ಜಿಲ್ಲೆಗೇ ಸಿಗದ ಕಾಳಿ ನೀರನ್ನು ಉ. ಕರ್ನಾಟಕದ 5 ಜಿಲ್ಲೆಗೆ ಬಿಡಲು ಸಾಧ್ಯವಿಲ್ಲ: ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಉ. ಕನ್ನಡ ಜನ

| Updated By: ಆಯೇಷಾ ಬಾನು

Updated on: Mar 24, 2022 | 3:31 PM

ಕಾಳಿ ತಿರುವು ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯ ಜನ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೊದಲು ನಮ್ಮ ಜಿಲ್ಲೆಗೆ ಸರಿಯಾಗಿ ನೀರು ಪೂರೈಕೆ ಮಾಡುವ ಯೋಜನೆ ಮಾಡಿ, ಅದನ್ನ ಬಿಟ್ಟು ಬೇರೆ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಲು ಸರ್ಕಾರ ಮುಂದಾಗಿದೆ‌.

ಜಿಲ್ಲೆಗೇ ಸಿಗದ ಕಾಳಿ ನೀರನ್ನು ಉ. ಕರ್ನಾಟಕದ 5 ಜಿಲ್ಲೆಗೆ ಬಿಡಲು ಸಾಧ್ಯವಿಲ್ಲ: ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಉ. ಕನ್ನಡ ಜನ
ಕಾಳಿ ನದಿಯಿಂದ ಉತ್ತರ ಕರ್ನಾಟಕಕ್ಕೆ ನೀರು ಹರಿಸುವ ಸರ್ಕಾರದ ಯೋಜನೆಗೆ ವಿರೋಧ
Follow us on

ಕಾರವಾರ: ಉತ್ತರಕನ್ನಡ ಜಿಲ್ಲೆಯ ಜೀವನದಿ ಕಾಳಿ ನೀರನ್ನ (Kali River) ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಈ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಕಾಳಿ ತಿರುವು ಯೋಜನೆಗೆ ಉತ್ತರ ಕನ್ನಡ ಜಿಲ್ಲೆಯ ಜನ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮೊದಲು ನಮ್ಮ ಜಿಲ್ಲೆಗೆ ಸರಿಯಾಗಿ ನೀರು ಪೂರೈಕೆ ಮಾಡುವ ಯೋಜನೆ ಮಾಡಿ, ಅದನ್ನ ಬಿಟ್ಟು ಬೇರೆ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಲು ಸರ್ಕಾರ ಮುಂದಾಗಿದೆ‌. ಕಾಳಿ ತಿರುವು ಯೋಜನೆ ಅನ್ ಸೈಂಟಿಫಿಕ್ ಆಗಿದೆ ಇದನ್ನ ಸರ್ಕಾರ ಕೈ ಬಿಡಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಜನ ಒತ್ತಾಯಿಸುತ್ತಿದ್ದಾರೆ.

ಯೋಜನೆ ಕೈ ಬಿಡುವಂತೆ ಉ.ಕ ಜಿಲ್ಲೆಯ ಜನರ ಒತ್ತಾಯ
ಒಂದೆಡೆ ವಿಶಾಲವಾದ ಕರಾವಳಿ ತೀರ, ಇನ್ನೊಂದೆಡೆ ಪಶ್ಚಿಮ ಘಟ್ಟಗಳ ಸರಣಿಯನ್ನ ಹೊದ್ದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಹಲವು ನದಿಗಳು ಹರಿಯುತ್ತವೆ. ಜಿಲ್ಲೆಯ ಜೊಯಿಡಾ ತಾಲೂಕಿನ ಡಿಗ್ಗಿಯಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದು ಕಾರವಾರದಲ್ಲಿ ಅರಬ್ಬೀ ಸಮುದ್ರ ಸೇರುವ ಕಾಳಿ, ಜಿಲ್ಲೆಯ ಜೀವನದಿಯೂ ಹೌದು. 184 ಕಿ.ಮೀ. ಉದ್ದದ ಈ ನದಿಯ ಹರಿವಿನುದ್ದಕ್ಕೂ ಸೂಪಾ, ಕೊಡಸಳ್ಳಿ, ಕದ್ರಾಗಳಲ್ಲಿ ಅಣೆಕಟ್ಟುಗಳನ್ನ ಕಟ್ಟಿ ಜಲವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಹರಿದುಬರುವ ಈ ಕಾಳಿ ನದಿಯನ್ನ ಲಕ್ಷಾಂತರ ಜನರು ಅವಲಂಬಿಸಿದ್ದು ಮೀನುಗಾರರ ಮೀನುಗಾರಿಕೆಗೂ ಈ ನದಿ ಆಧಾರವಾಗಿದೆ. ಅದೆಷ್ಟೋ ಜಲಚರ, ಜೀವ-ಜಂತುಗಳಿಗೂ ಈ ಕಾಳಿ ಜೀವನಾಡಿ. ಇಂತಹ ಕಾಳಿ ನದಿಯಿಂದ ಈಗಾಗಲೇ ದಾಂಡೇಲಿಯಿಂದ ಧಾರವಾಡದ ಅಳ್ನಾವರಕ್ಕೆ ಕುಡಿಯುವ ನೀರು ಕೊಂಡೊಯ್ಯಲು ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಇದರ ನಡುವೆ ಮತ್ತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಇದೇ ಕಾಳಿ ನದಿಯಿಂದ ನೀರು ಪೂರೈಸುವ ಯೋಜನೆಯನ್ನ 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವುದು ಉತ್ತರಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲೇ ಸಾಕಷ್ಟು ಭಾಗಗಳಿಗೆ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುತ್ತಿದ್ದು ಕಾಳಿ ನದಿಯಿಂದ ನೀರು ಪೂರೈಕೆ ಮಾಡಬೇಕೆನ್ನುವ ಬೇಡಿಕೆಯಿದೆ. ಹೀಗಿರುವಾಗ ಜಿಲ್ಲೆಗೇ ಸಿಗದ ನೀರು ಹೊರಜಿಲ್ಲೆಗಳಿಗೆ ನೀಡಲು ಮುಂದಾಗಿರುವುದು ಸರಿಯಲ್ಲ ಎನ್ನುವ ಅಸಮಾಧಾನ ವ್ಯಕ್ತವಾಗಿದೆ.

ಕಾಳಿ ನದಿಯಿಂದ ಉತ್ತರ ಕರ್ನಾಟಕಕ್ಕೆ ನೀರು ಹರಿಸುವ ಸರ್ಕಾರದ ಯೋಜನೆಗೆ ವಿರೋಧ

ಇನ್ನು ಕಾಳಿ ನದಿ ಹುಟ್ಟುವ ಜೋಯಿಡಾ ತಾಲೂಕಿನ ಅದೆಷ್ಟೋ ಹಳ್ಳಿಗಳಲ್ಲಿ ಈಗಲೂ ನೀರಿನ ತತ್ವಾರ ಇದೆ. ಕಾಳಿ ನದಿ ಸಮುದ್ರ ಸೇರುವ ಕಾರವಾರ, ಅಂಕೋಲಾ ತಾಲೂಕುಗಳಲ್ಲಿ ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಏಷ್ಯಾದ ಅತಿದೊಡ್ಡ ಯೋಜನೆ ಸೀಬರ್ಡ್ ನೌಕಾನೆಲೆಗೆ ಅಘನಾಶಿನಿಯಿಂದ ನೀರು ಪೂರೈಕೆಯಾಗುವ ಕಾರಣ ಕಾರವಾರ, ಅಂಕೋಲಾ ತಾಲೂಕುಗಳಿಗೆ ನೀರು ಸಿಗುತ್ತಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಸೀಬರ್ಡ್ ಎರಡನೇ ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ಇನ್ನಷ್ಟು ನೀರಿನ ಅಭಾವ ಕೂಡ ಸೃಷ್ಟಿಯಾಗಲಿದೆ. ಇವೆಲ್ಲದರ ನಡುವೆ ಏಕಾಏಕಿ ಐದು ಜಿಲ್ಲೆಗಳಿಗೆ ನೀರು ಪೂರೈಕೆ ಮಾಡುವ ಯೋಜನೆ ಪ್ರಸ್ತಾಪವಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಜೊತೆಗೆ ಅಳ್ನಾವರಕ್ಕೆ ನೀರು ಕೊಂಡೊಯ್ಯಲು ಪೈಪ್ ಲೈನ್ ಯೋಜನೆ ಮಾಡುತ್ತಿರುವ ಸರ್ಕಾರ ಈ ಯೋಜನೆಯನ್ನ ಗುಪ್ತವಾಗಿ ವಿಸ್ತರಿಸಿತ್ತಿದೆ ಎಂಬ ಆರೋಪಗಳು ದಟ್ಟವಾಗಿ ಕೇಳಿ ಬರುತ್ತಿವೆ. ಕಾರಣ ಅಳ್ನಾವರನಲ್ಲಿರುವ 18 ಸಾವಿರ ಜನಕ್ಕೆ ಕೂಡಿಯುವ ನೀರು ಕಡಿಮೆ ಪ್ರಮಾಣದಲ್ಲಿ ಬೇಕು ಅದಕ್ಕೆ 14 ರಿಂದ 18 ಇಂಚಿನ ಸಣ್ಣ ಪೈಪ್ ಲೈನ್ ಮಾಡಿದ್ರೆ ಸಾಕು, ಅದನ್ನ ಬಿಟ್ಟು ಮೀಟರ್ ಗಟ್ಟಲೇ ದೊಡ್ಡ ದೊಡ್ಡ ಪೈಪ್ ಲೈನ್‌ಗಳನ್ನ ಅಳವಡಿಕೆ ಮಾಡುತ್ತಿರುವುದು ಸರ್ಕಾರ ಸದ್ದಿಲ್ಲದೆ ಕಾಳಿ ತಿರುವು ಯೋಜನೆ ಪ್ರಾರಂಭಿಸಿದೆ. ಅಳ್ನಾವರದಿಂದ ಕೇವಲ 17 ಕಿಮೀ ನಲ್ಲಿ ಘಟಪ್ರಭಾ ನದಿ ಬರುತ್ತೆ ಅದಕ್ಕೆ ಜೋಡನೆ ಮಾಡಿ ಈ ನೀರನ್ನ ಸಕ್ಕರೆ ಖಾರ್ಕಾನೆ ಕೊಂಡೊಯ್ಯಲು ಸರ್ಕಾರ ಮುಂದಾಗಿದೆ ಎನ್ನುತ್ತಿದ್ದಾರೆ ಇಲ್ಲಿಯ ಜನ. ಹೀಗಾಗಿ ಇದರಲ್ಲಿ ರಾಜಕೀಯ ವ್ಯಕ್ತಿಗಳ ಕೈವಾಡವಿದೆ ಸರ್ಕಾರ ಯೋಜನೆ ಕೈ ಬಿಡಬೇಕು ಇಲ್ಲವಾದಲ್ಲಿ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

ಇನ್ನು ಕಾಳಿ ನದಿ ನೀರನ್ನ ಅವಲಂಬಿಸಿದ ಉ.ಕ ಜಿಲ್ಲೆಯ ಯೋಜನೆಗಳು ಹೀಗಿವೆ.
-ಕೈಗಾ ಅಣು ವಿದ್ಯುತ್ ಸ್ಥಾವರ.
-ದಾಂಡೇಲಿ ಕಾಗದ ಕಾರ್ಖಾನೆ.
-ಹಳಿಯಾಳ ಸಕ್ಕರೆ ಕಾರ್ಖಾನೆ.
-ದಾಂಡೇಲಿ ಮೊಸಳೆ ಉದ್ಯಾನ.
-ಕಾಳಿ ಹುಲಿ ಸಂರಕ್ಷಿತ ಪ್ರದೇಶ.
-ಪ್ರವಾಸೋದ್ಯಮದ ಚಟುವಟಿಕೆಗಳು.
-ದಾಂಡೇಲಿ ನಗರಕ್ಕೆ ಕುಡಿಯುವ ನೀರು.ಕೆ. ಪಿ.ಸಿ.ಎಲ್ ಅಂಬಿಕಾನಗರಕ್ಕೆ ನೀರು.
-ಹಳಿಯಾಳ ಪಟ್ಟಣಕ್ಕೆ 24/7 ನೀರು . ಈ ಯೋಜನೆಗಳಿಗೆ ಸಾಕಷ್ಟು ನೀರು ಬೇಕು ಹಂತದ್ರಲ್ಲಿ ಬೇರೆ ಕಡೆ ನೀರು ಒಯ್ಯುವುದು ಸೂಕ್ತವಲ್ಲ ಎನ್ನುವುದು ಜನರ ವಾದವಾಗಿದೆ.

ಇನ್ನು ಕಾಳಿ ನೀರನ್ನ ಅವಲಂಭಿಸಿ ಮುಂಬರುವ ಯೋಜನೆಗಳು
-ಅಳ್ನಾವರಕ್ಕೆ ಕುಡಿಯುವ ನೀರು, ಬಹುಗ್ರಾಮ ಕುಡಿಯುವ ನೀರು ಸರಬರಾಜು, ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಎರಡು ಹೊಸ ಘಟಕಗಳು, ಹಳಿಯಾಳ ಸಕ್ಕರೆ ಕಾರ್ಖಾನೆಯ ಸಾಮರ್ಥ್ಯ ದ್ವಿಗುಣ‌, ದಾಂಡೇಲಿ ಪೇಪರ್ ಮಿಲ್‌ನಲ್ಲಿ ಉತ್ಪಾದನೆ ಹೆಚ್ಚಳ. ನೀರು ಇರುವ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಲ್ಲಿನ ನೀರನ್ನು ಕೊಂಡೊಯ್ದರೆ ಪ್ರವಾಸೋದ್ಯಮ, ಪರಿಸರ ಮತ್ತು ವನ್ಯಜೀವಿಗಳಿಗೆ ತೊಂದರೆಯಾಗಲಿದೆ ಎನ್ನುವುದು ಜನರ ವಾದವಾಗಿದೆ.

ಇನ್ನು ನಿಗೂಢವಾಗಿ ಕಾಳಿ ನೀರನ್ನ ಘಟಪ್ರಭಾ ನದಿಗೆ ಒಯ್ಯಲು ಎಲ್ಲ ಸಿದ್ಧತೆಯನ್ನ ಸರ್ಕಾರ ಸದ್ಧಿಲ್ಲದೆ ಮಾಡುತ್ತಿದೆ. ಬೃದಾಕಾರದ ಜಾಕ್ವೆಲ್ ಗಳನ್ನ ನಿರ್ಮಾಣ ಮಾಡುತ್ತಿದೆ. ಸ್ಥಳೀಯರ ವಿರೋಧದ ನಡುವೆ ಯೋಜನೆ ಕೈಗೆತ್ತುಕೊಂಡಿದೆ..ಕಾರಣ ಬೆಳಗಾವಿ, ಚಿಕ್ಕೋಡಿ, ಧಾರವಾಡ, ಬಾಗಲಕೋಟ ಭಾಗದಲ್ಲಿ ರಾಜಕೀಯ ಮುಖಂಡರಿಗೆ ಸೇರಿದ ಸಕ್ಕರೆ ಖಾರ್ಕಾನೆಗಳು ಇವೆ. ಖಾರ್ಕಾನೆ ನಡೆಸಲು ಸಾಕಷ್ಟು ನೀರು ಬೇಕು. ಹೀಗಾಗಿ ಘಟಪ್ರಭಾ ನದಿಗೆ ಮಹದಾಯಿ ನದಿಯಿಂದ ನೀರು ತರವು ಯೋಜನೆ ಸರ್ಕಾರ ರೂಪಿಸಿತ್ತು, ಅದು ಸಾಕಾರಗೊಳ್ಳದ ಹಿನ್ನೆಲೆ ಕಾಳಿ ನೀರಿನ ಮೇಲೆ ಕಣ್ಣಾಕಿದೆ. ಇದು ಸರಿ ಅಲ್ಲ, ಈ ಯೋಜನೆ ಸಂಪೂರ್ಣ ಅವೈಜ್ಞಾನಿಕ ವಾಗಿದ್ದು ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇನ್ನೂ ಪ್ರವಾಸೋದ್ಯಮ ಕೂಡ ಕಾಳಿ ನದಿ ನೀರನ್ನ ಅವಲಂಬಿಸಿದೆ ಸಾಕಷ್ಟು ಹೋಮ್ ಸ್ಟೇ, ರೇಸಾಟ್೯, ಪಾಕ್೯ ಎಲ್ಲವುಗಳು ಕಾಳಿ ನೀರನ್ನ ಅವಲಂಬಿಸಿವೆ ಇವುಗಳಿಗೆ ಸಾಕಷ್ಟು ಹೊಡೆತ ಬೀಳುತ್ತೆ ಎನ್ನುವುದು ಜನರವಾದವಾಗಿದೆ‌.. ಇನ್ನೂ ಈ ಯೋಜನೆ ವಿರೋಧಿಸಿ ಜೋಯಿಡಾ, ದಾಂಡೇಲಿ, ರಾಮನಗರ ದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.. ಸರ್ಕಾರ ಮತ್ತೊಮ್ಮೆ ಈ ಯೋಜನೆ ಬಗ್ಗೆ ಸಮಗ್ರ ವರದಿ ತಯಾರಿಸಿ ಸಾಧಕ ಭಾದಕಗಳನ್ನ ತಿಳಿದುಕೊಳ್ಳ ಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.

ಒಟ್ಟಾರೇ ದೀಪದ ಬುಡದಲ್ಲೇ ಕತ್ತಲೇ ಎನ್ನುವಂತೆ ಕಾಳಿ ನದಿಯಿಂದ ಜಿಲ್ಲೆಗೇ ನೀರು ಸಿಗದ ಪರಿಸ್ಥಿತಿಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ನೀರು ಪೂರೈಸಲು ಸರ್ಕಾರ ಯೋಜನೆ ಘೋಷಿಸಿರೋದು ನಿಜಕ್ಕೂ ದುರಂತವೇ. ಈ ಬಗ್ಗೆ ಜನಪ್ರತಿನಿಧಿಗಳು ಸ್ಥಳೀಯರ ಅಭಿಪ್ರಾಯ ಪಡೆದು ಸರ್ಕಾರಕ್ಕೆ ಮನವರಿಗೆ ಮಾಡಬೇಕಾದ ಅಗತ್ಯವಿದ್ದು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದು ತೀವ್ರ ಹೋರಾಟಕ್ಕೆ ಕಾರಣವಾಗೋದಂತೂ ಸತ್ಯ. ಜೊತೆಗೆ ಸದ್ದಿಲ್ಲದೆ ಕಾಳಿ ತಿರುವು ಯೋಜನೆ ತಯಾರಿ ಸರ್ಕಾರ ನಡೆಸುತ್ತಿದೆ. ಇದನ್ನ ಕೈ ಬಿಟ್ಟು ಯೋಜನೆ ಬಗ್ಗೆ ಸಂಪೂರ್ಣ ವರದಿ ನೋಡಿ ನಂತರದಲ್ಲಿ ಕೈಹಾಕಲಿ ಎನ್ನವುದು ಜನರ ವಾದ.

ವರದಿ: ವಿನಾಯಕ ಬಡಿಗೇರ, ಟಿವಿ9 ಕಾರವಾರ

ಇದನ್ನೂ ಓದಿ: ಪೊಲೀಸ್ ವೈಫಲ್ಯಕ್ಕೆ ಯಾರು ಹೊಣೆ: ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಸಂಬಂಧಿ ಅರೆಸ್ಟ್, ರಕ್ತಸ್ರಾವದಿಂದ ಮೃತಪಟ್ಟ ಮಗು

Published On - 3:29 pm, Thu, 24 March 22