ಮುರುಡೇಶ್ವರದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು: ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸರ್ಕಾರ
ಕೋಲಾರದ ವಿದ್ಯಾರ್ಥಿಗಳು ಮುರುಡೇಶ್ವರದಲ್ಲಿ ಶೈಕ್ಷಣಿಕ ಪ್ರವಾಸದ ವೇಳೆ ಸಮುದ್ರದಲ್ಲಿ ಮುಳುಗಿದ ಘಟನೆಯಲ್ಲಿ ಒಬ್ಬ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಸಮುದ್ರಪಾಲಾದ ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮೃತ ವಿದ್ಯಾರ್ಥಿನಿಯr ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. ಸದ್ಯ ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಕಾರವಾರ, ಡಿಸೆಂಬರ್ 11: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಶೈಕ್ಷಣಿಕ ಪ್ರವಾಸಕ್ಕೆಂದು ಕೋಲಾರದಿಂದ ಬಂದಿದ್ದ ನಾಲ್ವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದು, ಈ ಪೈಕಿ ಒಬ್ಬ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದಿವರಿದಿದೆ. ಏತನ್ಮಧ್ಯೆ, ಮೃತ ವಿದ್ಯಾರ್ಥಿನಿಯ ಕುಟುಂದವರಿಗೆ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ವಿದ್ಯಾರ್ಥಿನಿಯರ ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಏತನ್ಮಧ್ಯೆ, ಮಕ್ಕಳ ಪೋಷಕರು ಹಾಗೂ ಶಾಸಕ ಸಮೃದ್ಧಿ ಮಂಜುನಾಥ್ ಬುಧವಾರ ಮುರುಡೇಶ್ವರ ತಲುಪಿದ್ದಾರೆ. ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಜಿಲ್ಲಾಡಳಿತದ ನೆರವಿನಿಂದ ಉಳಿದ ಮೂರು ಜನ ವಿದ್ಯಾರ್ಥಿನಿಯರ ಶವಕ್ಕಾಗಿ ಹುಡುಕಾಟ ಸಾಗಿದೆ. ಪ್ರವಾಸಕ್ಕೆ ಹೋಗಿದ್ದ ಇತರ ಮಕ್ಕಳನ್ನು ಮರಳಿ ಊರಿಗೆ ಕಳಿಸಲು ಜಿಲ್ಲಾಡಳಿತ ಹಾಗೂ ಶಾಸಕ ಸಮೃದ್ದಿ ಮಂಜುನಾಥ್ ಸಿದ್ಧತೆ ಮಾಡುತ್ತಿದ್ದಾರೆ.
ಪ್ರಾಂಶುಪಾಲೆ ಅಮಾನತು, ಸಿಬ್ಬಂದಿ ವಜಾ
ಮುರುಡೇಶ್ವರದಲ್ಲಿ ವಿದ್ಯಾರ್ಥಿನಿಯರು ನೀರುಪಾಲು ಪ್ರಕರಣ ಸಂಬಂಧ ಶಾಲಾ ಪ್ರಾಂಶುಪಾಲೆ ಶಶಿಕಲಾರನ್ನು ಅಮಾನತುಗೊಳಿಸಲಾಗಿದೆ. ಅಥಿತಿ ಉಪನ್ಯಾಕರು ಮತ್ತು ಡಿ ಗ್ರೂಪ್ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಆರೋಪ ಹಿನ್ನೆಲೆ ಪ್ರಾಂಶುಪಾಲೆಯನ್ನು ಅಮಾನತು ಮಾಡಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಅದೇಶ ಹೊರಡಿಸಿದ್ದಾರೆ.
ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ
ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿನಿಯರು ಸಮುದ್ರಪಾಲಾದ ಬೆನ್ನಲ್ಲೇ ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಕಡಲ ತೀರಕ್ಕೆ ತೆರಳದಂತೆ ಪ್ರವಾಸಿಗರಿಗೆ ಪೊಲೀಸರ ಸೂಚನೆ ನೀಡಿದ್ದಾರೆ.
ಮುರುಡೇಶ್ವರದಲ್ಲಿ ಸಂಭವಿಸಿದ್ದೇನು?
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಕೊತ್ತುರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದರು. ಸುಮಾರು 54 ವಿದ್ಯಾರ್ಥಿನಿಯರು ಸಂಜೆ ಕಡಲಿನಲ್ಲಿ ಆಟವಾಡಲು ಇಳಿದಿದ್ದರು. ಅಲೆಗಳ ಅಬ್ಬರ ಹೆಚ್ಚಿದ್ದರೂ ಶಿಕ್ಷಕರು ಮುನ್ನೆಚ್ಚರಿಕೆ ಕೈಗೊಳ್ಳದೆ ಮಕ್ಕಳನ್ನು ಸಮುದ್ರದಲ್ಲಿ ಆಟ ಆಡಲು ಬಿಟ್ಟಿದ್ದಾರೆ. ಈ ವೇಳೆ ಅಲೆಗಳ ಹೊಡೆತಕ್ಕೆ ಏಳು ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕ ನೀರುಪಾಲಾಗಿದ್ದರು. ಈ ಸಂದರ್ಭದಲ್ಲಿ ಲೈಫ್ ಗಾರ್ಡಗಳು ಯಾವುದೇ ಪರಿಕರ ಸಾಧನ ಇಲ್ಲದಿದ್ದರೂ ಮೂರು ಜನ ವಿದ್ಯಾರ್ಥಿನಿಯರು ಹಾಗೂ ಓರ್ವ ಶಿಕ್ಷಕನನ್ನು ರಕ್ಷಣೆ ಮಾಡಿದ್ದರು. ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು, ಮೂವರು ಕಣ್ಣೆದುರೇ ಸಮುದ್ರಪಾಲಾಗಿದ್ದಾರೆ.
ಇದನ್ನೂ ಓದಿ: ಕಾರವಾರ: ಪ್ರವಾಸಕ್ಕೆ ಬಂದಿದ್ದ ನಾಲ್ವರು ಶಾಲಾ ವಿದ್ಯಾರ್ಥಿಗಳು ಸಮುದ್ರ ಪಾಲು
ಮುಳಬಾಗಿಲಿನ ಕೊತ್ತೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯ 9 ನೇ ತರಗತಿಯ ಶಾವಂತಿ (15) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು, ಮುಳಬಾಗಿಲಿನ ಯಶೋಧಾ, ವೀಕ್ಷಣಾ, ಲಿಪಿಕಾರನ್ನು ರಕ್ಷಿಸಲಾಗಿದೆ. ಇವರಲ್ಲಿ ಓರ್ವಳ ಸ್ಥಿತಿ ಗಂಭೀರವಾಗಿದ್ದು ಮೂವರಿಗೂ ಮುರುಡೇಶ್ವರದ ಆರ್ಎನ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ದೀಕ್ಷಾ, ಲಾವಣ್ಯ, ವಂದನ ಸಮುದ್ರಪಾಲಾಗಿದ್ದು ಕಣ್ಮರೆಯಾಗಿದ್ದಾರೆ. ಇವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ