ವಿಜಯಪುರ: 60 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ; ಕೃತ್ಯ ಎಸಗಿದ್ದ ಇಬ್ಬರು ಕಾಮುಕರ ಹೆಡೆಮುರಿ ಕಟ್ಟಿದ ಪೊಲೀಸರು
ಮಹಿಳಾ ದೌರ್ಜನ್ಯ, ಅತ್ಯಾಚಾರ ಹಿಂಸೆ ತಡೆಯಲು ಮಹಿಳೆಯರ ರಕ್ಷಣೆಗೆ ಅದೆಷ್ಟೋ ಕಾನೂನು ಬಂದಿವೆ. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಮಹಿಳೆಯರ ರಕ್ಷಣೆಯಾಗುತ್ತಿಲ್ಲ. ಇದಕ್ಕೆ ನಿದರ್ಶನವೆಂಬಂತೆ ಜಿಲ್ಲೆಯಲ್ಲಿ 60 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಇಬ್ಬರು ಕಾಮುಕರನ್ನ ಬಂಧಿಸಲಾಗಿದೆ.
ವಿಜಯಪುರ: ಅಪ್ರಾಪ್ತ ಹೆಣ್ಣುಮಕ್ಕಳಿಂದ ಹಿಡಿದು 60 ವರ್ಷದ ಅಜ್ಜಿಯನ್ನೂ ಬಿಡದ ಕಾಮುಕರು, ಎರಡು ದಿನಗಳ ಹಿಂದೆ ವೃದ್ದೆ ಮೇಲೆ ಅತ್ಯಾಚಾರ ಮಾಡಿದ್ದರು. ಇದೀಗ ಆ ಇಬ್ಬರೂ ಕಾಮುಕರು ಅರೆಸ್ಟ್ ಆಗಿದ್ದಾರೆ. ವಿಜಯಪುರ ಜೋರಾಪುರ ಪೇಠೆ ಬಳಿಯ ದೇವಸ್ಥಾನದ ಕಟ್ಟೆಯ ಬಳಿ 60 ವರ್ಷದ ವೃದ್ದೆಯೊಬ್ಬರು ಕುಳಿತಿದ್ದರು. ಅವರಿವರ ಬಳಿ ಹತ್ತಿಪ್ಪತ್ತು ರೂಪಾಯಿ ಬೇಡಿ ಜೀವನ ಮಾಡುತ್ತಿದ್ದ ವೃದ್ಧೆ ಮಾ.2 ರ ಸಾಯಂಕಾಲ ಎಲ್ಲಿಗೋ ಹೊರಟಿದ್ದಳು. ಇದೇ ವೇಳೆ ವೃದ್ಧೆಯ ಬಳಿ ಇಬ್ಬರು ಕೆಎ 28 ಡಿ 3137 ನಂಬರಿನ ಅಟೋ ಸಮೇತ ಬಂದಿದ್ದಾರೆ. ಆಗ ಅಜ್ಜಿ ನಾನು ಹೋಗುವ ಏರಿಯಾಕ್ಕೆ ಹೋಗುತ್ತೀರಾ ಎಂದು ಕೇಳಿದ ಕೂಡಲೇ ಇಬ್ಬರು ಕಾಮುಕರು ಹೋಗುತ್ತೇವೆ ಎಂದು ಹೇಳಿ ವೃದ್ಧೆಯನ್ನು ಅಟೋದಲ್ಲಿ ಹತ್ತಿಸಿಕೊಂಡಿದ್ದಾರೆ. ಅಟೋವನ್ನು ನಗರದ ಹೊರ ಭಾಗದ ಜಿಲ್ಲೆಯ ಜಮಖಂಡಿ ರಸ್ತೆಯತ್ತ ತೆಗೆದುಕೊಂಡು ಹೋಗಿ ರಸ್ತೆ ಬದಿಗೆ ನಿರ್ಮಾಣ ಹಂತದಲ್ಲಿರುವ ನಿವೇಶನಗಳ ಖಾಲಿ ಜಾಗಕ್ಕೆ ಕರೆದುಕೊಂಡು ಹೋಗಿ ಇಬ್ಬರು ಕಾಮುಕರು ವೃದ್ಧೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ.
ಈ ವೇಳೆ ವೃದ್ಧೆ ನಿತ್ರಾಣಗೊಂಡು ನೆಲಕ್ಕೆ ಬಿದ್ದಲ್ಲಿಯೇ ಬಿದ್ದಿದ್ದಾರೆ. ಕಾಮತೃಷೆ ಮುಗಿದ ಬಳಿಕ ವೃದ್ಧೆಯನ್ನು ಅಲ್ಲಿಯೇ ಬಿಟ್ಟು ಕಾಮುಕರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಇತ್ತ ವೃದ್ಧೆ ನಿಸ್ಸಾಯಕ ಸ್ಥಿತಿಯಲ್ಲಿ ಕಷ್ಟ ಪಟ್ಟು ವಿಜಯಪುರದ ಜಮಖಂಡಿ ರಸ್ತೆಗೆ ಬಂದಿದ್ದಾಳೆ. ಈಕೆಯ ಸ್ಥಿತಿ ಕಂಡು ಸ್ಥಳಿಯರು 112 ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ 112 ಪೊಲೀಸರು ವೃದ್ಧೆಯನ್ನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಬಳಿಕ ತನ್ನ ಮೇಲೆ ಅತ್ಯಾಚಾರ ಆಗಿದ್ದರ ಕುರಿತು ನಗರದ ಮಹಿಳಾ ಪೊಲೀಸ್ ಠಾಣೆಯ ಆಧಿಕಾರಿಗಳ ಬಳಿ ಹೇಳಿಕೊಂಡಿದ್ದು, ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದೀಗ ವೃದ್ಧೆ ಹೇಳಿದ ಮಾಹಿತಿ, ಮೊಬೈಲ್ ಟವರ್ ಡಂಪ್ ಹಾಕಿ ತನಿಖೆ ನಡೆಸಿ ಇಬ್ಬರೂ ಆರೋಪಿತರನ್ನು ಹೆಡೆಮುರಿ ಕಟ್ಟಿದ್ದಾರೆ. ವಿಜಯಪುರ ನಗರದ ಜಿಎಂ ರಸ್ತೆಯ ನಿವಾಸಿಗಳಾದ ಸದ್ದಾಶೇಖ್ ಹಾಗೂ ರವಿ ಎಂಬ ಕಾಮುಕರು ಇದೀಗ ಕಂಬಿ ಎಣಿಸುತ್ತಿದ್ದಾರೆ. ಇಬ್ಬರೂ ಕಾಮುಕರು ಕೂಲಿ ಕೆಲಸ, ಸ್ಕ್ರಾಪ್ ಅಂಗಡಿಗಳಲ್ಲಿ ಕೆಲಸಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ:‘ಇರಾನಿ ಹುಡುಗಿಯನ್ನು ನನ್ನ ಗಂಡ ಅತ್ಯಾಚಾರ ಮಾಡಿದ್ದಾನೆ’; ಪತಿ ವಿರುದ್ಧ ರಾಖಿ ಸಾವಂತ್ ಆರೋಪ
ವಿಷಯ ತಿಳಿದು ಶಾಕ್ ಆಗಿದ್ದ ಪೊಲೀಸರು
ಘಟನೆ ಬೆಳಕಿಗೆ ಬಂದ ಕೂಡಲೇ ಆರೋಪಿತರ ಬಗ್ಗೆ ಯಾವುದೇ ಸುಳಿವು ಸಹ ಸಿಕ್ಕಿರಲಿಲ್ಲ. ಇಬ್ಬರು ಕಾಮುಕರು ಸೇರಿ 60 ವರ್ಷದ ವೃದ್ದೆಯ ಮೇಲೆ ನಡೆದ ಗ್ಯಾಂಗ್ ರೇಪ್, ಒಂದು ರೀತಿಯಲ್ಲಿ ಪೊಲೀಸರಿಗೂ ಸಹ ಶಾಕ್ ಆಗಿತ್ತು. ಅತ್ಯಾಚಾರದಿಂದ ಮೊದಲೇ ಆಘಾತಗೊಂಡಿದ್ದ ವೃದ್ಧೆಯಿಂದ ಮೊದಲು ಯಾವುದೇ ಮಾಹಿತಿ ಪಡೆಯಲು ಪೊಲೀಸರಿಗೆ ಸಮಸ್ಯೆ ಎದುರಾಗಿತ್ತು. ಮೊದಲ ದಿನ ವೃದ್ಧೆಗೆ ಸರಿಯಾದ ಚಿಕಿತ್ಸೆ ಕೊಡಿಸಿದ ಬಳಿಕ ಮಾರನೇ ದಿನ ವೃದ್ದೆಯ ಕೌನ್ಸಲಿಂಗ್ ಮಾಡಿ ದೈರ್ಯ ತುಂಬಿ ಎಲ್ಲಾ ಮಾಹಿತಿ ಕಲೆ ಹಾಕಿದ್ದರು. ವೃದ್ದೆ ನೀಡಿದ ಇಬ್ಬರು ಕಾಮುಕರ ಚಹರೆ, ಕುರಹು ಅಟೋದ ಮಾಹಿತಿ ಪೊಲೀಸರ ತನಿಖೆಗೆ ಸಹಕಾರಿಯಾಗಿದ್ದವು. ಬಳಿಕ ಘಟನೆ ನಡೆದ ವೇಳೆಯಲ್ಲಿದ್ದ ಮೊಬೈಲ್ ಟವರ್ ಡಂಪ್ ಕಾಲ್ಗಳ ಮಾಹಿತಿ ಪಡೆದು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸರ ತನಿಖೆಗೆ ಸಾರ್ವಜನಿಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಿಳಾ ಸಬಲೀಕರಣ ಹಾಗೂ ಮಹಿಳಾ ರಕ್ಷಣೆ ಬಗ್ಗೆ ಸದಾ ಮಾತನಾಡುವ ಸರ್ಕಾರ ಸಾಮಾನ್ಯ ಜನರಿಗೆ ಭದ್ರತೆ ಸುರಕ್ಷತೆ ನೀಡುವಲ್ಲಿ ವಿಫಲವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಎಚ್ಚೆತ್ತುಗೊಳ್ಳಬೇಕಿದೆ, ಮಹಿಳಾ ಸುರಕ್ಷತೆ ಬಗ್ಗೆ ಇನ್ನಷ್ಟು ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಜನರು ಹಾಗೂ ವಿರೋಧ ಪಕ್ಷದವರು ಒತ್ತಾಯ ಮಾಡಿದ್ದಾರೆ. ಜೊತೆಗೆ ಪೊಲೀಸರು ಉತ್ತಮ ತನಿಖೆ ನಡೆಸಿ ಕಾಮುಕರನ್ನು ಅರೆಸ್ಟ್ ಮಾಡಿದ್ದು ಶ್ಲಾಘನೀಯವಾಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಕಠಿಣ ಶಿಕ್ಷೆಯಿಂದ ಇಂಥ ಘಟನೆಗಳಿಗೆ ತಡೆ ಹಾಕಲು ಸಾದ್ಯವೆಂದು ಹೇಳಿದ್ದಾರೆ.
ಇದನ್ನೂ ಓದಿ:ಕೋಲಾರದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ನಾಲ್ವರಿಗೆ ಜೀವಾವಧಿ ಶಿಕ್ಷೆ
ಒಟ್ಟಾರೆ ಜಿಲ್ಲೆಯಲ್ಲಿ ಮಕ್ಕಳಿಂದ ಹಿಡಿದು ವಸಯಸ್ಸಾದ ಹಿರಿಯ ಮಹಿಳೆಯರಿಗೂ ಸುರಕ್ಷತೆ ಬೇಕಾಗಿದೆ ಎನ್ನುವಂತಾಗಿದೆ. 60 ವರ್ಷದ ವೃದ್ಧೆಯ ಮೇಲೆ ನಡೆದ ಕಾಮುಕರ ಅಟ್ಟಹಾಸ ಇದಕ್ಕೆ ಉದಾಹರಣೆಯಾಗಿದೆ. ಮೇಲಿಂದ ಮೇಲೆ ಇಂಥ ಘಟನೆಗಳಿಂದ ರೋಸಿ ಹೋಗಿದ್ದ ಪೊಲೀಸರು ಸಹ ಈ ಪ್ರಕರಣದಲ್ಲಿ ತ್ವರಿತ ತನಿಖೆ ನಡೆಸಿ ಕಾಮುಕರಿಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ವೃದ್ದೆಯ ಜೊತೆ ಮೃಗದ ರೀತಿ ವರ್ತಿಸಿದ ಇಬ್ಬರು ಕಾಮುಕರಿಗೂ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕೆಂಬ ಒತ್ತಾಯ ಕೇಳಿ ಬಂದಿದೆ.
ವರದಿ: ಅಶೋಕ ಯಡಳ್ಳಿ ಟಿವಿ9 ವಿಜಯಪುರ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:14 am, Sat, 4 March 23