Karnataka Politics: ಕಾಂಗ್ರೆಸ್ ನಾಯಕರಿಗೆ ನಿದ್ದೆಯಲ್ಲೂ ಮೋದಿಯೇ ಕಾಣುತ್ತಾರೆ; ಎಚ್ಡಿ ಕುಮಾರಸ್ವಾಮಿ ವ್ಯಂಗ್ಯ
ಆಪರೇಷನ್ ಕಮಲದ ನಂತರದ ಮೊದಲ ಚುನಾವಣೆಯಲ್ಲಿ ನಿಮ್ಮ ಪ್ರತಿಪಕ್ಷ ನಾಯಕ ಎಷ್ಟಕ್ಕೆ ಸುಪಾರಿ ಪಡೆದಿದ್ದರು ಎಂಬ ಬಗ್ಗೆ ಸುರ್ಜೆವಾಲ ಬಹಿರಂಗ ಚರ್ಚೆಗೆ ಬರಲಿ. ಕಾಂಗ್ರೆಸ್ ಬಿಜೆಪಿಯ ಬಿ ಟೀಮೋ ಜೆಡಿಎಸ್ ಬಿ ಟೀಮೋ ಎಂಬ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಶಿವಮೊಗ್ಗ: ಕಾಂಗ್ರೆಸ್ ನಾಯಕರಿಗೆ ನಿದ್ದೆಯಲ್ಲೂ ಮೋದಿಯೇ ಕಾಣುತ್ತಾರೆ ಎಂದು ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ (HD Kumaraswamy) ವ್ಯಂಗ್ಯವಾಡಿದ್ದಾರೆ. ಶಿವಮೊಗ್ಗದಲ್ಲಿ (Shivamogga) ಮಾತನಾಡಿದ ಅವರು, ಜೆಡಿಎಸ್ ಮುಖವಾಡ ಕಳಚಿದರೆ ಮೋದಿ ಮುಖ ಕಾಣುತ್ತದೆ ಎಂಬ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಹೇಳಿಕೆಗೆ ತಿರುಗೇಟು ನೀಡಿದರು. ನನ್ನ ವಿರುದ್ಧ ಆ ರೀತಿಯ ಮಾತು ಹೇಳಲು ಸುರ್ಜೇವಾಲ ಅವರಿಗೆ ನಾಚಿಕೆಯಾಗಬೇಕು. ಅವರಿಗೆ ಮೋದಿ ಮುಖ ಬಿಟ್ಟರೆ ಮತ್ತೇನು ಕಾಣಲು ಸಾಧ್ಯ. ಕಾಂಗ್ರೆಸ್ ನಾಯಕರಿಗೆ ನಿದ್ದೆಯಲ್ಲೂ ಮೋದಿಯೇ ಕಾಣುತ್ತಾರೆ ಎಂದು ಎಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ಆಪರೇಷನ್ ಕಮಲದ ನಂತರದ ಮೊದಲ ಚುನಾವಣೆಯಲ್ಲಿ ನಿಮ್ಮ ಪ್ರತಿಪಕ್ಷ ನಾಯಕ ಎಷ್ಟಕ್ಕೆ ಸುಪಾರಿ ಪಡೆದಿದ್ದರು ಎಂಬ ಬಗ್ಗೆ ಸುರ್ಜೆವಾಲ ಬಹಿರಂಗ ಚರ್ಚೆಗೆ ಬರಲಿ. ಕಾಂಗ್ರೆಸ್ ಬಿಜೆಪಿಯ ಬಿ ಟೀಮೋ ಜೆಡಿಎಸ್ ಬಿ ಟೀಮೋ ಎಂಬ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಅಶ್ವತ್ಥನಾರಾಯಣ ವಿರುದ್ಧ ಕಿಡಿ
ಸಚಿವ ಅಶ್ವತ್ಥ ನಾರಾಯಣ ಅವರು ಹಾರೋಹಳ್ಳಿ ತಾಲೂಕು ಉದ್ಘಾಟನೆ ಸಮಾರಂಭದಲ್ಲಿ ನಡೆದುಕೊಂಡ ರೀತಿ ಸರಿಯಿಲ್ಲ. ಹೋಮ ನಡೆಯುತ್ತಿದ್ದ ಜಾಗಕ್ಕೂ ಹೋಗದೆ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಸರಿಯಲ್ಲ ಎಂದು ಎಚ್ಡಿಕೆ ಹೇಳಿದರು. ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕು ಉದ್ಘಾಟನೆ ಸಮಾರಂಭದಲ್ಲಿ ಅಶ್ವತ್ಥನಾರಾಯಣ ಮತ್ತು ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಮಧ್ಯೆ ಮಾತಿನ ಸಮರ ನಡೆದಿತ್ತು.
ರಾಮನಗರ ಜಿಲ್ಲೆಯ ಹಾರೋಹಳ್ಳಿಯ ‘ಕರ್ನಾಟಕ ಪಬ್ಲಿಕ್ ಶಾಲೆ’ ಆವರಣದಲ್ಲಿ ಮಂಗಳವಾರ ನಡೆದಿದ್ದ ತಾಲೂಕು ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡಿದ್ದ ಅಶ್ವಥ್ಥನಾರಾಯಣ, ತಾಲೂಕು ರಚನೆಗೆ ಬಿಜೆಪಿ ಸರ್ಕಾರ ಸಾಕಷ್ಟು ಶ್ರಮಿಮಿಸಿದೆ ಎಂದಿದ್ದರು. ಆಗ ಮಧ್ಯ ಪ್ರವೇಶಿಸಿದ್ದ ಅನಿತಾ ಕುಮಾರಸ್ವಾಮಿ ತಾಲೂಕು ರಚನೆಗೆ ನಾನು ಶ್ರಮಿಸಿದ್ದು ಎಂದು ಹೇಳಿದ್ದರ ಜತೆಗೆ, ಕೆಲವು ದಾಖಲೆಗಳನ್ನೂ ಪ್ರದರ್ಶಿಸಿದ್ದರು. ಇದು ಬಿಜೆಪಿ-ಜೆಡಿಎಸ್ ನಡುವಣ ವಾಕ್ಸಮರಕ್ಕೆ ಕಾರಣವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ