ಬ್ರಹ್ಮ ಹತ್ಯೆ ದೋಷ ನಿವಾರಣೆಗೆ ಗೋಕರ್ಣದಲ್ಲಿ ರಾಮ ತಪಸ್ಸು: ರಾಮತೀರ್ಥ ದೇವಸ್ಥಾನ ಜೀರ್ಣೋದ್ಧಾರ
ಗೋಕರ್ಣದಲ್ಲಿರುವ ಪುಷ್ಕರಣಿಯನ್ನು ರಾಮ ತನ್ನ ಬಾಣದಿಂದ ಸೃಷ್ಟಿಸಿದ ಎಂಬ ಕಥೆಯಿದೆ. ಸರ್ವಋತುವಿನಲ್ಲೂ ಸ್ಫಟಿಕದಂತೆ ಶುದ್ಧವಾಗಿ ಹರಿಯುತ್ತದೆ. ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆ ದಿನ ತನ್ನ ಗತವೈಭವವನ್ನು ಮತ್ತೆ ಪಡೆಯುವ ಮೂಲಕ ರಾಮ ಭಕ್ತರಿಗೆ ಈ ಸ್ಥಳ ಕೈಬೀಸಿ ಕರೆಯುತ್ತಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇತ್ತ ಪ್ರಧಾನಿ ಮೋದಿಯವರು ದೇವಸ್ಥಾನದ ಸ್ವಚ್ಛತೆ ಕಾರ್ಯ ಮಾಡುವ ಮೂಲಕ ದೇವಸ್ಥಾನಗಳ ಸ್ವಚ್ಛತೆಗೆ ಕರೆ ಕೊಟ್ಟಿದ್ದು, ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ಶ್ರೀ ರಾಮ ಬ್ರಹ್ಮ ಹತ್ಯೆ ದೋಷ ನಿವಾರಣೆಗೆ ತಪಸ್ಸು ನಡೆಸಿದ ರಾಮ ತೀರ್ಥದಲ್ಲಿ ದೇವಸ್ಥಾನ ಜೀರ್ಣೋದ್ಧಾರದ ಜೊತೆ ಜೊತೆಗೆ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ.
ಒಂದೆಡೆ ಸುಂದರ ಕಡಲತೀರ, ಮತ್ತೊಂದೆಡೆ ಹಚ್ಚ ಹಸಿರಿನ ನಡುವೆ ರಾಮನ ಕಾಲದಲ್ಲೇ ತಲೆ ಎತ್ತಿ ನಿಂತಿರುವ ರಾಮಲಕ್ಷ್ಣರ ದೇಗುಲ. ಈ ದೇಗುಲದ ಮುಂದಿದೆ ಎಂದೂ ಬತ್ತದ ಶುದ್ಧ ತೀರ್ಥ. ಹೌದು ಈ ದೃಶ್ಯ ನೋಡಿದಾಗ ಎಂತವರಿಗೂ ಈ ಸೊಬಗನ್ನ ನೋಡಬೇಕು ಎಂದನಿಸುತ್ತದೆ. ಸುಂದರ ಶಾಂತತೆಯ ಪರಿಸರ ಹೊಂದಿರುವ ಈ ರಾಮತೀರ್ಥ ಕ್ಷೇತ್ರ ಹೆಚ್ಚು ಪ್ರಚಲಿತವಿಲ್ಲ. ಆದ್ರೆ ಇತಿಹಾಸದ ಪುಟದಲ್ಲಿ ದಾಖಲಾಗಿರುವ ಈ ಕ್ಷೇತ್ರ ರಾಮನ ಹೆಜ್ಜೆ ಗುರುತಿನ ಇತಿಹಾಸ ಹೇಳುತ್ತದೆ.
ಈ ಪುಷ್ಕರಣಿಯನ್ನು ರಾಮ ತನ್ನ ಬಾಣದಿಂದ ಸೃಷ್ಟಿಸಿದ ಎಂಬ ಪುರಾಣ ಕಥೆ ಇದ್ದು ಸರ್ವ ಋತುವಿನಲ್ಲೂ ಸ್ಫಟಿಕದಂತೆ ಶುದ್ಧವಾಗಿ ಹರಿಯುತ್ತದೆ. ಇನ್ನು ಬ್ರಾಹ್ಮಣನಾದ ರಾವಣನನ್ನು ರಾಮ ವಧಿಸಿದ ನಂತರ ಬ್ರಹ್ಮ ಹತ್ಯೆ ದೋಷ ನಿವಾರಣೆಗಾಗಿ ಇಲ್ಲಿಗೆ ಬಂದು ತಪಸ್ಸು ಆಚರಿಸಿದ ಎಂಬ ಪ್ರತೀತಿ ಇದೆ. ಇಲ್ಲಿನ ರಾಮನ ದೇವಸ್ಥಾನ ಇದಕ್ಕೆ ಸಹ ಸಾಕ್ಷಿ ಎನ್ನುವಂತಿದೆ. ಇನ್ನು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇದ್ದು ಈ ವೇಳೆ ಈ ಪುರಾತನ ರಾಮಮಂದಿರದಲ್ಲಿ ವಿಶೇಷ ಪೂಜೆ ರಾಮ ಮೂರ್ತಿಯ ಪಲ್ಲಕ್ಕಿ ಉತ್ಸವ, ದೀಪೋತ್ಸವ ಸೇರಿದಂತೆ ಅನೇಕ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಐತಿಹಾಸಿಕ ಸ್ಥಳವಾದ ಈ ರಾಮತೀರ್ಥ ದಲ್ಲಿ ಇರುವ ರಾಮನ ದೇವಸ್ಥಾನದ ಮೇಲ್ಭಾಗ ಅಲ್ಪ ಹಾಳಾಗಿದ್ದು ಇದೀಗ ರಾಮನನ್ನು ಕುಲದೈವ ಎಂದು ಆರಾಧಿಸುವ ಶಾಂಡಿಲ್ಯ ಮಹರಾಜ ಮುನಿಗಳ ಅನುಯಾಯಿಗಳು ಹಾಗೂ ಸ್ಥಳೀಯ ಭಕ್ತರು ಸ್ವ ಸೇವೆಯ ಮೂಲಕ ಮೇಲ್ಛಾವಣಿಯ ಹಂಚುಗಳು, ಪಕಾಶಿಗಳನ್ನು ಹೊಸದಾಗಿ ಹಾಕುತಿದ್ದು ಸ್ಪಚ್ಛತೆ ಕಾರ್ಯ ಸಹ ನಡೆದಿದೆ. ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯ ದಿನ ತನ್ನ ಗತವೈಭವವನ್ನು ಮತ್ತೆ ಪಡೆಯುವ ಮೂಲಕ ರಾಮ ಭಕ್ತರಿಗೆ ಈ ಸ್ಥಳ ಕೈಬೀಸಿ ಕರೆಯುತ್ತಿದೆ ಎಂದು ದೇವಸ್ಥಾನದ ಅರ್ಚಕರಾದ ಉದಯ ಮಾಹಿತಿ ನೀಡಿದ್ದಾರೆ.
ರಾಮ ರಾವಣನನ್ನು ವಧಿಸಿದ ದೋಷ ವಿಮೋಚನೆಗಾಗಿ ಈ ಸ್ಥಳಕ್ಕೆ ಬಂದರೆ, ರಾವಣ ಈಶ್ವರನ ಆತ್ಮ ಲಿಂಗ ತಂದ ಸ್ಥಳವೂ ಇಲ್ಲಿಯೇ ಇದ್ದು ಈಶ್ವರನ ಆತ್ಮಲಿಂಗ ಮಹಾಬಲೇಶ್ವರ ಎಂದು ಪ್ರಸಿದ್ಧಿ ಪಡೆದಿದ್ದು ದೈವ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ತಡವೇಕೆ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ಇರುವ ಈ ಪುರಾಣ ಪ್ರಸಿದ್ಧ ಸ್ಥಳಕ್ಕೊಮ್ಮೆ ಆಗಮಿಸಿ ರಾಮನ ಕೃಪೆಗೆ ಪಾತ್ರರಾಗಿ.
ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ