
ಕಾರವಾರ, ಆಗಸ್ಟ್ 15: ಉತ್ತರ ಕನ್ನಡ ಜಿಲ್ಲೆಯ (Uttara Kannada) ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ (Satish Krishna Sail) ನಿವಾಸದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ಶೋಧ ಕಾರ್ಯ ನಡೆಸಿದ್ದರು. ಶೋಧದ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಹಣ, ಕೆಜಿಗಟ್ಟಲೆ ಚಿನ್ನ ಪತ್ತೆಹಚ್ಚಿದ್ದಾರೆ.
ಶಾಸಕ ಸತೀಶ್ ಸೈಲ್ ಮನೆ ಮತ್ತು ಬ್ಯಾಂಕ್ ಖಾತೆಯಲ್ಲಿದ್ದ 1.68 ಕೋಟಿ ನಗದು, ಮತ್ತು ಅಂದಾಜು 6,20,45,319 ರೂ. ಮೌಲ್ಯದ 6.75 ಕೆಜಿ ಚಿನ್ನವನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚರಾಸ್ತಿ, ಸ್ಥಿರಾಸ್ತಿ ಸೇರಿ ಒಟ್ಟು 14.13 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ. ಇಡಿ ಅಧಿಕಾರಿಗಳು 2 ಟ್ರಂಕ್ನಲ್ಲಿ ಚಿನ್ನ, ಹಣ, ದಾಖಲೆ ಕೊಂಡೊಯ್ದಿದ್ದಾರೆ. ಇಡಿ ಶೋಧದ ವೇಳೆ ಹಣಕಾಸು, ದೋಷಾರೋಪ ದಾಖಲೆ, ಇ-ಮೇಲ್ ಹಾಗೂ ಇತರ ದಾಖಲೆಗಳು ಪತ್ತೆಯಾಗಿದ್ದವು.
ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅಕ್ರಮ ಅದಿರು ಸಾಗಾಟ ಮಾಡಿದ್ದ ಪ್ರಕರಣದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ದೆ ಅವರ ತಂಡ ಸೈಲ್ ವಿರುದ್ಧ ದೂರು ದಾಖಲಿಸಿತ್ತು. ಸತೀಶ್ ಸೈಲ್ಗೆ ಜನಪ್ರತಿನಿಧಿಗಳ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಅವರು ಹೈಕೋರ್ಟ್ನಲ್ಲಿ ಜಾಮೀನು ಪಡೆದುಕೊಂಡಿದ್ದರು.
ಬೇಲೆಕೇರಿ ಬಂದರಿನಿಂದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಿದ ಪ್ರಕರಣದಲ್ಲಿ ಸತೀಶ್ ಸೈಲ್ ಅವರನ್ನು ದೋಷಿ ಎಂದು ಕಳೆದ ವರ್ಷ ಅಕ್ಟೋಬರ್ನಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ನಂತರ ಬೇಲೆಕೇರಿ ಅದಿರು ಸಾಗಾಟ ಪ್ರಕರಣ ಸಂಬಂಧಿತ 6 ಪ್ರಕರಣಗಳಲ್ಲಿ ಅವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 44 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಲಾಗಿತ್ತು. ಆನಂತರ ಜೈಲು ಪಾಲಾಗಿದ್ದ ಅವರು ಶಾಸಕ ಸ್ಥಾನದಿಂದ ಅನರ್ಹರಾಗುವ ಭೀತಿ ಎದುರಿಸುತ್ತಿದ್ದರು.
ಇದನ್ನೂ ಓದಿ: ಕಾಂಗ್ರೆಸ್ನ ಸತೀಶ್ ಸೈಲ್ಗೆ 7 ವರ್ಷ ಜೈಲು: ಬೇಲೆಕೇರಿ ಅದಿರು ಅಕ್ರಮ ಸಾಗಾಟ ಪ್ರಕರಣದಲ್ಲಿ ಮಹತ್ವದ ತೀರ್ಪು
ನಂತರ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪಿನ ವಿರುದ್ಧ ಸೈಲ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನವೆಂಬರ್ನಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ, ಸೈಲ್ಗೆ ವಿಧಿಸಿರುವ ಶಿಕ್ಷೆಯ ಆದೇಶವನ್ನು ಅಮಾನತಿನಲ್ಲಿಡಲು ಸೂಚಿಸಿತ್ತು. ದಂಡ ಮೊತ್ತದ ಶೇ 25 ರಷ್ಟನ್ನು ಠೇವಣಿ ಇಡುವಂತೆ ಸೂಚನೆ ನೀಡಿದ್ದ ಹೈಕೋರ್ಟ್ ಸೈಲ್ಗೆ ಜಾಮೀನು ನೀಡಿತ್ತು.
Published On - 3:11 pm, Fri, 15 August 25