Uttara Kannada Flood: ಕಳಚೆಯ ಕೂಸುಗಳ ಪುನರ್ವಸತಿ: ಆಡಳಿತದ ಮುಂದಿದೆ ಕಳಚೆ ಕಲ್ಲಿನಷ್ಟೇ ಬೃಹತ್ ಸವಾಲು

Uttara Kannada Flood: ಕಳಚೆಯ ಕೂಸುಗಳ ಪುನರ್ವಸತಿ: ಆಡಳಿತದ ಮುಂದಿದೆ ಕಳಚೆ ಕಲ್ಲಿನಷ್ಟೇ ಬೃಹತ್ ಸವಾಲು
ಅಲ್ಲಿ ಉರುಳಿಬಿದ್ದ ತೆಂಗಿನಮರವೇ ಸಂಕವಾಗಿತ್ತು.

Kalache: ನಿಮಗೆ ಎಂತಹ ಭೂಮಿಯಲ್ಲಿ ಪುನರ್ವಸತಿಯ ಅಗತ್ಯವಿದೆ ಎಂದು ಕಳಚೆಯ ಗ್ರಾಮಸ್ಥರನ್ನೇ ಕೇಳಿದರೆ, ‘ಇಂತಹ ದುರಂತ ಆಗಬಹುದು ಎಂಬ ಯೋಚನೆಯೇ ಇದ್ದಿರಲಿಲ್ಲ. ಪುನರ್ವಸತಿಗಾಗಿ ಯಾವ ಭೂಮಿಯನ್ನು ಕೊಡಿ ಎಂದು ಹೇಗೆ ತಾನೇ ಹೇಳಲಿ’ ಎಂದು ಅಲ್ಲಿಯ ಜನರು ಬೇಸರಿಸುತ್ತಾರೆ.

Guruganesh Bhat

| Edited By: guruganesh bhat

Jul 30, 2021 | 8:27 PM

ಅಂತಹದ್ದೊಂದು ದುರಂತ ಸಂಭವಿಸಬಹುದೆಂದು ಕಳಚೆಯ ಗ್ರಾಮಸ್ಥರು ಕನಸಲ್ಲೂ ಅಂದುಕೊಂಡಿರಲಿಲ್ಲ. 2021 ಜುಲೈ 22ರಿಂದ ಆರಂಭವಾದ ಮಳೆ ಕಳಚೆಯ ಕೂಸುಗಳ ಕನಸನ್ನು ಸದ್ಯದ ಮಟ್ಟಿಗೆ ಕಸಿದುಕೊಂಡಿದೆ. ಬಹು ಹಿಂದಿನ ಕಾಲದಿಂದಲೂ ನೀರೇ ಸರ್ವಸ್ವ ಎಂದುಕೊಂಡು ನೀರನ್ನು ಅಪಾರವಾಗಿ ಹಚ್ಚಿಕೊಂಡಿದ್ದ ಉತ್ತರ ಕನ್ನಡ ಜಿಲ್ಲೆಯ ಕಳಚೆ ಎಂಬ ಕಾಳಿ ಕಣಿವೆಯ ಪುಟ್ಟ ಊರಿನ ಜನರಿಗೆ ಒಂದು ರೀತಿಯಲ್ಲಿ ನೀರೇ ಆಪತ್ತು ತಂದೊಡ್ಡಿದೆ (Uttara Kannada Flood). ಊರಿನ ಎಲ್ಲೆಲ್ಲೂ ಭೂಕುಸಿತವಾಯಿತು. ಹಸಿರು ಗುಡ್ಡ ಬೆಟ್ಟಗಳಿಗೆ ಎಲ್ಲೆಲ್ಲೂ ಬರೆ ಎಳೆದಂತೆ ಕುಸಿದ ಮಣ್ಣಿನ ಕೆಂಪು. ನಮ್ಮೂರಿನ ಬೆಟ್ಟಗುಡ್ಡಗಳು ಬಹಳ ಗಟ್ಟಿ ಎಂದು ನಂಬಿಕೊಂಡಿದ್ದ ಅನಾದಿ ಕಾಲದ ನಂಬಿಕೆಗಳು ನೋಡನೋಡುತ್ತಿದ್ದಂತೆಯೇ ಬುಡಮೇಲಾದವು.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿದ ಮರುದಿನವೇ ಆದ್ಯತೆಯ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಅವರ ಭೇಟಿಯಲ್ಲಿ ಕಳಚೆ ಅತ್ಯಂತ ಪ್ರಮುಖ ಸ್ಥಳವಾಗಿತ್ತು. ತೀರಾ ಭೂಕುಸಿತವಾದ ಊರಿನ ಎಲ್ಲ ಪ್ರದೇಶಗಳಿಗೆ ತಲುಪದಿದ್ದರೂ ಯಲ್ಲಾಪುರದಿಂದ ಕದ್ರಾಕ್ಕೆ ಸಂಪರ್ಕಿಸುವ ಬಂಕಾಪುರ- ಮಲ್ಲಾಪುರ ರಾಜ್ಯ ಹೆದ್ದಾರಿಯ ತಡಕೇಬೈಕಲ್ ಬದಿ ಆದ ಭಾರಿ ಭೂಕುಸಿತವನ್ನು ಅವರು ವೀಕ್ಷಿಸಿದರು. ಈವೇಳೆ ಕಳಚೆ ಗ್ರಾಮಸ್ಥರು ಅಳಲು ತೋಡಿಕೊಂಡರು ಮತ್ತು ಸಂಪೂರ್ಣ ಊರಿನ ಪುನರ್ವಸತಿಗಾಗಿ ಹಂಬಲಿಸಿದರು. ತಕ್ಷಣವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಳಚೆ ಊರಿನ ಪುನರ್ವಸತಿಗಾಗಿ 15 ಎಕರೆ ಭೂಮಿಯನ್ನು ಹುಡುಕುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಇವಿಷ್ಟು ಇಲ್ಲಿಯವರೆಗಿನ ಘಟನೆ, ಮುಂದಿನದು ಸವಾಲು.

ಭೇಟಿಯ ವೇಳೆ ಇದ್ದ ಜಿಲ್ಲಾಧಿಕಾರಿಗಳಿಗೆ ಕಳಚೆ ಗ್ರಾಮಸ್ಥರ ಸಿಎಂ ಭೇಟಿಯ ನಂತರ ಗ್ರಾಮಸ್ಥರು ಸೇರಿಕೊಂಡು ಸಭೆ ಸೇರಿದರು. ಹಿಂದೆ ಊರವರು ಜಮೀನು ಕಳೆದುಕೊಂಡ ಉದಾಹರಣೆಯಿದೆ. ಹಿಂದೆ ಕೊಡಸಳ್ಳಿ, ಕೈಗಾ, ಕದ್ರಾದ ಥರದ ಪುನರ್ವಸತಿ ಆಗಬೇಕು. ಕೃಷಿಗೆ ಸಂಬಂಧಿಸಿದ್ದು ಬಿಟ್ಟು ಬೇರೆಯದ್ದು ಗೊತ್ತಿಲ್ಲ. ನೀರಾವರಿ ಭೂಮಿಯೇ ಅಗತ್ಯವಿದೆ. ಕೃಷಿ ಬಿಟ್ಟು ಬೇರೆ ರೀತಿಯ ಉದ್ಯೋಗಗಳಿಗೆ ಹೊಂದಾಣಿಕೆಯಾಗಲು ಆಗದು ಎನ್ನುತ್ತಾರೆ ಇಲ್ಲಿಯ ಜನರು.

ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಕಳಚೆ ಗ್ರಾಮದಲ್ಲಿ ಪುನರ್ವಸತಿ ಯೋಜನೆಗೆ ಒಳಪಡುವ ಒಟ್ಟು 283 ಮನೆಗಳಿವೆ. ಇಲ್ಲಿಯ ಜನಸಂಖ್ಯೆ 948. ಒಟ್ಟು 15 ಎಕರೆಯಲ್ಲಿ ಮನೆ, ಕೃಷಿ ಭೂಮಿ,ರಸ್ತೆ ಕುಡಿಯುವ ನೀರು, ದೇವಸ್ಥಾನ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಳ್ಳುವುದು ಹೇಗೆ ಎಂಬುದು ಸದ್ಯದ ಮೂಲಭೂತ ಪ್ರಶ್ನೆ. ಇಲ್ಲಿ ಕೇವಲ ಅರ್ಧ ಗುಂಟೆ ಕೃಷಿ ಭೂಮಿ ಹೊಂದಿದವರಿಂದ ಹಿಡಿದು 17 ಎಕರೆ ಕೃಷಿ ಭೂಮಿ ಹೊಂದಿದವರೆಗೂ ಭೂಕುಸಿತದಿಂದ ಹಾನಿಗೊಳಗಾಗಿದ್ದಾರೆ. ಸದ್ಯ ಸಿಎಂ ಸೂಚಿಸಲಾಗಿರುವ 15 ಎಕರೆ ಭೂಮಿಯಲ್ಲೇ ಈ ಎಲ್ಲ ಮತ್ತು ಎಲ್ಲರಿಗೂ ಪರಿಹಾರಾರ್ಥವಾಗಿ ಭೂಮಿ ನೀಡುವುದು ಸಾಧ್ಯವಿಲ್ಲ. 15 ಎಕರೆಯನ್ನು 283 ಕುಟುಂಬಗಳಿಗೆ 2 ಗುಂಟೆಯಷ್ಟು ಭೂಮಿಯಷ್ಟೇ ಪ್ರತಿ ಕುಟುಂಬಕ್ಕೆ ಬರಲಿದೆ. ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗುತ್ತದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಈ ಅಭಿಪ್ರಾಯ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯ ನಂತರ ಗ್ರಾಮಸ್ಥರು ಸಭೆ ಸೇರಿ ನಡೆಸಿದ ಚರ್ಚಿಯಲ್ಲಿ ವ್ಯಕ್ತವಾಗಿದೆ. ಇಷ್ಟು ಬೃಹತ್ ಪ್ರಮಾಣದಲ್ಲಿ ಪರಿಹಾರದ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿಗಳಿಗೆ ಮನಗಾಣಿಸುವಲ್ಲಿ ಅಧಿಕಾರಿಗಳು ವಿಫಲರಾದರೇ ಎಂಬ ಪ್ರಶ್ನೆಯೂ ಮೂಡಿದೆ.

ಕಳಚೆಯ ಸಂಪೂರ್ಣ ಪುನರ್ವಸತಿಗೆ ಸಿಎಂ ಸೂಚಿಸಿದ್ದಾರೆ. ಆದರೆ ಕಳಚೆಯ ಎಲ್ಲರ ಮನೆ, ತೋಟಗಳಿಗೂ ಹಾನಿಯಾಗಿಲ್ಲ. ಮನೆ, ಕೃಷಿ ಕಳೆದುಕೊಂಡವರು ಮತ್ತೆ ಅಲ್ಲೇ ಬದುಕು ಕಟ್ಟಿಕೊಳ್ಳು ಸಾಧ್ಯವೇ ಇಲ್ಲ, ಅಂತಹ ಪರಿಸ್ಥಿತಿ. ಆದರೆ ಹಾನಿಯಾಗದವರು ಬಿಟ್ಟುಹೋಗುತ್ತಾರೆಯೇ? ಈಗ ಹಾನಿಯಾಗದಿದ್ದರೂ ಯಾವುದೇ ಕ್ಷಣದಲ್ಲಾದರೂ ಇರುವುದೆಲ್ಲವೂ ಮಣ್ಣಡಿಗಾಗುವ ಎಲ್ಲ ಲಕ್ಷಣಗಳೂ ಇವೆ. ಹೀಗಾಗಿ ಕೆಪಿಸಿ ಮಾದರಿಯಲ್ಲಿ ಪುನರ್ವಸತಿ ಕಲ್ಪಿಸಿದಲ್ಲಿ ನಾವೂ ನಿಮ್ಮ ಜತೆಗೆ ಬರುತ್ತೇವೆ ಎಂದು ಸದ್ಯ ಹಾನಿಗೊಳಗಾಗದವರು ಸಹ ಭರವಸೆ ಕೊಟ್ಟಿದ್ದಾರೆ. ಪುನರ್ವಸತಿಗಾಗಿ ಇಡೀ ಊರಿನ ಕೂಗು ಒಗ್ಗಟ್ಟಾಗಿದೆ. ಜತೆಗೆ ಈ ‘ಸಂಪೂರ್ಣ ಪುನರ್ವಸತಿ’ಯಲ್ಲಿ ಕೃಷಿ ಭೂಮಿ ಒಳಗೊಳ್ಳಬೇಕು ಎಂಬುದು ಗ್ರಾಮಸ್ಥರ ಪ್ರಬಲ ಇಚ್ಛೆಯಾಗಿದೆ.

ಜತೆಗೆ ಕಳಚೆ ಎಂಬುದು ಮಲೆನಾಡಿನ ಅತ್ಯಂತ ಸಂಪದ್ಭರಿತ ಗ್ರಾಮಗಳಲ್ಲೊಂದು. ಬೇಡ ಬೇಡ ಎಂದರೂ ನೀರು ಎಂಬ ಜೀವಜಲಕ್ಕೆ ಈ ಊರಿನಲ್ಲಿ ಕೊರತೆಯಿರಲಿಲ್ಲ. ಹರಿಯುವ ನೀರನ್ನೇ ನೆಚ್ಚಿಕೊಂಡಿತ್ತು ಕಳಚೆ. ನೀರಿಲ್ಲದ ಯಾವುದೋ ಜಾಗದಲ್ಲಿ ಪುನರ್ವಸತಿ ಎಂದು ಹೋಗಲು ಕಳಚೆ ಗ್ರಾಮಸ್ಥರು ಸುತಾರಾಂ ತಯಾರಿಲ್ಲ ಎನ್ನುತ್ತಾರೆ ಸ್ಥಳೀಯರಾದ ವೆಂಕಟ್ರಮಣ ಬೆಳ್ಳಿ. ಕಳಚೆಯ ಪಕ್ಕವೇ ಕಾಳಿ ನದಿ, ಕೊಡಸಳ್ಳಿ ಆಣೆಕಟ್ಟಿನ ವಿಶಾಲ ಹಿನ್ನೀರು. ಹೊಳೆಯ ಆಕಡೆ ಸಂರಕ್ಷಿತ ಅರಣ್ಯ. ಕಳಚೆಯನ್ನೂ ಅದೇ ಸಂರಕ್ಷಿತ ಅರಣ್ಯ ವ್ಯಾಪ್ತಿಗೆ ತಂದು ಪರಿಹಾರ ಒದಗಿಸುವ ಸಾಧ್ಯತೆಯಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬಹುದು. ಜತೆಗೆ ಪುನರ್ವಸತಿಯಲ್ಲಿ ಒದಗಿಸುವ ಭೂಮಿ ಕೃಷಿ ಮಾಡುವಂತೆಯೂ ಇರಬೇಕು. ಪುನರ್ವಸತಿಯ ಹೆಸರಲ್ಲಿ ಬಾದಾಮಿಯ ಹೊಳೆ ಆಲೂರಿನಲ್ಲಿ ಮನೆಕಟ್ಟಿದಂತೆ ಇಲ್ಲಿಯೂ ಮಾಡಿದರೆ ಅದು ನಿರುಪಯುಕ್ತ. ಹೀಗಾಗಿ ಒಮ್ಮೆ ಹಳ್ಳಿಗರ ಜತೆ ವಿವರವಾಗಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳುತ್ತಾರೆ ಕೃಷಿ ಪರಿಸರ ಪರಿಣತ ಶಿವಾನಂದ ಕಳವೆ.

ಆಡಳಿತ ಹೇಳುವುದೇನು? ಈ ಕುರಿತು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ​ ಯಲ್ಲಾಪುರದ ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್, ಕಳಚೆಯ ನಿರಾಶ್ರಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಬೇರೆಡೆ ಭೂಮಿ ಹುಡುಕಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಕಳಚೆಯಲ್ಲಿ 600 ಎಕರೆ ಕೃಷಿ ಭೂಮಿಯಿದೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪರ್ಯಾಯ ಕೃಷಿ ಭೂಮಿ ಒದಗಿಸಲು ಸದ್ಯ ಸಾಧ್ಯವಿಲ್ಲ. ಸರ್ಕಾರದ ಬಳಿ ಅಷ್ಟೊಂದು ಭೂಮಿಯೂ ಇಲ್ಲ. ಮನೆ ಮತ್ತು ತೋಟ ಕಳೆದುಕೊಂಡವರಿಗೆ ಪರಿಹಾರ ರೂಪದಲ್ಲಿ ಸಹಾಯಧನ ಒದಗಿಸಿ, ವಸತಿಯನ್ನು ಮಾತ್ರ ಬೇರೆಡೆ ಕಲ್ಪಿಸಿಕೊಡುವ ಪ್ರಸ್ತಾವಿದೆ. ಬೇರೆಡೆ ವಸತಿ ಒದಗಿಸಿದಲ್ಲಿ ಕಳಚೆಯಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿ ಮುಂದೆಯೂ ಕೃಷಿ ಮಾಡುವ ಅವಕಾಶವಿದೆ. ಒಟ್ಟಾರೆ ಪುನರ್ವಸತಿ ಕೇವಲ ವಸತಿಗೆ ಮಾತ್ರ ಎಂದು ತಿಳಿಸಿದ್ದಾರೆ.

ಇನ್ನೊಂದು ಆತಂಕದ ವಿಷಯವೆಂದರೆ, ಭೂಕುಸಿತವಾದ ನಂತರ ಕುಡಿಯುವ ನೀರಿಗೂ ಇಲ್ಲಿ ತತ್ವಾರ ಉಂಟಾಗಿದೆ. ನೀರಿನ ಝರಿಗಳೆಲ್ಲ ಭೂಮಿಯಾಳದಲ್ಲಿ ಹುದುಗಿ ಹೋಗಿವೆ. ಮಳೆ ನೀರನ್ನು ಹಿಡಿದು ಕುಡಿಯುತ್ತಿದ್ದಾರೆ. ಆದರೆ ಮಳೆ ಎಂದರೆ ಮತ್ತೆ ಧರೆ ಕುಸಿಯುವ ಭಯ. ಮಳೆಯ ಬೇಕು ಬೇಡಗಳ ನಡುವೆ ಕಳಚೆ ಗೊಂದಲದಲ್ಲಿದೆ. ನಿಮಗೆ ಎಂತಹ ಭೂಮಿಯಲ್ಲಿ ಪುನರ್ವಸತಿಯ ಅಗತ್ಯವಿದೆ ಎಂದು ಕಳಚೆಯ ಗ್ರಾಮಸ್ಥರನ್ನೇ ಕೇಳಿದರೆ, ‘ಇಂತಹ ದುರಂತ ಆಗಬಹುದು ಎಂಬ ಯೋಚನೆಯೇ ಇದ್ದಿರಲಿಲ್ಲ. ಪುನರ್ವಸತಿಗಾಗಿ ಯಾವ ಭೂಮಿಯನ್ನು ಕೊಡಿ ಎಂದು ಹೇಗೆ ತಾನೇ ಹೇಳಲಿ’ ಎಂದು ಅಲ್ಲಿಯ ಜನರು ಬೇಸರಿಸುತ್ತಾರೆ.

ಸವಾಲನ್ನು ಮೀರಬಹುದೇ.. ಪುನರ್ವಸತಿ ಎಂಬುದು ಆಡಳಿತಗಳ ಪಾಲಿಗೆ ಎಂದಿಗೂ ಬಹುದೊಡ್ಡ ಸವಾಲು. ಈವರೆಗೆ ಸಾಂಪ್ರದಾಯಿಕವಾಗಿ ತಮ್ಮ ವೃತ್ತಿಗಳನ್ನು ಪಾಲಿಸಿಕೊಂಡು ಬರುತ್ತಿದ್ದ ಕುಟುಂಬಗಳಿಗೆ ಪುನರ್ವಸತಿ ಎಂಬ ಪದವನ್ನು ಅರಗಿಸಿಕೊಳ್ಳುವುದು ಕಷ್ಟ. ಎಷ್ಟೇ ಭೂಕುಸಿತವಾಗಲಿ ಅಥವಾ ಪ್ರವಾಹ ಬರಲಿ ತಮ್ಮೂರಿಗೆ ಏನೂ ಆಗದು ಎಂದು ನಂಬಿರುವ ಇಳಿವಯಸ್ಸಿನ ಮುಗ್ಧ ಮನಸ್ಸುಗಳನ್ನು ಹೊಸ ಪ್ರದೇಶಕ್ಕೆ ಸ್ಥಳಾಂತರಿಸುವುದು ಅಷ್ಟು ಸುಲಭವಲ್ಲ. ಭೌತಿಕವಾಗಿ ಅವರು ಹೊಸ ಪ್ರದೇಶಕ್ಕೆ ಬಂದರೂ ಅವರ ಮನಸಿನ ಎಲ್ಲ ಟಿಸಿಲುಗಳೂ ಹುಟ್ಟಿ ಬೆಳೆದ ಬಿಟ್ಟುಬಂದ ಊರಿನಲ್ಲೇ ಇರುತ್ತದೆ. ಇದು ಪದೇ ಸಾಬೀತಾಗುತ್ತಲೆ ಇದೆ. ಜತೆಗೆ  ಕೇವಲ ವಸತಿಯೊಂದನ್ನೇ ಕಳಚೆಯ ಜನರು ಬಯಸುತ್ತಿಲ್ಲ.

ಇದನ್ನೂ ಓದಿ: 

Uttara Kannada Flood: ಚಿತ್ರನೋಟ: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟ ಭೂಕುಸಿತಕ್ಕೊಳಗಾದ ಕಳಚೆ ಗ್ರಾಮ ಹೇಗಿದೆ?

Uttara Kannada Flood: ಭೂಕುಸಿತಕ್ಕೊಳಗಾದ ಕಳಚೆ ಗ್ರಾಮದ ಸಂಪೂರ್ಣ ಸ್ಥಳಾಂತರ, ನೊಂದವರಿಗೆ ಶೀಘ್ರ ಪರಿಹಾರ: ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

(Uttara Kaannada Flood Rehabilitation of Kalache village of Yellapur biggest challenge ahead of the administration)

Follow us on

Related Stories

Most Read Stories

Click on your DTH Provider to Add TV9 Kannada