AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಸಿ ಮದುವೆಯಾದ ಮೊದಲ‌ ಪತ್ನಿಗೆ ಟಾರ್ಚರ್; ವಿಚ್ಛೇದನ ನೀಡದೆ ಹಿಂದೂ ಯುವತಿಯನ್ನು ವಿವಾಹವಾದ ಮುಸ್ಲಿಂ ಯುವಕ

ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಅವರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಬೇರೆ ಹೆಣ್ಣಿ‌ನ ಚಟ ಹೊಂದಿದ್ದ ಗಂಡ ಮದುವೆಯಾದರೂ ತನ್ನ ಚಾಳಿಯನ್ನು ಮಾತ್ರ ಬಿಟ್ಟಿರಲಿಲ್ಲ.‌ ಕ್ರಮೇಣ ಆತ ಹಾಗೂ ಆತನ ಮನೆಯವರು ಹಣಕ್ಕೆ ಪೀಡಿಸಲಾರಂಭಿಸಿದಾಗ ಪತ್ನಿ ತನ್ನ ತವರು ಮನೆಯ ಆಸರೆ ಪಡೆದುಕೊಂಡಿದ್ದಳು. ಆದರೂ ತನ್ನ ಪತ್ನಿಯ ಜೊತೆ ಒಳ್ಳೆತನದ ನಾಟಕವಾಡುತ್ತಿದ್ದ ಈ ಭೂಪ. ಇದೀಗ ಕಾನೂನು ಬಾಹಿರವಾಗಿ ಹಿಂದೂ ಸಮುದಾಯದ ಯುವತಿಯ ಜೊತೆ ಮದುವೆಯಾಗಿ ಮೋಸ ಮಾಡಿದ್ದಾನೆ.

ಪ್ರೀತಿಸಿ ಮದುವೆಯಾದ ಮೊದಲ‌ ಪತ್ನಿಗೆ ಟಾರ್ಚರ್; ವಿಚ್ಛೇದನ ನೀಡದೆ ಹಿಂದೂ ಯುವತಿಯನ್ನು ವಿವಾಹವಾದ ಮುಸ್ಲಿಂ ಯುವಕ
ಸಂತ್ರಸ್ಥ ಯುವತಿ
ವಿನಾಯಕ ಬಡಿಗೇರ್​
| Updated By: ಕಿರಣ್ ಹನುಮಂತ್​ ಮಾದಾರ್|

Updated on: Oct 14, 2023 | 8:03 PM

Share

ಉತ್ತರ ಕನ್ನಡ, ಅ.14: ಪರಸ್ಪರ ಪ್ರೀತಿಸಿ ಕಳೆದ 7 ವರ್ಷಗಳಿಂದ ಸಂಸಾರ ಬಂಧನದಲ್ಲಿದ್ದ ಯುವತಿಗೆ, ತನ್ನ ಪತಿಯೇ ಮೋಸ ಮಾಡಿರುವ ಹಿನ್ನಲೆ ಕಾರವಾರ(Karwar) ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2017ರಲ್ಲಿ ದಾಂಡೇಲಿ (Dandeli) ಯ ವಿಜಯ ನಗರದ ನಿವಾಸಿ ನೂರ್ ಜಹಾನ್ ಹಾಗೂ ದಾಂಡೇಲಿಯ ಪಟೇಲ್ ನಗರ ನಿವಾಸಿ ಖಾದರ್ ಅಲಿ ಹಸನ್ ಸಾಬ್ ಶೇಖ್ (27) ದಂಪತಿಯ ಮದುವೆಯಾಗಿತ್ತು. ಒಂದು ವರ್ಷ ನೂರ್ ಜಹಾನ್ ಗಂಡನ ಮನೆಯಲ್ಲಿ ಉತ್ತಮವಾಗಿ ಸಂಸಾರ ನಡೆಸಿದ್ದರು. ಆದರೆ, ಎರಡನೇ ವರ್ಷಕ್ಕೆ ಗಂಡ ಸೇರಿದಂತೆ ಆತನ ಮನೆಯವರು ಕಿರುಕುಳ ನೀಡಲಾರಂಭಿಸಿದ್ದರು. ಬಳಿಕ ಬೇರೆ ಮನೆ ಮಾಡುತ್ತೆನೆಂದು ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದ‌ ಈ ಭೂಪ,, ಬೇರೆ ಯುವತಿಯೊಂದಿಗೆ ಚಕ್ಕಂದ ಪ್ರಾರಂಭಿಸಿದ್ದ.

ಇದನ್ನು ಗಮನಿಸಿದ ಪತ್ನಿ‌‌ ನೂರ್ ಜಹಾನ್ ಜಮಾತ್‌ನತ್ತ ನ್ಯಾಯಕ್ಕಾಗಿ ತೆರಳಿದ್ದರೂ ಯಾವುದೇ ನ್ಯಾಯ ದೊರಕಿರಲಿಲ್ಲ. 2019ರಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ವೇಳೆ ಪೊಲೀಸ್ ಅಧಿಕಾರಿಯೋರ್ವರು ಇಬ್ಬರ ನಡುವೆ ರಾಜಿ ಮಾಡಿಸಿ ಮತ್ತೆ ಸಂಸಾರ ಮಾಡುವಂತೆ ಜೊತೆಯಾಗಿ ಕಳುಹಿಸಿದ್ದರು. ಆದರೆ, ಆತ ಮಾತ್ರ ತನ್ನ ಚಾಳಿಯನ್ನು ಮುಂದುವರಿಸಿದ್ದ. ಮತ್ತೆ ತನ್ನ ಪತ್ನಿಯನ್ನು ತಾಯಿ ಮನೆಯಲ್ಲಿರಿಸಿ ಪತ್ನಿಗೆ ತಿಳಿಯದಂತೆ ಎರಡು ವರ್ಷಗಳ ಕಾಲ ವಿದೇಶಕ್ಕೆ ತೆರಳಿದ್ದನು. ನಂತರ ವಿದೇಶದಿಂದ ಹಿಂತಿರುಗಿದರೂ ಪತ್ನಿಯ ಖರ್ಚಿಗೆ ಏನೂ ಹಣ ನೀಡುತ್ತಿರಲಿಲ್ಲ.

ಇದನ್ನೂ ಓದಿ:ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಗೆ ಮುಂದಾದ ವರ; ಮದುವೆ ಮಂಟಪದಲ್ಲೇ ಜಗಳ, ಕೇಸು ದಾಖಲು

ಈ ರೀತಿ ಪತ್ನಿಯ ಜೊತೆ ಒಳ್ಳೆತನದ ನಾಟಕವಾಡುತ್ತಲೇ, ಇದೇ ವರ್ಷ ಜುಲೈ 13ರಂದು ತನ್ನೂರಿನವಳಾದ ದಾಂಡೇಲಿ ಪಟೇಲ್ ‌ನಗರದ ನಿವಾಸಿ ಹಿಂದೂ ಪರಿಶಿಷ್ಟ ಜಾತಿ ಸಮುದಾಯದ ಐಶ್ವರ್ಯ ರವೀಂದ್ರ ಕಾಂಬ್ಳೆ (23) ಎಂಬಾಕೆಯ ಜೊತೆ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾನೆ. ಅಲ್ಲದೇ, ತನ್ನದು ಮೊದಲ ಮದುವೆ ಎಂಬುದಾಗಿ ಪ್ರತಿಜ್ಞಾ ಪತ್ರದಲ್ಲೂ ಸುಳ್ಳು ಮಾಹಿತಿ ನೀಡಿದ್ದಾನೆ. ಈ ಮದುವೆಗೆ ಮಾನ್ಯತೆ ನೀಡಬಾರದು ಎಂದು ಒತ್ತಾಯಿಸಿರುವ ಮೊದಲ ಪತ್ನಿ, ಈ ಅಪರಾಧದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾಳೆ.

ಅಂದಹಾಗೆ, ನೂರ್ ಜಹಾನ್ ಅವರ ತಂದೆ ಇಹಲೋಹ ತ್ಯಜಿಸಿದ್ದು, ಸದ್ಯಕ್ಕೆ ಆಕೆಯ ಕುಟುಂಬದಲ್ಲಿ ತಾಯಿ, ಅಕ್ಕ ಹಾಗೂ ತಮ್ಮ‌ ಮಾತ್ರ ಇದ್ದಾರೆ. ಪದವಿ ಮುಗಿಸಿರುವ ಪತ್ನಿ‌‌ ನೂರ್ ಜಹಾನ್, ಗಂಡ ತನ್ನನ್ನು ತವರು ಮನೆಯಲ್ಲಿ ಇರಿಸಿದ ಬಳಿಕ ಮೊದಲು ಬೆಳಗಾವಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದು, ಬಳಿಕ ಗೋವಾದ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಮೂಲಕ ತನ್ನ ತವರು ಮನೆಗೆ ಆಸರೆಯಾಗಿದ್ದಾರೆ.‌‌ ನೂರ್ ಜಹಾನ್‌ಳಿಗೆ ಆಗಿರುವ ಮೋಸದಲ್ಲಿ ಭಾಗಿಯಾದ ಆರೋಪಿಯ ತಾಯಿ ಮುಮ್ತಾಜ್ ಹಸನ್‌ ಸಾಬ್ (45), ಸಮೀರ್ ಕುಬಸದ್ (36), ಸಮೀರ್ ನಜೀರ್ ಅಹ್ಮದ್ (26), ಹಸನ್ ಸಾಬ್ ಮೊಹ್ಮದ್ (26), ಆರತಿ ಯಮುನಪ್ಪ (59) ವಿರುದ್ಧ ಕಾರವಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಬೆಂಗಳೂರು: ಪತಿಯ ಬಣ್ಣ ಕಪ್ಪೆಂದು ಅವಹೇಳನ ಮಾಡಿದ ಪತ್ನಿಗೆ ವಿಚ್ಛೇದನ ದಯಪಾಲಿಸಿದ ಹೈಕೋರ್ಟ್!

ಆರೋಪಿಯನ್ನು ಪೊಲೀಸರು ಬಂಧಿಸಿದರೂ ಬೇಲ್ ಮೂಲಕ ಬಿಡುಗಡೆ ಮಾಡಲಾಗಿದೆ. ಇದೇ ವಿಚಾರಕ್ಕೆ ನೂರ್ ಬೇಸರಗೊಂಡಿದ್ದು, ಪೊಲೀಸರು ಕೂಡ ಅಪರಾಧಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆ ಜಿಲ್ಲಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸುತ್ತಲಾರಂಭಿಸಿದ್ದಾರೆ. ಅಲ್ಲದೇ, ತನಗೆ ಅನ್ಯಾಯ ಮಾಡಿದ ತನ್ನ ಪತಿ ಖಾದರ್ ಅಲಿ ಹಸನ್ ಸಾಬ್ ಶೇಖ್, ಆತನ ಕುಟುಂಬಸ್ಥರ ಹಾಗೂ ಮೊದಲ ಪತ್ನಿಯಿದ್ದ ವಿಚಾರ ತಿಳಿದಿದ್ದರೂ ಆತನನ್ನು ಮದುವೆಯಾದ ಐಶ್ವರ್ಯಾ ಎನ್ನುವ ಯುವತಿಯ ವಿರುದ್ಧವೂ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇನ್ನು ನೂರ್ ಸಹಾಯಕ್ಕೆ ನಿಂತಿರುವ ದಾಂಡೇಲಿಯ ಅಂಬೇಡ್ಕರ್ ಸೈನ್ಯ ದಲಿತ ಸಂಘಟನೆ, ನೂರ್ ಜಹಾನ್‌‌ರಿಗೆ ನ್ಯಾಯ ದೊರೆಯದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಒಟ್ಟಿನಲ್ಲಿ ತನಗಾದ ಅನ್ಯಾಯದ ವಿರುದ್ಧ ನ್ಯಾಯ ಪಡೆಯಲು ಅಧಿಕಾರಿಗಳ ಕಚೇರಿಯನ್ನು ಅಲೆದಾಡುತ್ತಿರುವ ನೂರ್ ಜಹಾನ್, ಮುಂದಕ್ಕೆ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ