ವರ್ಷ ಕಳೆದರೂ ಮುಗಿದಿಲ್ಲ ಶಿರಸಿ-ಕುಮಟಾ ರಸ್ತೆ ಕಾಮಗಾರಿ: ಆಮೆಗತಿ ಕೆಲಸಕ್ಕೆ ಜನಾಕ್ರೋಶ

ಉತ್ತರ ಕನ್ನಡದ ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ 766(ಇ) ಕಾಮಗಾರಿ ಒಂದು ವರ್ಷ ಕಳೆದರೂ ಮುಗಿದಿಲ್ಲ. ಆರು ತಿಂಗಳಲ್ಲಿ ಪೂರ್ಣಗೊಳಿಸುವ ಭರವಸೆ ನೀಡಿದ್ದ RNS ಕಂಪನಿ ಅದನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಭಾರೀ ವಾಹನ ಸಂಚಾರ ನಿರ್ಬಂಧಿಸಿರುವ ಕಾರಣ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರ್ಷ ಕಳೆದರೂ ಮುಗಿದಿಲ್ಲ ಶಿರಸಿ-ಕುಮಟಾ ರಸ್ತೆ ಕಾಮಗಾರಿ: ಆಮೆಗತಿ ಕೆಲಸಕ್ಕೆ ಜನಾಕ್ರೋಶ
ಶಿರಸಿ-ಕುಮಟಾ ರಸ್ತೆ
Updated By: ಪ್ರಸನ್ನ ಹೆಗಡೆ

Updated on: Dec 10, 2025 | 2:56 PM

ಉತ್ತರ ಕನ್ನಡ, ಡಿಸೆಂಬರ್​ 10: ಜಿಲ್ಲೆಯ ಕರಾವಳಿ ಮತ್ತು ಮಲೆನಾಡು ಭಾಗವನ್ನು‌ ಸಂಪರ್ಕಿಸುವ ಕುಮಟಾ- ಶಿರಸಿ ರಾಷ್ಟ್ರೀಯ ಹೆದ್ದಾರಿ 766 (ಇ) ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಹಿನ್ನಲೆ ಈ ಮಾರ್ಗದಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧಿಸಿ ಬರೋಬ್ಬರಿ ಒಂದು ವರ್ಷ ಕಳೆದಿದೆ. ಹೀಗಿದ್ದರೂ ಘನ ವಾಹನಗಳ ಸಂಚಾರಕ್ಕೆ ರಸ್ತೆ ಲಭ್ಯವಾಗದ ಕಾರಣ ಜನಾಕ್ರೋಶ ಕೇಳಿಬಂದಿದೆ. ಕೆಲ ಸಂಘಟನೆಗಳು ಜಂಟಿ ಹೋರಾಟ ನಡೆಸಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿವೆ.

ಶಿರಸಿ-ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನಲೆ 2024ರ ನವೆಂಬರ್ ತಿಂಗಳಲ್ಲಿ ಭಾರೀ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸೋದಾಗಿ ಗುತ್ತಿಗೆ ಪಡೆದ RNS ಕಂಪನಿಯೂ ಭರವಸೆ ಕೊಟ್ಟಿತ್ತು. ಆದರೆ ಕಾಮಗಾರಿ ಆರಂಭವಾಗಿ ವರ್ಷ ಕಳೆಯುತ್ತಾ ಬಂದರೂ ವಾಹನ ಸಂಚಾರಕ್ಕೆ ಮಾತ್ರ ಇನ್ನೂ ಈ ರಸ್ತೆ ಮುಕ್ತವಾಗಿಲ್ಲ. ಹೀಗಿದ್ದರೂ ಈ ರಸ್ತೆಯಲ್ಲಿ ಕೆಲ ಖಾಸಗಿ ಬಸ್​​ಗಳು ಸಂಚಾರ ನಡೆಸುತ್ತಿರುವ ಕಾರಣಕ್ಕೆ, ಸರ್ಕಾರಿ ಬಸ್​​ಗಳು ಓಡಾಡಲೂ ಅವಕಾಶ ಕೊಡಿ ಎಂಬ ಆಗ್ರಹ ವ್ಯಕ್ತವಾಗಿದೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಭಾಗದ ಕೆಲವು ಸಂಘಟನೆಗಳು ಜಂಟಿಯಾಗಿ ಹೋರಾಟ ನಡೆಸಿದ್ದು, ನಿಧಾನಗತಿಯ ಕಾಮಗಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಇದನ್ನೂ ಓದಿ: ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಮತ್ತೆ ಕೈದಿಗಳ ಗಲಾಟೆ; ಮಾದಕವಸ್ತು ಕೊಟ್ಟಿಲ್ಲವೆಂದು ಟಿವಿ ಒಡೆದು ದಾಂಧಲೆ

ಶಿರಸಿ-ಕುಮಟಾ ಮಾರ್ಗವಾಗಿ ಮಂಗಳೂರು ಕಡೆ ಓಡಾಟ ನಡೆಸುತ್ತಿದ್ದ KSRTC ಬಸ್​​ಗಳಿಗೆ ಪರ್ಯಾಯ ಮಾರ್ಗಗಳನ್ನು ಕ್ಲಪಿಸಲಾಗಿದೆ. ಆದರೆ ಆ ರಸ್ತೆಗಳು ದುರ್ಗಮವಾಗಿರುವ ಕಾರಣಕ್ಕೆ ಸರಿಯಾದ ಸಮಯಕ್ಕೆ ಬಸ್​​ ಸಿಗದೆ ಜನರು ಪರದಾಟ ನಡೆಸುತ್ತಿದ್ದಾರೆ. ಘನ ವಾಹನಗಳ ಸಂಚಾರಕ್ಕೆ ನಿಷೇಧವಿರುವ ರಸ್ತೆಯಲ್ಲೇ ಕೆಲ ಖಾಸಗಿ ಬಸ್​ಗಳು ಸಂಚಾರ ನಡೆಸುತ್ತಿದ್ದರೂ ಅವು ಈ ಭಾಗದಲ್ಲಿ ನಿಲುಗಡೆ ಕೊಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ವಾಣಿಜ್ಯ ಹಾಗೂ ಜನರ ದೃಷ್ಟಿಯಿಂದ ಕುಮಟಾ-ಶಿರಸಿ ಮಾರ್ಗ ತುಂಬಾ ಅತ್ಯವಶ್ಯಕ ವಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.