ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ
ಉತ್ತರ ಕನ್ನಡ, ಜೂನ್ 29: ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ (Sirasi-Kumata National Highway) ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಸಾರ್ವಜನಿಕರೊಬ್ಬರು ಬರೆದ ಪತ್ರಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಉತ್ತರ ನೀಡಿದ್ದು, ಕಾಮಗಾರಿ 2025ರ ಡಿಸೆಂಬರ್ 31 ರಂದು ಪೂರ್ಣಗೊಳ್ಳಲಿದೆ ಎಂದು ತಿಳಿಸಿದೆ. ಸಾರ್ವಜನಿಕರೊಬ್ಬರು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಪತ್ರ ಬರೆದು, ತಮ್ಮ ಕಾರಿನಲ್ಲಿ ಶಿರಸಿ-ಕುಮಟಾ ಪ್ರಯಾಣಿಸಲು ಆಹ್ವಾನ ನೀಡಿದ್ದರು.
ಆದರೆ, ಇವರ ಆಹ್ವಾನಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರತಿಕ್ರಿಯೆ ನೀಡಿದ್ದು, “ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಹೊಸ ಗಡುವಿನ ದಿನಾಂಕವನ್ನು 2025ರ ಡಿಸೆಂಬರ್ 31 ಅಂತ ನಿರ್ಧರಿಸಲಾಗಿದೆ” ಎಂದು ಉತ್ತರ ನೀಡಲಾಗಿದೆ. “ನಾನು ಬರೆದ ಪತ್ರಕ್ಕೆ ಮಂತ್ರಿಗಳ ಕಾರ್ಯಾಲಯ ಪ್ರತಿಕ್ರಿಯಿಸದೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ (PIU-Honnavar) ಉತ್ತರ ನೀಡಿರುವುದು ಏಕೆ ಎಂಬುದು ಪ್ರಶ್ನೆಯಾಗಿದೆ” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕುಸಿತ ಆತಂಕ: ತಜ್ಞರ ತಂಡ ಹೇಳಿದ್ದೇನು?
ಸಚಿವಾಲಯ ನೀಡಿದ ಉತ್ತರವೇನು?
- ಹೆದ್ದಾರಿ NH-766E ಕುಮಟಾ (NH-66) ನಿಂದ ಹಾವೇರಿ (NH-48) ವರೆಗೆ ಶಿರಸಿ ಮತ್ತು ಎಕ್ಕಂಬಿ ಮೂಲಕ ಸಂಪರ್ಕಿಸುತ್ತದೆ. ಈ ಯೋಜನೆಯನ್ನು ಎರಡು ಹಂತಗಳಲ್ಲಿ, ಕುಮಟಾದಿಂದ ಶಿರಸಿವರೆಗೆ ಮತ್ತು ಶಿರಸಿಯಿಂದ-ಎಕ್ಕುಂಬಿ-ಹಾವೇರಿವರೆಗೆ, ಎನ್ಹೆಚ್ಎಐವತಿಯಿಂದ EPC ಗುತ್ತಿಗೆದಾರರ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ. ಪ್ರಾದೇಶಿಕ ಸಂಪರ್ಕತೆ ಮತ್ತು ರಸ್ತೆ ಮೂಲಸೌಕರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಆದಾಗ್ಯೂ, ಯೋಜನೆಯ ಆರಂಭದಿಂದಲೇ ಎರಡು ಕಾನೂನು ಅಡೆತಡೆಗಳು ಎದುರಾದವು. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ಭೂಮಿ ಸ್ವಾಧೀನ (LAQ) ಸಮಸ್ಯೆಗಳು, ಅಧಿಕಾರಿಗಳ ವಿಳಂಬ ಮತ್ತು ಅರಣ್ಯ ಅನುಮತಿ ವಿಳಂಬಗಳಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ.
- ಇವೆಲ್ಲದರ ಹೊರತಾಗಿಯೂ, ಕಾಮಗಾರಿ ನಡೆಯುತ್ತಲೇ ಇದೆ.
- ಕುಮಟಾ-ಶಿರಸಿ ವಿಭಾಗ NH766E: ಒಟ್ಟು 54.678 ಕಿ.ಮೀ.ಯಲ್ಲಿ 43.735 ಕಿ.ಮೀ. ಪೂರ್ಣಗೊಂಡಿದೆ. 4.261 ಕಿ.ಮೀ. ಪ್ರಸ್ತುತ ಪ್ರಗತಿಯಲ್ಲಿದೆ. ಉಳಿದ 6.682 ಕಿ.ಮೀ. ಭೂಮಿ ಸ್ವಾಧೀನ (LAQ) ಸಮಸ್ಯೆಗಳಿಂದಾಗಿ ಅಡಚಣೆಯಾಗಿದೆ. ಇದರಲ್ಲಿ, 4.452 ಕಿ.ಮೀ. ಭೂಮಿಯನ್ನು 2025ರ ಜೂನ್ 6 ರಂದು ಎನ್ಹೆಚ್ಎಐಗೆ ಹಸ್ತಾಂತರಿಸಲಾಗಿದೆ. ಇಲ್ಲಿ ರಸ್ತೆ ನಿರ್ಮಾಣವನ್ನು ಮಾನ್ಸೂನ್ ನಂತರ ಪುನರಾರಂಭಿಸಲು ನಿಗದಿಪಡಿಸಲಾಗಿದೆ. 2025ರ ಡಿಸೆಂಬರ್ 31ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಉಳಿದ 2.23 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಶಿರಸಿ ತಾಲೂಕಿನಲ್ಲಿ ಹಾದು ಹೋಗುತ್ತದೆ. ಇಲ್ಲಿ ಭೂಸ್ವಾದಿನ ಸಮಸ್ಯೆಗಳಿಂದಾಗಿ ಕಾಮಗಾರಿ ಇನ್ನೂ ಬಾಕಿ ಇದೆ.
- ಶಿರಸಿ-ಎಕ್ಕುಂಬಿ-ಹಾವೇರಿ NH-766E: ಅರಣ್ಯ ಇಲಾಖೆ ಅನುಮತಿ ಮತ್ತು ಅತಿಕ್ರಮಣ ಸಮಸ್ಯೆಗಳಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. ಅರಣ್ಯ ಇಲಾಖೆ 2025ರ ಮೇ 17 ರಂದು ಅನುಮತಿ ನೀಡಿದೆ. ಆದಾಗ್ಯೂ, ಶಿರಸಿ ಮತ್ತು ಹಾನಗಲ್ ತಾಲೂಕುಗಳಲ್ಲಿನ ಭೂಮಿ ಅತಿಕ್ರಮಣದಿಂದ ಕಾಮಗಾರಿ ವಿಳಂಬವಾಗುತ್ತಿದೆ. ಇದರ ಹೊರತಾಗಿಯೂ, 74.98 ಕಿ.ಮೀ.ಯಲ್ಲಿ 37.25 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾರ್ಯಗಳನ್ನು ಕ್ರಮೇಣ ಕೈಗೊಂಡು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲಾಗುವುದು.
- ಭೂಮಿ ಸ್ವಾಧೀನ, ರಸ್ತೆ ಬಂದ್ ಮಾಡಲು ಮತ್ತು ಅರಣ್ಯ ಇಲಾಖೆ ನೀಡುವ ಅನುಮತಿ ಆಧಾರದ ಮೇಲೆ ಈ ಹಿಂದೆ ಕಾಮಗಾರಿಯನ್ನು ಪೂರ್ಣಗೊಳ್ಳುವ ದಿನಾಂಕವನ್ನು ಅಂದಾಜಿನ ಮೇಲೆ ನಿಗದಿಪಡಿಸಲಾಗಿತ್ತು. ಈ ಎಲ್ಲ ಸವಾಲುಗಳನ್ನು ಎದುರಿಸಿ ಕಾಮಗಾರಿ ವೇಗವಾಗಿ ನಡೆಯುವಂತೆ ಮಾಡಲು ಎನ್ಹೆಎಐ ಜಿಲ್ಲಾ ಆಡಳಿತ ಮತ್ತು EPC ಗುತ್ತಿಗೆದಾರರೊಂದಿಗೆ ಸಕ್ರಿಯವಾಗಿ ಸಮನ್ವಯ ಸಾಧಿಸುತ್ತಿದೆ ಎಂದು ಸಚಿವಾಲಯ ಪತ್ರ ಬರೆದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ