Uttara Kannada Flood: ಉತ್ತರ ಕನ್ನಡ: ಪ್ರವಾಹ, ಭೂಕುಸಿತದಿಂದ 737 ಕೋಟಿ ಮೌಲ್ಯದ ಮೂಲಭೂತ ಸೌಕರ್ಯಕ್ಕೆ ಹಾನಿ

348 ಮನೆಗಳು ತೀವ್ರತರ ಹಾಗೂ 816 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಶಿರಸಿಯಲ್ಲಿ 9, ಜೊಯಿಡಾದಲ್ಲಿ 2 ಹಾಗೂ ಯಲ್ಲಾಪುರದ ನಾಲ್ಕು, ಒಟ್ಟು 15 ಕಡೆಗಳಲ್ಲಿ ಗುಡ್ಡ ಕುಸಿತವಾಗಿವೆ.

Uttara Kannada Flood: ಉತ್ತರ ಕನ್ನಡ: ಪ್ರವಾಹ, ಭೂಕುಸಿತದಿಂದ 737 ಕೋಟಿ ಮೌಲ್ಯದ ಮೂಲಭೂತ ಸೌಕರ್ಯಕ್ಕೆ ಹಾನಿ
2021 ಜುಲೈ 22ರವರೆಗೆ ಹೀಗಿದ್ದ ಝರಿ ಈಗ ಬದಲಾದ ಸ್ವರೂಪ..
Follow us
TV9 Web
| Updated By: guruganesh bhat

Updated on: Jul 31, 2021 | 10:25 PM

ಕಾರವಾರ: ಉತ್ತರ ಕನ್ನಡ ಕಳೆದ ವಾರ ಮಳೆಯ ಕೋಪಕ್ಕೆ ಅಕ್ಷರಶಃ ನಲುಗಿಹೋಗಿತ್ತು. ಇದೀಗ ಇಡೀ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಮಳೆಯ ಪ್ರಮಾಣ ಮತ್ತು ಆದ ಹಾನಿಯ ಮೊತ್ತವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ (Uattara Kannada Flood) ಜುಲೈ 22ರ ಬೆಳಗ್ಗೆ 8:30ರಿಂದ 23ರ ಬೆಳಗ್ಗೆ 6:45ರವರೆಗೆ ವಾಡಿಕೆಗಿಂತ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ (Karnataka Rain) ಸುರಿದಿದೆ. ಜುಲೈ 22ರ ಘಟ್ಟದ ಮೇಲ್ಭಾಗದ ಪ್ರತಿವರ್ಷದ ವಾಡಿಕೆ ಮಳೆ ಸರಾಸರಿ 24 ಮಿ.ಮೀ ಆಗಿದ್ದರೆ ಈವರ್ಷ ಮಾತ್ರ 237 ಮಿ.ಮೀ ಮಳೆ ಸುರಿದಿದೆ. ಕರಾವಳಿಯಲ್ಲಿ ಅದೇ ದಿನದ ವಾಡಿಕೆ ಮಳೆ 42 ಮಿ.ಮೀ ಇದ್ದರೆ ಈವರ್ಷ 143 ಮಿ.ಮೀ ಮಳೆ ಸುರಿದಿದೆ. ಅಂದರೆ ಘಟ್ಟದ ಮೇಲ್ಭಾಗದ ತಾಲ್ಲೂಕುಗಳಲ್ಲಿ ವಾಡಿಕೆಗಿಂತ 10 ಪಟ್ಟು ಮಳೆ, ಘಟ್ಟದ ಕೆಳಭಾಗದ ತಾಲ್ಲೂಕುಗಳಲ್ಲಿ 3.4 ಪಟ್ಟು ಮಳೆ ಹೆಚ್ಚು ಸುರಿದಿದೆ. ಜಿಲ್ಲೆಯಲ್ಲಿ ಈಬಾರಿ 16,357 ಪ್ರವಾಹ ಸಂತೃಸ್ತರನ್ನು ಸ್ಥಳಾಂತರಿಸಲಾಗಿದೆ.

ಜೋಯಿಡಾ ತಾಲೂಕಿನ ಕ್ಯಾಸಲ್‌ರಾಕ್‌ನಲ್ಲಿ 458 ಮಿ.ಮೀ., ಶಿರಸಿ ತಾಲೂಕಿನ ಇಟಗುಳಿಯಲ್ಲಿ.452 ಮಿ.ಮೀ., ಸಿದ್ದಾಪುರ ತಾಲೂಕಿನ ಬಿದ್ರಕಾನಿನಲ್ಲಿ.395.2 ಮಿ.ಮೀ., ಅಂಡಗಿಯಲ್ಲಿ 394.2 ಮಿ.ಮೀ., ಸಾಲ್ಕಣಿಯಲ್ಲಿ 359.6 ಮಿ.ಮೀ., ಮೇಲಿನ ಓಣಿಕೇರಿಯಲ್ಲಿ 352 ಮಿ.ಮೀ., ಸಿದ್ದಾಪುರ ತಾಲೂಕಿನ ಕಾನ್ಸೂರಿನಲ್ಲಿ 350.3 ಮಿ.ಮೀ., ಭೈರುಂಬೆಯಲ್ಲಿ 346.4 ಮಿ.ಮೀ. ಮಳೆಯಾಗಿದೆ.

737.54 ಕೋಟಿ ಮೌಲ್ಯದ ಮೂಲಭೂತ ಸೌಕರ್ಯಗಳಿಗೆ ಹಾನಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜುಲೈ 22ರಿಂದ ಸುರಿದ ವ್ಯಾಪಕ ಮಳೆಯಿಂದ ಉಂಟಾದ ಪ್ರಾಕೃತಿಕ ವಿಕೋಪಗಳ ಪ್ರಮಾಣವನ್ನು ದಾಖಲಿಸಿರುವ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಜಿಲ್ಲಾಡಳಿತ ಸಲ್ಲಿಸಿರುವ ವರದಿಯಲ್ಲಿ ಸುಮಾರು 737.54 ಕೋಟಿ ಮೌಲ್ಯದ ರಸ್ತೆ, ಸೇತುವೆ ಮತ್ತು ಇತರ ಮೂಲಭೂತ ಸೌಕರ್ಯಗಳು ಹಾನಿಗೊಳಗಾಗಿದೆ ಎಂದು ತಿಳಿಸಲಾಗಿದೆ.

ಜಿಲ್ಲೆಯಲ್ಲಿ 202.65 ಕಿ.ಮೀ. ರಾಜ್ಯ ಹೆದ್ದಾರಿ, 576.77 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆ, 627.45 ಕಿ.ಮೀ. ಗ್ರಾಮೀಣ ಮುಖ್ಯ ರಸ್ತೆ ಹಾಗೂ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ 43.41 ಕಿ.ಮೀ. ರಸ್ತೆ ಹಾನಿಗೊಳಗಾಗಿದೆ. ಇವುಗಳ ಅಂದಾಜು ಮೊತ್ತ 387.80 ಕೋಟಿ ಎಂದು ವರದಿಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ 95 ಕೋಟಿ ಅಂದಾಜು ಮೊತ್ತದ ರಾಷ್ಟ್ರೀಯ ಹೆದ್ದಾರಿಗೂ ಹಾನಿಯಾಗಿವೆ.

ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆ ವ್ಯಾಪ್ತಿಯಲ್ಲಿ ಬರುವ 59 ಸೇತುವೆಗಳಿಗೆ ಹಾನಿಯಾಗಿದ್ದು, ಇವುಗಳ ಅಂದಾಜು ಹಾನಿಯ ಮೊತ್ತ 10.37 ಕೋಟಿ ಎಂದು ಜಿಲ್ಲಾಡಳಿತ ತಿಳಿಸಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ 139.46 ಕೋಟಿ ಅಂದಾಜು ವೆಚ್ಚದ 247 ಸೇತುವೆಗಳಿಗೆ ನೆರೆಯಿಂದ ಹಾನಿಯಾಗಿದೆ. 95 ಶಾಲಾ ಕಟ್ಟಡಗಳು, 33 ಅಂಗನವಾಡಿ, 4 ಸಮುದಾಯ ಭವನ ಹಾಗೂ 3 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾನಿಯಾಗಿದ್ದು, ಇವುಗಳ ಅಂದಾಜು ಹಾನಿಯ ವೆಚ್ಚ 4.93 ಕೋಟಿ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 74, ನಗರಾಭಿವೃದ್ಧಿ ಇಲಾಖೆಯ 1 ಹಾಗೂ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯ ಕುಡಿಯುವ ನೀರಿನ ಯೋಜನೆಗಳಿಗೆ ಹಾನಿಯಾಗಿದ್ದು, ಇವುಗಳ ಅಂದಾಜು ಹಾನಿಯ ಮೊತ್ತ 5.54 ಕೋಟಿಯಾಗಿದೆ. ಇದರೊಂದಿಗೆ ಸಣ್ಣ ನೀರಾವರಿ ಯೋಜನೆಗಳಲ್ಲಿ ಬರುವ 53 ಕಾಲುವೆ, 160 ಬಾಂದಾರು, 16 ಏತ ನೀರಾವರಿ ಯೋಜನೆಗೆ ಪ್ರವಾಹದಿಂದಾಗಿ ಹಾನಿಯುಂಟಾಗಿ 89.92 ಕೋಟಿ ನಷ್ಟ ಸಂಭವಿಸಿದೆ. ಹೆಸ್ಕಾಂಗೆ ಸಂಬಂಧಿಸಿದಂತೆ 2046 ವಿದ್ಯುತ್ ಕಂಬಗಳು, 94 ಟ್ರಾನ್ಸ್ಫಾರ್ಮರ್ಸ್, 107 ಕಿ.ಮೀ. ವಿದ್ಯುತ್ ಲೈನ್, ಒಟ್ಟು ಅಂದಾಜು 4.49 ಕೋಟಿಯಷ್ಟು ಮೊತ್ತದ ಸೌಕರ್ಯಗಳಿಗೆ ಹಾನಿಯಾಗಿವೆ.

ಜಿಲ್ಲೆಯಲ್ಲಿ ಪ್ರವಾಹದಿಂದ ಸುಮಾರು 8984 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, 1123.28 ಹೆಕ್ಟೇರ್ ಕೃಷಿ ಹಾಗೂ 562.65 ಹೆಕ್ಟೇರ್ ತೋಟಗಾರಿಕಾ ಭೂಮಿಗಳು ಹಾನಿಗೊಳಗಾಗಿವೆ. ಇದಲ್ಲದೇ ನೆರೆಯಿಂದ 51 ಜಾನುವಾರು ಮೃತಪಟ್ಟಿದ್ದು, 310 ಮನೆಗಳು ಪೂರ್ಣ ಕುಸಿದು ಬಿದ್ದಿವೆ. 348 ಮನೆಗಳು ತೀವ್ರತರ ಹಾಗೂ 816 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಶಿರಸಿಯಲ್ಲಿ 9, ಜೊಯಿಡಾದಲ್ಲಿ 2 ಹಾಗೂ ಯಲ್ಲಾಪುರದ ನಾಲ್ಕು, ಒಟ್ಟು 15 ಕಡೆಗಳಲ್ಲಿ ಗುಡ್ಡ ಕುಸಿತವಾಗಿವೆ.

ಹಾನಿಗೊಳಗಾದ 8,984 ಪ್ರಕರಣಗಳ ಪೈಕಿ ಈಗಾಗಲೇ 1,027 ಮನೆಗಳಿಗೆ ಒಟ್ಟು 39 ಲಕ್ಷ ರೂ.ಗಳನ್ನು ತುರ್ತಾಗಿ ಬಟ್ಟೆ, ಪಾತ್ರೆ ಇನ್ನಿತರ ಗೃಹಬಳಕೆಯ ವಸ್ತುಗಳ ಖರೀದಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಇನ್ನೂ 7,957 ಪ್ರಕರಣಗಳಲ್ಲಿ ಪರಿಹಾರ ವಿತರಣೆ ಬಾಕಿ ಇರುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಪ್ರವಾಹದಲ್ಲಿ ಮೃತಪಟ್ಟ 6 ಮಂದಿಯ ಕುಟುಂಬಕ್ಕೂ ತಲಾ 5 ಲಕ್ಷದಂತೆ 30 ಲಕ್ಷ ರೂ. ಪರಿಹಾರವನ್ನೂ ತಕ್ಷಣವೇ ತಲುಪಿಸಲಾಗಿದೆ.

ಈಗಾಗಲೇ ಹಾನಿ ವಿವರಗಳ ಮಾಹಿತಿ ಕಲೆ ಹಾಕುವ ಸಮೀಕ್ಷಾ ಕಾರ್ಯ ಪ್ರಾರಂಭವಾಗಿದ್ದು, ಸಮೀಕ್ಷೆ ಮುಕ್ತಾಯವಾದ ನಂತರ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಸಭೆಯಲ್ಲಿ ಮಂಡಿಸಿ, ಯಾವ ಫಲಾನುಭವಿಯೂ ಬಿಟ್ಟು ಹೋಗದಂತೆ ಪರಿಶೀಲಿಸಿ ಶೀಘ್ರದಲ್ಲಿ ಪರಿಹಾರ ವಿತರಣೆ ಮಾಡಲಾಗುತ್ತದೆ. ಮುಳುಗಡೆಯಾದ ಗ್ರಾಮಗಳಲ್ಲಿ ಜನರ ದಾಖಲಾತಿಗಳನ್ನು ಮರು ಸೃಜಿಸಿಕೊಡಲು ಆಯಾ ಗ್ರಾಮಗಳಲ್ಲೇ ಶಿಬಿರಗಳನ್ನು ಏರ್ಪಡಿಸುವುದಾಗಿ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಇದನ್ನೂ ಓದಿ: Uttara Kannada Flood: ಕಳಚೆಯ ಕೂಸುಗಳ ಪುನರ್ವಸತಿ: ಆಡಳಿತದ ಮುಂದಿದೆ ಕಳಚೆ ಕಲ್ಲಿನಷ್ಟೇ ಬೃಹತ್ ಸವಾಲು

Uttara Kannada Flood: ಚಿತ್ರನೋಟ: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟ ಭೂಕುಸಿತಕ್ಕೊಳಗಾದ ಕಳಚೆ ಗ್ರಾಮ ಹೇಗಿದೆ?

(Uttara Kannada Flood landslides damage infrastructure worth Rs 737 crore)