ಕಾರವಾರ, (ಡಿಸೆಂಬರ್ 18): ಮೂತ್ರ ವಿಸರ್ಜನೆಗೆ ತೆರಳಿದ್ದ ವಿದ್ಯಾರ್ಥಿ ತೆರೆದ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. 8ನೇ ತರಗತಿ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ (14) ಮೃತ ದುರ್ದೈವಿ. ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲೂಕಿನ ಗಾಣದಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ 100 ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದು, ಮೆಡಿಕಲ್ ಔಷಧಿಗಾಗಿ ಭಟ್ಕಳದಲ್ಲಿ ವಾಹನ ನಿಲ್ಲಿಸಲಾಗಿತ್ತು. ಈ ವೇಳೆ ನಿರುಪಾದಿ, ಭಟ್ಕಳದ ತಾಲೂಕು ಪಂಚಾಯತ್ ಎದುರಿನ ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದಾನೆ. ಆದ್ರೆ, ಕತ್ತಲು ಆಗಿದ್ದರಿಂದ ಬಾವಿ ಕಂಡಿಲ್ಲ. ಹಾಗೇ ಆ ಬಾವಿಗೆ ತಡೆಗೋಡೆ ಸಹ ಇರಲಿಲ್ಲ. ಹೀಗಾಗಿ ಏಕಾಏಕಿ ಬಾವಿಯೊಳಗೆ ಬಿದ್ದಿದ್ದಾನೆ.
ನಿರುಪಾದಿ ಬಾವಿಗೆ ಬಿದ್ದ ತಕ್ಷಣ ಜೊತೆಗಿದ್ದ ಬಾಲಕರು ಕೂಗಿಕೊಂಡಿದ್ದಾರೆ. ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದು, ಕೂಡಲೇ ಅಗ್ನಿ ಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಸಹ ಬಾವಿಯಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಮೇಲಕ್ಕೆ ಎತ್ತಿದ್ದಾರೆ. ಬಳಿಕ ಅಸ್ವಸ್ಥಗೊಂಡಿದ್ದ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ನಿರುಪಾದಿ ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ: ಕಾರವಾರ: ಪ್ರವಾಸಕ್ಕೆ ಬಂದಿದ್ದ ನಾಲ್ವರು ಶಾಲಾ ವಿದ್ಯಾರ್ಥಿಗಳು ಸಮುದ್ರ ಪಾಲು
ನಿನ್ನೆ (ಡಿಸೆಂಬರ್ 18) ರಾತ್ರಿ ಗಾಣದಾಳದಿಂದ ಎರಡು ಬಸ್ಸುಗಳಲ್ಲಿ ಹೊರಟಿದ್ದ ವಿದ್ಯಾರ್ಥಿಗಳು ಇಂದು(ಡಿಸೆಂಬರ್ 19) ಬೆಳಿಗ್ಗೆ ಜೋಗ ಜಲಪಾತ ವೀಕ್ಷಿಸಿಕೊಂಡು ಅರಬೈಲ್ ಘಟ್ಟದ ಮೂಲಕ ಹೊನ್ನಾವರ ಮಾರ್ಗವಾಗಿ ಕೊಲ್ಲೂರಿಗೆ ತೆರಳುತ್ತಿದ್ದರು. ಆದ್ರೆ, ಪ್ರಯಾಣದ ಮಧ್ಯ ಭಟ್ಕಳ ತಾಲೂಕು ಪಂಚಾಯತ್ ಕಚೇರಿ ಮುಂಭಾಗದ ಔಷಧಿ ಅಂಗಡಿಯ ಮುಂದೆ ವಾಹನ ನಿಲ್ಲಿಸಲಾಗಿತ್ತು. ಈ ವೇಳೆ ಕೆಲವು ಬಾಲಕರು ಮೂತ್ರ ವಿಸರ್ಜನೆಗಾಗಿ ಔಷಧಿ ಅಂಗಡಿ ಹಿಂದಿರುವ ಖಾಲಿ ಜಾಗಕ್ಕೆ ತೆರಳಿದ್ದಾರೆ. ಆದ್ರೆ ಕತ್ತಲಾಗಿದ್ದರಿಂದ ತಡೆಗೋಡೆ ಇಲ್ಲದ ಬಾವಿ ಕಂಡಿಲ್ಲ. ಅವಸರಲ್ಲಿ ಹೋಗಿ ಬಾವಿಯೊಳಗೆ ಬಿದ್ದಿದ್ದಾನೆ.
ಇನ್ನು ನಿರುಪಾದಿ ಸಾವಿನಿಂದ ವಿದ್ಯಾರ್ಥಿಗಳ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.