ಮಾಜಿ ಶಾಸಕ ವಿ.ಎಸ್.ಪಾಟೀಲ್ ಪುತ್ರ ಬಾಪು ಗೌಡ ಪಾಟೀಲ್ ಅರೆಸ್ಟ್, ಶಿರಸಿ ಸಬ್ ಜೈಲಿಗೆ ಶಿಫ್ಟ್

| Updated By: ಆಯೇಷಾ ಬಾನು

Updated on: Feb 04, 2024 | 11:32 AM

ಮಾಜಿ ಶಾಸಕ ವಿ.ಎಸ್‌.ಪಾಟೀಲ್ ಅವರ ಪುತ್ರ ಬಾಪು ಗೌಡ ಪಾಟೀಲ್​ನನ್ನು ಬಂಧಿಸಿ ಶಿರಸಿ ಸಬ್ ಜೈಲಿನಲ್ಲಿರಿಸಲಾಗಿದೆ. ತಲೆ ಮರಿಸಿಕೊಂಡಿದ್ದ ಬಾಪು ಗೌಡನನ್ನು ಪೊಲೀಸರು ಪತ್ತೆ ಹಚ್ಚಿ ನಿನ್ನೆ ಬೆಂಗಳೂರಿನಿಂದ ಕರೆದುಕೊಂಡು‌ ಬಂದು ರಾತ್ರಿ 10ಗಂಟೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೈಲಿಗಟ್ಟಿದ್ದಾರೆ.

ಮಾಜಿ ಶಾಸಕ ವಿ.ಎಸ್.ಪಾಟೀಲ್ ಪುತ್ರ ಬಾಪು ಗೌಡ ಪಾಟೀಲ್ ಅರೆಸ್ಟ್, ಶಿರಸಿ ಸಬ್ ಜೈಲಿಗೆ ಶಿಫ್ಟ್
ಬಾಪು ಗೌಡ ಪಾಟೀಲ್
Follow us on

ಕಾರವಾರ, ಫೆ.04: ಎಎಸ್‌ಐ ಬಾಲಕೃಷ್ಣ ಪಾಲೇಕರ್ ಎಂಬುವರಿಗೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ ಪ್ರಕರಣ ಹಾಗೂ ಎರಡು ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಶಾಸಕ ವಿ.ಎಸ್.ಪಾಟೀಲ್ (VS Patil) ಪುತ್ರ ಬಾಪು ಗೌಡ ಪಾಟೀಲ್​ನನ್ನು (Bapu Gowda patil) ಬಂಧಿಸಿ ಶಿರಸಿ ಸಬ್ ಜೈಲಿನಲ್ಲಿರಿಸಲಾಗಿದೆ. ಬಾಪು ಗೌಡ ಪಾಟೀಲ್ ವಿರುದ್ಧ ಸೆಕ್ಷನ್ 353, 141, 143, 147, 323, 353, 504, 506, 149ನಡಿ ಪ್ರಕರಣ ದಾಖಲಾಗಿದೆ.

2011ರಲ್ಲಿ ಮುಂಡಗೋಡ ಅರಣ್ಯ ಇಲಾಖೆಯ ಐಬಿಯಲ್ಲಿ ಕುಡಿದ ಮತ್ತಿನಲ್ಲಿ 15 ಜನರ ಜೊತೆ ಸೇರಿ ಎಎಸ್‌ಐ ಮೇಲೆ ಬಾಪು ಗೌಡ ಹಲ್ಲೆ ನಡೆಸಿದ್ದ. ಪೊಲೀಸರು ಬಾಪು ಗೌಡಗೆ ಸಂಬಂಧಿಸಿದ ವಾಹನ ಹಿಡಿದಿದ್ದ ಹಿನ್ನೆಲೆ ಮುಂಡಗೋಡ ಐಬಿಯಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆದಿತ್ತು. ಸಭೆಯಲ್ಲಿ ಬಾಪು ಗೌಡ ಪಾಟೀಲ್ ಹಾಗೂ ಆತನ 15 ಮಂದಿ‌ ಸಹಚರರು ಎಎಸ್‌ಐ ಅವರನ್ನು ದೂಡಿ, ಹಲ್ಲೆ ನಡೆಸಿದ್ದಲ್ಲದೇ, ಅವಾಚ್ಯವಾಗಿ ನಿಂದಿಸಿದ್ದರು. ಎಎಸ್‌ಐ ಬಾಲಕೃಷ್ಣ ತನ್ನ ಕರೆ ಸ್ವೀಕರಿಸಿಲ್ಲ ಎಂದು ಬಾಪು ಗೌಡ ಪಾಟೀಲ್ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ. ಈ ಪ್ರಕರಣ ಸಂಬಂಧಿಸಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ನಡೆಸಿದರ ವಿಚಾರವಾಗಿ ಎಎಸ್‌ಐ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರೊಂದಿಗೆ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ ಎರಡು ಚೆಕ್ ಬೌನ್ಸ್ ಪ್ರಕರಣದಲ್ಲೂ ಬಾಪು ಗೌಡ ಪಾಟೀಲ್ ಆರೋಪಿಯಾಗಿದ್ದಾನೆ. ಮುಂಡಗೋಡ ಜೆಎಂ‌ಎಫ್‌ಸಿ‌ ನ್ಯಾಯಾಲಯ ಪ್ರತೀ ಪ್ರಕರಣದಲ್ಲೂ ಮೂರು ಮೂರು ಬಾರಿ ವಾರೆಂಟ್ ಹೊರಡಿಸಿದ್ರೂ ಬಾಪು ಗೌಡ ಹಾಜರಾಗಿಲ್ಲ.

ಇದನ್ನೂ ಓದಿ: ಕೆರಗೋಡು ಬಳಿಕ ಬೆಳಗಾವಿಯ ಎಂಕೆ ಹುಬ್ಬಳ್ಳಿಯಲ್ಲಿ ಧ್ವಜ ತೆರವು; ಭಗವಾ ಧ್ವಜ ಹಾರಿಸಲು ಕರೆ

ಕಳೆದ 6 ತಿಂಗಳಿನಿಂದ ನ್ಯಾಯಾಲಯಕ್ಕೆ ಹಾಜರಾಗದೇ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದಾನೆ. ಈತನ ಜೊತೆಗೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ 14 ಮಂದಿ ಗೆಳೆಯರು ಕೋರ್ಟ್‌ಗೆ ಹಾಜರಾದ್ರೂ ಬಾಪು ಗೌಡ ಮಾತ್ರ ಹಾಜರಾಗಿರಲಿಲ್ಲ. ಬೆಂಗಳೂರಿನಲ್ಲಿದ್ದುಕೊಂಡೇ ವಾರೆಂಟ್ ನೋಟಿಸ್ ಅನ್ನು ಕೂಡಾ ನಿರ್ಲಕ್ಷಿಸಿದ್ದ. ಹೀಗಾಗಿ ತಲೆ ಮರಿಸಿಕೊಂಡಿದ್ದ ಬಾಪು ಗೌಡನನ್ನು ಪೊಲೀಸರು ಪತ್ತೆ ಹಚ್ಚಿ ನಿನ್ನೆ ಬೆಂಗಳೂರಿನಿಂದ ಕರೆದುಕೊಂಡು‌ ಬಂದು ರಾತ್ರಿ 10ಗಂಟೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಮುಂಡಗೋಡ ಜೆಎಂ‌ಎಫ್‌ಸಿ ನ್ಯಾಯಾಲಯ ಆರೋಪಿ ಬಾಪು ಗೌಡ ಪಾಟೀಲ್‌ಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿ ಬಾಪು ಗೌಡ ಮಾಜಿ ಶಾಸಕ ವಿ.ಎಸ್‌.ಪಾಟೀಲ್ ಅವರ ಪುತ್ರ. ವಿ.ಎಸ್.ಪಾಟೀಲ್ ಅವರು ಈ ಹಿಂದೆ ಬಿಜೆಪಿಯಲ್ಲಿದ್ದು ಬಳಿಕ ಕಾಂಗ್ರೆಸ್ ತೆರಳಿದ್ದರು. ಯಲ್ಲಾಪುರ ಕ್ಷೇತ್ರದಿಂದ ಈ ಹಿಂದೆ ಬಿಜೆಪಿ ಅಭ್ಯರ್ಥಿಯಾಗಿದ್ದರು. ಬಿಜೆಪಿಗೆ ಶಿವರಾಮ ಹೆಬ್ಬಾರ್ ಬಂದ ಮೇಲೆ‌ ಪಕ್ಷದಲ್ಲಿ ಅಸಮಾಧಾನಗೊಂಡು ಕಾಂಗ್ರೆಸ್ ಸೇರಿದ್ದರು. ಸದ್ಯ ಇವರ ಪುತ್ರ ಬಾಪು ಗೌಡ ಪಾಟೀಲ್ ನಿನ್ನೆ ರಾತ್ರಿ ಅರೆಸ್ಟ್ ಆಗಿದ್ದಾನೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ