೆ ನೊಟೀಸ್ ನೀಡಿದ್ದು ಅದನ್ನ ಹೊರತುಪಡಿಸಿ ಯೋಧನ ಸ್ಮಾರಕದ ವಿಚಾರವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ದೇಶಕ್ಕಾಗಿ ಮಡಿದ ಯೋಧನ ಮೇಲೆ ತಮಗೂ ಸಹ ಗೌರವವಿದೆ ಅಂತಾರೇ ಆರ್.ಪಿ.ನಾಯ್ಕ, ನಗರಸಭಾ ಆಯುಕ್ತರು, ಕಾರವಾರ.

ಒಟ್ಟಾರೆ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧನ ಕುಟುಂಬಸ್ಥರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದು ಸ್ಮಾರಕಕ್ಕೆ ಹಾನಿ ಮಾಡುವಂತೆ ನಡೆದುಕೊಳ್ಳುತ್ತಿರೋದು ನಿಜಕ್ಕೂ ದುರಂತವೇ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಹುತಾತ್ಮ ಯೋಧನ ಕುಟುಂಬಸ್ಥರಿಗೆ ನೆರವು ನೀಡಬೇಕಿದೆ.

ವರದಿ: ವಿನಾಯಕ ಬಡಿಗೇರ, ಟಿವಿ 9, ಕಾರವಾರ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ