ಕಾರವಾರ: ಮದುವೆಗೆ ಕರೆಯುವ ನೆಪದಲ್ಲಿ ಚಾಕು ತೋರಿಸಿ ಮನೆ ಕಳ್ಳತನ ಮಾಡಲು ಯತ್ನ ನಡೆದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಿನ್ನೆ(ಮಾರ್ಚ್ 03) ರಾತ್ರಿ ನಡೆದಿದೆ. ವ್ಯಕ್ತಿಯೋರ್ವ ಮದುವೆಗೆ ಆಮಂತ್ರಣ ಕೊಡಲು ಬಂದಿದ್ದಾಗಿ ಹೇಳಿ ಮನೆಗೆ ನುಗ್ಗಿ ಬಳಿಕ ಕುಟುಂಬಸ್ಥರ ಮೇಲೆ ದಾಳಿ ನಡೆಸಿ ಮನೆ ಕಳ್ಳತನಕ್ಕೆ ಯತ್ನಿಸಿದ್ದಾನೆ.
ಶಿರಸಿ ತಾಲೂಕಿನ ಮಂಡೆಮನೆಯ ಜಿ.ಆರ್.ಹೆಗಡೆ ಎಂಬುವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಮದುವೆಗೆ ಕರೆಯಲು ಬಂದಿದ್ದಾಗಿ ಹೇಳಿಕೊಂಡು ಮನೆ ಬಾಗಿಲು ತಟ್ಟಿದ್ದಾನೆ. ಊರಿನವರು ಅಥವಾ ದೂರದ ಸಂಬಂಧಿಕರು ಇರಬಹುದು ಎಂದು ಮನೆಯವರು ಬಾಗಿಲು ತೆರೆದಿದ್ದಾರೆ. ಈ ವೇಳೆ ತಕ್ಷಣ ಚಾಕುವಿನಿಂದ ಮನೆಯ ಯಜಮಾನನ ಮೇಲೆ ಹಲ್ಲೆ ನಡೆಸಿದ್ದು ಜಿ.ಆರ್.ಹೆಗಡೆ ಅವರ ಕೈಗೆ ಗಾಯವಾಗಿದೆ. ಈ ಗಲಾಟೆ ಕೇಳಿ ಜಿ.ಆರ್.ಹೆಗಡೆಯವರ ಮಗ ಮನೆಯಲ್ಲಿದ್ದ ಬಂದೂಕನ್ನು ತೆಗೆದುಕೊಂಡು ಬಂದಿದ್ದಾರೆ. ಆಗ ಮಗ ಬಂದೂಕು ತರುತ್ತಿದ್ದಂತೇ ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ. ಕಳ್ಳ ಮನೆಗೆ ಬಂದು ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮನೆ ಮಾಲೀಕ ಕೂಡಲೇ ಶಿರಸಿ ಗ್ರಾಮೀಣ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಸಿಟಿವಿ ದೃಶ್ಯಾವಳಿ ಹಾಗೂ ಚಾಕುವಿನಿಂದ ಉಂಟಾದ ಗಾಯದ ಚಿತ್ರಗಳು ಹರಿದಾಡುತ್ತಿವೆ. ಸದ್ಯ ಶಿರಸಿ ಗ್ರಾಮೀಣ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಶೀಘ್ರವಾಗಿ ಆರೋಪಿಯನ್ನು ಬಂಧಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ: 60 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ; ಕೃತ್ಯ ಎಸಗಿದ್ದ ಇಬ್ಬರು ಕಾಮುಕರ ಹೆಡೆಮುರಿ ಕಟ್ಟಿದ ಪೊಲೀಸರು
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೆಟ್ ಕ್ಯಾಂಪ್ನಲ್ಲಿ ಹೆಜ್ಜೇನು ದಾಳಿ ನಡೆಸಿ 50ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಶಿಬಿರ ವೇಳೆ ಹೆಜ್ಜೇನು ದಾಳಿ ನಡೆಸಿದೆ. ದಲಿತ ಸಂಘರ್ಷ ಸಮಿತಿ 2 ದಿನಗಳ ಅಧ್ಯಯನ ಶಿಬಿರ ಹಮ್ಮಿಕೊಂಡಿತ್ತು. ಅಧ್ಯಯನ ಶಿಬಿರದಲ್ಲಿ 300ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಈ ವೇಳೆ ನಡೆದ ಹೆಜ್ಜೇನು ದಾಳಿಯಿಂದ 50ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ