ಮಗನನ್ನ ಕೊಂದ ವೃದ್ಧ ಅಪ್ಪ! ಹಂತಕ ಅಪ್ಪನ ಒಡಲಾಳದಲ್ಲಿ ಮನೆ ಮಾಡಿದ್ದ ಆ ಸಂಗತಿಯಾದರೂ ಏನು? ಯಾವ ಕಾರಣಕ್ಕೆ ತಂದೆಯೇ ವಿಲನ್ ಆಗಿ ಮಗನ ಕಥೆ ಮುಗಿಸಿದ?
ಮಕ್ಕಳು ದುಡಿದು ಹಾಕುತ್ತಾರೆ, ಇಳಿ ವಯಸ್ಸಿನಲ್ಲಿ ನಮ್ಮನ್ನ ನೋಡಿಕೊಳ್ತಾರೆ ಅಂದುಕೊಂಡಿದ್ದ ತಂದೆ ತಾಯಿ ಮೊದಲ ಮಗನ ಆವಸ್ಥೆ ಕಂಡು ತಾವೇ ಕೆಲಸಕ್ಕೆ ಹೋಗಿ ಜೀವನ ನಡೆಸುವ ಸ್ಥಿತಿ ಈ ದಂಪತಿಗೆ ಬಂದಿತ್ತು.
ಆ ದಂಪತಿ ಕೂಲಿ ಮಾಡಿ ಬದುಕು ಕಟ್ಟಿಕೊಂಡವರು. ಎರಡು ಗಂಡು ಮಕ್ಕಳು ಹುಟ್ಟಿದಾಗ ಖುಷಿ ಪಟ್ಟವರು. ಕಷ್ಟಪಟ್ಟು ಇಬ್ಬರನ್ನೂ ಸಾಕಿ ದೊಡ್ಡವರನ್ನೂ ಮಾಡಿದ್ದರು. ಒಬ್ಬ ವ್ಯಾಸಂಗವನ್ನ ಅರ್ಧಕ್ಕೆ ನಿಲ್ಲಿಸಿ ಮನೆಯಲ್ಲಿ ಉಂಡಾಡಿ ಗುಂಡನಂತೆ ಓಡಾಡುತ್ತಿದ್ರೇ ಇನ್ನೊಬ್ಬ ಇನ್ನೂ ಓದುತ್ತಿದ್ದ. ದೊಡ್ಡ ಮಗ ಕುಡಿತದ ಚಟಕ್ಕೆ ದಾಸನಾಗಿ ಹಣಕ್ಕಾಗಿ ತಂದೆ ತಾಯಿಯನ್ನ ಪೀಡಿಸುತ್ತಿದ್ದ. ಈ ಕಿರುಕುಳ ತಾಳಲಾರದೇ ತಂದೆಯೇ ಮಗನನ್ನ ಕೊಲೆ ಮಾಡಿದನಾ? ಅಷ್ಟಕ್ಕೂ ಆ ಮನೆಯಲ್ಲಿ ತಂದೆ ಮಗನ ನಡುವೆ ಆಗಿದ್ದೇನೂ ಅಂತೀರಾ? ಈ ಸ್ಟೋರಿ ನೋಡಿ… ದಿಕ್ಕೇ ತೋಚದ ಸ್ಥಿತಿಯಲ್ಲಿ ಕುಳಿತ ಈ ತಾಯಿಯ ಸ್ಥಿತಿ ಯಾರಿಗೂ ಬಾರದಿರಲಿ. ಒಂದು ಕಡೆ ಗಂಡ ಜೈಲು ಸೇರಿದ್ದರೆ ಇನ್ನೊಂದು ಕಡೆ ಮಗ ಮಸಣ ಸೇರಿದ್ದಾನೆ. ಏನು ಮಾಡಲಿ ಅನ್ನೋದು ಕೂಡ ಗೊತ್ತಾಗದೇ ಮನದಲ್ಲಿ ಎಲ್ಲವನ್ನೂ ನುಂಗಿಕೊಂಡು ಕುಳಿತಿದ್ದಾರೆ. ಈ ತಾಯಿಯ ಹೆಸರು ಶೋಭಾ ಅಂತಾ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿ.ಕೆ. ಗ್ರಾಮದ ನಿವಾಸಿ. 60ರ ವಯಸ್ಸಿನಲ್ಲೂ ದುಡಿದೇ ಹೊಟ್ಟೆ ತುಂಬಿಸಿಕೊಳ್ತಿದ್ದ ಈ ಕುಟುಂಬ ಇದೀಗ ಬೀದಿಗೆ ಬಂದಿದೆ. ಅಷ್ಟಕ್ಕೂ ಈ ಶೋಭಾರ ಗಂಡ ಜೀನ್ನಪ್ಪ ಕಾಂಜಿ ಮಗನನ್ನೇ ಕೊಲೆ ಮಾಡಿ ಜೈಲು ಸೇರಿದ್ದಾನೆ.
ಯಾವ ತಂದೆಯೂ ಮಕ್ಕಳನ್ನ ಕೊಲ್ಲುವ ಮಟ್ಟಕ್ಕೆ ಹೋಗಿಲ್ಲ, ಹೋಗುವೂದೂ ಇಲ್ಲ. ಮಕ್ಕಳೇ ತಂದೆಯನ್ನ ಕೊಂದಿರುವುದನ್ನ ನಾವು ಕೇಳಿದ್ದೇವೆ, ಆದ್ರೇ ಉಗಾರ ಗ್ರಾಮದ ಜೀನ್ನಪ್ಪ ಮಾತ್ರ ಮಗನನ್ನೇ ಕೊಂದಿದ್ದಾನೆ ಅಂದರೆ ಅವರ ಒಡಲಾಳದಲ್ಲಿ ಇದ್ದಿದ್ದಾದ್ರೂ ಎನು? ಅದ್ಯಾವ ಕಾರಣಕ್ಕೆ ತಂದೆಯೇ ಇಲ್ಲಿ ವಿಲನ್ ಆಗಿ ಮಗನ ಕಥೆ ಮುಗಿಸಿದ್ದಾನೆ. ಅಷ್ಟಕ್ಕೂ ಆ ಕುಟುಂಬದ ಹಿನ್ನೆಲೆ ಎನು ಅನ್ನೋ ಸಂಗತಿ ಇಲ್ಲಿದೆ…
ಈ ಪೋಟೋದಲ್ಲಿರುವ ವೃದ್ಧನ ಹೆಸರು ಜೀನ್ನಪ್ಪ ಕಾಂಜಿ ಅಂತಾ 64 ವರ್ಷದ ಈತನೇ ಹೆತ್ತ ಮಗನನ್ನ ಕೊಂದು ಇದೀಗ ಜೈಲು ಸೇರಿದ್ದಾರೆ. ವಯಸ್ಸಾದ ಇವರು ಈಗಲೂ ನಿತ್ಯವೂ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. 60 ವರ್ಷದ ಹೆಂಡತಿ ಶೋಭಾ ಕೂಡ ಇದ್ದು ಇಬ್ಬರು ಕೂಲಿ ಮಾಡಿಯೇ ಕುಟುಂಬವನ್ನ ನೋಡಿಕೊಳ್ತಿದ್ದಾರೆ. ಇನ್ನು ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು ಓರ್ವ ಇನ್ನೂ ಓದುತ್ತಿದ್ದರೆ ಮತ್ತೋರ್ವ 30 ವರ್ಷದ ಭರತೇಶ್ ಅನ್ನೋ ಮಗ ಯಾವುದೇ ಕೆಲಸ ಇಲ್ಲದೇ ಮನೆಯಲ್ಲೇ ಇದ್ದು, ಉಂಡಾಡಿ ಗುಂಡನಂತೆ ಓಡಾಡಿಕೊಂಡಿದ್ದ.
ಮಕ್ಕಳು ದುಡಿದು ಹಾಕುತ್ತಾರೆ, ಇಳಿ ವಯಸ್ಸಿನಲ್ಲಿ ನಮ್ಮನ್ನ ನೋಡಿಕೊಳ್ತಾರೆ ಅಂದುಕೊಂಡಿದ್ದ ತಂದೆ ತಾಯಿ ಮೊದಲ ಮಗನ ಆವಸ್ಥೆ ಕಂಡು ತಾವೇ ಕೆಲಸಕ್ಕೆ ಹೋಗಿ ಜೀವನ ನಡೆಸುವ ಸ್ಥಿತಿ ಈ ದಂಪತಿಗೆ ಬಂದಿತ್ತು. ಒಬ್ಬ ಮಗ ಓದುತ್ತಿದ್ದರಿಂದ ಆತನಿಗೆ ಇವರೇ ಹಣ ಕೊಟ್ಟು ಕಲಿಸುತ್ತಿದ್ರೂ ಮೊದಲ ಮಗ ಭರತೇಶ್ ಸರಿಯಾಗಿ ಓದಲೂ ಇಲ್ಲಾ, ಇತ್ತ ಕೆಲಸಕ್ಕೂ ಹೋಗದೇ ಊರಲ್ಲಿ ಗೂಳಿ ಬಿಟ್ಟ ರೀತಿ ತಿರುಗಾಡಿಕೊಂಡಿದ್ದ. ಆತ ಕೆಲಸಕ್ಕೆ ಹೋಗದಿದ್ರೂ ಇರಲಿ ಸುಮ್ಮನೆ ಓಡಾಡಿಕೊಂಡಿದ್ರೇ ಇಂದು ತಂದೆಗೆ ಕೊಲೆ ಮಾಡುವ ಪ್ರಶ್ನೆಯೇ ಬರ್ತಿರಲಿಲ್ಲ. ಆದ್ರೇ ಕುಡಿತದ ಚಟಕ್ಕೆ ದಾಸನಾಗಿದ್ದ ಭರತೇಶ್ ನಿತ್ಯವೂ ಕಂಠಪೂರ್ತಿ ಕುಡಿದುಕೊಂಡೇ ಮನೆಗೆ ಬರ್ತಿದ್ದ. ಖಾಲಿ ಓಡಾಡುತ್ತಿದ್ದವನಿಗೆ ಹಣ ಎಲ್ಲಿಂದ ಬರ್ತಿತ್ತು ಅಂದ್ರೇ ಅದಕ್ಕೂ ತಂದೆ ತಾಯಿಯೇ ಕೊಡಬೇಕಿತ್ತು…
ಅರೇ! ಮಗನಿಗೇ ತಂದೆ ತಾಯಿ ಕುಡಿಯಲು ಹಣ ಕೊಡ್ತಿದ್ದರು ಅಂತಾ ಕೇಳಿದ್ರೇನೆ ಅಚ್ಚರಿ ಆಗುತ್ತಲ್ಲಾ. ಹೌದು ಇಲ್ಲಿ ಆತನಿಗೆ ಹಣ ಕೊಡ್ತಿದ್ದ ವಿಚಾರ ನಿಜವೇ. ಆದ್ರೇ ಅದು ಅವರಾಗಿಯೇ ಕೊಡ್ತಿರಲಿಲ್ಲ. ನಿತ್ಯವೂ ಈ ಪಾಪಿ ಅವರೊಂದಿಗೆ ಜಗಳವಾಡಿಕೊಂಡು ದುಡಿದ ಹಣವನ್ನ ಕಸಿದುಕೊಂಡು ಹೋಗಿ ಕಂಠಪೂರ್ತಿ ಕುಡಿದು ಮನೆಗೆ ಬರ್ತಿದ್ದ. ಹೀಗೆ ಮನೆಗೆ ಬಂದ ಬಳಿಕವೂ ಆತ ಸುಮ್ಮನೇ ಇರುತ್ತಿರಲಿಲ್ಲ. ಬದಲಿಗೆ ಮತ್ತೆ ತಂದೆ ತಾಯಿ ಜತೆಗೆ ಜಗಳವಾಡುವುದನ್ನ ಕೂಡ ಮಾಡುತ್ತಿದ್ದ. ಕೆಲವೊಮ್ಮೆ ಈ ಪಾಪಿ ವಯಸ್ಸಾದ ತಂದೆ ತಾಯಿ ಅನ್ನೋದನ್ನ ಕೂಡ ನೋಡದೆ ಅವರ ಮೇಲೆ ಹಲ್ಲೆ ಕೂಡ ಮಾಡಿದ್ದನಂತೆ. ಇಷ್ಟಾದರೂ ತಂದೆ ತಾಯಿ ಮಗ ಇಂದು ಅಥವಾ ನಾಳೆ ಸುಧಾರಿಸಿಕೊಳ್ಳಬಹುದು ಅಂದುಕೊಂಡು ಎಷ್ಟೇ ಕಷ್ಟವಾದ್ರೂ ಸಹಿಸಿಕೊಂಡು ಹೋಗುತ್ತಿದ್ದರು…
ಇನ್ನು ಫೆ. 28ರಂದು ಬೆಳಗ್ಗೆ ತಾಯಿ ಮಾರುಕಟ್ಟೆಗೆ ಅಂತಾ ಕಾಗವಾಡಕ್ಕೆ ಹೋಗಿದ್ದಾರೆ. ಇತ್ತ ಮನೆಯಲ್ಲಿದ್ದ ಜೀನ್ನಪ್ಪ ಅಳಿದುಳಿದ ಮನೆ ಕೆಲಸವನ್ನ ಮಾಡಿಕೊಂಡು ಕುಳಿತಿದ್ದಾನೆ. ಸಂಜೆ ಆಗ್ತಿದ್ದಂತೆ ಮನೆಯಲ್ಲಿದ್ದ ಭರತೇಶ್ ತಂದೆ ಜೀನ್ನಪ್ಪನನ್ನ ಹಣ ಕೊಡುವಂತೆ ಪೀಡಿಸಿದ್ದಾನೆ. ಈ ವೇಳೆ ಹಣ ಕೊಡುವುದಿಲ್ಲ ಅಂತಾ ತಂದೆ ಹೇಳಿದ್ದಾರೆ. ಆಗ ಇಬ್ಬರ ನಡುವೆ ವಾಗ್ವಾದ ಆರಂಭವಾಗಿದೆ. ಹಣ ಕೊಡಲೇಬೇಕು ಅಂತಾ ಭರತೇಶನೂ ಪಟ್ಟು ಹಿಡಿದಿದ್ದಾನೆ. ಕೆಲಸಕ್ಕೆ ಹೋಗಿಲ್ಲ ನನ್ನ ಹತ್ರಾ ಹಣವಿಲ್ಲ. ಇದ್ದ ಹಣವನ್ನ ಇಂದು ಸಂತೆ ಮಾಡಿಕೊಂಡು ಬರಲು ನಿಮ್ಮ ತಾಯಿ ಬಳಿ ಕೊಟ್ಟು ಕಳ್ಸಿದ್ದೇನೆ ಅಂತಾ ಮಗನಿಗೆ ತಂದೆ ಹೇಳಿದ್ದಾನೆ. ಇಷ್ಟಾದರೂ ಭರತೇಶ್ ಮಾತ್ರ ತನ್ನ ಹಠ ಬಿಟ್ಟಿಲ್ಲ, ಹಣ ಬೇಕೇಬೇಕು ಅಂತಾ ಪಟ್ಟು ಹಿಡಿದು ಕುಳಿತಿದ್ದಾನೆ. ಅಷ್ಟೇ ಅಲ್ಲದೇ ಜೋರಾಗಿ ತಂದೆ ಜತೆಗೆ ಜಗಳ ಕೂಡ ಮಾಡಲಾರಂಭಿಸಿದ್ದಾನೆ.
ಕಳೆದ ಒಂದು ವಾರದಿಂದ ನಿರಂತರವಾಗಿ ತಂದೆಯೊಂದಿಗೆ ಜಗಳವಾಡುತ್ತಿದ್ದ ಭರತೇಶ್ ಫೆ .28ರಂದು ಕೂಡ ಜೋರಾಗಿ ಜಗಳ ಆಡಲಾರಂಭಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ತಂದೆ ಜೀನ್ನಪ್ಪ ಎನು ಮಾಡಬೇಕು ಅನ್ನೋದು ದಿಕ್ಕೆ ತೋಚಿಲ್ಲ. ಒಂದು ಕಡೆ ತಮ್ಮ ಮೇಲೆ ಹಲ್ಲೆ ಮಾಡುವುದು, ಹೀಗೆ ನಿರಂತರವಾಗಿ ಹಣಕ್ಕಾಗಿ ಜಗಳ ಮಾಡುವುದನ್ನ ಕಂಡು ಬೇಸತ್ತಿದ್ದ ಜೀನ್ನಪ್ಪನಿಗೆ ನೆಮ್ಮದಿ ಅನ್ನೋದೇ ಹೊರಟು ಹೋಗಿತ್ತು. ಕಡೆ ಪಕ್ಷ ಜೈಲಿನಲ್ಲಾದ್ರೂ ನೆಮ್ಮದಿ ಸಿಗಬಹುದು ಅಂದುಕೊಂಡ ತಂದೆ ಜೀನ್ನಪ್ಪ ಮಗನನ್ನ ಮರ್ಡರ್ ಮಾಡಲು ಆಲೋಚನೆ ಮಾಡಿದ್ದಾನೆ. ಹೆಂಡತಿ ಶೋಭಾ ಕೂಡ ಮನೆಗೆ ಬಂದಿರಲಿಲ್ಲ, ಯಾರೂ ಇಲ್ಲದ್ದನ್ನ ನೋಡಿ ಮಗನನ್ನ ಮುಗಿಸಲೇಬೇಕು ಅನ್ನೋ ತೀರ್ಮಾನಕ್ಕೆ ಬಂದಿದ್ದಾನೆ ಜೀನ್ನಪ್ಪ.
ಅದರಂತೆ ಮಗ ಜಗಳ ಆಡುವುದನ್ನ ನಿಲ್ಲಿಸಿ ಕುಳಿತಿದ್ದನ್ನ ಗಮನಿಸಿದ ಜೀನ್ನಪ್ಪ ಅಲ್ಲೇ ಮೂಲೆಯಲ್ಲಿದ್ದ ಕೊಡಲಿಯನ್ನ ಕೈಗೆತ್ತಿಕೊಂಡಿದ್ದಾನೆ. ಹಿಂದಿನಿಂದ ಬಂದು ಮಗನ ಕತ್ತಿಗೆ ಕೊಡಲಿ ಏಟು ಕೊಟ್ಟೇ ಬಿಟ್ಟಿದ್ದಾನೆ. ಕೊಡಲಿಯ ಏಟು ಕತ್ತಿಗೆ ಬೀಳ್ತಿದ್ದಂತೆ ಅಲ್ಲೇ ಕುಸಿದು ಬಿದ್ದ ಮಗ ಭರತೇಶ್ ಕ್ಷಣಾರ್ಧದಲ್ಲಿ ಸತ್ತು ಹೋಗಿದ್ದಾನೆ. ಇನ್ನು ಕೊಲೆ ಮಾಡಿದ ತಂದೆ ಜೀನ್ನಪ್ಪ ಅದೇ ಕೊಡಲಿ ಸಮೇತ ನೇರವಾಗಿ ಕಾಗವಾಡ ಪೊಲೀಸ್ ಠಾಣೆಗೆ ತೆರಳಿದ್ದಾನೆ. ಅಲ್ಲಿ ಪೊಲೀಸರ ಮುಂದೆ ಶರಣಾದ ಜೀನ್ನಪ್ಪ ತನ್ನ ಮಗನನ್ನೇ ಕೊಲೆ ಮಾಡಿ ಬಂದಿದ್ದೇನೆ ಅಂತಾ ಹೇಳಿದ್ದಾನೆ. ಕೂಡಲೇ ಆತನನ್ನ ಠಾಣೆಯಲ್ಲಿ ಕೂಡಿಸಿದ ಪೊಲೀಸರು ಉಗಾರ ಗ್ರಾಮಕ್ಕೆ ತೆರಳಿದ್ದಾರೆ. ಜೀನ್ನಪ್ಪನ ಮನೆಗೆ ಬಂದು ನೋಡಿದಾಗ ಮನೆಯ ಒಳಭಾಗದಲ್ಲಿ ರಕ್ತದ ಮಡುವಿನಲ್ಲಿ ಶವ ಬಿದ್ದಿದ್ದನ್ನ ಕಂಡು ಶಾಕ್ ಆಗಿದ್ದಾರೆ.
ಇತ್ತ ಮಾರುಕಟ್ಟೆ ಮುಗಿಸಿಕೊಂಡು ಮನೆಗೆ ಬಂದು ನೋಡಿದ ತಾಯಿಗೂ ಮಗ ಶವವಾಗಿ ಹೋಗಿದ್ದನ್ನ ಕಂಡು ಗಾಬರಿಯಾಗಿ ಮನೆಯ ಹೊರ ಭಾಗದಲ್ಲಿ ಗೋಳಾಡುತ್ತಾ ಕುಳಿತಿದ್ದಾಳೆ. ಪೊಲೀಸರು ಕೂಡಲೇ ಸ್ಥಳ ಪರಿಶೀಲನೆಯನ್ನ ನಡೆಸಿ ಶವವನ್ನ ಕಾಗವಾಡ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಇತ್ತ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆಯನ್ನ ಆರಂಭಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಶವವನ್ನ ರಾತ್ರಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಇನ್ನು ಬಂದು ಬಳಗ ಕೂಡ ಹೆಚ್ಚಾಗಿ ಬಾರದ ಹಿನ್ನೆಲೆ ರಾತ್ರಿಯೇ ಅಂತ್ಯಸಂಸ್ಕಾರ ಮಾಡಿ ಕುಟುಂಬಸ್ಥರು ಮುಗಿಸಿದ್ದಾರೆ. ಇತ್ತ ಕೇಸ್ ಮಾಡಿದ ಪೊಲೀಸರು ಆರೋಪಿ ತಂದೆ ಜೀನ್ನಪ್ಪನ ಹೇಳಿಕೆ ಪಡೆದುಕೊಂಡು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.
ಒಟ್ಟಾರೆ ಮಕ್ಕಳು ದೊಡ್ಡವರಾದ ಬಳಿಕ ತಂದೆ ತಾಯಿಯನ್ನ ದುಡಿದು ಸಾಕುತ್ತಾರೆ ಅಂದುಕೊಂಡಿದ್ದ ದಂಪತಿಗೆ ಇಳಿ ವಯಸ್ಸಿನಲ್ಲೂ ಪಾಪಿ ಮಗ ಕಾಡಲು ಶುರು ಮಾಡಿದ್ದ. ಆತನ ಕಾಟ ತಾಳಲಾರದೇ ತಂದೆ ಕೊಲೆ ಮಾಡಿ ಜೈಲುಪಾಲಾದ್ರೇ, ಮಗ ಮಸಣ ಸೇರಿದ್ದಾನೆ. ಆದ್ರೇ ಇಬ್ಬರನ್ನೂ ಕಳೆದುಕೊಂಡ ಆ ತಾಯಿ ಮಾತ್ರ ಇದೀಗ ಅನಾಥವಾಗಿದ್ದು ಮುಂದೆ ಏನೊ ಹೇಗೋ ಅನ್ನೋ ಚಿಂತೆಯಲ್ಲಿದ್ದಾರೆ. ಅದೇನೆ ಇರಲಿ ಮಗನ ಚಟ ತಂದೆಯ ಹಠದಿಂದ ಇದೀಗ ಇಡೀ ಕುಟುಂಬವೇ ಬೀದಿಗೆ ಬಂದಿದ್ದು ವಿಪರ್ಯಾಸ.
ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ