
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದಾದರೂ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು (Multi Speciality Hospital for Uttara Kannada District) ಎನ್ನುವ ಮಾತಿಗೆ ಇದೀಗ ಹೊಸ ಬಲ ಬಂದಿದೆ. ಇಷ್ಟು ದಿನ ನಾಲ್ಕು ಜನರು ಒಂದೆಡೆ ಸೇರಿದಾಗಲೆಲ್ಲಾ ಕೇಳಿ ಬರುತ್ತಿದ್ದ ಒತ್ತಾಯ ಇದೀಗ ಆಂದೋಲನದ ರೂಪ ಪಡೆದಿದ್ದು, ಪ್ರಬಲ ಹೋರಾಟ ಮತ್ತು ಜನಾಭಿಪ್ರಾಯ ರೂಪಿಸಲು ಪ್ರಯತ್ನಗಳು ನಡೆಯುತ್ತಿವೆ. ಹೋರಾಟಕ್ಕಾಗಿ ಅಗಸ್ಟ್ 1ರಿಂದ ರಕ್ತದಲ್ಲಿ ಪತ್ರ ಬರೆಯುವ ಅಭಿಯಾನವನ್ನು ಜಿಲ್ಲೆಯ ಜನರು ಆರಂಭಿಸಲಿದ್ದಾರೆ. ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದು ಅಭಿಯಾನ ಶುರುಮಾಡಲು ಕಾರವಾರ ನಿವಾಸಿಗಳೂ ಸೇರಿದಂತೆ ಜಿಲ್ಲೆಯ ಜನರು ಮುಂದಾಗಿದ್ದಾರೆ.
ಭೌಗೋಳಿಕವಾಗಿ ಬಹು ವಿಸ್ತಾರವಾಗಿರುವ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಇದೇ ಕಾರಣಕ್ಕೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ದೂರದ ಉಡುಪಿ, ಮಂಗಳೂರು, ಹುಬ್ಬಳ್ಳಿ, ಗೋವಾಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಕಳೆದ ಜುಲೈ 20 ರಂದು ಸಂಭವಿಸಿದ ಆಂಬುಲೆನ್ಸ್ ಅಪಘಾತದಲ್ಲಿ ಹೊನ್ನಾವರದ ನಾಲ್ವರು ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕು ಎನ್ನುವ ಕೂಗು ಪ್ರಬಲವಾಗಿತ್ತು. ಇದೀಗ ಹೋರಾಟ ಸಂಘಟಿತ ರೂಪ ಪಡೆದುಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಮಲ್ಪಿ ಸ್ಪಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜನರು ಘಟ್ಟದ ಮೇಲಿನ ತಾಲ್ಲೂಕುಗಳಾದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು, ಹಳಿಯಾಳಗಳಿಗೆ ಸೇರಿದಂತೆ ಒಂದು ಆಸ್ಪತ್ರೆ. ಘಟ್ಟದ ಕೆಳಗಿನ ತಾಲ್ಲೂಕುಗಳಾದ ಕುಮಟ, ಹೊನ್ನಾವರ, ಅಂಕೋಲ, ಭಟ್ಕಳ, ಕಾರವಾರ, ಜೋಯಿಡಾಕ್ಕೆ ಸೇರಿದಂತೆ ಮತ್ತೊಂದು ಆಸ್ಪತ್ರೆ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎರಡು ಉತ್ತಮ ಆಸ್ಪತ್ರೆಗಳು ಬೇಕು
ಭೌಗೋಳಿಕವಾಗಿ ವಿಸ್ತಾರವಾಗಿರುವ ಜಿಲ್ಲೆಯಲ್ಲಿ ಒಂದೇ ಒಂದು ಉತ್ತಮ ಆಸ್ಪತ್ರೆಯಿಲ್ಲ. ನಮ್ಮ ಜಿಲ್ಲೆಗೆ ಎರಡು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕಿದೆ. ಘಟ್ಟದ ಮೇಲೆ ಮತ್ತು ಘಟ್ಟದ ಕೆಳಗೆ ಎಂದು ಎರಡು ಪ್ರತ್ಯೇಕ ಆಸ್ಪತ್ರೆಗಳು ಬೇಕಿದೆ. ಇಲ್ಲಿರುವ ಆಸ್ಪತ್ರೆಯಲ್ಲಿ ಸಣ್ಣಪುಟ್ಟ ಚಿಕಿತ್ಸೆ ಕೊಡುತ್ತಾರೆ ಅಷ್ಟೇ. ಹೆಚ್ಚಿನ ಚಿಕಿತ್ಸೆಗೆ ಬೇರೆಡೆಗೆ ಕಳಿಸುತ್ತಾರೆ. ಇಲ್ಲಿ ಒಂದಾದರೂ ಉತ್ತಮ ಆಸ್ಪತ್ರೆ ಇಲ್ಲ ಎನ್ನುವ ಕಾರಣಕ್ಕೆ ಉತ್ತಮ ಅಧಿಕಾರಿಗಳೂ ಬರುತ್ತಿಲ್ಲ. ಸೀಬರ್ಡ್ ನೌಕಾನೆಲೆ ಮತ್ತು ನೀರಾವರಿ ಯೋಜನೆಗಳಿಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರು ಸಾಕಷ್ಟು ತ್ಯಾಗ ಮಾಡಿದ್ದಾರೆ. ಇನ್ನಾದರೂ ಇಲ್ಲಿನವರ ಬೇಡಿಕೆಗಳ ಬಗ್ಗೆ ಅಧಿಕಾರದಲ್ಲಿ ಇರುವವರು ಗಮನ ಹರಿಸಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ರಾಘವ್ ನಾಯ್ಕ್ ಆಗ್ರಹಿಸಿದರು.
ಮೋದಿ ಮೇಲೆ ವಿಶ್ವಾಸವಿದೆ
ಉತ್ತರ ಕನ್ನಡದ ಜನರು ಎಲ್ಲ ಸಂಘಟನೆ, ರಾಜಕೀಯ ಪಕ್ಷಗಳ ಕಾರ್ಯಕರ್ತರು ರಕ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಅಭಿಯಾನ ನಡೆಸಲಿದ್ದಾರೆ. ರಾಜಕಾರಿಣಿಗಳು ನಮಗೆ ಗೌರವ ಕೊಡುತ್ತಿಲ್ಲ. ನಮಗೆ ಮೋದಿ ಅವರ ಮೇಲೆ ವಿಶ್ವಾಸವಿದೆ. ಅವರು ಸ್ಪಂದಿಸುತ್ತಾರೆ ಎಂದುಕೊಂಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 15ರ ಒಳಗೆ ಕಾರವಾರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕೊಡುತ್ತೇವೆ ಎಂದು ಘೋಷಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಮಾಜಿ ನಗರಸಭಾ ಸದಸ್ಯ ಗಿರೀಶ್ ರಾವ್ ಹೇಳಿದರು.
Need Hospitals like AIIMS for Uttara Kannada District in Karnataka @AnantkumarH @PMOIndia @narendramodi @AmitShah @mansukhmandviya @cmbasavarajBas3 @mla_sudhakar @VishweshwarBhat @ShivaramHebbar @kageri250 @BJP4Karnataka pic.twitter.com/uAlp34hGhx
— Vinayak Hegde (@kvghegde) July 23, 2022
ಟ್ವಟರ್ ಅಭಿಯಾನದಲ್ಲಿ ನೀವೂ ಪಾಲ್ಗೊಳ್ಳಿ
ಉತ್ತರ ಕನ್ನಡ ಜಿಲ್ಲೆಗೆ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಿರುವ ಹಲವರು ಟ್ವಿಟರ್ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ಮನವಿ ಮಾಡಿದ್ದಾರೆ. ಜುಲೈ 24ರ ಭಾನುವಾರ ಟ್ವಿಟರ್ ಅಭಿಯಾನ ನಡೆಯಲಿದೆ.
ಇದು ಜನಸಾಮಾನ್ಯರೇ ರೂಪಿಸುತ್ತಿರುವ ಅಭಿಯಾನ. ಇದಲ್ಲಿ ಪಾಲ್ಗೊಳ್ಳಲು ನೀವು ಮಾಡಬೇಕಾದ್ದು ಇಷ್ಟೇ. #WeNeedEmergencyHospitalInUttaraKannada ಮತ್ತು #NoHospitalNoVote ಈ ಎರಡು ಹ್ಯಾಷ್ಟ್ಯಾಗ್ಗಳನ್ನು ಬಳಸಿ ಉತ್ತರ ಕನ್ನಡಕ್ಕೆ ಸುಸಜ್ಜಿತ ಆಸ್ಪತ್ರೆ ಏಕೆ ಬೇಕು ಎಂದು ನಿಮ್ಮ ಅಭಿಪ್ರಾಯ ಟ್ವೀಟ್ ಮಾಡಿ. ಟ್ವೀಟ್ ಮಾಡುವಾಗ @PMOIndia @narendramodi @AmitShah @mansukhmandviya @CmofKarnataka @Mla_sudhakar ಈ ಟ್ವಿಟರ್ ಹ್ಯಾಂಡಲ್ಗಳನ್ನು ಟ್ಯಾಗ್ ಮಾಡಲು ಹೋರಾಟಗಾರರು ವಿನಂತಿಸಿದ್ದಾರೆ.
Published On - 3:18 pm, Sat, 23 July 22