ಶಿರೂರು ಗುಡ್ಡ ಕುಸಿತ: ಉಳುವರೆ ಗ್ರಾಮದ 2 ಮನೆ ನೆಲಸಮ, ಕುಟುಂಬ ಬೀದಿಪಾಲು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿದು ಗಂಗಾವಳಿಯಲ್ಲಿ ಬಿದ್ದ ಪರಿಣಾಮ ನದಿ ನೀರು ಉಳುವರೆ ಗ್ರಾಮದೊಳಗೆ ನುಗ್ಗಿದೆ. ಇದರಿಂದ ಎರಡು ಮನೆಗಳು ಸಂಪೂರ್ಣ ನೆಲಸಮವಾಗಿವೆ.
ಕಾರವಾರ, ಜುಲೈ 22: ಉತ್ತರ ಕನ್ನಡ (Uttar Kannada) ಜಿಲ್ಲೆಯ ಅಂಕೋಲಾ (Ankola) ತಾಲೂಕಿನ ಶಿರೂರು (Shiroor) ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದು (Hill Collapse) ಏಳು ದಿನ ಕಳೆದಿದೆ. ನಿರಂತರ ಧಾರಾಕಾರ ಮಳೆಯಲ್ಲೂ ಕೂಡ ಕಾರ್ಯಾಚರಣೆ ಮುಂದುವರೆದಿದೆ. ದಿಢೀರ್ ಕುಸಿದ ಗುಡ್ಡ ಪಕ್ಕದಲ್ಲಿ ಹರಿಯುತ್ತಿದ್ದ ಗಂಗಾವಳಿ ನದಿಯಲ್ಲಿ ಬಿದ್ದಿದೆ. ಗುಡ್ಡ ಬಿದ್ದ ರಭಸಕ್ಕೆ ನದಿಯಲ್ಲಿನ ನೀರು ಕೆಸರುಮಯವಾಗಿ ಮತ್ತೊಂದು ದಂಡೆಯ ಉಳುವರೆ ಗ್ರಾಮದ ಮೇಲೆರಗಿದೆ. ನೀರನ ರಭಸದಿಂದ ಎರಡು ಮನೆಗಳು ಸಂಪೂರ್ಣ ನೆಲಸಮವಾಗಿವೆ. ಇನ್ನೂ ಹಲವು ಮನೆಗಳು ಶಿಥಿಲಗೊಂಡಿವೆ. ಈ ಮನೆಗಳು ಆಗಲೋ ಈಗಲೋ ಬೀಳುವ ಹಂತದಲ್ಲಿವೆ.
ದುರಂತದಲ್ಲಿ 14 ಜನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳುವರೆ ಗ್ರಾಮದ 30ಕ್ಕೂ ಹೆಚ್ಚು ಕುಟುಂಬ ಬೀದಿಪಾಲಾಗಿದ್ದು, ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿವೆ. ಉಳುವರೆ ಗ್ರಾಮದ ಮೀನುಗಾರರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ಶಿರೂರು ಗುಡ್ಡ ಕುಸಿತ ಕಂಡ ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಕಾರಿನಲ್ಲಿ ಒಂದು ಕುಟುಂಬ ಹೋಗುತಿತ್ತು. ಹಠಾತ್ ಆಗಿ ಕಾರು ನಿಲ್ಲಿಸಿ ನಿಧಾನಕ್ಕೆ ಹಿಂದೆ ತೆಗೆದುಕೊಳ್ಳುತ್ತಿದ್ದರು. ನಾನು ಹಿಂದಿನ ಗಾಡಿಯಲ್ಲಿ ಇದ್ದೆ. ಇಳಿದು ಬಂದು ನೋಡಿದೆ. ಗುಡ್ಡ ಕುಸಿಯುತ್ತಾ ಇತ್ತು. ದಿಢೀರಾಗಿ ಅಲ್ಲಿಂದ ಬೇರೆ ಕಡೆ ಹಾರಿದೆ. ಸ್ವಲ್ಪದರಲ್ಲೇ ನನ್ನ ಸಾವು ತಪ್ಪಿತ್ತು. ಇಲ್ಲಿ ಒಂದು ಟೀ ಅಂಗಡಿ ಇತ್ತು. ಟಿ ಅಂಗಡಿಯಲ್ಲಿ ನಾಲ್ಕು ಜನ ಇದ್ದರು. ಗ್ಯಾಸ್ ಟ್ಯಾಂಕರ ಕೂಡ ಇಲ್ಲೇ ನಿಲ್ಲಿಸಿದ್ದರು. ಗ್ಯಾಸ್ ಟ್ಯಾಂಕರ್ ಕೆಳಗೆ ನದಿಗೆ ಬಿದ್ದಿದೆ. ಕಾರು ಮತ್ತು ಟೀ ಅಂಗಡಿಯಲ್ಲಿದ್ದವರು ಸೇರಿ ಸುಮಾರು ಒಂಬತ್ತು ಜನ ಮಣ್ಣಿನಡಿ ಸಿಲುಕಿದ್ದಾರೆ ಎಂದು ಪ್ರತ್ಯಕ್ಷದರ್ಶಿ ರಾಜು ಎಂಬವರು ತಿಳಿಸಿದ್ದಾರೆ.
ಇದನ್ನೂ ಓದಿ: ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿದ್ದ ಲಾರಿ ಚಾಲಕನ ಫೋನ್ ರಿಂಗ್
ಜಿಲ್ಲಾಡಳಿತಕ್ಕೆ ಸವಾಲಾದ ಮೃತದೇಹಗಳ ಪತ್ತೆ ಕಾರ್ಯ
ಶಿರೂರು ಗುಡ್ಡ ಕುಸಿತವಾದ ಸ್ಥಳದಲ್ಲಿ ಮಣ್ಣು ತೆರವು ಮಾಡುವ ಕಾರ್ಯವೇ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ರಸ್ತೆ ಮೇಲೆ ಅರ್ಧದಷ್ಟು ಮಣ್ಣು ಬಿದ್ದಿದ್ದರೆ, ಇನ್ನು ಅರ್ಧದಷ್ಟು ಮಣ್ಣು, ಬಂಡೆ ನದಿಯಲ್ಲಿ ಬಿದ್ದಿದ್ದು, ಗಂಗಾವಳಿ ನದಿ ಅಬ್ಬರ ಜೋರಾಗಿದೆ. ನದಿಯಲ್ಲಿ ಬಿದ್ದಿರುವ ಮಣ್ಣಿನ ರಾಶಿಯಲ್ಲೇ ಉಳಿದವರು ಸಿಲುಕಿರುವ ಶಂಕೆ ಇದೆ. ಹೀಗಾಗಿ ಉಳಿದವರ ಮೃತದೇಹ ಮಣ್ಣಲ್ಲೇ ಇದೆಯಾ, ನೀರಲ್ಲಿ ಕೊಚ್ಚಿ ಹೋಗಿದೆಯಾ ಅಥವಾ ನದಿ ತಳ ಸೇರಿದೆಯಾ ಎಂಬ ಪ್ರಶ್ನೆ ಜಿಲ್ಲಾಡಳಿತಕ್ಕೆ ಕಾಡುತ್ತಿದೆ.
ಮೃತಪಟ್ಟ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ
ದುರಂತದಲ್ಲಿ 10 ಜನ ಸಾವನ್ನಪ್ಪಿದ್ದಾರೆ. ಈವರೆಗೆ 7 ಜನ ಶವ ಪತ್ತೆಯಾಗಿದೆ. ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಗುಡ್ಡ ಕುಸಿದಿರುವ ಆರೋಪ ಕೇಳಿಬಂದಿದ್ದು, ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳುತ್ತೇವೆ. ರಕ್ಷಣಾ ಕಾರ್ಯಾಚರಣೆ ಮುಕ್ತಾಯ ಬಳಿಕ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ