ಗೋಪೂಜೆ ವೇಳೆ ಚಿನ್ನ ನುಂಗಿದ ಹಸು: ಆಪರೇಶನ್ ಗೋಲ್ಡ್ ಚೈನ್ ಮಾಡಿ ಹೊರತೆಗೆದ ವೈದ್ಯರು, ಮರುಗಿದ ಕುಟುಂಬಸ್ಥರು
ಸ್ವಲ್ಪ ಸಮಯದ ಬಳಿಕ ಮನೆಯೊಡತಿ ಏನೋ ಜ್ಞಾಪಿಸಿಕೊಂಡವರಂತೆ ತಟ್ಟೆಗೆ ಕೈಹಾಕಿ ಚಿನ್ನದ ಸರ ಹುಡುಕತೊಡಗಿದ್ದಾರೆ. ಆದರೆ ಅದು ಆ ವೇಳೆಗೆ ಮಾಯವಾಗಿತ್ತು. ಇದರಿಂದ ಇಡೀ ಕುಟುಂಬ ಗಾಬರಿಗೆ ಬಿದ್ದಿದೆ. ಅಯ್ಯೋ ಚಿನ್ನದ ಸರ ಎಂದು ಕೂಗಾಡಿದ್ದಾರೆ. ಇದು ಹಸುವಿನ ಕಿವಿಗೂ ಬಿದ್ದಿದೆಯಾದರೂ ಸರ ಸರಸರನೇ ತನ್ನ ಹೊಟ್ಟೆ ಸೇರಿದೆ ಎಂದು ಅದಕ್ಕೆ ಹೇಳಿಕೊಳ್ಳಕ್ಕೆ ಆಗಿಲ್ಲ. ಸಾವರಿಸಿಕೊಂಡು.. ಚಿನ್ನದ ಸರ ಎಲ್ಲಿ ಹೋಗಿರಬಹುದು ಎಂದು ಮನೆ ಮಂದಿ ಮೆಲುಕು ಹಾಕತೊಡಗಿದಾಗ...
ಸಿರಸಿ: ದೀಪಾವಳಿ ಸಂದರ್ಭದಲ್ಲಿ ಗೋ ಪೂಜೆ ಮಾಡುವುದು ಎಲ್ಲೆಲ್ಲೂ ವಾಡಿಕೆ, ಸಂಪ್ರದಾಯ. ಆದರೆ ಹಾಗೆ ಪೂಜೆ ಮಾಡಿಸಿಕೊಳ್ಳುವ ಹಸುವೊಂದು ಅರಿಯದೇ ಚಿನ್ನದ ಸರವನ್ನು ನುಂಗಿಬಿಟ್ಟಿದೆ. ಆ ಮೇಲೆ ಚಿನ್ನ ನುಂಗಿದ ಹಸುವಿಗೆ ಸಾವಕಾಶವಾಗಿ ಶಸ್ತ್ರಚಿಕಿತ್ಸೆ ಮಾಡಿ, ಸರವನ್ನು ವೈದ್ಯರು ಹೊರತೆಗೆದಿದ್ದಾರೆ. ಇದು ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲೂಕಿನ ಹೀಪನಹಳ್ಳಿಯಲ್ಲಿ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೋ ಪೂಜೆ, ಲಕ್ಷ್ಮೀ ಪೂಜೆ ಮಾಡುವ ಸಮಯದಲ್ಲಿ (Deepavali Gopuja- worship of cow). ಹೀಪನಹಳ್ಳಿಯ ನಿವಾಸಿಗಳಾದ ಶ್ರೀಕಾಂತ್ ಹೆಗಡೆ ಮತ್ತು ಅವರ ಕುಟುಂಬಸ್ಥರು ಸುಮಾರು 20 ಗ್ರಾಂ ತೂಕದ ಚಿನ್ನದ ಸರವನ್ನು ತಮ್ಮ ಮನೆಯ ಹಸುವಿನ ಕೊರಳಿಗೆ ಪೂಜೆಗೆಂದು ಹಾಕಿದ್ದಾರೆ. ಸ್ವಲ್ಪ ಸಮಯದ ನಂತರ ಅದನ್ನು ಹಸುವಿನ ಕೊರಳಿಂದ ತೆಗೆದು ಅಲ್ಲೇ ಇಟ್ಟಿದ್ದ ಹೂವು ಅಕ್ಷತೆ ತಟ್ಟೆಯಲ್ಲಿ ಇಟ್ಟಿದ್ದಾರೆ. ಅಷ್ಟೇ..! ಅದನ್ನು ಅಲ್ಲಿಗೆ ಮರೆತೂ ಬಿಟ್ಟಿದ್ದಾರೆ. ಆದರೆ ಅಮಾಯಕ ಹಸು ಹೂವಿನ ತಟ್ಟೆಗೆ ಬಾಯಿ ಹಾಕಿ ಹೂವನ್ನು ತಿಂದಿದೆ. ಈ ಮಧ್ಯೆ ಹೂವಿನ ಜೊತೆ ಸರವೂ ಹಸುವಿನ ಬಾಯಿಗೆ ತುತ್ತಾಗಿದೆ. ಆದರೆ ಇದೆಲ್ಲಾ ಶ್ರೀಕಾಂತ್ ಕುಟುಂಬಸ್ಥರ ಗಮನಕ್ಕೆ ಬಂದಿಲ್ಲ.
ಸ್ವಲ್ಪ ಸಮಯದ ಬಳಿಕ ಮನೆಯೊಡತಿ ಏನೋ ಜ್ಞಾಪಿಸಿಕೊಂಡವರಂತೆ ತಟ್ಟೆಗೆ ಕೈಹಾಕಿ ಚಿನ್ನದ ಸರ ಹುಡುಕತೊಡಗಿದ್ದಾರೆ. ಆದರೆ ಅದು ಆ ವೇಳೆಗೆ ಮಾಯವಾಗಿತ್ತು. ಇದರಿಂದ ಇಡೀ ಕುಟುಂಬ ಗಾಬರಿಗೆ ಬಿದ್ದಿದೆ. ಅಯ್ಯೋ ಚಿನ್ನದ ಸರ ಎಂದು ಕೂಗಾಡಿದ್ದಾರೆ. ಇದು ಹಸುವಿನ ಕಿವಿಗೂ ಬಿದ್ದಿದೆಯಾದರೂ ಸರ ಸರಸರನೇ ತನ್ನ ಹೊಟ್ಟೆ ಸೇರಿದೆ ಎಂದು ಅದಕ್ಕೆ ಹೇಳಿಕೊಳ್ಳಕ್ಕೆ ಆಗಿಲ್ಲ. ಸಾವರಿಸಿಕೊಂಡು.. ಚಿನ್ನದ ಸರ ಎಲ್ಲಿ ಹೋಗಿರಬಹುದು ಎಂದು ಮನೆ ಮಂದಿ ಮೆಲುಕು ಹಾಕತೊಡಗಿದಾಗ ಬಹುಶಃ ಅದು ತಮ್ಮ ಮನೆಯ ಹಸುವಿನ ಹೊಟ್ಟೆ ಸೇರಿಬಹುದು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಇದರಿಂದ ಶ್ರೀಕಾಂತ್ ಕುಟುಂಬಕ್ಕೆ ಒಂದು ರೀತಿಯ ಸಮಾಧಾನವಾಗಿದೆಯಾದರೂ ಮುಂದೆ ಅದು ಬೇರೆಯದ್ದೇ ರೀತಿಯ ಪೀಕಲಾಟಕ್ಕೆ ಶುರುವಾಗಿದೆ! ದಿನಾ ತಮ್ಮ ಮನೆಯ ಹಸು ಸಗಣಿ ಹಾಕುವುದನ್ನೇ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಪರಿಸ್ಥಿತಿ ಅವರದ್ದಾಗಿದೆ. ಅದು ಒಂದು, ಎರಡು ದಿನವಲ್ಲ. ಬರೋಬ್ಬರಿ 30-35 ದಿನಗಳ ಕಾಲ ಹಸು ಸಗಣಿ ಹಾಕುವುದನ್ನು ಕಾದುನೋಡುವುದೇ ಆಗಿದೆ ಮನೆ ಮಂದಿಗೆ! ಇನ್ನು ಕಾಯಲು ಆಗದು ಎಂದು ಕೊನೆಗೂ ಮೊನ್ನೆ ಸಮೀಪದ ಪಶು ಚಿಕಿತ್ಸಾಲಯಕ್ಕೆ ಹಸುವಿನ ಸಮೇತ ಹೋಗಿ, ನಡೆದ ಕತೆಯನ್ನೆಲ್ಲಾ ಅಲ್ಲಿನ ವೈದ್ಯ ಸಿಬ್ಬಂದಿಗೆ ತಿಳಿಸಿದ್ದಾರೆ ಶ್ರೀಕಾಂತ್ ಕುಟುಂಬಸ್ಥರು. ತಕ್ಷಣ ಕಾರ್ಯಾಚರಣೆಗೆ ಇಳಿದ ಪಶು ವೈದ್ಯರು ಮೊದಲು ಮೆಟಲ್ ಡಿಟೆಕ್ಟರ್ ಅನ್ನು (metal detector) ಹಸುವಿನ ಹೊಟ್ಟೆಯ ಸುತ್ತಾ ಹಿಡಿದಿದ್ದಾರೆ. ಆಗ ಬೀಪ್ ಸೌಂಡ್ ಬಂದಿದೆ. ಅದನ್ನು ಕೇಳಿ ಶ್ರೀಕಾಂತ್ ಕುಟುಂಬಸ್ಥರ ಹೃದಯ ಬಡಿತ ಮತ್ತಷ್ಟು ಜೋರಾಗಿದೆ. ಆದರೂ ಪರಸ್ಪರ ಸಂತೈಸಿಕೊಂಡು, ಸದ್ಯ ನಮ್ಮ ಗೃಹ ಲಕ್ಷ್ಮಿಯೇ ಸರ ನುಂಗಿದೆ ಎಂದು ತಿಳಿದು ತುಸು ಸಮಾಧಾನಗೊಂಡಿದ್ದಾರೆ!
ಆಪರೇಶನ್ ಗೋಲ್ಡ್ ಚೈನ್: ಅಲ್ಲಿಂದ ಮುಂದಕ್ಕೆ ವೈದ್ಯರ ಮೇಲೆ ಭಾರ ಹಾಕಿ, ನೀವೇ ತೆಕ್ಕೊಡಬೇಕು ಎಂದು ಗೋ-ಗರೆದಿದ್ದಾರೆ ಶ್ರೀಕಾಂತ್ ಕುಟುಂಬಸ್ಥರು. ವೈದ್ಯರೂ ತಡ ಮಾಡದೆ ಮತ್ತೊಂದು ಸ್ಕ್ಯಾನ್ ಮಾಡಿ, ಹಸುವಿನ ಹೊಟ್ಟೆಯಲ್ಲಿ ಚಿನ್ನದ ಸರ ಇರುವುದನ್ನು ಖಾತ್ರಿ ಪಡಿಸಿಕೊಂಡಿದ್ದಾರೆ. ತಡಮಾಡದೆ ಶಸ್ತ್ರ ಸಜ್ಜಿತರಾಗಿ ಹಸುವಿನ ಹೊಟ್ಟೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆಪರೇಶನ್ ಗೋಲ್ಡ್ ಚೈನ್ ಸಕ್ಸಸ್ ಆಗಿದೆ! ಉದ್ದನೆಯ ಚಿನ್ನದ ಸರವನ್ನು ಹಸುವಿನ ಹೊಟ್ಟೆ ಭಾಗದಿಂದ ಎಳೆದೆಳೆದು ಶ್ರೀಕಾಂತ್ ಕುಟುಂಬಸ್ಥರ ಕೈಗೆ ಕೊಟ್ಟಿದ್ದಾರೆ. ಅದನ್ನು ಕಂಡು ಶ್ರೀಕಾಂತ್ ಕುಟುಂಬಸ್ಥರ ಆನಂದಕ್ಕೆ ಪಾರವೇ ಇಲ್ಲವಾಗಿದೆ, ಜೊತೆಗೆ ತಮ್ಮ ಅಚಾತುರ್ಯದಿಂದ ಮೂಕ ಜೀವಿಗೆ ತ್ರಾಸ ಕೊಟ್ಟೆವಲ್ಲಾ ಎಂದೂ ಮರುಗಿದ್ದಾರೆ.
Published On - 12:17 pm, Sat, 11 December 21