AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀನೂಟ ಸವಿದು ದೇವರ ದರ್ಶನ ಮಾಡಿದ ಸಿ.ಟಿ ರವಿ ಫೋಟೋ ವೈರಲ್, ಅದು ಗೋಬಿಮಂಚೂರಿ ಎಂದ ಸುನೀಲ್ ನಾಯ್ಕ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದ ವೇಳೆ ಭಟ್ಕಳದ ಶಿರಾಲಿಯಲ್ಲಿ ಶಾಸಕ ಸುನೀಲ್ ನಾಯ್ಕ ಮನೆಯಲ್ಲಿ ಮೀನೂಟ ಸವಿದು ದೇವರ ದರ್ಶನ ಮಾಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ.

ಮೀನೂಟ ಸವಿದು ದೇವರ ದರ್ಶನ ಮಾಡಿದ ಸಿ.ಟಿ ರವಿ ಫೋಟೋ ವೈರಲ್, ಅದು ಗೋಬಿಮಂಚೂರಿ ಎಂದ ಸುನೀಲ್ ನಾಯ್ಕ
ರಮೇಶ್ ಬಿ. ಜವಳಗೇರಾ
|

Updated on:Feb 22, 2023 | 3:15 PM

Share

ಬೆಂಗಳೂರು: ಹಿಂದೆ ಸಿದ್ದರಾಮಯ್ಯ (Siddaramaiah) ಮೀನೂಟ ತಿಂದು ಧರ್ಮಸ್ಥಳಕ್ಕೆ ಹೋಗಿದ್ದನ್ನ ಬಿಜೆಪಿಯವರು ದೊಡ್ಡ ವಿವಾದ ಮಾಡಿದ್ದರು. ಇದೀಗ ಇಂಥದ್ದೇ ವಿವಾದದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಸಿಲುಕಿದ್ದಾರೆ. ಮಾಂಸದೂಟ ಸೇವನೆ ಮಾಡಿ ಕಾರವಾರದಲ್ಲಿ ದೇವಸ್ಥಾನಕ್ಕೆ ಹೋಗಿದ್ದಾರೆ. ಹೌದು.. ಫೆಬ್ರವರಿ 19 ರಂದು ಭಾನುವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಪ್ರವಾಸದ ವೇಳೆ ಭಟ್ಕಳದ ಶಿರಾಲಿಯಲ್ಲಿ ಶಾಸಕ ಸುನೀಲ್ ನಾಯ್ಕ ಮನೆಯಲ್ಲಿ ಮೀನೂಟ ಸವಿದು ದೇವರ ದರ್ಶನ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿವೆ. ಇದೀಗ ಇದು ವಿವಾದಕ್ಕೆ ಕಾರಣವಾಗಿದೆ.

ಫೆ.19ರ ಭಾನುವಾರದಂದು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಸಿ.ಟಿ ರವಿ (CT Ravi) ಕಾರವಾರದ (Karwar) ಶಿವಾಜಿ ಜಯಂತಿಯಲ್ಲಿ ಭಾಗವಹಿಸಿ ನಂತರ ಭಟ್ಕಳಕ್ಕೆ ಆಗಮಿಸಿದ್ದರು. ಈ ವೇಳೆ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಮೀನೂಟ ಸೇವಿಸಿದ್ದ ಸಿ.ಟಿ ರವಿ ಭಟ್ಕಳ ನಗರದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭಟ್ಕಳ ಶಾಸಕ ಸುನಿಲ್ ನಾಯ್ಕ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ಭೇಟಿ ನೀಡಿದ್ದಾರೆ.

ಚುನಾವಣೆ ಹೊತ್ತಲ್ಲೇ ವಿಪಕ್ಷಗಳ ಆಹಾರವಾದ ಸಿಟಿ ರವಿ

ಸಿಟಿ ರವಿ ಮೀನೂಟ ಸೇವಿಸುತ್ತಿದ್ದ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಸಿಟಿ ರವಿ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ. ಹಿಂದೆ ಸಿದ್ದರಾಮಯ್ಯ ಮೀನೂಟ ತಿಂದು ಧರ್ಮಸ್ಥಳಕ್ಕೆ ಹೋಗಿದ್ದನ್ನ ಬಿಜೆಪಿ ದೊಡ್ಡ ವಿವಾದ ಮಾಡಿದ್ದರು. ಇದೀಗ ಸಿಟಿ ರವಿ ಮಾಂಸ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ಗೆ ಇದೊಂದು ಅಸ್ತ್ರ ಸಿಕ್ಕಂತಾಗಿದೆ.

ಸಿದ್ದರಾಮಯ್ಯ ಹೇಳಿದ್ದೇನು?

ಮಾಂಸ ಸೇವಿಸಿ ಸಿ.ಟಿ.ರವಿ ದೇವಸ್ಥಾನಕ್ಕೆ ಹೋಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆ ಹುನಗುಂದದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದು,ಈ ಬಗ್ಗೆ ನಾನು ಚರ್ಚೆ ಮಾಡಲು ಹೋಗಲ್ಲ. ಭೂತದ ಬಾಯಲ್ಲಿ ಭಗವದ್ಗೀತೆ ಎಂದು ಜನರಿಗೆ ಗೊತ್ತಾಗಿದೆ. ಬಿಜೆಪಿಯವರಿಗೆ ಯಾವಾಗಲೂ ಸ್ಪಷ್ಟವಾದ ವಿಚಾರಧಾರೆ ಇಲ್ಲ. ಇದು ಚರ್ಚೆ ಮಾಡಬೇಕಾದ ವಿಷಯಗಳೇ ಅಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ಅಭಿವೃದ್ಧಿ ಮಾಡಿದ್ದಾರೆ ಹೇಳಲಿ ಅದು ಬಿಟ್ಟು, ನಾಮ ಹಾಕೋದು, ದೇವಸ್ಥಾನಕ್ಕೆ ಹೋಗುವುದು. ಟಿಪ್ಪು, ಅಬ್ಬಕ್ಕ, ಗಾಂಧೀಜಿ ಬಗ್ಗೆ ಮಾತನಾಡುವುದು ವಿಷಯ ಅಲ್ಲ. ರಾಜ್ಯದ ಜನರಿಗೆ ಸಂಬಂಧಪಟ್ಟ ವಿಷಯಗಳನ್ನು ಮಾತನಾಡಬೇಕು. ಬಿಜೆಪಿಯವರು ಸುಳ್ಳು ಹೇಳ್ತಾರೆ ಅಂತಾ ರಾಜ್ಯದ ಜನರಿಗೆ ಗೊತ್ತಿದೆ ಎಂದು ಹೇಳಿದರು.

ಸುನಿಲ್ ನಾಯ್ಕ್​ ಸ್ಪಷ್ಟನೆ

ಸಿಟಿ ರವಿ ಮಾಂಸದೂಟ ಮಾಡಿ ದೇವರ ದರ್ಶನ ಮಾಡಿದ್ದು ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಔತಣಕೂಟ ಏರ್ಪಡಿಸಿದ್ದ ಸ್ವತಃ ಬಿಜೆಪಿ ಶಾಸಕ ಸುನೀಲ್ ನಾಯ್ಕ ಪ್ರತಿಕ್ರಿಯಿಸಿದ್ದು, ಸಿ.ಟಿ.ರವಿ ಮಾಂಸಾಹಾರ ಸೇವಿಸಿಲ್ಲ. ಅವತ್ತು ಮಾಂಸದ ಅಡುಗೆ ಮಾಡಿರಲಿಲ್ಲ. ಚಪಾತಿ, ಗೋಬಿಮಂಚೂರಿ, ಅನ್ನ, ರಸಂ ಮಾತ್ರ ಸೇವಿಸಿದ್ದಾರೆ. ವಿವಾದ ಸೃಷ್ಟಿ ಮಾಡಲು ಫೋಟೋ ವೈರಲ್ ಮಾಡಲಾಗುತ್ತಿದೆ. ಸಿ.ಟಿ.ರವಿ ಜೊತೆ ನಾವೆಲ್ಲ ಒಟ್ಟಿಗೆ ಕುಳಿತು ಊಟ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

Published On - 3:07 pm, Wed, 22 February 23