ಕಾರವಾರ: ಉ.ಕ ಜಿಲ್ಲೆಯ ಯಲ್ಲಾಪುರ ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಸಹಾಯಕ ವ್ಯವಸ್ಥಾಪಕನೇ ಬ್ಯಾಂಕಿನ ಖಾತೆಯಿಂದ ತನ್ನ ಹೆಂಡತಿಯ ಖಾತೆಗೆ 2.69 ಕೋಟಿ ರೂ ಹಣ ವರ್ಗಾವಣೆ ಮಾಡಿ ಮೋಸಗೊಳಿಸಿದ ಬಗೆಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿರುವ ಆಂಧ್ರ ಪ್ರದೇಶ ಮೂಲದ ಕುಮಾರ ಕೃಷ್ಣಮೂರ್ತಿ ಬೋನಾಲ ಎಂಬಾತ ಕಳೆದ ಏಪ್ರಿಲ್ 7 ರಿಂದ ಸೆ.9 ರವರೆಗಿನ ಅವಧಿಯಲ್ಲಿ ಮೋಸದಿಂದ ಹಣ ವರ್ಗಾವಣೆ ಮಾಡಿದ್ದಾನೆ. ಬ್ಯಾಂಕ್ ಸಿಬ್ಬಂದಿಯ ಲಾಗಿನ್ನ್ನು ಅವರ ಗಮನಕ್ಕೆ ಬಾರದಂತೆ ಉಪಯೋಗಿಸಿಕೊಂಡು ಆಂಧ್ರದ ಚಿರಲಾದ ಎಸ್.ಬಿ.ಐಯಲ್ಲಿ ಖಾತೆ ಹೊಂದಿರುವ ಪತ್ನಿ ರೇವತಿ ಪ್ರಿಯಾಂಕ ಗೊರ್ರೆಯ ಖಾತೆಗೆ 2.69 ಕೋಟಿ ರೂ ವರ್ಗಾವಣೆ ಮಾಡಿ ಮೋಸ ಮಾಡಿದ್ದಾನೆ. ಈ ಕುರಿತು ಶಾಖಾ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ದೂರು ನೀಡಿದ್ದಾರೆ.
ಹಣಕ್ಕಾಗಿ ಸ್ನೇಹಿತರಿಂದಲೇ ಸ್ನೇಹಿತನ ಕೊಲೆ:
ಕೋಲಾರ: ಹಣಕ್ಕಾಗಿ ಸ್ನೇಹಿತರಿಂದಲೇ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಆವಲಕುಪ್ಪ ಗ್ರಾಮದಲ್ಲಿ ಸೆಪ್ಟೆಂಬರ್-9 ರಂದು ನಡೆದಿದೆ. ಪಾತಪಲ್ಲಿ ಗ್ರಾಮದ ಅಪ್ಪಿರೆಡ್ಡಿ (45) ಕೊಲೆಯಾದ ವ್ಯಕ್ತಿ. ಸೆಪ್ಟೆಂಬರ್-6 ರಂದು ನಿಗೂಡವಾಗಿ ಅಪ್ಪಿರೆಡ್ಡಿ ನಾಪತ್ತೆಯಾಗಿದ್ದ. ಸ್ನೇಹಿತರಾದ ಆಲಂಭಗಿರಿ ಗ್ರಾಮದ ಮಂಜು ಹಾಗೂ ಮಂಜುನಾಥ್ ಎಂಬುವರಿಂದ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಆಯತಪ್ಪಿ ಬೈಕ್ನಿಂದ ಬಿದ್ದ ಸವಾರನ ಮೇಲೆ ಹರಿದ ಬಸ್
ಚಾಮರಾಜನಗರ: ಆಯತಪ್ಪಿ ಬೈಕ್ನಿಂದ ಬಿದ್ದ ಸವಾರನ ಮೇಲೆ ಬಸ್ ಹರಿದಿರುವಂತಹ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ಬಳಿ ನಡೆದಿದೆ. ಕೇರಳ ಸಾರಿಗೆ ಬಸ್ ಹರಿದು ಬೈಕ್ ಸವಾರ ಗೋವಿಂದನಾಯ್ಕ(36) ಮೃತಪಟ್ಟಿದ್ದಾನೆ. ಅಪಘಾತದ ಬಳಿಕ ಬಸ್ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಅಕ್ರಮವಾಗಿ ನಾಡ ಪಿಸ್ತೂಲ್ ಹೊಂದಿದ್ದ ಇಬ್ಬರ ಬಂಧನ
ಕಲಬುರಗಿ: ಅಕ್ರಮವಾಗಿ ನಾಡ ಪಿಸ್ತೂಲ್ ಹೊಂದಿದ್ದ ಇಬ್ಬರು ಆರೋಪಿಗಳನ್ನ ಆಳಂದ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆಳಂದ ತಾಲೂಕಿನ ಖಜೂರಿ ಗ್ರಾಮದ ಹನುಮಂತ ವಾರಿಕ್, ಭೀಮಾಶಂಕರ್ ತಳವಾರ ಬಂಧಿಸಿ ಒಂದು ನಾಡ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ.
ಯುವಕನ ಮೃತ ದೇಹ ಪತ್ತೆ
ಉತ್ತರ ಕನ್ನಡ: ಸಿದ್ದಾಪುರ ತಾಲೂಕಿನ ಹುಕ್ಕಳಿ ಬಳಿಯ ಗುಂಡಿಗದ್ದೆ ಫಾಲ್ಸ್ ನೋಡಲು ಹೋಗಿದ್ದಾಗ ಕಾಲುಜಾರಿ ನೀರುಪಾಲಾಗಿದ್ದವನ ಮೃತದೇಹ ಪತ್ತೆಯಾಗಿದೆ. ಮೂರು ದಿನಗಳ ಬಳಿಕ ರಾಘವೇಂದ್ರಗೌಡ (32) ಮೃತದೇಹ ಪತ್ತೆಯಾಗಿದೆ. ಸ್ನೇಹಿತರೊಂದಿಗೆ ಫಾಲ್ಸ್ ನೋಡಲು ತೆರಳಿದ್ದಾಗ ಕಾಲು ಜಾರಿ ರಾಘವೇಂದ್ರಗೌಡ ಬಿದ್ದಿದ್ದ. ಯುವಕನ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಪತ್ತೆಹಚ್ಚಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲು ಮಾಡಲಾಗಿದೆ.
ರೈನ್ ಬೋ ಲೇಔಟ್ನಲ್ಲಿ ಸರಣಿ ಕಳ್ಳತನ
ಬೆಂಗಳೂರು: ಮನೆಗೆ ನೀರು ನುಗ್ಗಿ ರೈನ್ ಬೋ ಲೇಔಟ್ ಜನರ ಪರದಾಟ ಒಂದು ಕಡೆಯಾದರೆ, ಕಳ್ಳರಿಗೆ ಇದೇ ವರದಾನವಾಗಿದೆ. ರೈನ್ ಬೋ ಲೇಔಟ್ನಲ್ಲಿ ಸರಣಿ ಕಳ್ಳತನ ನಡೆದಿದ್ದು, ಮೂರು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದಾರೆ. ಇಡೀ ಲೇಔಟ್ನಲ್ಲಿ ಕರೆಂಟ್ ಕೂಡ ಇರಲಿಲ್ಲ. ಸಿಸಿಟಿವಿ ಕೂಡ ವರ್ಕ್ ಆಗಲ್ಲ ಅನ್ನೋದನ್ನ ಖಾತರಿ ಪಡಿಸಿಕೊಂಡಿದ್ದ ಖದೀಮರು, ಈ ವೇಳೆ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಮನೆಯವರು ವಾಪಸ್ಸು ಬಂದು ನೋಡಿದಾಗ ಕೃತ್ಯ ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬೆಳ್ಳಂದೂರು ಠಾಣೆ ಪೊಲೀಸರು ಇಳಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.