ಉತ್ತರ ಕನ್ನಡ ಜಿಲ್ಲೆಯಲ್ಲಿ ಸೈಬರ್ ವಂಚನೆ ಪ್ರಕರಣದಲ್ಲಿ ಏರಿಕೆ, ಅನಕ್ಷರಸ್ಥರಿಗಿಂತ ಶಿಕ್ಷಿತರಿಗೇ ಹೆಚ್ಚು ವಂಚನೆ

| Updated By: ಗಣಪತಿ ಶರ್ಮ

Updated on: Oct 23, 2023 | 8:59 PM

Cyber Crime Raise in Uttara Kannada District: 2023ನೇ ಸಾಲಿನಲ್ಲಿ ಈವರೆಗೆ ಸುಮಾರು 1.21 ಕೋಟಿ ಹಣವನ್ನು ಜನರು ವಿವಿಧ ಪ್ರಕರಣದಲ್ಲಿ ಕಳೆದುಕೊಂಡಿದ್ದು, ಒಂದೇ ವರ್ಷದಲ್ಲಿ ದುಪ್ಪಟ್ಟು ಹಣ ಕಳೆದುಕೊಂಡಿದ್ದಾರೆ. ಈ ಸೈಬರ್ ಪ್ರಕರಣದಲ್ಲಿ ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಚ್ಚಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೈಬರ್ ವಂಚನೆ ಪ್ರಕರಣದಲ್ಲಿ ಏರಿಕೆ, ಅನಕ್ಷರಸ್ಥರಿಗಿಂತ ಶಿಕ್ಷಿತರಿಗೇ ಹೆಚ್ಚು ವಂಚನೆ
ಸಿಇಎನ್ ಪೊಲೀಸ್ ಠಾಣೆ, ಕಾರವಾರ
Follow us on

ಕಾರವಾರ, ಅಕ್ಟೋಬರ್ 23: ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದಂತೆ ಸೈಬರ್ ಕ್ರೈಂ (Cyber Crime) ಪ್ರಕರಣಗಳು‌ ಕೂಡ ಹೆಚ್ಚುತ್ತಲೇ ಇದೆ. ಪೊಲೀಸ್ ಇಲಾಖೆ ಅದೆಷ್ಟೇ ಎಚ್ಚರಿಕೆ ಮೂಡಿಸಿದರೂ ಕೂಡ ಜನ ಒಂದಲ್ಲ ಒಂದು ರೀತಿಯಲ್ಲಿ ಆನ್ಲೈನ್ ವಂಚನೆಗೊಳಗಾಗುತ್ತಿದ್ದು, ಉತ್ತರಕನ್ನಡ ಜಿಲ್ಲೆಯೊಂದರಲ್ಲಿಯೇ (Uttara Kannada District) ಕಳೆದೆರಡು ವರ್ಷದಿಂದ ಜನರು ಬರೊಬ್ಬರಿ 1.64 ಕೋಟಿ ಹಣ ಕಳೆದುಕೊಂಡಿದ್ದಾರೆ.

ಸೈಬರ್ ಕ್ರೈಂ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಜನರು ಸೈಬರ್ ವಂಚನೆಗೊಳಗಾಗುತ್ತಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ 2022 ನೇ ಸಾಲಿಗಿಂತ 2023ರಲ್ಲಿ ಜನ ವಂಚನೆಗೊಳಗಾಗಿ ಹಣ ಕಳೆದುಕೊಂಡ ಮೊತ್ತ ಹೆಚ್ಚಾಗಿದೆ. ಮೊಬೈಲ್​​ಗೆ ಓಟಿಪಿ ಕಳಿಸಿ ವಿವಿಧ ವಿಚಾರದಲ್ಲಿ ವಿಚಾರಣೆ ಮಾಡಿ ಓಟಿಪಿ ಪಡೆದು ವಂಚನೆಯನ್ನು ಮಾಡಲಾಗುತ್ತಿದೆ. ಎಟಿಎಂ ಕಾರ್ಡ್ ಹಾಳಾಗಿದೆ ಎಂದು, ಜಾಬ್ ಕೊಡಿಸಲಾಗುವುದಾಗಿ, ಗಿಫ್ಟ್ ಬಂದಿದೆ ಎಂದು, ಆನ್ಲೈನ್ ನಲ್ಲಿ ಬ್ಯುಸಿನೆಸ್, ಕೆವೈಸಿ ಅಪ್ಡೇಟ್ ಎಂದು ಅಕೌಂಡ್ ವಿವರ ಪಡೆದು ವಂಚಿಸುವುದು ಸೇರಿದಂತೆ ಹೀಗೆ ಒಂದಲ್ಲಾ ಎರಡಲ್ಲ ನಾನಾ ಬಗೆಯ ವಂಚನೆಗಳು ನಡೆಯುತ್ತಿದೆ.

ವಂಚನೆಗೊಳಗಾದವರಲ್ಲಿ ವಿದ್ಯಾವಂತರು, ಯುವಕರೇ ಹೆಚ್ಚು!

ಜಿಲ್ಲೆಯಲ್ಲಿ 2022 ನೇ ಸಾಲಿನಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಜನರು ವಿವಿಧ ವಂಚನೆ ಪ್ರಕರಣದಲ್ಲಿ ಸುಮಾರು 43 ಲಕ್ಷ ಹಣ ಕಳೆದುಕೊಂಡಿದ್ದ ಬಗ್ಗೆ ದೂರು ದಾಖಲಾಗಿದ್ದವು. ಇನ್ನು 2023ನೇ ಸಾಲಿನಲ್ಲಿ ಈವರೆಗೆ ಸುಮಾರು 1.21 ಕೋಟಿ ಹಣವನ್ನು ಜನರು ವಿವಿಧ ಪ್ರಕರಣದಲ್ಲಿ ಕಳೆದುಕೊಂಡಿದ್ದು, ಒಂದೇ ವರ್ಷದಲ್ಲಿ ದುಪ್ಪಟ್ಟು ಹಣ ಕಳೆದುಕೊಂಡಿದ್ದಾರೆ. ಈ ಸೈಬರ್ ಪ್ರಕರಣದಲ್ಲಿ ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಚ್ಚಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಸೈಬರ್ ಅಪರಾಧದಲ್ಲಿ ಸಂತ್ರಸ್ತರ ಸಹಾಯ ಇಲ್ಲದೇ ಅಪರಾಧ ಎಸಗಲು ಸಾಧ್ಯವೇ ಇಲ್ಲ. ಓಟಿಪಿ ಶೇರ್ ಮಾಡದೇ ಲಿಂಕ್ ಕ್ಲಿಕ್ ಮಾಡದೇ ಇದ್ದರೇ ಅಪರಾಧ ಮಾಡಲು ಸಾಧ್ಯವೇ ಇಲ್ಲ. ಸೈಬರ್ ವಂಚನೆಗೊಳಗಾದ ಪ್ರಕರಣದಲ್ಲಿ ಯುವಕರೇ ಹೆಚ್ಚಾಗಿದ್ದು ಸಿಇಎನ್ ಪೊಲೀಸ್ ಠಾಣೆಯೊಂದರಲ್ಲಿ ಕೋಟಿಗೂ ಅಧಿಕ ಹಣ ಕಳೆದುಕೊಂಡರೇ ಇತರೇ ಪೊಲೀಸ್ ಠಾಣೆಗಳಲ್ಲಿ ಹಾಗೂ ಆನ್ ಲೈನ್ ಮೂಲಕ ದಾಖಲಾದ ದೂರುಗಳೆಲ್ಲಾ ಸೇರಿ ಜಿಲ್ಲೆಯಲ್ಲಿ 2 ಕೋಟಿಗೂ ಅಧಿಕ ಹಣವನ್ನು ಜನರು ಆನ್ ಲೈನ್ ವಂಚನೆ ಗೊಳಗಾಗಿ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಸಮುದ್ರದಲ್ಲಿ ಮುಳುಗುತ್ತಿದ್ದ 3 ಯುವಕರ ರಕ್ಷಿಸಿದ ಲೈಫ್‌ಗಾರ್ಡ್ ಸಿಬ್ಬಂದಿ: ಪ್ರಾಣಾಪಾಯದಿಂದ ಪಾರು

ಇನ್ನು ಜಿಲ್ಲೆಯಲ್ಲಿ ಇತರೇ ಕ್ರೈಂ ಪ್ರಕರಣಗಳಿಗೆ ಹೋಲಿಸಿದರೆ ಇತ್ತಿಚ್ಚಿಗೆ ಸೈಬರ್ ಕ್ರೈಂ ಗಳು ಸಹ ಸಾಕಷ್ಟು ಸಂಖ್ಯೆಯಲ್ಲಿ ಹೆಚ್ಚಾಗಿದೆ. ಜಿಲ್ಲೆಯ ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರು ಹಣ ಒಂದಲ್ಲಾ ಒಂದು ಮಾರ್ಗದಲ್ಲಿ ಜನರಿಂದ ವಂಚಕರು ವಂಚನೆ ಮಾಡುತ್ತಿರುವುದು ಪೊಲೀಸರಿಗೆ ತಲೆ ನೋವಾದ ವಿಚಾರವಾಗಿದೆ. ಇನ್ನು ಆನ್ಲೈನ್ ಮೂಲಕ ಹಣ ಮಾಡಲು ವಿವಿಧ ಆ್ಯಪ್​​ಗಳನ್ನು ಪರಿಚಯಿಸಲಾಗಿದೆ. ಇಂತಹ ಆ್ಯಪ್​ಗಳಿಗೂ ಯುವಜನತೆ ಮಾರುಹೋಗಿ ಹಣ ಕಳೆದುಕ್ಕೊಳ್ಳುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಯುವ ಜನತೆಗೆ ಜಾಗೃತಿ ಮೂಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಆನ್​ಲೈನ್ ವಂಚನೆ ನಡೆದ ತಕ್ಷಣ ಏನು ಮಾಡಬೇಕು?

ಯಾವುದೇ ವಂಚನೆ ಪ್ರಕರಣಗಳು ನಡೆದರೆ ತಕ್ಷಣ 1930 ಟಾಲ್ ಫ್ರೀ ನಂಬರ್ ಗೆ ಕರೆ ಮಾಡಿ ದೂರು ದಾಖಲು ಮಾಡಬಹುದು. ಬಳಿಕ ಸೈಬರ್ ಕ್ರೈಂ ಪೊಲೀಸರು ವಾಟ್ಸಪ್ ಮೂಲಕ ಬ್ಯಾಂಕ್ ಸ್ಟೇಟ್ ಮೆಂಟ್ ಹಾಗೂ ಆಧಾರ್ ಖಾರ್ಡ ಪಡೆದು ವಂಚನೆಗೊಳಗಾದ ಹಣವನ್ನು ಬೇರೆ ಅಕೌಂಟ್ ಗೆ ವರ್ಗಾವಣೆ ಆಗದಂತೆ ತಡೆಹಿಡಿಯುತ್ತಾರೆ. ಅಲ್ಲದೇ cybercrime.gov.in ಪೊರ್ಟಲ್ ಓಪನ್ ಮಾಡಿ ದೂರು ಸಲ್ಲಿಸಬಹುದಾಗಿದೆ. ಆದ್ರೆ ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಉತ್ತರಕನ್ನಡ ಜಿಲ್ಲೆಯಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಜೊತೆಗೆ ಜನ ಕೂಡ ಜಾಗೃತರಾಗಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ