
ಕಾರವಾರ, ಮೇ 17: ಒಂದೆಡೆ ಪುರಾಣ ಪ್ರಸಿದ್ಧ ಆತ್ಮಲಿಂಗವಿರುವ ಮಹಾಬಲೇಶ್ವರನ (Mahabaleshwara Temple) ದರ್ಶನಕ್ಕೆ ತೆರಳುತ್ತಿರುವ ಭಕ್ತರ ದಂಡು. ಇನ್ನೊಂದೆಡೆ, ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲೇ ನದಿಯಂತೆ ಹರಿಯುತ್ತಿರುವ ಕೊಳಚೆ ನೀರು. ಮತ್ತೊಂದೆಡೆ ಮೂಗು ಮುಚ್ಚಿಕೊಂಡು ಓಡಾಡುತ್ತಿರುವ ಪ್ರವಾಸಿಗರು. ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಪ್ರವಾಸಿ ತಾಣದ ಸ್ಥಿತಿ ಇದು. ಉತ್ತರಕನ್ನಡ ಜಿಲ್ಲೆಯ ಗೋಕರ್ಣ (Gokarna) ಕ್ಷೇತ್ರದಲ್ಲಿ ಮಹಾಬಲೇಶ್ವರನ ದರ್ಶನಕ್ಕೆ ಬರುವ ಬಹುತೇಕ ಭಕ್ತರು ಸಮೀಪದ ಕಡಲತೀರದಲ್ಲಿ ಸಮುದ್ರಸ್ನಾನ ಮಾಡಿಯೇ ದೇವಸ್ಥಾನಕ್ಕೆ ತೆರಳುತ್ತಾರೆ. ಆದರೆ, ಹೀಗೆ ಸಮುದ್ರದಿಂದ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಇಡೀ ಗೋಕರ್ಣದ ಕೊಳಚೆ ನೀರು ರಾಜಕಾಲುವೆ ಮೂಲಕ ಹರಿಯುತ್ತದೆ. ರಾಜಕಾಲುವೆ ಸಂಪೂರ್ಣ ತ್ಯಾಜ್ಯದಿಂದ ತುಂಬಿಹೋಗಿದ್ದು ನೀರು ನಿಂತು ಕೆಟ್ಟ ವಾಸನೆ ಇಡೀ ಮಾರ್ಗದ ತುಂಬ ಹಬ್ಬಿದೆ. ಹೀಗಾಗಿ ದೇವರ ದರ್ಶನಕ್ಕೆ ಬರುವಂತಹ ಜನರು ಕೊಳಚೆ ಕಂಡು ಅಸಹ್ಯಪಡುತ್ತಲೇ ದೇವಸ್ಥಾನಕ್ಕೆ ತೆರಳುವಂತಾಗಿದ್ದು, ಕ್ಷೇತ್ರದ ಬಗ್ಗೆ ಕೆಟ್ಟ ಭಾವನೆ ಬರುವಂತಿದೆ. ತ್ಯಾಜ್ಯದಿಂದ ತುಂಬಿ ನಿಂತಿರುವ ರಾಜಕಾಲುವೆ ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಬೇಸರಕ್ಕೂ ಕಾರಣವಾಗಿದೆ.
ಇಡೀ ಗೋಕರ್ಣದ ಕೊಳಚೆ ನೀರು ರಾಜಕಾಲುವೆ ಮೂಲಕ ಸಮುದ್ರಕ್ಕೆ ಬಂದು ಸೇರುತ್ತದೆ. ಕೆಲವೆಡೆ ಜನವಸತಿ ಪ್ರದೇಶಗಳ ಬಳಿ ತ್ಯಾಜ್ಯದ ರಾಶಿಯೇ ಸಂಗ್ರಹಗೊಂಡು ಕೊಳಚೆ ನೀರು ಹರಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕಾಲುವೆ ಪಕ್ಕದ ನಿವಾಸಿಗಳ ಪಾಡಂತೂ ಹೇಳತೀರದಾಗಿದೆ. ಕೊಳಚೆ ನೀರು ಸಂಗ್ರಹವಾಗಿರುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳು ಹರಡುವ ಆತಂಕ ಸಹ ಇದ್ದು, ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಗೋಕರ್ಣಕ್ಕೆ ಪ್ರತಿದಿನ ಸಾವಿರಾರು ಜನ ಪ್ರವಾಸಿಗರು ಆಗಮಿಸಿ ಮಹಾಬಲೇಶ್ವರ ದೇವರ ದರ್ಶನ ಪಡೆದು ಸಮುದ್ರಕ್ಕೆ ತೆರಳುತ್ತಾರೆ. ಈ ಸಂದರ್ಭದಲ್ಲಿ ಕೊಳಚೆ ಪ್ರದೇಶ ನೋಡಿ ಬೇಸರಪಡುತ್ತಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಸ್ಥಳಿಯರಾದ ಬಸವರಾಜ್ ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಶರಾವತಿ ನದಿ ತೀರದ ‘ರಾಣಿ ವೀಳ್ಯದೆಲೆ’ಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆ! ಆದರೂ ರಫ್ತು ನಿರಾಕರಿಸಿದ ರೈತರು
ಒಟ್ಟಾರೆ, ಧಾರ್ಮಿಕ ಹಾಗೂ ಪ್ರವಾಸಿ ತಾಣವಾಗಿಯೂ ಪ್ರಸಿದ್ಧವಾಗಿರುವ ಗೋಕರ್ಣ ಕ್ಷೇತ್ರಕ್ಕೆ ಕೊಳಚೆ ಸಮಸ್ಯೆ ಇದೀಗ ಕಪ್ಪುಚುಕ್ಕೆಯಂತಾಗಿದ್ದು, ಆದಷ್ಟು ಬೇಗ ಆಡಳಿತವು ತ್ಯಾಜ್ಯ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಂಡು ಪ್ರವಾಸಿಗರಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ