ಕಾರವಾರ: ರಾಷ್ಟ್ರೀಯ ಪಕ್ಷ ಸೇರಲು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ನಿರ್ಧಾರ
ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳು ಬಾಕಿ ಇರುವಂತೆ ಚುನಾವಣಾ ಕಣ ರಂಗೇರುತ್ತಿದೆ. ಅದರ ಬೆನ್ನಲ್ಲೇ ಇದೀಗ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಜೆಡಿಎಸ್ ಪಕ್ಷ ತೊರೆದು ರಾಷ್ಟ್ರೀಯ ಪಕ್ಷ ಸೇರಲು ಮುಂದಾಗಿದ್ದಾರೆ.
ಉತ್ತರ ಕನ್ನಡ: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಂತೆಯೇ ಪಕ್ಷ ತೊರೆದು ಪಕ್ಷ ಸೇರುವುದು ಜೋರಾಗಿದೆ. ಅದರಂತೆ ಇದೀಗ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಜೆಡಿಎಸ್ ಪಕ್ಷ ತೊರೆದು ರಾಷ್ಟ್ರೀಯ ಪಕ್ಷ ಸೇರಲು ಮುಂದಾಗಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಕಾರವಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಇದೀಗ ಜೆಡಿಎಸ್ ಪಕ್ಷ ತೊರೆದು ರಾಷ್ಟ್ರೀಯ ಪಕ್ಷ ಸೇರಲು ಮುಂದಾಗಿದ್ದು, ನಾನು ಸೇರ್ಪಡೆಗೊಳ್ಳುವ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಕಾರವಾರದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.
ನಾನು ಕಠಿಣ ಪರಿಸ್ಥಿತಿಯಲ್ಲಿ ಇದ್ದೇನೆ, ಚುನಾವಣೆಯಲ್ಲಿ ನಿಂತು ನಾನು ಸೋಲನ್ನ ಕಂಡರೆ ನನ್ನ ಬೆಂಬಲಿಗರು ತೊಂದರೆಯಲ್ಲಿ ಸಿಲುಕುತ್ತಾರೆ. ಮುಂದೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ ಆ ಪಕ್ಷಕ್ಕೆ ಸೇರುತ್ತೇನೆ, ಈ ಹಿಂದೆ ಸಹ ಜೆಡಿಎಸ್ಗೆ ಹೋದಾಗ ಸಮ್ಮಿಶ್ರ ಸರ್ಕಾರ ಬರುತ್ತದೆ ಎಂದು ಹೇಳಿಯೇ ಪಕ್ಷಕ್ಕೆ ಸೇರಿಕೊಂಡಿದ್ದೆ. ಎಂಎಲ್ಎ ಆಗುವುದು ನನಗೆ ಮುಖ್ಯವಲ್ಲ, ನನಗೆ ಸದ್ಯ ರಾಜಕೀಯಕ್ಕೆ ವೇದಿಕೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಸೇರುತ್ತೇನೆ ಎಂದಿದ್ದಾರೆ. ಇನ್ನು ನನ್ನ ತಾಯಿಯ ಆರೋಗ್ಯ ಸರಿಯಿಲ್ಲ. ಹೀಗಾಗಿ ನಾನು ರಾಜಕೀಯದಲ್ಲಿ ಸಕ್ರಿಯನಾಗಲು ಆಗುತ್ತಿಲ್ಲ. ಇದರ ಜೊತೆಗೆ ಹಿಂದೆ ನಡೆದ ಚುನಾವಣೆಯಲ್ಲಿ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ ಎಂದಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ