ಕ್ಷುಲ್ಲಕ ಕಾರಣಕ್ಕೆ ಸಮುದಾಯದವರಿಂದಲೇ 2 ಕುಟುಂಬಗಳಿಗೆ ಬಹಿಷ್ಕಾರ: ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಮೊರೆ ಹೋದ ಕುಟುಂಬಸ್ಥರು
Uttara Kannada News: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರಿಕುರ್ವಾ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರದಂತಹ ಸಮಸ್ಯೆಯಿಂದ ಕಳೆದ 6 ವರ್ಷಗಳಿಂದ ಎರಡು ಕುಟುಂಬಗಳು ಬಳಲುತ್ತಿವೆ. ಸ್ಥಳೀಯ ಪೊಲೀಸರಿಂದಲೂ ಸಹ ನ್ಯಾಯ ಸಿಗದ ಹಿನ್ನಲೆ ಇದೀಗ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆ, ಆಗಸ್ಟ್ 03: ದೇಶ ಎಷ್ಟೇ ಮುಂದುವರೆದರೂ ಸಮಾಜದಲ್ಲಿನ ಕೆಲವೊಂದು ಅನಿಷ್ಠ ಪದ್ದತಿಗಳು ಇನ್ನೂ ಸಹ ಅಲ್ಲಲ್ಲಿ ಕಂಡುಬರುತ್ತಿವೆ. ಅದರಂತೆ ಇಲ್ಲೊಂದು ಕಡೆ ಅನಿಷ್ಠ ಪದ್ದತಿಗಳಲ್ಲಿ ಒಂದಾಗಿರುವ ಸಾಮಾಜಿಕ ಬಹಿಷ್ಕಾರ (boycott) ದಂತಹ ಸಮಸ್ಯೆಯಿಂದ ಕಳೆದ ಆರು ವರ್ಷಗಳಿಂದ ಎರಡು ಕುಟುಂಬಗಳು ಬಳಲುತ್ತಿವೆ. ಸ್ಥಳೀಯವಾಗಿ ಪೊಲೀಸರಿಂದಲೂ ಸಹ ನ್ಯಾಯ ಸಿಗದ ಹಿನ್ನಲೆ ಇದೀಗ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರಿಕುರ್ವಾ ಗ್ರಾಮದಲ್ಲಿ 2 ಕುಟುಂಬಗಳು ಸಮುದಾಯದವರಿಂದಲೇ ಬಹಿಷ್ಕಾರದ ಶಿಕ್ಷೆ ಅನುಭವಿಸುವಂತಾಗಿದೆ. ಗ್ರಾಮದ ನಿವಾಸಿಗಳಾದ ಲಕ್ಷ್ಮೀ ಬೋಳಾ ಅಂಬಿಗ ಮತ್ತು ಆಶಾ ಗಂಗಾಧರ ಅಂಬಿಗ ಅವರ 2 ಕುಟುಂಬ 2017 ರಿಂದ ಈವರೆಗೆ ಬಹಿಷ್ಕಾರಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಕಾರವಾರ: ಮೊಬೈಲ್ ಚಾರ್ಜಿಂಗ್ ಕೇಬಲ್ ಬಾಯಿಗೆ ಹಾಕಿಕೊಂಡ ನವಜಾತ ಶಿಶು, ತಕ್ಷಣ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದಳು
ಅಂಬಿಗ ಸಮಾಕದವರು ಗ್ರಾಮದ ಗಂಗೆ ದೇವರಿಗೆ ವಂತಿಗೆ (ದೇಣಿಗೆ) ಸಂಗ್ರಹಿಸಿ ಅದನ್ನ ಬಳಿಕ ಅಗತ್ಯವಿದ್ದವರಿಗೆ ಬಡ್ಡಿಗೆ ನೀಡುತ್ತಿದ್ದರು. ಅದರಂತೆ ಧರ್ಮ ಬೋಳ ಅಂಬಿಗ ಈತನಿಗೆ 2017ರಲ್ಲಿ 14 ಸಾವಿರ ರೂಪಾಯಿ ಸಾಲವಾಗಿ ನೀಡಲಾಗಿತ್ತು. ಬಡ್ಡಿ ಸೇರಿ ಈತ 18,200 ರೂಪಾಯಿ ತುಂಬಬೇಕಿತ್ತು. ಆದರೆ ಅಂಗವಿಕಲನಾಗಿದ್ದರಿಂದ ಸೂಚಿಸಿದ ಸಮಯಕ್ಕೆ ಹಣ ತುಂಬಿರಲಿಲ್ಲ. ಈ ಕಾರಣಕ್ಕೆ ಎರಡು ಕುಟುಂಬಗಳಿಗೆ ಸಮಾಜದಿಂದ ಬಹಿಷ್ಕಾರ ಹಾಕಿದ್ದು ಬಳಿಕ ಒಂದು ವರ್ಷದಲ್ಲಿ ಬಡ್ಡಿ ಸೇರಿ ಹಣವನ್ನ ಮರುಪಾವತಿ ಮಾಡಿದರೂ ಬಹಿಷ್ಕಾರ ಮುಂದುವರೆಸಿದ್ದಾರೆ. ಸಮಾಜದವರು ನಮ್ಮೊಂದಿಗೆ ಯಾವುದೇ ರೀತಿ ವ್ಯವಹಾರ ನಡೆಸದಂತೆ ಕಟ್ಟಾಜ್ಞೆ ಮಾಡಿದ್ದಾಗಿ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಗ್ರಾಮದಲ್ಲಿ ಅಂಬಿಗ ಸಮಾಜದ 34 ಮನೆಗಳಿದ್ದು ಆ ಕುಟುಂಬದವರು ಯಾರೂ ಬಹಿಷ್ಕಾರಕ್ಕೊಳಗಾದವರೊಂದಿಗೆ ಮಾತನಾಡದಂತೆ ಸಮಾಜದ ಮುಖಂಡ ಧರ್ಮ ರಾಮ ಅಂಬಿಗ ಎಂಬುವವರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕಳೆದ 6 ವರ್ಷಗಳಿಂದ ಈ 2 ಕುಟುಂಬಗಳು ಬಹಿಷ್ಕಾರದ ಶಿಕ್ಷೆ ಎದುರಿಸುತ್ತಿವೆ. ಗ್ರಾಮದಲ್ಲಿನ ಅನ್ಯಾಯದ ಬಗ್ಗೆ ಸಮಾಜದ 18 ಹಳ್ಳಿಯ ಮುಖಂಡರಿಗೆ ದೂರು ನೀಡಿದ್ದಕ್ಕೆ ಸಿಟ್ಟಿಗೆದ್ದ ಊರಿನ ಮುಖಂಡರು ಎರಡೂ ಕುಟುಂಬವನ್ನ ಸಂಪೂರ್ಣವಾಗಿ ಬಹಿಷ್ಕಾರ ಮಾಡಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ ಜಿಲ್ಲಾಡಳಿತ
ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಜುಲೈನಲ್ಲಿ ಲಕ್ಷ್ಮೀ ಅವರ ಮಗ ಮಂಜುನಾಥ ಎಂಬುವವರ ಮದುವೆಗೆ ಹುಡುಗಿ ನೋಡಿದ್ದರು. ಆದರೆ ಹುಡುಗಿ ಕುಟುಂಬಕ್ಕೆ ಗ್ರಾಮದ ಮುಖಂಡರು ಬಹಿಷ್ಕಾರ ಹಾಕಿದ್ದಾಗಿ ತಿಳಿಸಿದ್ದು, ಇದರಿಂದ ನಿಗದಿಯಾಗಬೇಕಿದ್ದ ಮದುವೆ ನಿಶ್ಚಿತಾರ್ಥದ ಮೊದಲೇ ಮುರಿದು ಬೀಳುವಂತಾಗಿದೆ. ಹೀಗಾಗಿ ಈ ರೀತಿ ಬೇರೆ ಯಾರಿಗೂ ಅನ್ಯಾಯವಾಗದಂತೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.
ಇಂತಹ ಅನಿಷ್ಟ ಪದ್ಧತಿಗಳು ಸಮಾಜದಲ್ಲಿ ಈಗಲೂ ಜೀವಂತ ಇರುವುದು ದುರಂತ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಂಡಿ ಈ ಅನಿಷ್ಟ ಪದ್ಧತಿಗೆ ಮುಕ್ತಿ ನೀಡಬೇಕಿದೆ ಎನ್ನುವುದು ಜನರ ಅಭಿಪ್ರಾಯವಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಇನ್ನೂ ಸಹ ಬಹಿಷ್ಕಾರದಂತಹ ಅನಿಷ್ಠ ಪದ್ದತಿ ಜಾರಿಯಲ್ಲಿರುವುದು ನಿಜಕ್ಕೂ ದುರಂತವೇ. ಇನ್ನಾದರೂ ಈ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತು ಅನಿಷ್ಠ ಪದ್ದತಿ ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:52 pm, Thu, 3 August 23