
ಉತ್ತರ ಕನ್ನಡ, ನವೆಂಬರ್ 22: ರಾಜ್ಯದೆಲ್ಲೆಡೆ ಬೀದಿ ನಾಯಿಗಳ ಹಾವಳಿ (Dog attack) ಹೆಚ್ಚಾಗಿದ್ದು, ನಾಯಿ ಕಡಿತದಿಂದ ಹಲವು ಸಾವುಗಳೂ ಸಂಭವಿಸಿವೆ. ಈ ವರ್ಷದಲ್ಲಿಯೇ ಕರ್ನಾಟಕದಲ್ಲಿ ಬರೋಬ್ಬರಿ 2.8 ಲಕ್ಷಕ್ಕೂ ಹೆಚ್ಚು ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ. ಇದೀಗ ಅಂಥದ್ದೇ ಪ್ರಕರಣಗಳು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ನಡೆದಿದ್ದು, ಕಳೆದ ಮೂರು ದಿನಗಳಲ್ಲಿ 12 ಕ್ಕೂ ಹೆಚ್ಚು ಜನರು ಶ್ವಾನ ದಾಳಿಗೆ ಗುರಿಯಾಗಿದ್ದಾರೆ.
ದಾಂಡೇಲಿ ತಾಲೂಕು ಆಸ್ಪತ್ರೆಯಲ್ಲಿ ಪ್ರತಿದಿನ ಕನಿಷ್ಠ ಐದು ಮಂದಿಗೆ ರೆಬಿಸ್ ಲಸಿಕೆ ನೀಡಲಾಗುತ್ತಿದ್ದು, ಬೀದಿ ನಾಯಿಗಳ ಕಾಟ ಹೆಚ್ಚುತ್ತಿದೆ ಎಂದು ತಿಳಿದು ಬಂದಿದೆ. ನಗರದಲ್ಲಿ ಸುಮಾರು 2,000 ಕ್ಕೂ ಹೆಚ್ಚು ಶ್ವಾನಗಳಿದ್ದು, ಲಸಿಕೆ ಹಾಗೂ ಚಿಕಿತ್ಸೆ ನೀಡುವಲ್ಲಿ ನಗರಸಭೆಗೆ ಕಷ್ಟ ಎದುರಾಗಿದೆ. ಶ್ವಾನಗಳ ಸಂಖ್ಯೆಯ ಏರಿಕೆಯನ್ನು ತಡೆಯಲು ಜಿಲ್ಲಾಡಳಿತವು ಪ್ರತಿದಿನ 20 ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವ ಕ್ರಮ ಕೈಗೊಂಡಿದೆ. ಅಸ್ಥಿರ ಆಹಾರ, ತ್ಯಾಜ್ಯ ಸೇವನೆಯಿಂದ ನಾಯಿಗಳಲ್ಲಿ ಮಾನಸಿಕ-ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ, ಮಕ್ಕಳ ಹಾಗೂ ವಯೋವೃದ್ಧರ ಮೇಲೆ ದಾಳಿ ಪ್ರಕರಣಗಳು ಹೆಚ್ಚುತ್ತಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ 18 ಜನರ ಮೇಲೆ ಬೀದಿ ನಾಯಿಗಳ ದಾಳಿ; ಬೆಚ್ಚಿಬಿದ್ದ ಮಂಡ್ಯ ಜನ
ಈ ವರ್ಷದ ಮೊದಲ ಏಳು ತಿಂಗಳಲ್ಲಿ ಕರ್ನಾಟಕದಲ್ಲಿ 2.81 ಲಕ್ಷ ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 37 ರಷ್ಟು ಹೆಚ್ಚಾಗಿದೆ. ಈ ವರ್ಷ ಸುಮಾರು 26 ಕ್ಕೂ ಹೆಚ್ಚು ಜನರು ಹುಚ್ಚು ನಾಯಿ ಕಡಿತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮಂಗಳೂರಿನಲ್ಲಿ ದಯಾನಂದ (60) ಎಂಬ ವ್ಯಕ್ತಿಯೊಬ್ಬರನ್ನು ಅಟ್ಟಾಡಿಸಿ ದಾಳಿ ಮಾಡಿರುವ ಡೆಡ್ಲಿ ನಾಯಿ ಕಣ್ಣುಗುಡ್ಡೆಯನ್ನೇ ತಿಂದು ಹಾಕಿದ ಘಟನೆ ನಡೆದಿತ್ತು. ಜನ ವಸತಿ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ನಂತರ ಬೀದಿ ನಾಯಿಯನ್ನು ಪುರಸಭೆ ಸಿಬ್ಬಂದಿಗಳು ಸೆರೆ ಹಿಡಿದಿದ್ದರು.
ಇದನ್ನೂ ಓದಿ Dog Bite Relief Fund: ನಾಯಿ ಕಚ್ಚಿ ಸಾವನ್ನಪ್ಪಿದವರಿಗೆ 5 ಲಕ್ಷ ರೂ.ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ
ಮಂಡ್ಯದಲ್ಲಿ ಕೇವಲ 3 ದಿನಗಳಲ್ಲಿ 18 ಜನರ ಮೇಲೆ ನಾಯಿಗಳು ದಾಳಿ ನಡೆಸಿತ್ತು. ಜನ ಬೀದಿಯಲ್ಲಿ ಓಡಾಡಲು ಭಯಪಡುತ್ತಿದ್ದರೂ ಜಿಲ್ಲಾಡಳಿತ, ತಾಲೂಕ ಆಡಳಿತ ಬೀದಿ ನಾಯಿಗಳನ್ನು ನಿಯಂತ್ರಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳದ ಕಾರಣ ಅಧಿಕಾರಿಗಳ ವಿರುದ್ಧ ಜನ ಭಾರೀ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಬೆಂಗಳೂರಿನಲ್ಲಿ ಬೀದಿ ನಾಯಿ ದಾಳಿಯಿಂದ ಗಾಯಗೊಂಡ ಅಥವಾ ಸಾವನ್ನಪ್ಪಿದವರಿಗೆ ಕರ್ನಾಟಕ ಸರ್ಕಾರ ಪರಿಷ್ಕೃತ ಪರಿಹಾರ ಮಾರ್ಗಸೂಚಿ ಪ್ರಕಟಿಸಿದ್ದು, ಸಣ್ಣ ಗಾಯಗಳಿಗೆ 5,000 ರೂ., ಸಾವು ಸಂಭವಿಸಿದರೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.