ನಾಸಾದ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಸಶಿಗುಳಿ ಗ್ರಾಮದ ದಿನೇಶ್ ವಸಂತ ಹೆಗಡೆ ಆಯ್ಕೆಯಾಗಿದ್ದಾರೆ. ನಾಸಾದ ಭೂಮಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ (ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) ಅನುದಾನದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸದ್ಯ ಎರಡನೇ ವರ್ಷದ ಪಿಎಚ್ಡಿ ಅಧ್ಯಯನ ಮಾಡುತ್ತಿದ್ದು, ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ.
ದಿನೇಶ್ ಹೆಗಡೆ ಅಮೆರಿಕದ ಹಂಟ್ಸ್ವಿಲ್ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಡಾಕ್ಟರೇಟ್ ಅಧ್ಯಯನ ಮಾಡುತ್ತಿದ್ದಾರೆ. ಬಾಹ್ಯಾಕಾಶ ಹವಾಮಾನ ಅಧ್ಯಯನ ಮಾಡುವ ವಿಧಾನವನ್ನು ಸಂಶೋಧನಾ ವಿಷಯವಾಗಿ ದಿನೇಶ ಹೆಗಡೆ ಅವರು ಆಯ್ಕೆ ಮಾಡಿಕೊಂಡಿದ್ದಾರೆ.
ದಿನೇಶ್ ಅವರು ಸಿದ್ದಾಪುರ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದರು. ಬಳಿಕ ಮುಂದಿನ ಶಿಕ್ಷಣಕ್ಕಾಗಿ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿ.ಎಸ್.ಸಿ ಹಾಗೂ ಮೈಸೂರು ವಿಶ್ವ ವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದರು.
ಇನ್ನೊಬ್ಬ ವಿದ್ಯಾರ್ಥಿ ಕ್ಯಾಥರೀನ್ ಡೇವಿಡ್ಸನ್ ಅವರೂ ಸಹ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅದರ ಅನ್ವಯ ವಿದ್ಯಾರ್ಥಿಗಳಿಗೆ ಟ್ಯೂಷನ್, ಸಂಶೋಧನೆಗೆ ಸಂಬಂಧಿಸಿದ ಚಟುವಟಿಕೆಗಳು ಮತ್ತು ವೆಚ್ಚಗಳನ್ನು ಭರಿಸಲು ಹಾಗೂ ಸಂಬಂಧಿತ ಸಮ್ಮೇಳನಗಳಿಗೆ ಹಾಜರಾಗಲು ತಲಾ 1,35,000 ಡಾಲರ್ (ಅಂದಾಜು 1.20 ಕೋಟಿ) ನೀಡಲಾಗುತ್ತದೆ. ಈ ಕುರಿತಂತೆ ವಿಶ್ವವಿದ್ಯಾಲಯ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಿದೆ.
ಇದನ್ನೂ ಓದಿ:
ನಾಳೆ ಸುಮಂಗಲಿ ಸೇವಾಶ್ರಮದ ಸುಶೀಲಮ್ಮ ಸೇರಿ ಮೂವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ
ಅಮಿತಾಭ್ ಬಚ್ಚನ್ ನನ್ನ ಪಾತ್ರ ಮೆಚ್ಚಿದ್ದರು, ಅದೇ ನನಗೆ ದೊಡ್ಡ ಪ್ರಶಸ್ತಿ; ವೈಜನಾಥ್ ಬಿರಾದಾರ್