ಕರ್ನಾಟಕದಲ್ಲೂ ನಾಯಿ ಕಡಿತ ಪ್ರಕರಣ ಗಣನೀಯ ಹೆಚ್ಚಳ: ಈ ವರ್ಷ 26 ಮಂದಿ ಸಾವು
ದೆಹಲಿಯಲ್ಲಿ ಬೀದಿ ನಾಯಿ ಕಡಿತ ಪ್ರಕರಣವಾಗಿ ಸುಪ್ರೀಂ ಕೋರ್ಟ್ ಪ್ರಾಣಿ ಪ್ರಿಯರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸಂದರ್ಭದಲ್ಲೇ ಇತ್ತ ಕರ್ನಾಟಕದಲ್ಲಿ ಆಘಾತಕಾರಿ ವರದಿ ಬಹಿರಂಗವಾಗಿದೆ. 2025ರ ಮೊದಲ ಏಳು ತಿಂಗಳಲ್ಲಿ 2.81 ಲಕ್ಷ ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ, ಇದು ಕಳೆದ ವರ್ಷಕ್ಕಿಂತ ಶೇ 37 ರಷ್ಟು ಹೆಚ್ಚಳವಾಗಿದೆ.

ಬೆಂಗಳೂರು, ಆಗಸ್ಟ್ 12: ಅತ್ತ ದೆಹಲಿಯಲ್ಲಿ ಬೀದಿ ನಾಯಿಗಳ ವಿಚಾರವಾಗಿ ಪ್ರಾಣಿ ಮತ್ತು ನಾಯಿ ಪ್ರಿಯರನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಸಂದರ್ಭದಲ್ಲೇ ಇತ್ತ ಕರ್ನಾಟಕದಲ್ಲಿ (Karnataka) ಕೂಡ ಆಘಾತಕಾರಿ ಅಂಕಿಅಂಶಗಳು ಬಹಿರಂಗವಾಗಿವೆ. ಈ ವರ್ಷದ ಮೊದಲ ಏಳು ತಿಂಗಳಲ್ಲಿ ಕರ್ನಾಟಕದಲ್ಲಿ 2.81 ಲಕ್ಷ ನಾಯಿ ಕಡಿತ (Dog Bite Cases) ಪ್ರಕರಣಗಳು ವರದಿಯಾಗಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 37 ರಷ್ಟು ಹೆಚ್ಚಾಗಿದೆ. ಈ ವರ್ಷ ಇಲ್ಲಿಯವರೆಗೆ 26 ಜನರು ಹುಚ್ಚು ನಾಯಿ ಕಡಿತದಿಂದ ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, 2024 ರಲ್ಲಿ ಒಟ್ಟಾರೆಯಾಗಿ 3.6 ಲಕ್ಷ ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದವು. ಹುಚ್ಚುನಾಯಿ ಕಡಿತದಿಂದ 42 ಸಾವುಗಳು ಸಂಭವಿಸಿದ್ದವು. ಆ ಪೈಕಿ 1.69 ಲಕ್ಷ ಪ್ರಕರಣಗಳು ಮತ್ತು 28 ಸಾವುಗಳು ಜನವರಿ ಮತ್ತು ಜುಲೈ ನಡುವೆ ದಾಖಲಾಗಿದ್ದವು.
ನಾಯಿ ಕಡಿತ ಪ್ರಕರಣ: ವಿಜಯಪುರ ಟಾಪ್
ವಿಜಯಪುರ ಜಿಲ್ಲೆ 15,527 ನಾಯಿ ಕಡಿತ ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು 13,821 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಹಾಸನ (13,388), ದಕ್ಷಿಣ ಕನ್ನಡ (12,524) ಮತ್ತು ಬಾಗಲಕೋಟೆ (12,392) ನಂತರದ ಸ್ಥಾನಗಳಲ್ಲಿವೆ. ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಮತ್ತು ಗದಗ ಜಿಲ್ಲೆಗಳಲ್ಲಿ ತಲಾ 7,000 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನಲ್ಲಿ ನಾಯಿ ಕಡಿತದಿಂದ 9 ಸಾವು
ಬೆಂಗಳೂರು ನಗರದಲ್ಲಿ ರೇಬಿಸ್ನಿಂದಾಗಿ ಒಂಬತ್ತು ಸಾವುಗಳು ಸಂಭವಿಸಿವೆ. ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ತಲಾ ಇಬ್ಬರು ಮತ್ತು ಬಳ್ಳಾರಿ, ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗದಲ್ಲಿ ತಲಾ ಒಬ್ಬರು ರೇಬಿಸ್‌ನಿಂದ ಸಾವನ್ನಪ್ಪಿದ್ದಾರೆ.
ಈ ಜಿಲ್ಲೆಗಳಲ್ಲಿ ನಾಯಿ ಕಡಿತ ಕಡಿಮೆ
ಯಾದಗಿರಿ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾತ್ರ ನಾಯಿ ಕಡಿತದ ಕಡಿಮೆ ಪ್ರಕರಣಗಳು ವರದಿಯಾಗಿದ್ದು, ತಲಾ 1,500 ಪ್ರಕರಣಗಳು ದಾಖಲಾಗಿವೆ.
‘ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ, 2020’ ರ ಅಡಿಯಲ್ಲಿ ಮಾನವ ರೇಬೀಸ್ ಅನ್ನು ಅಧಿಸೂಚಿತ ರೋಗವೆಂದು ಘೋಷಿಸಲಾಗಿದೆ ಎಂದು ಇಂಟಿಗ್ರೇಟೆಡ್ ಡಿಸೀಸ್ ಸರ್ವೈಲೆನ್ಸ್ ಪ್ರೋಗ್ರಾಂನ ಡಾ. ಎಸ್. ಶ್ರೀನಿವಾಸ್ ಹೇಳಿ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಇದರ ಪ್ರಕಾರ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳು ಶಂಕಿತ ಅಥವಾ ಸಂಭವನೀಯ ಮತ್ತು ದೃಢಪಡಿಸಿದ ಮಾನವ ರೇಬೀಸ್ ಪ್ರಕರಣಗಳನ್ನು ಇಲಾಖೆಗೆ ವರದಿ ಮಾಡುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿ ಬಾಡೂಟ ಹಾಕುವುದಕ್ಕೂ ಮೊದಲೇ ಬೀದಿನಾಯಿಗಳ ಅಟ್ಟಹಾಸ; ಡೆಡ್ಲಿ ದಾಳಿಗೆ ವ್ಯಕ್ತಿ ಬಲಿ
ತಾಲ್ಲೂಕು ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ರೇಬೀಸ್ ನಿರೋಧಕ ಲಸಿಕೆ ಬಾಟಲುಗಳ ಲಭ್ಯತೆಯನ್ನು ಇಲಾಖೆ ಖಚಿತಪಡಿಸಿದೆ ಮತ್ತು ರಾಜ್ಯದಲ್ಲಿ ಎಲ್ಲಿಯೂ ಲಸಿಕೆಗಳ ಕೊರತೆಯಿಲ್ಲ ಎಂದು ಶ್ರೀನಿವಾಸ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: 8 ವಾರದೊಳಗೆ ದೆಹಲಿಯ ಬೀದಿ ನಾಯಿಗಳನ್ನು ಹಿಡಿಯಲು ಸುಪ್ರೀಂ ಕೋರ್ಟ್ ಆದೇಶ; ಏನಿದಕ್ಕೆ ಕಾರಣ?
ಬೀದಿ ನಾಯಿಗಳು ಮಾತ್ರವಲ್ಲ, ಸಾಕು ನಾಯಿಗಳು ಕೂಡ ಜನರ ಮೇಲೆ ದಾಳಿ ಮಾಡಿರುವ ಪ್ರಕರಣಗಳಿವೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ. ಬೀದಿ ಬದಿಯ ಆಹಾರ ಮಾರಾಟಗಾರರು ಮತ್ತು ನಿವಾಸಿಗಳು ರಸ್ತೆಗಳು ಮತ್ತು ಚರಂಡಿಗಳಲ್ಲಿ ಎಂಜಲು ಎಸೆಯುವುದರಿಂದ, ವಿಶೇಷವಾಗಿ ಮಾರುಕಟ್ಟೆ ಪ್ರದೇಶಗಳಲ್ಲಿ ಬೀದಿ ನಾಯಿಗಳು ಆಕರ್ಷಿತವಾಗುತ್ತಿವೆ. ಇದು ನಾಯಿ ಕಡಿತದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.








