ಕಾರವಾರ: ಜಾತ್ರೆ ನಿಮಿತ್ತ ಬಿಸಿ ಗಾಳಿ ತುಂಬಿದ ಬಲೂನ್​ ಹಾರಿ ಬಿಡುವ ಭಕ್ತರು

| Updated By: ವಿವೇಕ ಬಿರಾದಾರ

Updated on: Nov 13, 2022 | 5:41 PM

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಗ್ರಾಮದಲ್ಲಿ ರಾಮನಾಥ ದೇವರ ಜಾತ್ರೆಯ ಪ್ರಯುಕ್ತ ಬಿಸಿಗಾಳಿ ತುಂಬಿದ ಬಲೂನ್ ಹಾರಿ ಬಿಡಲಾಗುತ್ತದೆ.

ಕಾರವಾರ: ಜಾತ್ರೆ ನಿಮಿತ್ತ ಬಿಸಿ ಗಾಳಿ ತುಂಬಿದ ಬಲೂನ್​ ಹಾರಿ ಬಿಡುವ ಭಕ್ತರು
ಕಾರವಾರದ ರಾಮನಾಥ ದೇವರ ಜಾತ್ರೆ
Follow us on

ಸಾಮಾನ್ಯವಾಗಿ ಜಾತ್ರೆ ಅಂದ್ಮೇಲೆ ಹೂವು, ಹಣ್ಣು ಸೇವೆ ನೀಡುವುದು, ಕೆಲವೆಡೆ ಕುರಿ, ಕೋಳಿ ಬಲಿ ಕೊಡೋದನ್ನು ನೀವು ನೋಡಿದ್ದೀರಿ. ಆದರೆ ಇಲ್ಲೊಂದು ಜಾತ್ರೆಯಲ್ಲಿ ಬಿಸಿ ಗಾಳಿ ತುಂಬಿದ ಬಲೂನನ್ನು ಹಾರಿ ಬಿಡಲಾಗುತ್ತದೆ. ಅರೆ ಜಾತ್ರೆಗೂ ಬಿಸಿ ಗಾಳಿ ಬಲೂನಿಗೂ ಏನು ಸಂಬಂಧ ಅಂತೀರಾ. ಈ ಸುದ್ದಿ ಓದಿ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಗ್ರಾಮದಲ್ಲಿ ಪ್ರತಿವರ್ಷ ರಾಮನಾಥ ದೇವರ ಜಾತ್ರೆಯ ಪ್ರಯುಕ್ತ ಬಿಸಿಗಾಳಿ ತುಂಬಿದ ಬಲೂನ್ ಹಾರಿ ಬಿಡುವ ಸಂಪ್ರದಾಯವನ್ನು ಆಚರಿಸಿಕೊಂಡು ಬಂದಿದ್ದು ಈ ವರ್ಷವು ಸಹ ಜಾತ್ರೆ ಅದ್ದೂರಿಯಾಗಿ ನಡೆಯಿತು. ಪ್ರತಿವರ್ಷ ಕಾರ್ತಿಕಮಾಸದ ದ್ವಿತೀಯಾ ದಿನದಂದು ಮಾಜಾಳಿಯ ರಾಮನಾಥ ದೇವರ ಜಾತ್ರೆ ನಡೆಯುತ್ತದೆ. ರಾಮನಾಥ ದೇವಸ್ಥಾನದಿಂದ ಪಲ್ಲಕ್ಕಿಯಲ್ಲಿ ರಾಮನಾಥ ದೇವರ ಮೂರ್ತಿಯನ್ನು ರಾತ್ರಿ ಸಾತೇರಿದೇವಿ ದೇವಸ್ಥಾನಕ್ಕೆ ತರಲಾಗುತ್ತದೆ. ಅಲ್ಲಿ ಬೆಳಿಗ್ಗೆ ದೇವರ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಕುಳಾವಿ ಜನರು ಕಟ್ಟಿರುವ ತೋರಣಗಳ ಬಳಿ ತೆರಳುವ ಪಲ್ಲಕ್ಕಿಗೆ ಜನರು ಆರತಿ ಬೆಳಗಿ ಹೂವು ಹಣ್ಣು ನೀಡಿ ಪೂಜೆ ಸಲ್ಲಿಸುತ್ತಾರೆ. ಇನ್ನು ಈ ಜಾತ್ರೆಯಲ್ಲಿ ವಿಶೇಷ ಆಕರ್ಷಣೆ ಅಂದರೆ ಜಾತ್ರೆಯ ನಿಮಿತ್ತ ಗ್ರಾಮದಲ್ಲಿ ಹಾರಿ ಬಿಡುವ ಬಿಸಿಗಾಳಿ ಬಲೂನು. ಗ್ರಾಮದ ಕೆಲ ಯುವಕರು ಒಟ್ಟಾಗಿ ಪೇಪರ್‌ನಿಂದ ಸ್ಥಳೀಯವಾಗಿ ವಾಫರ್ ಎಂದು ಕರೆಯುವ ಬಲೂನನ್ನ ತಯಾರಿಸುತ್ತಾರೆ. ವಾರಗಳ ಕಾಲ ಕೂತು ತಯಾರಿಸುವ ಈ ವಾಫರನ್ನು ಪಲ್ಲಕ್ಕಿ ಬಂದ ಸಂದರ್ಭದಲ್ಲಿ ಹಾರಿ ಬಿಡಲಾಗುತ್ತದೆ.

ಬಲೂನ್ ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿರೋ ಈ ಜಾತ್ರೆಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ಎರಡು ದಿನಗಳ ಕಾಲ ಊರಿನವರು ಭಕ್ತಿ ಹಾಗೂ ಶ್ರದ್ಧೆಯಿಂದ ತಲೆತಲಾಂತರಗಳಿಂದ ಬಂದ ಈ ಉತ್ಸವವನ್ನ ಆಚರಿಸುತ್ತಾರೆ. ಹಾಗೆ ಕೊನೆಯ ದಿನ ಊರಿನವರೇ ತಯಾರಿಸಿದ 20 ಅಡಿ ಎತ್ತರ, 8 ಅಡಿ ಅಗಲದ ಬಲೂನನ್ನು ಹಾರಿಬಿಡುತ್ತಾರೆ. ಜಾತ್ರೆಯ ಕೊನೆಯ ದಿನ ಬೆಳಿಗ್ಗೆ ಹಾಗೂ ಸಂಜೆ ಈ ರೀತಿ ಎರಡು ಬಲೂನುಗಳನ್ನ ಆಕಾಶಕ್ಕೆ ತೇಲಿ ಬಿಡುತ್ತಾರೆ. ಬೆಳಿಗ್ಗೆ ಗ್ರಾಮದ ಸಾತೇರಿ ದೇವಸ್ಥಾನದ ಬಳಿ ಬಲೂನ್ ಹಾರಿಸಿದರೆ ಸಂಜೆ ವೇಳೆ ರಾಮನಾಥ ದೇವಾಲಯದ ಬಳಿ ಬಿಡುತ್ತಾರೆ. ಇನ್ನು ಬೃಹತ್ ಗಾತ್ರದ ಬಲೂನನ್ನ ಆಕಾಶಕ್ಕೆ ಬಿಡುವುದನ್ನ ನೋಡುವುದಕ್ಕಾಗಿಯೇ ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯ ಸಾಕಷ್ಟು ಮಂದಿ ಭಕ್ತರು ದೇವಾಲಯದ ಬಳಿ ಸೇರುತ್ತಾರೆ. ಬಲೂನ್ ಹಾರುವಾಗ ಹರಹರ ಮಹಾದೇವ ಎನ್ನುತ್ತಾ ಕೇಕೇ ಚಪ್ಪಾಳೆ ಹಾಕೋ ಮೂಲಕ ಎಲ್ಲರೂ ಈ ದೃಶ್ಯವನ್ನ ಕಣ್ತುಂಬಿಕೊಂಡು ಸಂಭ್ರಮಿಸುತ್ತಾರೆ.

ಇನ್ನು ಗ್ರಾಮದಲ್ಲಿನ ಕಷ್ಟ, ತೊಂದರೆ, ರೋಗ ಇತ್ಯಾದಿ ಸಂಕಷ್ಟಗಳು ಹೊಗೆಯ ರೂಪದಲ್ಲಿ ಗ್ರಾಮದಿಂದ ಹಾರಿ ಹೋಗಲಿ ಎನ್ನುವ ಉದ್ದೇಶದಿಂದ ಜಾತ್ರೆಯ ಸಂದರ್ಭದಲ್ಲಿ ಈ ರೀತಿ ವಾಫರ್ ಹಾರಿ ಬಿಡಲಾಗುತ್ತದೆ. ಆಕಾಶಕ್ಕೆ ಹಾರಿಬಿಡುವ ಈ ವಾಫರ್ ಸಾಕಷ್ಟು ಎತ್ತರದಲ್ಲಿ ಗಂಟೆಗಟ್ಟಲೇ ಹಾರಿ ನಂತರ ಸಮುದ್ರದಲ್ಲಿ ಬೀಳುತ್ತದೆ. ಹೀಗೆ ಬಿದ್ದರೆ ಗ್ರಾಮದಲ್ಲಿನ ತೊಂದರೆಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಗ್ರಾಮಸ್ಥರದ್ದು.

ವಿನಾಯಕ ಬಡಿಗೇರ ಟಿವಿ 9 ಕಾರವಾರ