ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕಂಚಿನಬಾಗಿಲು ಸಮೀಪದ ನವಗದ್ದೆ ರಾಷ್ಟ್ರೀಯ ಹೆದ್ದಾರಿ 63 (National Highway 63) ರಲ್ಲಿ ಕಿರು ಸೇತುವೆ ಅಂಚಿನ ರಸ್ತೆ ಕುಸಿದು ಕಂದಕ ಉಂಟಾಗಿತ್ತು. ಘಟನೆ ಸಂಭವಿಸಿ 3 ತಿಂಗಳು ಕಳೆದರೂ ಕೂಡ ಇಲಾಖೆ ದುರಸ್ಥಿಗೊಳಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅತಿಯಾದ ಮಳೆ, ಭಾರಿ ವಾಹನಗಳ ನಿರಂತರ ಓಡಾಟಗಳಿಂದ ಹೆದ್ದಾರಿ ಸೇತುವೆಯ ರಸ್ತೆ ಒಂದು ಅಂಚಿನಲ್ಲಿ ದೊಡ್ಡ ಕಂದಕ ಉಂಟಾಗಲು ಕಾರಣ ಎನ್ನಲಾಗಿದೆ. ಘಟನೆ ನಡೆದ ತಕ್ಷಣವೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬ್ಯಾರಿಕೇಡ್ ಅಳವಡಿಸಿ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ ಇದೀಗ ಕಳೆದ 3 ತಿಂಗಳಿನಿಂದ ರಸ್ತೆಯ ಒಂದು ಬದಿಯಲ್ಲಿಯೇ ಎರಡು ದಿಕ್ಕಿನ ವಾಹನಗಳು ಓಡಾಟ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ.
ಆ ರಸ್ತೆಯೂ ಕೂಡ ಜೆಲ್ಲಿ ಕಲ್ಲುಗಳಿಂದ ಹದಗೆಟ್ಟು ಹೋಗಿದೆ. ಭಾರಿ ವಾಹನಗಳ ನಿರಂತರ ಓಡಾಟದಿಂದ ಈ ರಸ್ತೆ ಏನಾದರೂ ಸಡಿಲಗೊಂಡು ಕುಸಿದರೆ ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ರಸ್ತೆ ಸಂಚಾರ ಸಂಪೂರ್ಣ ನಿಷ್ಕ್ರಿಯವಾಗುವ ಸಾಧ್ಯತೆಗಳು ಇವೆ. ಇದೀಗ ವಾಹನ ಸವಾರರು ಈ ಭಾಗದಲ್ಲಿ ಸಂಚರಿಸುವಾಗ ಹೈರಾಣಾಗುವ ಸ್ಥಿತಿ ನಿರ್ಮಾಣಗೊಂಡಿದೆ.
ಇದನ್ನೂ ಓದಿ: Karwar: ನಿಧಿ ಆಸೆಗೆ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬಾವಿ ಅಗೆಯುತ್ತಿದ್ದ ಅನ್ಯ ಕೋಮಿನ ಯುವಕರು, ಅರಣ್ಯಾಧಿಕಾರಿ ವಶಕ್ಕೆ
ಕಳೆದೊಂದು ವಾರದ ಹಿಂದೆ ಇದೇ ಸ್ಥಳದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಪಕ್ಕದ ಹೊಂಡಕ್ಕೆ ಪಲ್ಟಿಯಾದ ಘಟನೆಯೂ ನಡೆದಿದೆ. ಇಲಾಖೆ ಶೀಘ್ರವೇ ಗಮನವಹಿಸಿ ದುರಸ್ಥಿ ಮಾಡದೇ ಇದ್ದಲ್ಲಿ ಮುಂದಾಗಬಹುದಾದ ಭಾರಿ ಅವಘಡಕ್ಕೆ ಹೊಣೆಯಾಗಬೇಕಾಗಬಹುದು ಎಂಬುದು ಜನರ ಮಾತಾಗಿದೆ.
ಇದನ್ನೂ ಓದಿ: ಜಾತ್ರೆ ಅಂದರೆ ತೇರು, ಮೆರವಣಿಗೆ ಅಷ್ಟೇ ಅಲ್ಲ! ಕಾರವಾರದಲ್ಲಿ ನಡೆಯಿತು ರಂಗುರಂಗಿನ ರಂಗೋಲಿ ಜಾತ್ರೆ! ಒಮ್ಮೆ ನೀವೂ ಕಣ್ಣಾಡಿಸಿ
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹೇಶ ನಾಯ್ಕರನ್ನು ಕೇಳಿದರೆ ತಾತ್ಕಾಲಿಕವಾಗಿ ಹದಗೆಟ್ಟ ರಸ್ತೆಯನ್ನು ಸರಿಪಡಿಸುತ್ತೆವೆ. ಜನವರಿ 15 ರೊಳಗೆ ರಸ್ತೆಯಲ್ಲಿ ಉಂಟಾದ ಕಂದಕದ ದುರಸ್ಥಿ ಮಾಡುವ ಮೂಲಕ ವಾಹನ ಸಂಚಾರಕ್ಕೆ ಮುಕ್ತಗೊಳಿಸುತ್ತೆವೆ ಎಂಬ ಭರವಸೆಯನ್ನು ನೀಡಿದ್ದಾರೆ. ಆದಷ್ಟು ಬೇಗ ದುರಸ್ಥಿ ಕಾರ್ಯಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಕಳೆದ ಮೂರು ತಿಂಗಳ ಹಿಂದೆ ಕುಸಿದ ಸೇತುವೆಗೆ ಇನ್ನೂ ಕೂಡ ದುರಸ್ಥಿ ಭಾಗ್ಯ ದೊರೆತಿಲ್ಲ. ಅನಾಹುತ ಆಗುವ ಮುನ್ನವೇ ಸಂಬಂಧ ಪಟ್ಟವರು ಈ ಬಗ್ಗೆ ಗಮನ ಹರಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕಿದೆ.
ವರದಿ: ವಿನಾಯಕ ಬಡಿಗೇರ, ಟಿವಿ9, ಕಾರವಾರ
Published On - 8:18 pm, Mon, 26 December 22