ಕುಮಟಾ: ಕುಡಿತದ ಚಟಕ್ಕೆ ಬಿದ್ದು ತಂದೆಯೊಂದಿಗೆ ಸೇರಿ ಹೆತ್ತತಾಯಿಯನ್ನ ಕೊಂದ ಪಾಪಿ ಮಗ
ಜಿಲ್ಲೆಯ ಕುಮಟಾ ತಾಲೂಕಿನ ಕೂಜಳ್ಳಿ ಗ್ರಾಮದ ವಿಶ್ವೇಶ್ವರ ಭಟ್ ಹಾಗೂ ಮಗ ಮಧುಕೇಶ್ವರ ಭಟ್ ಇಬ್ಬರು ಕುಡಿತಕ್ಕೆ ದಾಸರಾಗಿದ್ದು, ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ಬಿಡಿಸಲು ಬಂದ ತಾಯಿ ಗೀತಾ ಭಟ್ ಅವರನ್ನ ಇಬ್ಬರು ಸೇರಿ ಕೊಂದಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ: ಜಿಲ್ಲೆಯ ಕುಮಟಾ ತಾಲೂಕಿನ ಮೇಲಿನ ಕೂಜಳ್ಳಿ ಗ್ರಾಮದಲ್ಲಿ ಡಿಸೆಂಬರ್ 6 ರಂದು ರಾತ್ರಿ ನಿವೃತ್ತ ಶಿಕ್ಷಣಾಧಿಕಾರಿ (BEO) ವಿಶ್ವೇಶ್ವರ ಭಟ್ (69) ಮತ್ತು ಆತನ ಮಗ ಮಧುಕೇಶ್ವರ ಭಟ್ (33) ಇಬ್ಬರು ರಾತ್ರಿ ಪುಲ್ ಟೈಟ್ ಆಗಿದ್ದಾರೆ. ಇಬ್ಬರ ನಡುವೆ ಗಲಾಟೆ ಕೂಡ ಪ್ರಾರಂಭವಾಗಿದ್ದು, ಗಲಾಟೆ ಬಿಡಿಸಲು ಬಂದ ತಾಯಿ ಗೀತಾ ಭಟ್ (64) ಅವರನ್ನ ಪಕ್ಕದಲ್ಲೆ ಇದ್ದ ಕಟ್ಟಿಗೆ ಮತ್ತು ಚೇರು ತೆಗೆದುಕೊಂಡು ಜೋರಾಗಿ ಅವಳ ತೆಲೆಗೆ ಹೊಡೆದು ಕೊಂದಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕನಾಗಿದ್ದ ವಿಶ್ವೇಶ್ವರ ಭಟ್ ಬಡ್ತಿ ಮೇರೆಗೆ ಶಿಕ್ಷಣಾಧಿಕಾರಿಯಾಗಿಯು (BEO) ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಕೆಲಸ ನಿರ್ವಹಿಸಿದ್ದನು. ನಂತರದಲ್ಲಿ ನಿವೃತ್ತಿಯಾಗಿ ಮನೆಯಲ್ಲಿ ವಾಸ ಮಾಡುತ್ತಿದ್ದ. ಆತನ ಮಗ ದುಶ್ಚಟಕ್ಕೆ ದಾಸನಾಗಿ ದ್ವೀತಿಯ ಪಿಯುಸಿಗೆ ಶಿಕ್ಷಣವನ್ನ ಅರ್ಧಕ್ಕೆ ನಿಲ್ಲಿಸಿ ಊರಲ್ಲಿ ಕೆಲಸವಿಲ್ಲದೆ ಅಬ್ಬೇಪಾರಿಯಾಗಿ ಅಲೆಯುತ್ತಿದ್ದ. ಪ್ರತಿ ನಿತ್ಯ ಇಬ್ಬರು ಮನೆಯಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದರು. ಪಾಪ ತಾಯಿ ಇಬ್ಬರಿಗೂ ಬುದ್ದಿ ಮಾತು ಹೇಳಿ ಸಮಾಧಾನ ಪಡೆಸುತ್ತಿದ್ದಳು. ಊರಿನವರು ಸಹ ನಿತ್ಯವೂ ಇವರದು ಇದೇ ಗೋಳು ಎಂದು ಸುಮ್ಮನಿರುತ್ತಿದ್ದರು.
ಇನ್ನು ಅಪ್ಪ, ಮಗ ಕಟ್ಟಿಗೆಯಿಂದ ಹೊಡೆದು ಸಾಯಿಸಿ ಆಕೆಯ ಕುತ್ತಿಗೆಗೆ ವಸ್ತ್ರ ಕಟ್ಟಿ ಅಂಗಳದಿಂದ ಹೊತ್ತು ಕೊಂಡು ಹೋಗಿ ನಿತ್ಯ ಮಲಗುವ ಜಾಗದಲ್ಲಿ ಹಾಕಿ ಕ್ರೂರತನವನ್ನು ಮೆರೆದಿದ್ದಾರೆ. ಇನ್ನು ಆಕೆಯ ತೆಲೆ ಭಾಗಕ್ಕೆ ಜೋರಾಗಿ ಪೆಟ್ಟು ಬಿದ್ದಿದ್ದರಿಂದ ತೆಲೆಯಿಂದ ರಕ್ತ ಹರಿದು ಮನೆತುಂಬ ಸೋರಿದೆ. ನೋವು ತಾಳದೆ ಆಕೆ ಮನೆ ಅಂಗಳಕ್ಕೆ ಬಂದಿದ್ದಾಳೆ. ಆಗಲಾದರು ಆಕೆಯ ಜೀವ ಉಳಿಸುವ ಪ್ರಯತ್ನ ಮಾಡದೆ ಕ್ರೂರತನ ಮೆರೆದಿದ್ದಾರೆ. ಬೆಳಗಿನ ಜಾವ ಪಕ್ಕದ ಮನೆಯವರು ಮನೆಯ ಕಡೆ ಬಂದಾಗ ಮನೆ ಮುಂದೆ ರಕ್ತ ಬಿದಿದ್ದನ್ನು ಅನುಮಾನಿಸಿ ಮನೆಯೊಳಗೆ ಇದ್ದವರನ್ನ ಕೂಗಿದ್ದಾರೆ. ಆಗ ಕಿರಾತಕರು ಮನೆಯಿಂದ ಹೊರಗೆ ಬರದೆ ಸುಮ್ಮನೆ ಕೂತಿದ್ದಾರೆ. ಆಗಲೇ ಊರಿನವರಿಗೆ ಸಣ್ಣ ಅನುಮಾನ ಶುರುವಾಗಿದೆ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಆಗ ಅಸಲಿಯತ್ತು ಗೊತ್ತಾಗಿದೆ.
ಮುಂಜಾನೆ ಆಗುತ್ತಿದ್ದಂತೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ನಾಟಕ ಮಾಡಿದರಾಯಿತು ಎನ್ನುವ ಪ್ಲಾನ್ ಮಾಡಿದ್ದಾರೆ. ಆದರೆ ಮನೆ ಅಂಗಳದ ತುಂಬ ಮತ್ತು ಮನೆ ತುಂಬ ಆಕೆ ರಕ್ತ ಚೆಲ್ಲಿದ್ದು, ಇದು ಕೊಲೆ ಎಂದು ಸಾರಿ ಸಾರಿ ಹೇಳುತ್ತಿತ್ತು. ಈ ಕಿರಾತಕರು ಮಾಡಿದ ಈ ಕೃತ್ಯ ಕೂಜಳ್ಳಿ ಗ್ರಾಮದ ಜನರನ್ನ ಬೆಚ್ಚಿ ಬೀಳಿಸಿದೆ.
ವಿಶ್ವೇಶ್ವರ ಭಟ್ ಮತ್ತು ಗೀತಾ ಭಟ್ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು ಹಿರಿಮಗ ಮಧುಕೇಶ್ವರ ಭಟ್ ದುಶ್ಚಟಗಳ ದಾಸ, ಇನ್ನೊಬ್ಬ ಕಿರಿ ಮಗ ಡಿಪ್ಲೊಮಾ ಮುಗಿಸಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ತಂದೆ ಮಗನ ಕುಡಿತದ ಚಟ ಮತ್ತು ಮನೆಯಲ್ಲಿ ನಿತ್ಯ ಜಗಳ ಇದರಿಂದ ಬೇಸತ್ತ ಕಿರಿಯ ಮಗ ಇವರ ಸಹವಾಸ ಬೇಡ ಎಂದು ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗಿದ್ದಾನೆ. ಹೆತ್ತ ತಾಯಿ ಕರಳು ಹೀಗಾಗಿ ತಾಯಿಯನ್ನ ನೋಡಲು ಆಗಾಗ ಊರಿಗೆ ಬರುತ್ತಿದ್ದನಂತೆ. ಆದರೆ ಆತನಿಗೆ ತನ್ನ ಅಪ್ಪನಿಂದಲೇ ಮತ್ತು ಅಣ್ಣನಿಂದಲೇ ತಾಯಿ ಕೊಲೆ ಆಗುತ್ತದೆ ಎಂದು ನಿಜಕ್ಕೂ ಕನಸು ಮನಸಿನಲ್ಲಿ ಊಹಿಸಿರಲಿಲ್ಲ.
ಇನ್ನು ಸ್ಥಳಕ್ಕೆ ಬಂದ ಕುಮಟಾ ಪೊಲೀಸರು ಪರಿಶೀಲನೆ ನಡೆಸಿ ಈ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನ ವಿಚಾರಣೆ ನಡೆಸುವಾಗ ಇವರು ಕೊಲೆ ಮಾಡಿದ್ದಾರೆ ಎನ್ನುವ ಪಾಪ ಪ್ರಜ್ಞೆಯು ಇಲ್ಲದೆ ಆರಾಮಾಗಿ, ಖುಷಿಯಿಂದಲೇ ಪ್ರತಿಕ್ರಿಯೆ ನೀಡಿದ್ದಾರಂತೆ. 33 ವರ್ಷಗಳ ಮಗನಿಗೆ ಪಾಲನೆ ಪೋಷಣೆ ಮಾಡಿದ ತಾಯಿಯನ್ಮ ಹೆಣ ಮಾಡಿ ಮಲಗಿಸಿದ್ದೇನೆ ಎನ್ನುವ ಪಾಪ ಪ್ರಜ್ಞೆಯೂ ಇತನಿಗಿಲ್ಲ. 45 ವರ್ಷಗಳ ಕಾಲ ತನ್ನೊಂದಿಗೆ ಕಾಯ,ವಾಚ,ಮನಸ್ಸಾ ಇಚ್ಛಾ ಸಂಸಾರ ನಡೆಸಿ ತನ್ನ ನೋವು ನಲಿವಿನಲ್ಲಿ ಭಾಗಿಯಾಗಿದ್ದವಳನ್ನ ಕೊಲೆ ಮಾಡಿದ್ದೇನೆ ಎನ್ನುವ ನೋವು ಗಂಡನಿಗೆ ಇಲ್ಲದಾಗಿದೆ.
ಇದನ್ನೂ ಓದಿ:ಅಫ್ಘಾನಿಸ್ತಾನದಲ್ಲಿ ಕೊಲೆ ಪ್ರಕರಣದ ಅಪರಾಧಿಗೆ ಸಾರ್ವಜನಿಕ ಮರಣದಂಡನೆ ವಿಧಿಸಿದ ತಾಲಿಬಾನ್
ಒಟ್ಟಿನಲ್ಲಿ ಸಾರಾಯಿ ಚಟದಿಂದ ಬಾಳ ಸಂಗಾತಿ ಎಂದು ನೋಡದೆ ಪತಿ, ಹೆತ್ತು ಹೊತ್ತು ಸಾಕಿದ ತಾಯಿ ಎಂದು ಕರುಣೆ ತೋರದ ಮಗ ಇಬ್ಬರು ಸೇರಿ ಕೊಂದೆ ಬಿಟ್ಟಿದ್ದಾರೆ. ದುಶ್ಚಟ ಬಿಡಿ ಸಮಾಜದಲ್ಲಿ ಉತ್ತಮವಾಗಿ ಬಾಳಿ ಎಂದು ಹೇಳಿದ ಬುದ್ದಿ ಮಾತು ಈ ತಾಯಿಯ ಸಾವಿಗೆ ಕಾರಣವಾಯಿತು. ಇನ್ನು ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ.
ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ