
ಕಾರವಾರ, ಆಗಸ್ಟ್ 6: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕೈಗಾ ಗ್ರಾಮದ ದಟ್ಟ ಅರಣ್ಯ ಪ್ರದೇಶದಲ್ಲಿ ನಿರ್ಮಿಸಿರುವ ಕೈಗಾ ಅಣು ವಿದ್ಯತ್ ಸ್ಥಾವರ (Kaiga Atomic Power Station) ಕಾರ್ಯಾರಂಭ ಮಾಡಿ 25 ವರ್ಷಗಳು ಕಳೆದಿವೆ. ಹೆಚ್ಚಿನ ವಿದ್ಯುತ್ ಉತ್ಪಾದನೆಗೆ ಅಣು ವಿದ್ಯುತ್ ಸ್ಥಾವರದ ಪಾತ್ರ ಬಹುಮುಖ್ಯ ಆಗಿರುವುದರಿಂದ, ಕೈಗಾದಲ್ಲಿ ಇದುವರೆಗಿನ ನಾಲ್ಕು ಘಟಕಗಳ ಜೊತೆಗೆ ಇನ್ನೆರಡು ಘಟಕಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. 2030ರ ಅಂತ್ಯ ಅಥವಾ 2031ರ ಆರಂಭದಲ್ಲಿ ಕಾರ್ಯಾರಂಭ ಆಗಲಿದೆ ಎಂದು ಅಣು ವಿದ್ಯುತ್ ಕೆಂದ್ರದ ನಿರ್ದೇಶದ ಬಿ.ವಿನೋದ ಕುಮಾರ ತಿಳಿಸಿದ್ದಾರೆ.
ಸುಮಾರು 21 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಎರಡು ನೂತನ ಘಟಕಗಳನ್ನು ಐದು ವರ್ಷದಲ್ಲಿ ಸಂಪೂರ್ಣವಾಗಿ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಹೊಸ ಎರಡು ಘಟಕಗಳು ತಲಾ 700 ಮೆಗಾ ವ್ಯಾಟ್ನಂತೆ ಒಟ್ಟು 1400 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿವೆ ಎಂದು ಬಿ.ವಿನೋದ ಕುಮಾರ ತಿಳಿಸಿದ್ದಾರೆ.
ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ನಾಲ್ಕು ಘಟಕಗಳ 220 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿವೆ. ಆದರೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ದೇಶದ ಅಣು ವಿದ್ಯುತ್ ಉತ್ಪಾದನೆಯಲ್ಲಿ ಮೈಲಿಗಲ್ಲು ಸಾಧಿಸಲು, ಕರ್ನಾಟಕದ ಏಕಮೇವ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸಕಲ ಸಿದ್ಧತೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ದೇಶದ ವಿವಿಧ ರಾಜ್ಯಗಳಿಗೆ ಬೆಳಕು ನೀಡುತ್ತಿರುವ ಕೈಗಾ ಅಣು ವಿದ್ಯುತ್ ಸ್ಥಾವರದಿಂದ, ಕೈಗಾ ಸುತ್ತಲಿನ ಗ್ರಾಮಸ್ಥರ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಣು ವಿದ್ಯುತ್ ಸ್ಥಾವರದ ನಿರ್ದೇಶಕ ಬಿ.ವಿನೋದ, ನಿಸರ್ಗದ ಹತ್ತು ಹಲವು ಮೂಲಗಳಿಂದ ಬರುವ ರೆಡಿಯೇಷನ್ ಪ್ರಮಾಣಕ್ಕಿಂತ ಅಣು ವಿದ್ಯುತ್ ಸ್ಥಾವರದ ರೆಡಿಯೇಷನ್ ಪ್ರಮಾಣ ಬಹಳಷ್ಟು ಕಡಿಮೆ ಇದ್ದು. ಈ ಬಗ್ಗೆ ಜನರು ತಪ್ಪು ತಿಳುವಳಿಕೆಯಿಂದ ಹೊರ ಬರಬೇಕು ಎಂದು ಮನವಿ ಮಾಡಿದರು. ಇದೇ ವಿಚಾರವನ್ನು ಅಣು ವಿದ್ಯುತ್ ಸ್ಥಾವರದ ಹಿರಿಯ ವಿಜ್ಞಾನಿ ತಿಪ್ಪೆಸ್ವಾಮಿ ಕೂಡ ಒತ್ತಿಹೇಳಿದ್ದಾರೆ.
ಇದನ್ನೂ ಓದಿ: ಕಾರವಾರ: ಡಿಜಿಟಲ್ ಅರೆಸ್ಟ್ ಭೀತಿಗೆ 89.90 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು, 1989 ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನಿರ್ಧರಿಸಿದ್ದವು. ಅದಾದ ಬಳಿಕ ಕೈಗಾ ಗ್ರಾಮಕ್ಕೆ ಗ್ರಾಮವನ್ನೇ ಬೇರೆ ಕಡೆಗೆ ಸ್ಥಳಾಂತರ ಮಾಡಿ 1992 ರಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲಾಯಿತು. 2000 ರಲ್ಲಿ ಒಂದು ಮತ್ತು ಎರಡನೇ ಘಟಕ ಆರಂಭ ಮಾಡಬೇಕಿತ್ತು ಆದರೆ, ತಾಂತ್ರಿಕ ಕಾರಣಗಳಿಂದ ಎರಡನೇ ಘಟಕ ಆರಂಭ ಮಾಡಿ ಆದಾದ ಕೆಲ ತಿಂಗಳ ಬಳಿಕ ಒಂದನೇ ಘಟಕವೂ ಆರಂಭ ಮಾಡಲಾಗಿತ್ತು. ಸದ್ಯ ಒಟ್ಟು ನಾಲ್ಕು ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೂ 13 ಸಾವಿರ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿವೆ ಎಂದು ವಿನೋದ ಕುಮಾರ ತಿಳಿಸಿದ್ದಾರೆ.