ಈಗಿನ ಕಾಲದಲ್ಲಿ ಸಲಿಂಗ ವಿವಾಹ (Lesbian Wedding) ಬಹಳ ಸಾಮಾನ್ಯ ಎನಿಸಿಕೊಂಡು ಬಿಟ್ಟಿದೆ. ಮೊದಲೆಲ್ಲ ಹುಡುಗ-ಹುಡುಗಿ ಒಟ್ಟಾಗಿ ಓಡಾಡಿದರೆ ಹುಬ್ಬು ಗಂಟಿಕ್ಕುತ್ತಿದ್ದ ಜನರು ಈಗ ಹುಡುಗ-ಹುಡುಗ ಅಥವಾ ಯುವತಿ-ಯುವತಿ ಒಟ್ಟಾಗಿ ಕೈ ಕೈ ಹಿಡಿದುಕೊಂಡು ಓಡಾಡಿದರೆ ಅನುಮಾನದಿಂದ ನೋಡುವ ಪರಿಸ್ಥಿತಿ ಉಂಟಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಲಿಂಗ ವಿವಾಹವೆಂಬುದು ಬಹಳ ಸಾಮಾನ್ಯವೆನಿಸಿಕೊಂಡಿದೆ. ಆದರೆ, ನಮ್ಮ ಕರ್ನಾಟಕದಲ್ಲಿ ಒಂದು ಸಮುದಾಯದಲ್ಲಿ ಬಹಳ ಹಿಂದಿನ ಕಾಲದಿಂದಲೂ ಈ ಸಲಿಂಗ ವಿವಾಹದ ಪದ್ಧತಿ ರೂಢಿಯಲ್ಲಿದೆ ಎಂಬುದು ನಿಮಗೆ ಗೊತ್ತಾ?
ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮುದಾಯದಲ್ಲಿ ಬಹಳ ಹಿಂದಿನಿಂದಲೂ ಮಹಿಳೆಯೊಂದಿಗೆ ಮಹಿಳೆಗೆ ಮದುವೆ ಮಾಡಿಸುವ ಸಂಪ್ರದಾಯ ಚಾಲ್ತಿಯಲ್ಲಿದೆ. ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡುವ ಸಂಪ್ರದಾಯ ಇರುವ ಬಗ್ಗೆ ನಮಗೆ ಗೊತ್ತಿದೆ. ಆದರೆ, ಈ ಹಾಲಕ್ಕಿ ಸಮುದಾಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಆಗದಂತೆ ದೇವರ ಮನವೊಲಿಸಲು ಮಹಿಳೆ-ಮಹಿಳೆಗೆ ಮದುವೆ ಮಾಡಿಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಕೆಲವು ದಿನಗಳ ಹಿಂದಷ್ಟೇ ಇಂದ್ರದೇವನನ್ನು ಸಂತೃಪ್ತಿಗೊಳಿಸಲು ಇಬ್ಬರು ಮಹಿಳೆಯರಿಗೆ ಮದುವೆ ಮಾಡಿಸಲಾಗಿದೆ. ಇದರಿಂದ ಮಳೆ, ಬೆಳೆ ಚೆನ್ನಾಗಿರುತ್ತದೆ ಎಂಬ ನಂಬಿಕೆಯಿದೆ.
ಇದನ್ನೂ ಓದಿ: Wedding: ಇಷ್ಟವಿಲ್ಲದಿದ್ದರೂ ಎರಡು ಮದುವೆ ಆಗಲೇಬೇಕು; ಈ ದೇಶದಲ್ಲಿ ಹೀಗೊಂದು ಕಾನೂನು
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ತಾರಮಕ್ಕಿ ಗ್ರಾಮದಲ್ಲಿ ಹುಲಸ್ಕೆರೆ ಹಾಲಕ್ಕಿ ಸಮುದಾಯದ ಜನರು ಸೇರಿ ಈ ಸಲಿಂಗ ವಿವಾಹ ನಡೆಸಿದ್ದಾರೆ. ಸಾಂಪ್ರದಾಯಿಕ ಜಾನಪದ ಹಾಡುಗಳ ಮಧ್ಯೆ ಈ ಕಾರ್ಯಕ್ರಮ ನಡೆದಿದೆ. ಮಹಿಳೆ ಹಾಗೂ ಮಹಿಳೆಗೆ ನಡೆಯುವ ಈ ಮದುವೆಯಲ್ಲಿ ಪುರುಷರ ಸಂಖ್ಯೆ ಕಡಿಮೆ ಇರುತ್ತದೆ. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುತ್ತಾರೆ.
ಮಹಿಳೆಯರಿಬ್ಬರು ಮೊದಲು ಹೂವಿನ ಹಾರಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಹಿಂದೂಗಳ ಮದುವೆಯಲ್ಲಿ ಪಠಿಸಲಾಗುವ ಸಂಸ್ಕೃತ ಮಂತ್ರದ ಬದಲಿಗೆ ಇಲ್ಲಿ ಸ್ಥಳೀಯ ಭಾಷೆಯಲ್ಲಿ ಜಾನಪದ ಹಾಡುಗಳು, ಸಂಗೀತ, ಲಾವಣಿ ಹಾಡುಗಳನ್ನು ಹಾಡಲಾಗುತ್ತದೆ. ಹಾಲಕ್ಕಿ ಸಮುದಾಯದ ಹಿರಿಯರ ಸಮ್ಮುಖದಲ್ಲಿ ಧಾರೆ ಎರೆಸಲಾಗುತ್ತದೆ. ನಂತರ ಬೇರೆ ಮದುವೆಗಳಲ್ಲಿ ನೀಡುವಂತೆ ಈ ಮದುವೆಗೆ ಬಂದ ಅತಿಥಿಗಳು ದಂಪತಿಗೆ ಉಡುಗೊರೆಗಳನ್ನು ನೀಡುತ್ತಾರೆ. ಹಾಗಂತ, ಈ ಮದುವೆ ನಡೆದ ನಂತರ ಆ ಇಬ್ಬರು ಮಹಿಳೆಯರು ಒಟ್ಟಿಗೇ ವಾಸಿಸುವುದಿಲ್ಲ. ಮದುವೆಯಾದ ನಂತರ ಅವರಿಬ್ಬರೂ ತಮ್ಮ ತಮ್ಮ ಮನೆಗೆ ವಾಪಾಸ್ ಹೋಗುತ್ತಾರೆ.
ಇದನ್ನೂ ಓದಿ: ಬಿಹಾರದ ಮಧುಬನಿಯ ವಿಶೇಷ ಮಾರುಕಟ್ಟೆಯಲ್ಲಿ ವರನೂ ಲಭ್ಯ, ಮದುವೆಗೆ ಗಂಡು ಹುಡುಕುವುದು ಇಲ್ಲಿ ಸುಲಭ!
ಉತ್ತರ ಕನ್ನಡದ ಹಾಲಕ್ಕಿ ಸಮುದಾಯದಲ್ಲಿ ಈ ಆಚರಣೆಯ ಇತಿಹಾಸವು ತುಂಬಾ ಹಳೆಯದಾಗಿದೆ. ಇದು ಯಾವಾಗ ಮತ್ತು ಹೇಗೆ ಪ್ರಾರಂಭವಾಯಿತು ಎಂದು ಈ ಸಮುದಾಯದಲ್ಲಿ ವಾಸಿಸುವ ಯಾರಿಗೂ ತಿಳಿದಿಲ್ಲ. ಈ ಸಮುದಾಯದಲ್ಲಿ ಈ ವಿಶಿಷ್ಟ ರೀತಿಯ ಮದುವೆಯನ್ನು ದಡ್ಡುವೆ ಮದುವೆ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಕರ್ಕಿ ವಿನಾಯಕ ಮತ್ತು ಕರಿಯಮ್ಮ ದೇವಸ್ಥಾನದಲ್ಲಿ ಈ ಸಲಿಂಗ ವಿವಾಹ ನೆರವೇರಿತು. ಹಾಲಕ್ಕಿ ಜನಾಂಗದಲ್ಲಿ ಈ ದೇವತೆಗಳಿಗೆ ವಿಶೇಷ ಸ್ಥಾನವಿದೆ. ಈ ಮದುವೆಯಲ್ಲಿ ಜನರು ನವವಿವಾಹಿತರ ಕುತ್ತಿಗೆಗೆ ಚಿಪ್ಸ್ ಪ್ಯಾಕೆಟ್‌ಗಳ ಹಾರವನ್ನು ಹಾಕುತ್ತಾರೆ. ನಂತರ ಡೋಲು, ಪಟಾಕಿ, ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ.