AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

8 ವಾರದೊಳಗೆ ದೆಹಲಿಯ ಬೀದಿ ನಾಯಿಗಳನ್ನು ಹಿಡಿಯಲು ಸುಪ್ರೀಂ ಕೋರ್ಟ್ ಆದೇಶ; ಏನಿದಕ್ಕೆ ಕಾರಣ?

ಪ್ರಾಣಿ ಮತ್ತು ನಾಯಿ ಪ್ರಿಯರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ರೇಬೀಸ್‌ಗೆ ಬಲಿಯಾದ ಮಕ್ಕಳ ಪ್ರಾಣವನ್ನು ಮತ್ತೆ ಕರೆತರಲು ಸಾಧ್ಯವಾಗುತ್ತದೆಯೇ? ಎಂದು ಪ್ರಶ್ನಿಸಿದೆ. ಯಾವುದಾದರೂ ವ್ಯಕ್ತಿ ಅಥವಾ ಸಂಸ್ಥೆ ಬೀದಿ ನಾಯಿಗಳನ್ನು ತೆಗೆದುಹಾಕಲು ಅಡ್ಡಿಪಡಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಸಿದೆ.

8 ವಾರದೊಳಗೆ ದೆಹಲಿಯ ಬೀದಿ ನಾಯಿಗಳನ್ನು ಹಿಡಿಯಲು ಸುಪ್ರೀಂ ಕೋರ್ಟ್ ಆದೇಶ; ಏನಿದಕ್ಕೆ ಕಾರಣ?
Stray Dogs
ಸುಷ್ಮಾ ಚಕ್ರೆ
|

Updated on:Aug 11, 2025 | 8:46 PM

Share

ನವದೆಹಲಿ, ಆಗಸ್ಟ್ 11: ಸುಪ್ರೀಂ ಕೋರ್ಟ್ (Supreme Court) ಇಂದು ಒಂದು ಮಹತ್ವದ ತೀರ್ಪನ್ನು ನೀಡಿದೆ. ಸುಪ್ರೀಂ ಕೋರ್ಟ್ ಇಂದು ದೆಹಲಿ-ಎನ್‌ಸಿಆರ್ ಪ್ರದೇಶದ ಎಲ್ಲಾ ನಾಗರಿಕ ಸಂಸ್ಥೆಗಳು 8 ವಾರಗಳೊಳಗೆ ಪ್ರತಿಯೊಂದು ಬೀದಿ ನಾಯಿಯನ್ನು ಒಟ್ಟುಗೂಡಿಸಿ, ಗೊತ್ತುಪಡಿಸಿದ ನಾಯಿಗಳ ಆಶ್ರಯತಾಣಗಳಿಗೆ ಸ್ಥಳಾಂತರಿಸಬೇಕೆಂದು ನಿರ್ದೇಶಿಸಿದೆ. ದೆಹಲಿಯಲ್ಲಿ ನಾಯಿ ಕಡಿತದಿಂದ ರೇಬೀಸ್‌ಗೆ ಬಲಿಯಾದ 6 ವರ್ಷದ ಬಾಲಕಿ ಚಾವಿ ಶರ್ಮಾ ಸಾವನ್ನಪ್ಪಿದ ದುರಂತ ಘಟನೆಯ ಬಳಿಕ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣದ ವಿಚಾರಣೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಇಬ್ಬರು ನ್ಯಾಯಾಧೀಶರ ಪೀಠವು ಬೀದಿ ನಾಯಿ ದಾಳಿಯ ಹೆಚ್ಚುತ್ತಿರುವ ಬೆದರಿಕೆಯನ್ನು “ಕಠಿಣ ಪರಿಸ್ಥಿತಿ” ಎಂದು ಟೀಕಿಸಿತು. ಈ ಕ್ರಮವು ಸಾರ್ವಜನಿಕ ಹಿತಾಸಕ್ತಿಯಿಂದ ತೆಗೆದುಕೊಂಡಿದ್ದಾಗಿದೆ ಎಂದು ಒತ್ತಿ ಹೇಳಿದೆ. “ನಾವು ಇದನ್ನು ನಮಗಾಗಿ ಮಾಡುತ್ತಿಲ್ಲ. ಯಾರದೂ ಯಾವುದೇ ಭಾವನೆಗಳು ಮಧ್ಯಪ್ರವೇಶಿಸಬಾರದು” ಎಂದು ನ್ಯಾಯಪೀಠವು ಟೀಕಿಸಿತು. ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಯಾವುದೇ ಆಕ್ಷೇಪಣೆಗಳನ್ನು ತೆಗೆದುಕೊಳ್ಳಬಾರದು. ಈ ಪ್ರಕ್ರಿಯೆಗೆ ಅಡ್ಡಿಪಡಿಸುವವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಇದನ್ನೂ ಓದಿ: ನಾಯಿ ಕಡಿತ: ರೇಬಿಸ್​ ರೋಗದಿಂದ ಬೆಂಗಳೂರಿನಲ್ಲಿ 17 ಜನರ ಸಾವು

ದೆಹಲಿ, ನೊಯ್ಡಾ, ಗಾಜಿಯಾಬಾದ್, ಗುರುಗ್ರಾಮ ಮತ್ತು ಫರಿದಾಬಾದ್‌ನಲ್ಲಿರುವ ನಾಗರಿಕ ಸಂಸ್ಥೆಗಳು ಕ್ರಿಮಿನಾಶಕ, ರೋಗನಿರೋಧಕ ಮತ್ತು ದೀರ್ಘಕಾಲೀನ ಆರೈಕೆಗಾಗಿ ವೃತ್ತಿಪರರನ್ನು ಹೊಂದಿರುವ ನಾಯಿ ಆಶ್ರಯಗಳ ನಿರ್ಮಾಣವನ್ನು ತಕ್ಷಣ ಪ್ರಾರಂಭಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತು. “ಒಮ್ಮೆ ಹಿಡಿದ ಒಂದೇ ಒಂದು ನಾಯಿಯನ್ನು ರಸ್ತೆಗೆ ಬಿಡಬಾರದು” ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಾಗಿ ಹೇಳಿದೆ.

ಯಾವುದೇ ಬೀದಿ ಪ್ರಾಣಿಗಳನ್ನು ತೆಗೆದುಹಾಕದಂತೆ ಅಥವಾ ತಪ್ಪಿಸಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು ಎಲ್ಲಾ ಆಶ್ರಯಗಳನ್ನು ಸಿಸಿಟಿವಿ ಮೂಲಕ ಮೇಲ್ವಿಚಾರಣೆ ಮಾಡಬೇಕು ಎಂದು ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್‌ನ ಈ ಕ್ರಮವು ಸಂವಿಧಾನದ 32, 226 ಮತ್ತು 142ನೇ ವಿಧಿಗಳಿಂದ ಬಂದಿದೆ. ಇದು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ. “ದೆಹಲಿಯ ಬೀದಿಗಳಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಮಕ್ಕಳು ಬೆಲೆ ತೆರುತ್ತಿದ್ದಾರೆ” ಎಂಬ ಜುಲೈ 28ರ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಹೇಳಿದೆ. ಈ ವರದಿಯಲ್ಲಿ ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಿಗೆ ನೂರಾರು ಬೀದಿನಾಯಿಗಳು ಕಚ್ಚಿದ ಘಟನೆಗಳನ್ನು ಉಲ್ಲೇಖಿಸಿತ್ತು.

ಇದನ್ನೂ ಓದಿ: ಶ್ವಾನ ಪ್ರಿಯರೇ ಹುಷಾರ್! ಸಾಕು ನಾಯಿ ನೆಕ್ಕಿದ್ದಕ್ಕೆ ಮಹಿಳೆ ಸಾವು

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ವರ್ಷದ ಜನವರಿ ಮತ್ತು ಜೂನ್ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು 49 ರೇಬೀಸ್ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ ರಾಜಧಾನಿಯಲ್ಲಿ 35,198 ಪ್ರಾಣಿ ಕಡಿತದ ಘಟನೆಗಳು ವರದಿಯಾಗಿವೆ. ಹೀಗಾಗಿ, 8 ದಿನಗಳಲ್ಲಿ ಕ್ರಿಯಾ ಯೋಜನೆಯನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಇದೇ ವೇಳೆ ಪ್ರಾಣಿಪ್ರಿಯರನ್ನೂ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ಬಗ್ಗೆ ಮಾತನಾಡುವವರು ಪ್ರಾಣ ಕಳೆದುಕೊಂಡ ಮಕ್ಕಳ ಜೀವವನ್ನು ವಾಪಾಸ್ ಕೊಡುತ್ತಾರಾ? ಎಂದು ಪ್ರಶ್ನಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 8:42 pm, Mon, 11 August 25